ಗಜಲ್…
ಜಬೀವುಲ್ಲಾ ಎಮ್. ಅಸದ್
ನಲಿವ ಚಿಟ್ಟೆ ನೋವಿನ ಹರಿಷಿನ ಹಚ್ಚಿ ಹಾರಿದೆ ಮೆಲ್ಲಗೆ
ನೆನಪಿನ ಹಾದಿಯ ಸಂಜೆಯ ಹಾಡಿಗೆ ಬಾಡಿದೆ ಹೂನಗೆ
ಕಾಣದ ನೋವು ಕರಗಲು ಹೆಗಲೊಂದನು ಅರಸುತಿದೆ
ಕಾರಣ ಹೇಳದೆ ನೆಪವ ನೀಡದೆ ಬಿಟ್ಟು ಹೋದೆ ಎಲ್ಲಿಗೆ
ಹೃದಯದಿ ಪ್ರೇಮದ ಚಿರಾಗ್ ಬೆಳಗದಾಗಿದೆ ನೀನಿಲ್ಲದೆ
ಒಡೆದು ಚೂರಾದ ಕನ್ನಡಿಯ ಬಿಂಬವಾಗಿದೆ ನಂಬುಗೆ
ಕಂಡ ಕನಸುಗಳ ಎದೆಯ ನೆಲದಿ ಮಣ್ಣಾಗಿಸಬಹುದೆ
ಮಾತನೆ ಅಡದೆ ಮೌನದಿ ಶಿಕ್ಷೆಯ ವಿಧಿಸಬಹುದೆ ಹೀಗೆ
ಗಾವುದ ದೂರ ಸಾಗಿದರೂ ಈ ಸಮಯ ಸರಿಯದಾಗಿದೆ
ಮರೆತಷ್ಟು ಕಾಡಿ ಸತಾಯಿಸುವ ಪರಿ ನಿಲ್ಲದಾಗಿದೆ ಅಲ್ಲಿಗೆ
ಎಷ್ಟೊಂದು ದೂರ ಸನಿಹವಿಲ್ಲ ಬಹಳ ಆದರೂ ಕಾಡುವೆ
ಎಂದಾದರೂ ಕಂಡಾಗ ನನ್ನ ಇರಲಿ ಅಂದೂ ಇದೆ ಸಲುಗೆ
ನಿನ್ನ ಹೆಸರ ಘಮಲು ಅಸದ್’ನ ಉಸಿರಲಿ ಬೆರೆತಾಗಿದೆ
ಕಾಡಿನ ಬೇಲಿಯ ನಡುವಲಿ ಸದ್ದಿಲ್ಲದೆ ಅರಳಿದೆ ಮಲ್ಲಿಗೆ