ಪ್ರಬಂಧ

ಒಂದು ವಿಳಾಸದ ಹಿಂದೆ

Image result for photos of adree written inland letter

ಸ್ಮಿತಾ ಅಮೃತರಾಜ್. ಸಂಪಾಜೆ.

ವಿಳಾಸವಿಲ್ಲದವರು ಈ ಜಗತ್ತಿನಲ್ಲಿ ಯಾರಾದರೂ ಇರಬಹುದೇ?. ಖಂಡಿತಾ ಇರಲಾರರು ಅಂತನ್ನಿಸುತ್ತದೆ. ಇಂತಹವರ ಮಗ, ಇಂತಹ ಊರು,ಇಂತಹ ಕೇರಿ,ಇಂತಹ ಕೆಲಸ..ಹೀಗೆ ಇಂತಹವುಗಳ ಹಲವು ಪಟ್ಟಿ  ಹೆಸರಿನ ಹಿಂದೆ ತಾಕಿಕೊಳ್ಳುತ್ತಾ ಹೋಗುತ್ತದೆ.  ವಿಳಾಸವೊಂದು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯೆಂಬ ಮಾತನ್ನು ನಾವ್ಯಾರು ಅಲ್ಲಗಳೆಯುವ ಹಾಗಿಲ್ಲ. ಯಾವುದೇ ಆಮಂತ್ರಣ ಪತ್ರವಾಗಲಿ, ದಾಖಲೆಗಳಾಗಲಿ ವಿಳಾಸವಿಲ್ಲದಿದ್ದರೆ ಅಪೂರ್ಣವಾಗುತ್ತದೆ.  ಪರಿಪೂರ್ಣ ವಿಳಾಸವಂತೂ ಇವತ್ತಿನ ಆಧುನಿಕ ಯುಗದ ಜರೂರು ಕೂಡ.

 ನಮಗೆಲ್ಲ ಗೊತ್ತಿರುವಂತೆ  ಅಕ್ಷರಾಭ್ಯಾಸ ಮಾಡಿ ಶಾಲೆ ಮೆಟ್ಟಿಲೇರಬೇಕಾದರೆ ನಮ್ಮ ಪೂರ್ಣ ವಿಳಾಸವೊಂದು ದಾಖಲಿಸಲ್ಪಡುವುದು. ತದನಂತರ ಮುಂದೆ ಎದುರಿಸುವ ಸಂದರ್ಶನಕ್ಕಾಗಲಿ, ಉದ್ಯೋಗಕ್ಕಾಗಲಿ ನಮ್ಮ ಪೂರ್ತಿ ವಿಳಾಸವನ್ನು ಸಂಬಂಧ ಪಟ್ಟವರಿಗೆ ನೀಡಲೇ ಬೇಕು. ನಮ್ಮ ವಿಳಾಸ ಕಟ್ಟಿಕೊಂಡು ಇವರಿಗೇನು?  ನಾವು, ನಮ್ಮ ಕೆಲಸ ಮುಖ್ಯ ತಾನೇ ಅಂತ ನಾವ್ಯಾರು ಉಢಾಪೆಯ ಮಾತುಗಳನ್ನಾಡುವಂತಿಲ್ಲ. ಅದೇನೇ ಇರಲಿ, ನಾವು ಎಲ್ಲೇ ಹೋಗಲಿ, ನೇರವಾಗಿ ನಮ್ಮ ಹೆಸರಿನ ಹಿಂದೆಯೋ, ಯಾರ ಕೇರಾಫಿನೊಳಗೋ ನಮ್ಮ ವಿಳಾಸವೊಂದು ಖುದ್ದು ಇದ್ದೇ ಇರುತ್ತದೆ. ವಿಳಾಸವಿಲ್ಲದಿದ್ದರೆ ಬರಿದೇ ವ್ಯಕ್ತಿತ್ವಕ್ಕೆ ಸಲ್ಲದ ಕಾಲವಿದು.

 ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ವಿಳಾಸ ನೇರವಾಗಿ ಬರುವುದು ತೀರಾ ಅಪರೂಪ.  ಕೆಲವು ಅದಕ್ಕೆ ಅಪವಾದಗಳು ಕೂಡ ಇರಬಹುದು. ಎಳವೆಯಿಂದ ಮದುವೆಯಾಗುವ ತನಕ ಇ/ಮ ಅಂತ ನಮೂದಿಸಿ ವಿಳಾಸ ಬರೆಯುತ್ತಾರೆ. ಮದುವೆಯಾದ ಮೇಲಂತೂ ಇ/ಹೆ ಎಂದು ವಿಳಾಸ ಹೊದ್ದ ಟಪಾಲುಗಳು ಬರುತ್ತವೆ. ಮಹಿಳೆಯ ಹೆಸರಿನ ಜೊತೆಗೆ ಮನೆ ಹೆಸರು, ಊರಿನ ಹೆಸರು ಬರೆದು ಹಾಕಿದರೆ ಅದು ಯಾಕೆ ಪತ್ರಗಳು ಬಟಾವಡೆಯಾಗುವುದಿಲ್ಲವೋ ಗೊತ್ತಿಲ್ಲ. ಇದಕ್ಕೊಂದು ಸಂಶೋಧನೆಯ ಅಗತ್ಯವಿದೆ ಅಂತ ಹಲವು ಬಾರಿ ಅನ್ನಿಸಿದ್ದಿದೆ.

 ಇತ್ತೀಚೆಗಂತೂ ಬಾಯಿ ಹೇಳಿಕೆಗಳು ನಿಂತು ಹೋಗಿ, ಸಾಕಷ್ಟು ನಮ್ಮ ಶ್ರಮ ಮತ್ತು ಸಮಯವನ್ನು ಉಳಿತಾಯ ಮಾಡೋ ನಿಟ್ಟಿನಲ್ಲಿ ಮದುವೆ, ಮುಂಜಿ, ನಾಮಕರಣ,ನೇಮ, ಜಾತ್ರೆ, ಗೋಷ್ಠಿಯ ಆಮಂತ್ರಣ ಪತ್ರಿಕೆಗಳು ಟಪಾಲು ಗುದ್ದಿಸಿಕೊಂಡು ಬಂದು ಪಡಸಾಲೆಯ ಮೇಜಿನ ಮೇಲೆ ಅಲಂಕರಿಸುತ್ತಲೇ ಇರುತ್ತವೆ. ಬಂದ ಎಲ್ಲ ಕರೆಯೋಲೆಗಳ ಕರೆಗೆ ನಿಯತ್ತಿನಿಂದ ಭಾಗವಹಿಸುವುದಾದರೆ ದಿನದ ಇಪ್ಪತ್ತನಾಲ್ಕು ಗಂಟೆಯೂ, ವರ್ಷದ ಮುನ್ನೂರ ಅರವತ್ತೈದು ದಿನವೂ ಸಾಕಾಗಲಾರದೇನೋ.  ಕೆಲವರು ತುಂಬಾ ಬೇಕಾದವರ ಪಟ್ಟಿಯಲ್ಲಿ ಇರುವುದರಿಂದ ಕೆಲವೊಂದು ಸಮಾರಂಭಗಳಿಗೆ ಹೋಗದೆ ವಿಧಿಯಿಲ್ಲ. ಅದರಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಉಪಾಯದ ದಾರಿಯೆಂದರೆ ನಮಗೆ ಪತ್ರ ತಲುಪಲೇ ಇಲ್ಲವೆಂದು  ಅವರು ಸಿಕ್ಕಾಗ ಸುಖಾ ಸುಮ್ಮಗೊಂದು ಪಿಳ್ಳೆ ನೆವ ಹೇಳಿ ಜಾರಿಕೊಂಡು ಬಿಡುವುದು. ಆಗ ಅತ್ತ ಕಡೆಯವರಿಗೆ ಮಂಡೆ ಬಿಸಿ ಶುರುವಾಗಿ, ಛೆ! ನನ್ನ ಕೈಯಾರೆ ನಾನೇ ಸರಿಯಾದ ವಿಳಾಸ ಬರೆದಿರುವೆನಲ್ಲ? ಅಂತ ಅವರಿಗೆ ಅಂಚೆ ಇಲಾಖೆಯ ಮೇಲೆಯೇ ಗುಮಾನಿ ಶುರುವಾಗಿ ಬಿಡುತ್ತದೆ. ಅದು ಕೆಲವೊಮ್ಮೆ ಎಷ್ಟರ ಮಟ್ಟಿಗೆ ಹೋಗುತ್ತದೆಯೆಂದರೆ ಅಂಚೆಯಣ್ಣ ಸಿಕ್ಕಾಗ ಅವನನ್ನು ನಿಲ್ಲಿಸಿ ನೂರೆಂಟು ಪ್ರಶ್ನೆಗಳನ್ನು ಕೇಳುವಲ್ಲಿಯವರೆಗೆ. ಇಷ್ಟಾಗುವಾಗ ನಮ್ಮ ಉಪಸ್ಥಿತಿ ಅಷ್ಟೊಂದು ಪ್ರಾಮುಖ್ಯ ಇತ್ತಾ? ಅಂತ ಮನದೊಳಗೊಂದು ಸಣ್ಣಗೆ ಬಿಗುಮಾನ ಮೂಡಿ ,ಸುಮ್ಮಗೆ ತಪ್ಪಿಸಿಕೊಂಡದ್ದಕ್ಕೆ ನಮ್ಮನ್ನು ನಾವು ಶಪಿಸಿಕೊಳ್ಳುವಂತಾಗುತ್ತದೆ.

  ಮೊನ್ನೆಯೊಂದು ಸಮಾರಂಭದಲ್ಲಿ ಪರಿಚಿತರೊಬ್ಬರು ಪಕ್ಕದಲ್ಲಿದ್ದ ಆಂಟಿಯನ್ನು ಮತ್ತೊಬ್ಬರಿಗೆ ಪರಿಚಯಿಸುತ್ತಾ, ಇವರು ಇಂತಹವರ ಅತ್ತೆ, ಇವರ ಅಳಿಯ ಗೊತ್ತುಂಟಲ್ವಾ..ಭಾರೀ  ಫೇಮಸ್ ಅಂತ ಮತ್ತಷ್ಟು ಒಗ್ಗರಣೆ ಹಾಕಿ ಹೊಗಳುತ್ತಿರುವುದನ್ನು ನಾನು ಕಡೆಗಣ್ಣಿನಿಂದ ನೋಡುತ್ತಾ ಇವರು ಈಗ ಗತ್ತಿನಿಂದ ಬೀಗುತ್ತಾರೇನೋ ಅಂತ ಗಮನಿಸಿದರೆ, ಆಂಟಿಯ ಮುಖದಲ್ಲಿ ಖುಷಿಯ ಇನಿತು ಅಲೆಯೂ ನುಗ್ಗಲಿಲ್ಲ. ಏಕ್ ದಂ ಅವರು ರಾಂಗ್ ಆಗಿ, ಮುಖ ಕೆಂಪಾಗಿ, ಮೂಗಿನ ತುದಿ ಖಾರ ಮೆಣಸಿನಕಾಯಿಯಾಗಿ ಯಾಕ್ರೀ..! ಅವರಿವರ ವಿಳಾಸ ಹೇಳಿಕೊಂಡು ನನ್ನನ್ನು ಪರಿಚಯಿಸ್ತೀರಲ್ಲಾ?, ನನಗೆ ನನ್ನದೇ ಆದ ಪೂರ್ಣ ವಿಳಾಸವಿಲ್ಲಾ? ಅಂತ ರಪ್ಪನೆ ಕೆನ್ನೆಗೆ ಬಾರಿಸಿದಂತೆ ಕೊಟ್ಟ ಖಾರ ಉತ್ತರದ ಘಾಟಿಗೆ ಆ ಮಹಾಶಯರು ಮುಖ ಹುಳ್ಳಗೆ ಮಾಡಿಕೊಂಡು ಅದಾಗಲೇ ಜಾಗ ಖಾಲಿ ಮಾಡಿದ್ದರು. ನೋಡಿದವರಿಗೆ ಇದೊಂದು ಅಧಿಕಪ್ರಸಂಗಿತನದ ಉತ್ತರ ಅಂತ ಅನ್ನಿಸಿದರೂ ನಿಜಕ್ಕೂ ಅವರ ಧೈರ್ಯಕ್ಕೆ ಮತ್ತು ಮನೋಭಾವಕ್ಕೆ ಭೇಷ್ ಅನ್ನಲೇ ಬೇಕು. ಅವರಿವರ ವಿಳಾಸ ಹೇಳಿಕೊಂಡು ನಮ್ಮನ್ನು ಪರಿಚಯಿಸುವ ಅಗತ್ಯವಿದೆಯಾ? ನಮಗೂ ಸ್ವತಂತ್ರ ಅಸ್ಥಿತ್ವ ಇರಬಾರದ? ಅನ್ನುವುದು ಅವರ ವಾದ. ಒಂದು ಸಹಜ ಪ್ರಶ್ನೆಗೆ ರೇಗುವಿಕೆಯ ಹಿಂದೆ ಅದೆಷ್ಟು ನೋವಿತ್ತೋ ಅದು ಅವರಿಗಷ್ಟೇ ಗೊತ್ತು. ಆಗಲೇ ಗೆಳತಿಯೊಬ್ಬಳು ಹೇಳಿದ ಮಾತು ನೆನಪಾದದ್ದು.  ಬಡ ಮನೆತನದ ಹುಡುಗಿಯೇ ಬೇಕೆಂದು ಹಠಕಟ್ಟಿ ಸೊಸೆಯನ್ನಾಗಿಸಿಕೊಂಡ ನಂತರ, ನಮ್ಮಿಂದಾಗಿ ನಿನಗೊಂದು ಪೂರ್ಣ ವಿಳಾಸ ದಕ್ಕಿದೆ ಅಂತ  ಅವಳತ್ತೆ ಮೂದಲಿಸುತ್ತಿದ್ದದ್ದು . ನಿಜಕ್ಕೂ ವಿಳಾಸದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದ ನಾನು, ಈ ವಿಳಾಸ ಇಷ್ಟೊಂದು ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆಯಲ್ಲವಾ ? ಅಂತ ನನಗೆ ಆವತ್ತೇ ಅನ್ನಿಸಿದ್ದು, ಮತ್ತೆ ಹೀಗೇ ವಿಳಾಸದ ಅನೇಕ ಕತೆಗಳು ಬಿಚ್ಚಿಕೊಳ್ಳುತ್ತಾ ಹೋದದ್ದು.

  ಈಗೀಗ ವಿಳಾಸದ ಸಂಗತಿಗಳು ಮೊದಲಿನಂತಿಲ್ಲ. ಪಾಸ್ ಪೋರ್ಟ್, ವೀಸಾ ಮುಂತಾದವುಗಳಿಗೆ ದಾಖಲೆ ತೋರಿಸುವಾಗ ಎಲ್ಲಾ ಕಡೆಯಿಂದಲೂ ವಿಳಾಸ ಸಮನಾಗಿ ಕಾಣಬೇಕು. ಒಂದು ಅಕ್ಷರವಾಗಲಿ, ಇನಿಷಿಯಲ್ ಆಗಲಿ , ಹೆಸರಿನ ಹಿಂದೆ ಅಂಟಿಕೊಂಡ ಮನೆತನದ ಹೆಸರುಗಳಾಗಲಿ ಯಾವುದೂ ಬದಲಾವಣೆ ಹೊಂದುವAತಿಲ್ಲ. ಒಂದು ಸಣ್ಣ ಅಕ್ಷರದ ಪ್ರಮಾದದಿಂದ ಅದೆಷ್ಟೋ ದೊಡ್ಡ ಅವಕಾಶಗಳು ಕೈ ತಪ್ಪಿ ಹೋದ ಸಂದರ್ಭಗಳಿವೆ. ಎರಡೇ ಎರಡು ಇನಿಷಿಯಲ್‌ಗಳಿಗೂ ಕೂಡ ಅಷ್ಟೊಂದು ಪ್ರಾಮುಖ್ಯತೆ ಉಂಟಾ ಅಂತ ಅಚ್ಚರಿಯಾಗುತ್ತದೆ. ಹಾಗಾಗಿ ನಮ್ಮ ಹೆಣ್ಮಕ್ಕಳೀಗ ಯಾವುದೇ ಸಬೂಬುಗಳನ್ನು ಕೊಡದೆ ಧೈರ್ಯದಿಂದ ಅಪ್ಪನ ಮನೆಯಿಂದ ಬಳುವಳಿಯಾಗಿ ಬಂದ ಹೆಸರನ್ನೇ ಇಟ್ಟುಕೊಂಡು ನಿಸೂರಾಗಿದ್ದಾರೆ.

  ಒಮ್ಮೆ ಹೀಗಾಗಿತ್ತು, ಮದುವೆಗೆ ಮೊದಲೇ ನನಗೆ ಕವಿತೆ,ಲೇಖನ ಬರೆಯುವ ಹುಚ್ಚು. ಆಗೆಲ್ಲಾ ತವರು ಮನೆಯ ಹೆಸರನ್ನು ನನ್ನ ಹೆಸರಿನ ಹಿಂದೆ ಅಂಟಿಸಿಕೊಂಡಿದ್ದೆ. ಮದುವೆಯಾದ ಮೇಲೂ ಅದೇ ಹೆಸರು ಹಾಕಿ ಕವಿತೆ ವಾಚಿಸಲು ಕರೆಯುವುದು, ಆಮಂತ್ರಣ ಪತ್ರಿಕೆ ಬರುವುದು, ಅನೇಕ ಸಂದರ್ಭಗಳಲ್ಲಿ ಅದೇ ಹೆಸರಿನಿಂದ ಗುರುತಿಸುವಾಗ ಯಾಕೋ ಸಣ್ಣಗೆ ಕಸಿವಿಸಿಯಾಗುತ್ತಿತ್ತು. ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಅನ್ನುವ ಮಾತನ್ನು ಕೆಲವರು ತಮಾಷೆಗೇನೋ ಎಂಬಂತೆ ಮೆಲ್ಲಗೆ ನನ್ನ ಕಿವಿಯಲ್ಲಿ ಉಸುರಿದ್ದರು ಕೂಡ . ಒಂದೊಮ್ಮೆ ಹಾಗೇ ನನ್ನ ಹೆಸರಿನ ಹಿಂದೆ ತವರು ಮನೆಯ ಹೆಸರು ಅಂಟಿಕೊಂಡು ಬಂದಾಗ, ನಾನು ಸಂಘಟಕರಿಗೊಂದು ಪತ್ರ ಬರೆದು ,ನನಗೆ ಮದುವೆಯಾದ ಕಾರಣ ನನ್ನ ಹೆಸರಿನ ಹಿಂದಿನ ಈಗಿನ ವಿಳಾಸ ಬದಲಾಗಿದೆ, ಇನ್ನು ಮುಂದೆ ಈ ಕೆಳಕಂಡ ವಿಳಾಸದಂತೆ ನಮೂದಿಸಬೇಕೆಂದು ಪತ್ರ ಬರೆದದ್ದು ನೆನೆದರೆ ನಾನು ಅವರಿವರು ಕೇಳುವ ಪ್ರಶ್ನೆಯಿಂದ ಬಚಾವಾಗಲು ಹೀಗೆ ಮಾಡಿದೇನಾ?!. ಅಥವಾ ಇದು ನನ್ನ ಖಾಯಂ ವಿಳಾಸ ಅನ್ನೋ ಮೋಹವಿತ್ತಾ? ನೆನಪಿಗೆ ಸರಿಯಾಗಿ ಒದಗಿ ಬರುತ್ತಿಲ್ಲ.

 ಈ ಹೊತ್ತಿನಲ್ಲಿ ಎಳವೆಯ ಕತೆಯೊಂದು ನುಗ್ಗಿ ಬರುತ್ತಿದೆ. ಏಳನೇ ತರಗತಿಯಲ್ಲಿ ನಮ್ಮ ಕನ್ನಡ ಟೀಚರ್ ನಮಗೆ ಪತ್ರ ಲೇಖನ ಕಲಿಸುತ್ತಿದ್ದರು. ಪರೀಕ್ಷೆಗೆ ಇದನ್ನೇ ಕೊಡುವೆನೆಂದು ಕೂಡ ಹೇಳಿದ್ದರು. ಅದೇ ವರ್ಷ ನನ್ನ ತಂದೆ ತೀರಿ ಹೋಗಿ ನಾನು ಯಾವ ವಿಳಾಸಕ್ಕೆ ಪತ್ರ ಬರೆಯಲಿ ಎಂಬುದೇ ನನಗೆ ಬಹು ದೊಡ್ಡ ಚಿಂತೆಯಾಗಿತ್ತು. ಜೊತೆಗೆ ವಿಳಾಸವೇ ಕೊಡದೆ ಹೋದ ಅಪ್ಪನ ಬಗ್ಗೆಅಗಾಧ ದು:ಖವೂ ಸಣ್ಣಗೆ ಅಸಮಾಧಾನವೂ ಆಗಿತ್ತು.  ಯಾಕೆಂದರೆ ನನಗೆ ಮೊದಲು ಪತ್ರ ಬರೆಯುವ ಹುಚ್ಚು ಹಿಡಿಸಿದ್ದೇ ನನ್ನ ಅಪ್ಪ. ಒಳಗಡೆ ನೀಟಾಗಿ ಬರೆಯದಿದ್ದರೂ ತೊಂದರೆಯಿಲ್ಲ, ಆದರೆ  ವಿಳಾಸವೊಂದು ಚಿತ್ತಿಲ್ಲದೆ ಸರಿಯಾಗಿ ಬರೆಯ ಬೇಕೆಂದು ತಾಕೀತು ಮಾಡಿದ್ದರು. ಇಲ್ಲದಿದ್ದರೆ ಪತ್ರ ತಲುಪಬೇಕಾದಲ್ಲಿಗೆ ತಲುಪದೆ ಹಾಗೇ ಡಬ್ಬಿಯೊಳಗೆ ಉಳಿದು ಬಿಡುತ್ತದೆಯೆಂದು ಹೆದರಿಸುವುದರ ಮೂಲಕ ಜಾಗರೂಕತೆಯಿಂದ ವಿಳಾಸ ಬರೆಯುವ ವಿಧಾನವ ಕಲಿಸಿ ಕೊಟ್ಟಿದ್ದರು. ಯಾಕೋ ಇದನ್ನೆಲ್ಲಾ ಟೀಚರಮ್ಮನ ಬಳಿ ಕೇಳೋಕೆ  ಒಂಥರಾ ಭಯ . ಇದೇ ಗೊಂದಲದಲ್ಲಿರುವಾಗಲೇ ಪಕ್ಕದ ಮನೆಯ ಅಣ್ಣನೊಬ್ಬ ನನಗೆ ಪುಕ್ಕಟೆ ಸಲಹೆಯೊಂದನ್ನು ಬಹು ಗಂಭೀರವಾಗಿ ಕೊಟ್ಟಿದ್ದ. ಈ ಸಲದ ಪರೀಕ್ಷೆಗೆ ಅಪ್ಪನ ವಿಳಾಸ ಹಾಕಿ, ಅಪ್ಪನಿಗೊಂದು ಪತ್ರ ಬರೆ ಅಂತ ಕೊಟ್ಟರೆ, ನನಗೆ ಅಪ್ಪನಿಲ್ಲದ ಕಾರಣ ನಾನು ನನ್ನ ಅಮ್ಮನ ವಿಳಾಸಕ್ಕೆ ಅಮ್ಮನಿಗೆ ಪತ್ರ ಬರೆಯುತ್ತಿರುವೆ ಅಂತ ಒಕ್ಕಣೆಯನ್ನು ಲೆಕ್ಕಿಸಿ ಪತ್ರ ಬರಿ ಅಂತ ಹೇಳಿದ್ದ.  ಅವನು ಹೇಳಿದ ಮಾತನ್ನು ಶಿರಸಾವಹಿಸಿ ಪಾಲಿಸಿದ್ದೆ ಕೂಡ. ನನ್ನ ಪತ್ರ ಲೇಖನ ಓದಿದ ಟೀಚರಮ್ಮನ ಕಣ್ಣಲ್ಲಿ ಹನಿಯೊಡೆದು,ಕನಿಕರ ಹುಟ್ಟಿ, ಮುಂದೆ ಬರುವ ದೊಡ್ಡ ಪರೀಕ್ಷೆಯಲ್ಲಿ ಮಾತ್ರ ಹೀಗೆ ಬರಿಬೇಡ ಆಯ್ತಾ ಅಂತ  ಗಟ್ಟಿ ಸ್ವರದ ಮೇಡಂ ತೀರಾ ಮೆತ್ತಗೆ ದನಿಯಲ್ಲಿಯೇ ಅದರ ಉದ್ದೇಶವನ್ನು ಹೇಳಿಕೊಟ್ಟಿದ್ದರು.

 ಒಂದಷ್ಟು ವರುಷದ ಹಿಂದೆ ಪತ್ರ ಬರೆಯುವುದು, ಮತ್ತು ಪತ್ರ ಬರುವುದಕ್ಕೂ ಒಂದು ಘನತೆ ಇರುತ್ತಿತ್ತು. ಕ್ಷೇಮವೇ? ಕುಶಲವೇ? ಅಂತ ಶುರುಗೊಳ್ಳುವ ಒಕ್ಕಣೆಯಿಂದ ಹೇಳ ಬೇಕಾದುದ್ದನ್ನೆಲ್ಲ ಅರುಹಿ, ಪತ್ರದ ನಾಲ್ಕು ಬದಿಗೂ ಚೆನ್ನಾಗಿ ಗೋಂದು ಅಂಟಿಸಿ , ವಿಳಾಸ ಸರಿಯಿದೆಯಾ ಅಂತ ಮತ್ತೊಮ್ಮೆ ಕಣ್ಣಾಡಿಸಿ  ಅಂಚೆ ಡಬ್ಬಿಗೆ ಹಾಕಿದ ಮೇಲೇ ಏನೋ ಹಗುರತನದ ಭಾವ. ಈಗ ಇಂಟರ್ನೆಟ್ ಯುಗದಲ್ಲಿ ವಿಳಾಸ  ಬರೆದು ಪತ್ರಿಸುವ ಕಾಯಕ ಕಣ್ಮರೆಯಾದರೂ, ವಿಳಾಸವಂತೂ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ಇದರಿಂದಾಗುವ ಗಲಿಬಿಲಿ, ಗೊಂದಲ, ಗಂಡಾಂತರಗಳು ಹಲವು.

ಇತ್ತೀಚೆಗಂತೂ ದೊಡ್ಡ ದೊಡ್ಡ ಬಡಾವಣೆಗಳಲ್ಲಿ ವಿಳಾಸ ಹುಡುಕಿಕೊಂಡು ಗಲ್ಲಿ ಗಲ್ಲಿ ಅಲೆಯುವುದು ಅದೆಷ್ಟು ತ್ರಾಸದಾಯಕ ಕೆಲಸ ಅನ್ನುವಂತದ್ದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಆಟೋ ಚಾಲಕರೆಲ್ಲಾ ಒಂದೇ ರೀತಿ ಇರದಿದ್ದರೂ ಕೆಲವೊಮ್ಮೆ ನಮ್ಮ ಕಣ್ಕಟ್ಟು ಮಾಡಿ ನಿಂತ ಜಾಗದಲ್ಲೇ ಸುತ್ತು ತಿರುಗಿಸಿ ದುಪ್ಪಟ್ಟು ಹಣ ಮಸೂಲಿ ಮಾಡುವುದು ಸರ್ವೇ ಸಾಮಾನ್ಯ. ಹಳ್ಳಿ ಬಿಟ್ಟು ನಗರ ಪ್ರದೇಶಕ್ಕೆ ಅಷ್ಟಾಗಿ ಪ್ರವೇಶ ಮಾಡಿರದ ನಾನು, ಒಂದೊಮ್ಮೆ ಹೈದರಬಾದಿಗೆ ಹೋಗಿ ಬೆಂಗಳೂರಿಗೆ ಬಂದಿಳಿದಾಗ, ಸರಿಯಾದ ವಿಳಾಸಕ್ಕೆ ತಲುಪಿಸದೆ ಆಟೊ ಚಾಲಕ ಅಡ್ಡಾಡಿಸಿದ್ದು, ಜೊತೆಯಲ್ಲಿ ಇದ್ದ ಗೆಳತಿಯೊಬ್ಬಳು ಅವನ ಕಷ್ಟ ಸುಖ ವಿಚಾರಿಸುತ್ತಾ ಕುಳಿತ್ತದ್ದು,  ಅದನ್ನು ಕೇಳಿಕೊಂಡೇ ಅವ ನಮ್ಮನ್ನು ಸುಮ್ಮಗೆ ಮತ್ತೊಂದು ಸುತ್ತು ಸುತ್ತಿಸಿದ್ದು, ತದನಂತರ ತಲುಪಿಸಬೇಕಾದಲ್ಲಿಗೆ ನಮ್ಮ ತಲುಪಿಸದೆ ನಾವು ಬೆಪ್ಪು ತಕ್ಕಡಿಯಂತಾಗಿ ಮತ್ತೊಂದು ಆಟೋ ಹತ್ತಿ ಗೆಳತಿಗೆ ತುಟಿ ತೆರೆಯದಂತೆ ಆದೇಶ ಮಾಡಿ ತಲುಪಬೇಕಾದ ವಿಳಾಸ ತಲುಪಿದ್ದು ಎಲ್ಲಾ ಈಗ ಕತೆಯಂತೆ ಸುಳಿದು ಹೋಗುವ ವಿಚಾರ.  ಅದೇನೆ ಇರಲಿ, ಗುರುತು ಪರಿಚಯ ಇರದ ಊರಿಗೆ ಬಂದು  ಗೊತ್ತಿಲ್ಲದ ವಿಳಾಸವೊಂದನ್ನು  ಕೈಯಲ್ಲಿ ಹಿಡಿದು ಕೊಂಡು ಆಟೋ ಹತ್ತಿ ಅಂಡೆಲೆಯುವಾಗ ಪರ್ಸ್ನಲ್ಲಿದ್ದ ಹಣ ಪೂರ ಖಾಲಿಯಾಗುವುದು ಮಾತ್ರ ವಿಳಾಸದ ಮಹಿಮೆಯೇ ಸರಿ.

 ಒಮ್ಮೆ ತೀರಾ ಎಳವೆಯಲ್ಲಿ ಸಂಬಂಧಿಕರ ಮನೆಗೆಂದು ಬೆಂಗಳೂರಿಗೆ ಹೋದ ನನ್ನ ಪುಟ್ಟ ತಮ್ಮನಿಗೆ  ನಾವು ಅದೆಷ್ಟು ಭಾರಿ ಜಾಗ್ರತೆ ಹೇಳಿ ಕೊಟ್ಟಿದ್ದರೂ ಝಗಮಗಿಸುವ ರಸ್ತೆ ಬದಿಯ ಗಿಜಿಗುಟ್ಟುವ ಅಂಗಡಿಯನ್ನು ನೋಡುತ್ತಾ ನೋಡುತ್ತಾ ಅದೆಲ್ಲೋ ಕಳೆದು ಹೋದದ್ದು ಗೊತ್ತಾಗಲೇ ಇಲ್ಲ. ತಾನೆಲ್ಲಿರುವೆನೆಂಬ ಅರಿವಾದಾಗ ಸರಿಯಾದ ವಿಳಾಸ ಹೇಳಲು ಗೊತ್ತಿಲ್ಲದೆ ಅಳುತ್ತಾ ನಿಂತವನನ್ನು  ಅದೇಗೋ ಹುಡುಕಿ ಪತ್ತೆ ಹಚ್ಚಿ ಬಿಟ್ಟಿದ್ದಾರೆ. ಈಗ ಅದೇ ಊರಿನಲ್ಲಿ ವಾಸವಾಗಿರುವ ತಮ್ಮ ಯಾವ ವಿಳಾಸ ಕೊಟ್ಟರೂ ಅಲ್ಲಿಗೆ ಹೋಗಿ ಬರುವ ಚಾಕಚಕ್ಯತೆಯನ್ನು ಬೆಳೆಸಿಕೊಂಡಿದ್ದಾನೆ ಅನ್ನುವುದು ಬೆಳವಣಿಗೆಗೆ ಒಡ್ಡಿಕೊಂಡ ಕಾಲದ ಬದಲಾವಣೆ ತಂದಿತ್ತ ಸೋಜಿಗವೇ ಸರಿ.  ಬೆಂಗಳೂರಿಗೆ ಆಗೊಮ್ಮೆ ಈಗೊಮ್ಮೆ ಬಂದಾಗಲೆಲ್ಲಾ ವಿಳಾಸ ಗೊತ್ತಿದ್ದೂ ಸತಾಯಿಸಿದ ಆಟೋ ಚಾಲಕನೂ, ವಿಳಾಸ ಗೊತ್ತಿಲ್ಲದೆಯೂ ಪತ್ತೆಯಾದ ತಮ್ಮನೂ ಏಕಕಾಲದಲ್ಲಿ ನೆನಪಾಗುತ್ತಾ ನಾನು ನನ್ನ ವಿಳಾಸದ ಚೀಟಿಯೊಂದನ್ನ ಕೈ ಚೀಲದೊಳಗೆ ಭದ್ರವಾಗಿಟ್ಟುಕೊಂಡು, ತಲುಪಬೇಕಿರುವ ವಿಳಾಸವನ್ನು ಸರಿಯಾಗಿ ಖಾತ್ರಿ ಪಡಿಸಿಯೇ ಮುಂದಡಿಯಿಡುತ್ತೇನೆ.

Image result for photos of adree written inland letter

 ಈ ವಿಳಾಸ ಅದೆಷ್ಟೋ ಸಂಬಂಧಗಳನ್ನು ಬೆಸೆದಿದೆ,ಕಳೆದಿದೆ ಕೂಡ. ಯಾರದೋ ವಿಳಾಸಕ್ಕೆ ಬರೆದ ಪತ್ರಗಳು ಮತ್ಯಾರಿಗೋ ತಲುಪಿ ಗೊಂದಲಕ್ಕೆ ಒಳಗಾದ ಪ್ರಸಂಗಗಳು ಅದೆಷ್ಟೋ ಇವೆ. ಒಂದೇ ಊರಿನಲ್ಲಿ ಒಂದೇ ಹೆಸರಿನ,ಒಂದೇ ಹುದ್ದೆಯಲ್ಲಿರುವ ವ್ಯಕ್ತಿಗಳು ಇದ್ದರಂತೂ  ಅನೇಕ ಸ್ವಾರಸ್ಯಕರ ಪ್ರಸಂಗಗಳು ಎದುರಾಗುತ್ತವೆ ಅನ್ನುವುದಕ್ಕೆ ನಮ್ಮ ಮನೆಯೇ ಅನೇಕ ಇಂತಹ ಎಡವಟ್ಟು ಪ್ರಸಂಗಗಳಿಗೆ, ಮುದ ನೀಡುವ ಗಳಿಗೆಗಳಿಗೆ ಸಾಕ್ಷಿಯಾಗಿದೆ. ನಮ್ಮ ಮನೆಯಲ್ಲಿ ನನ್ನ ಮಾವನವರ ಹೆಸರಿನ ಮತ್ತೋರ್ವ ವ್ಯಕ್ತಿ ನಮ್ಮೂರಿನಲ್ಲಿದ್ದಾರೆ. ಹೇಳಿ ಕೇಳಿ ಇಬ್ಬರೂ ನಿವೃತ್ತ ಮುಖ್ಯೋಪಾದ್ಯಾಯರೇ. ಇನ್ನು ಬೇರೆ ಹೇಳಬೇಕೆ?.ಎಷ್ಟೋ ವರುಷಗಳ ನಂತರ ಬೇಟಿಯಾಗಲು ಬರುವ  ಹಳೆ ವಿಧ್ಯಾರ್ಥಿಗಳು,ಅಭಿಮಾನಿಗಳು ಎಂದೂ ಬೇಟಿಯಾಗಿರದ ದೂರದ ಸಂಬಂಧಿಗಳು ಹೀಗೆ ಹಣ್ಣು ಹಂಪಲು ,ಶಾಲು,ಹೂಗಚ್ಚ ಹಿಡಿದುಕೊಂಡು ಬರುವವರ ಸಂಖ್ಯೆ ಬಹಳ. ಬಹುಷ: ಒಂದೂರಿನಲ್ಲಿ ಮೇಷ್ಟ್ರುಗಳ ಮನೆಯ ವಿಳಾಸ ಗೊತ್ತಿಲ್ಲದವರು ಬಹಳ ವಿರಳ . ಆದರೆ ಬಹುತೇಕ ಸಂದರ್ಭದಲ್ಲಿ ಏನಾಗುತ್ತೆ ಅಂದರೆ, ದೂರದ ಊರಿನವರು ಬಂದು ಮಾಷ್ಟ್ರ ಮನೆಗೆ ದಾರಿ ಹೇಳಿ ಅಂದರೆ ,ಇದ್ಯಾವುದ  ಅರಿವಿಲ್ಲದ ನಮ್ಮೂರ ಜನ ಏನು ಸರಿಯಾಗಿ ವಿಚಾರಿಸದೆ, ಅವರ ಮನೆಗೆ ಬರುವವರನ್ನು ನಮ್ಮ ಮನೆಗೆ,ನಮ್ಮ ಮನೆಗೆ ಬರುವವರನ್ನು ಅವರ ಮನೆಗೆ ಕಳಿಸಿ ಅಲ್ಲಿ ನಡೆಯುವ ಚೋದ್ಯಕ್ಕೆ ಅರಿವಿಲ್ಲದೆಯೇ ಕಾರಣರಾಗಿ ಬಿಡುತ್ತಾರೆ. ಸರಿಯಾದ ವಿಳಾಸಕ್ಕೆ ತಲುಪದಿದ್ದರು ಚಾ ತಿಂಡಿಯ ಸಮಾರಾಧನೆಯಂತೂ ಯಾರ ಮನೆಯಲ್ಲೂ ಲೋಪವಿಲ್ಲದಂತೆ ನಡೆಯುತ್ತದೆ ಅನ್ನುವಂತದ್ದು ಮಾತ್ರ ಸತ್ಯ.

 ನಾನು ಮೊನ್ನೆ ಮೊನ್ನೆ ಯಾವುದೋ ಸಾಹಿತ್ಯ ಕಾರ್ಯಕ್ರಮದ ನೆಪದಲ್ಲಿ ಮುಂಬಯಿಗೆ ಹೋಗಬೇಕೆನ್ನುವಾಗ ಮುಂಬಯಿಯಲ್ಲಿ ನೆಲೆಸಿರುವ ನಾ ಹಿಂದೆಂದು ನೋಡಿಯೇ ಇರದ ನನ್ನ ಅಪ್ಪನ ತೀರಾ ಆತ್ಮೀಯ ಗೆಳೆಯರೊಬ್ಬರನ್ನು ಯಾಕೋ ಬೇಟಿಯಾಗಬೇಕೆಂದು ತೀರಾ ಮನಸಾಯಿತು. ವಿಳಾಸ ಹೇಳಲು ಅಪ್ಪನಿಲ್ಲ. ಕೊನೇಗೆ ಅದೃಷ್ಟವೆಂಬಂತೆ ಅಪ್ಪನ ಹಳೆ ಕಡತದಲ್ಲಿ ಸಿಕ್ಕ ವಿಳಾಸಕ್ಕೆ ಪತ್ರ ಬರೆದು ನನ್ನ ಮೊಬೈಲ್ ನಂಬರು ಬರೆದು ಅಂಚೆ ಪೆಟ್ಟಿಗೆಯೊಳಗೆ ಹಾಕಿ ಆ ಸಂಗತಿಯನ್ನು ಮರೆತು ಬಿಡುವ ಹೊತ್ತಿನಲ್ಲಿ ಅಚಾನಕ್ ಅವರಿಂದ ಪೋನ್ ಬಂದು ಅವರನ್ನು ಮುಂಬಯಿಯಲ್ಲಿ ಮೊದಲ ಬಾರಿಗೆ ಬೇಟಿಯಾಗುವ ಖುಷಿಯ ಕ್ಷಣಗಳಿಗೆ ಎರಡು ಸಾಲಿನ ವಿಳಾಸವೊಂದು ನೆಪವಾಗಿತ್ತು. ಕೆಲವರಿಗಂತೂ ಅಗತ್ಯಬಿದ್ದಾಗ  ಮಾತ್ರ ವಿಳಾಸ ನೆನಪಾಗುವುದು. ಮತ್ತೊಂದಷ್ಟು ವರ್ಗದವರಿದ್ದಾರೆ ಅವರು ಯಾರಿಗೂ ಸರಿಯಾದ ವಿಳಾಸವೇ ಕೊಡದೆ ಎಲ್ಲರನ್ನು ಸಾಗ ಹಾಕಿ ಬಿಡುತ್ತಾರೆ. ನನ್ನ ಗೆಳತಿಯೊಬ್ಬಳಿದ್ದಳು, ಅವಳು ಕಾಲೇಜಿನಲ್ಲಿರುವಾಗ ಯಾವಾಗಲು ನಮ್ಮ ಮನೆ ಇಂತ ಜಾಗದಲ್ಲಿ ಇಂತ ತಿರುವಿನಲ್ಲಿದೆ, ಅಲ್ಲಿಯೊಂದು ಮಹಡಿ ಮನೆ ಕಾಣುತ್ತೆ, ಅದು ನಮ್ಮ ಮನೆ, ನೀವು ಆಚೆ ಬಂದಾಗ ಅಲ್ಲಿಗೆ ಬನ್ನಿ ಅಂತ ಎಷ್ಟೋ ಬಾರಿ ಒತ್ತಾಯಿಸಿದ್ದಕ್ಕೆ ,ಯಾವುದೋ ಒಂದು ಸಂದರ್ಭದಲ್ಲಿ ಅವಳೂರಿಗೆ ಹೋದಾಗ ಅಚ್ಚರಿ ಕೊಡುವ ಅಂತ ಅವಳು ಹಿಂದೊಮ್ಮೆ ಉಸುರಿದ ದಾರಿಯಲ್ಲಿ ಹೋದರೆ ದಾರಿ ಕಂಡರೂ ವಿಳಾಸ ಪತ್ತೆ ಹಚ್ಚಲಾಗದೆ ಕಂಗಾಲಾಗಿರುವ ಹೊತ್ತಲ್ಲಿ ಅಲ್ಲೇ ಬಳಿಯಲ್ಲಿದ್ದವರ ಬಳಿ ಅವಳ ಕುರಿತು ಹೇಳಿದಾಗ ಗಲ್ಲಿಯೊಂದರೊಳಗೆ ಇರುವ ಜೋಪಾಡಿಯತ್ತ ಬೆರಳು ತೋರಿಸಿದ್ದರು. ಯಾಕೆ ಹೀಗೆ ಅವಳು ಹೇಳಿದಳೋ ಅಂತ ಮನಸಿನೊಳಗೆ ಸಣ್ಣಗೆ ಕಸಿವಿಸಿಯಾಗಿ ಅವಳನ್ನು ಪೇಚಿಗೆ ಸಿಕ್ಕಿಸಬಾರದೆಂಬ ಯೋಚನೆಯಲ್ಲಿ ಅವಳನ್ನು ಬೇಟಿಯಾಗದೇ ಹಿಂದಿರುಗಿ ಬಿಟ್ಟಿದ್ದೆ. ಆ ದಿನ ಹೃದಯ ಭಾರಭಾರವಾಗಿ  ಅದ್ಯಾಕೋ ಅವಳ ಬಗ್ಗೆ ಇನ್ನಿಲ್ಲದ ಪ್ರೀತಿ ಹುಟ್ಟಿಬಿಟ್ಟಿತ್ತು. ಈ ವಿಳಾಸ ಹೀಗೆ ಬೇರೆಬೇರೆ ರೀತಿಯಲ್ಲಿ ತೆರೆದುಕೊಂಡು ಕಾಡುವುದ ಕಂಡಾಗ ಹೀಗೂ ಉಂಟೇ ಅಂತ ಅಚ್ಚರಿಯಾಗದೇ ಇರಲಿಕ್ಕಿಲ್ಲ. ಆದರೆ ಸಂದರ್ಭಕ್ಕೆ ಅನುಸಾರವಾಗಿ ಕೆಲವರಿಗೆ ವಿಳಾಸದ ಕುರಿತು ಜಾಣ ಮರೆವು ಕಾಡುವುದುಂಟು. ಕೆಲವರು ವಿಳಾಸ ಮರೆತವರಿಗೆ ಗೋರಿ ನೆಟ್ಟು ನೆನಪ ಮರೆತರೆ, ಇನ್ನು ಕೆಲವರು ಹಸಿರು ಚಿಗುರಿಸಿ ನಿಟ್ಟುಸಿರಾಗುತ್ತಾರೆ.

 ಯಾಕೋ ಈ ವಿಳಾಸದ ಕತೆಗಳು ಹೇಳಿದಷ್ಟು ಮುಗಿಯದಿರುವಾಗ ಮೊನ್ನೆ ಗೆಳತಿಯೊಬ್ಬಳು ಅವಳ ಗೆಳತಿಯೊಬ್ಬಳ ಸಮಸ್ಯೆಯನ್ನು ಕತೆಯಂತೆ ಹೇಳತೊಡಗಿದಾಗ ,ಗುರುತು ಪರಿಚಯವಿಲ್ಲದಿದ್ದರೂ ಅವಳ ಘಾಸಿ ಗೊಂಡ ಹೃದಯದ ಮಾತುಗಳು ನನ್ನ ಕಣ್ಣಲ್ಲೂ ನೀರಿನ ಸೆಲೆಯೊಡೆಯುವಂತೆ ಮಾಡಿದ್ದವು.  ಅಲ್ಲಿ ಯಾವೊತ್ತು ಗಂಡ ಹೆಂಡಿರ ಮಧ್ಯೆ ಕಲಹ ಸಾಮಾನ್ಯ. ಗಂಡನ ಧೂರ್ತ ಕೆಲಸಗಳನ್ನು ನೋಡಿ ರೋಸಿ ಹೋದ ಅವಳೊಮ್ಮೆ ಹೀಗೇ ಮಾಡೊದು ಸರಿಯಾ? ಅಂತ ಪ್ರಶ್ನಿಸಿದ್ದಷ್ಟೆ. ಅಷ್ಟಕ್ಕೇ ಮಾತು ನಿಂತು ಆತನೇ ಮನೆ ಬಿಟ್ಟು ಒಂದಷ್ಟು ದಿನ ಹೊರಗೆ ಹೋಗಿದ್ದನಂತೆ. ಸಧ್ಯ ಇವಳನ್ನು ಮನೆಯಿಂದ ಹೊರ ಹಾಕಲಿಲ್ಲವಲ್ಲವೆಂಬುದು ಸಮಾಧಾನ ತರುವ ಸಂಗತಿಯಾದರೂ ಅಕೆಯೋ..ಛೆ! ನಾನು ಏನು ಹೇಳಲೇ ಬಾರದಿತ್ತು. ಪ್ರಶ್ನಿಸಿದ್ದು ನನ್ನದೇ ತಪ್ಪು. ಇಷ್ಟು ದಿನ ಅನುಭವಿಸಿ ಹೇಗೋ ಅಭ್ಯಾಸವಾಗಿ ಬಿಟ್ಟಿತ್ತು. ಈಗ ಅವರೇ ಮನೆಬಿಟ್ಟು ಹೋದರೆ ಎಷ್ಟು ದಿನ ಕೇಳಿದವರ ಬಾಯನ್ನು ಮುಚ್ಚಿಸಲು ಸಾಧ್ಯ?. ಅವರಿವರ ಬಾಯಿಗೆ ಸುಮ್ಮಗೆ ಜಗಿಯುವ ಆಹಾರವಾಗಿ ಬಿಡುವೆನಲ್ಲ?. ಏನೇ ಆದರೂ ಅವರು ಮನೆಯಲ್ಲಿದ್ದರೆ ನನಗೊಂದು ವಿಳಾಸವಾದರೂ ಇರುತ್ತಿತ್ತಲ್ಲ? ಎನ್ನುತ್ತಾ ಅವಳು ಅವಲತ್ತುಕೊಂಡ ಮಾತುಗಳು ನನ್ನ ಎದೆಯೊಳಗೆ ಮೊರೆಯುತ್ತಲೇ ಯೋಚನೆಗೆ ನೂಕುತ್ತಿದೆ.

ಬೇಕಿರಲಿ, ಬೇಡವಿರಲಿ ವಿಳಾಸವೊಂದು  ಎಲ್ಲಾ ರೀತಿಯಿಂದಲೂ ಭದ್ರತೆಗೆ ಆಧಾರವಾ?! ಅಂತ  ನನ್ನನ್ನು ನಾನು ಪ್ರಶ್ನಿಸಿ ಕೊಂಡಾಗಲೆಲ್ಲಾ ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟ, ವಿಳಾಸ ಮರೆತ ಹುಚ್ಚಿಯೊಬ್ಬಳು ಕಣ್ಣ ಮುಂದೆ ಬಂದು ನಿಲ್ಲುತ್ತಾಳೆ. ಬೀದಿ ಬದಿಯ ಕಸದ ತೊಟ್ಟಿಯ ಬಳಿ ಅಳುತ್ತಲೇ ನಿಂತ  ಅನಾಥ ಮಗುವಿನ ಕಂಬನಿಯ ಹನಿಯಲ್ಲಿ ವಿಳಾಸ ಕರಗಿ ಹೋದಂತೆ ಅನ್ನಿಸಿ ಮನಸ್ಸು ಆರ್ಧ್ರಗೊಳ್ಳುತ್ತದೆ.

      –ಸ್ಮಿತಾ ಅಮೃತರಾಜ್. ಸಂಪಾಜೆ.

============

Image result for photos of adree written inland letter

One thought on “ಪ್ರಬಂಧ

  1. ಪ್ರಬಂಧ ಓದುತ್ತಾ ಓದುತ್ತಾ ಅದು ಕತೆಯ ಸ್ವರೂಪ ಪಡೆಯುವುದು ಈ ಬರಹದ ಸಾರ್ಥಕತೆ.‌ ತುಂಬಾ ಚೆಂದ ಬರಹ. ಅಂತಃಕರಣ ,ಮಾನವೀಯತೆ ಜೊತೆಗೆ ಹೆಣ್ಣೊಬ್ಬಳ‌ ಆತಂಕವೂ ಕೊನೆಯಲ್ಲಿ ಉಳಿದು ಬಿಡುತ್ತದೆ..

Leave a Reply

Back To Top