ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—46

ಆತ್ಮಾನುಸಂಧಾನ

ಜೊತೆ ಸೇರಿದ ಸುರೇಂದ್ರ ದಫೇದಾರ, ಎಲ್.ಎನ್. ನಾಯ್ಕ

Untitled | Illustration art, Book art, Illustration

೧೯೮೩ ರ ಸುಮಾರಿಗೆ ನಮ್ಮ ಕಾಲೇಜಿನಲ್ಲಿ ಪದವಿಪೂರ್ವ ವಿಭಾಗದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗವೊಂದು ಆರಂಭವಾಯಿತು. ಅದಕ್ಕೆ ಸಿದ್ದಾಪುರದ ಸುರೇಂದ್ರ ದಫೇದಾರ ಎಂಬ ಯುವ ಅಧ್ಯಾಪಕರೊಬ್ಬರ ಆಯ್ಕೆಯಾಯಿತು. ಅದೇ ಆಗ ವಾಣಿಜ್ಯ ಶಾಸ್ತ್ರ ದಲ್ಲಿ ಎಂ.ಕಾಂ. ಪದವಿ ಪಡೆದ ಸ್ವಲ್ಪ ಕುಳ್ಳ ಆಕೃತಿಯ ಯುವಕ ಸುರೇಂದ್ರ ಕಾಲೇಜಿನ ವಿದ್ಯಾರ್ಥಿಯಂತೆಯೇ ಕಾಣಿಸುತ್ತಿದ್ದರು.

ಸಾಮಾನ್ಯ ಮದ್ಯಮ ವರ್ಗದ ಕುಟುಂಬದ, ಹಿಂದುಳಿದ ವರ್ಗದಿಂದ ಬಂದ ಸುರೇಂದ್ರ ತುಂಬಾ ಚೂಟಿಯಾಗಿದ್ದರು. ವಿದ್ಯಾರ್ಥಿಗಳಿಗೆ ಪಾಠ ಆರಂಭಿಸಿದ ಕೆಲವೇ ದಿನಗಳಲ್ಲಿ ಅವರ ಮನಸ್ಸನ್ನು ಗೆದ್ದುಕೊಂಡರು. ಅಭಿರುಚಿ-ಆಸಕ್ತಿಗಳಲ್ಲಿ ಸಮಾನತೆ ಇದ್ದುದರಿಂದ ಬಹಳ ಬೇಗ ನನಗೂ ಆತ್ಮೀಯರಾದರು.

ಕಾರವಾರದ ‘ಬಾಡ’ ಎಂಬ ಊರಿನ ಎಲ್.ಎನ್.ನಾಯ್ಕ ಎಂಬ ಇನ್ನೊಬ್ಬ ಸುಂದರ ಯುವಕ ಇಂಗ್ಲೀಷ್ ವಿಷಯಕ್ಕೆ ಆಯ್ಕೆಯಾಗಿ ಇದೇ ಕಾಲಾವಧಿಯಲ್ಲಿ ನಮ್ಮ ಸಹೋದ್ಯೋಗಿ ಆದರು. ದಫೇದಾರರಂತೆಯೇ ಸಮಾನ ಆಸಕ್ತಿಯ ಎಲ್.ಎನ್.ನಾಯ್ಕ ಕೂಡ ಬಹುಬೇಗ ನಮ್ಮ ಸ್ನೇಹದ ವಲಯದಲ್ಲಿ ಒಬ್ಬರಾದರು.

ಇಂಗ್ಲೀಷ್ ವಿಷಯವನ್ನು ಸುವರ್ಣ ಪದಕದೊಂದಿಗೆ ಪಾಸು ಮಾಡಿದ್ದ ಎಲ್.ಎನ್.ನಾಯ್ಕ ಸಹ ಕೆಲವೇ ಕೆಲವು ದಿನಗಳಲ್ಲಿ ವಿದ್ಯಾರ್ಥಿಗಳ ಮನಸ್ಸು ಗೆದ್ದು ಅವರ ನೆಚ್ಚಿನ ಅಧ್ಯಾಪಕರಾದರು.

ಮೇಲಿನ ಇಬ್ಬರೂ ಯುವ ಅಧ್ಯಾಪಕರು ಬೇರೆ ಬೇರೆ ಕಡೆಗಳಲ್ಲಿ ಬಾಡಿಗೆ ಮನೆ ಹಿಡಿದು ವೃತ್ತಿ ಜೀವನ ಆರಂಭಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಒಂದು ಅಧ್ಯಾಪಕರ ವಸತಿ ಗ್ರಹದಲ್ಲಿ ನಾನೊಬ್ಬನೇ ಇರುವುದನ್ನು ತಿಳಿದಾಗ ತಾವಿಬ್ಬರೂ ನನ್ನೊಡನೆ ವಸತಿ ಗ್ರಹದಲ್ಲಿ ನೆಲೆಸಲು ಬಯಸಿದರು. ನಾನು ಒಪ್ಪಿಕೊಂಡೆ.

ಅಲ್ಲಿಂದ ಆರಂಭವಾಯಿತು. ನಮ್ಮ ಜೊತೆ ಜೊತೆಯಾದ ವಾಸ್ತವ್ಯ…. ಅನ್ಯೋನ್ಯ ಬೆಸುಗೆಯಾದ ಸ್ನೇಹ ಸಂಬಂಧ. ನನ್ನ ಜೀವನದ ದಾರಿಯಲ್ಲಿ ಸುದೀರ್ಘವಾದ ಸ್ನೇಹದ ಸವಿಯುಣಿಸಿದ ಅಗ್ರಗಣ್ಯರಿವರು. ಒಡ ಹುಟ್ಟಿದವರಿಗಿಂತ ಮಿಗಿಲಾಗಿ ಸುಖ-ದುಃಖ, ಸಂಭ್ರಮ-ಸಡಗರ, ನೋವು-ನಿರಾಶೆ ಎಲ್ಲ ಹಂತದಲ್ಲಿಯೂ ಪಾಲುದಾರರಾಗಿ ನಿಂತು ಸ್ನೇಹಕ್ಕೆ ಅರ್ಥ ತುಂಬಿದ ಈ ಸನ್ಮಿತ್ರರ ಸಹಜೀವನದ ಒಂದೆರಡು ವರ್ಷವೆಂಬುದು ನನ್ನ ಬದುಕಿನ “ಸಂಪನ್ನ ಸುವರ್ಣ ಕಾಲಾವಧಿ” ಎಂದೇ ನಾನು ಭಾವಿಸಿದ್ದೇನೆ.

ವಸತಿ ಗ್ರಹದಲ್ಲಿ ಮೂವರು ಒಟ್ಟಿಗೆ ಬದುಕು ಆರಂಭಿಸಿದಾಗ ಮೂವರಿಗೂ ಸಿಗುವ ಸಂಬಳದ ಮೊತ್ತ ಅಷ್ಟೇನೂ ಆಕರ್ಷಕವಾಗಿರಲಿಲ್ಲ. ಮೂವರಿಗೂ ಅವರವರ ಕುಟುಂಬದ ಹಿರಿಯರ-ಕಿರಿಯರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇತ್ತು. ಆದರೂ ನಾವು ಜೀವನವನ್ನು ಖುಷಿಯಾಗಿ ಅನುಭವಿಸಿದ ರೀತಿ, ವಿಪತ್ತುಗಳನ್ನು, ಸಂಘರ್ಷಗಳನ್ನು ಒಟ್ಟಾಗಿಯೇ ಎದುರಿಸಿದ ಬಗೆಯನ್ನು ನೆನೆದರೆ ಈಗಲೂ “ಅದೊಂದು ಅವಿಸ್ಮರಣೀಯ ಕಾಲಾವಧಿ” ಎಂದೇ ಹೆಮ್ಮೆಯಾಗುತ್ತದೆ.

ಮೂವರಲ್ಲಿ ಯಾರಿಗೂ ಅಡಿಗೆ ಮಾಡುವುದು ಗೊತ್ತಿಲ್ಲ. ಅವರಿವರನ್ನು ಕೇಳಿ, ಪಾಕ ಶಾಸ್ತ್ರದ ಪುಸ್ತಕ ಓದಿ ಅಷ್ಟಿಷ್ಟು ಅಡಿಗೆ ಕಲೆಯನ್ನು ಅರಿತುಕೊಂಡೆವು. ಮೊದ ಮೊದಲು ಅಡಿಗೆ ಮಾಡುವ ಕಷ್ಟದಿಂದ ತಪ್ಪಿಸಿಕೊಳ್ಳಲು ಮೂವರೂ ಪಾತ್ರೆ ತೊಳೆಯುವ ಕೆಲಸವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಕಾಲ ಕಳೆದಂತೆ ಅಡಿಗೆಯ ಕಲೆ ಸ್ವಲ್ಪ ಕರಗತವಾದ ಮೇಲೆ ಪಾತ್ರೆ ತೊಳೆಯುವ ಕೆಲಸ ಯಾರಿಗೂ ಬೇಡವಾಯಿತು. ಪಾತ್ರೆ ತೊಳೆಯುವ, ಕಸ ಗುಡಿಸುವ ಇತ್ಯಾದಿ ಕೆಲಸಗಳಿಗಾಗಿಯೇ ‘ಚೀಟಿ’ ಹಾಕುವ ಪ್ರಯತ್ನವೂ ನಡೆಯಿತು. ಮತ್ತೆ ಮತ್ತೆ ಅದೇ ಕೆಲಸಗಳು ಒಬ್ಬರ ಪಾಲಿಗೇ ಬಂದಾಗ ಉಳಿದಿಬ್ಬರಿಗೆ ಬೈಯುತ್ತ, ನಮ್ಮ ಹಣೆಬರವನ್ನು ಹಳಿದುಕೊಳ್ಳುತ್ತ ಕೆಲಸ ಮಾಡುತ್ತಿದ್ದೆವು.

ಮತ್ತೆ ಕೆಲವು ಬಾರಿ ‘ಪ್ಲೇಯಿಂಗ್ ಕಾರ್ಡ್ಸ್’ ತಂದು ಚಾಕ್‌ಪಾಟ್ ಆಡಿ ಸೋತವನು ಈ ಎಲ್ಲ ಕೆಲಸ ಮಾಡುವ ಪ್ರಯೋಗವನ್ನು ಮಾಡಿ ನೋಡಿದೆವು.

ಅಂದಿನ ದಿನಗಳಲ್ಲಿ ಮನರಂಜನೆಗೆ ಅವಕಾಶಗಳು ಕಡಿಮೆ. ಅಂಕೋಲೆಯ ಕುಂಬಾರ ಕೇರಿ ಭಾಗದಲ್ಲೊಂದು ಟೂರಿಂಗ್ ಟಾಕೀಸ್ ಇತ್ತು. ಅಂಕೋಲೆಯದ್ದೇ ಆದ ತೀರ ಹಳೆಯ “ಸಮರ್ಥ ಟಾಕೀಸ್” ನಲ್ಲಿಯೂ ಅಷ್ಟಿಷ್ಟು ಒಳ್ಳೆಯ ಚಿತ್ರಗಳು ಬರುತ್ತಿದ್ದವು. ಬಂದ ಎಲ್ಲ ಸಿನೆಮಾಗಳನ್ನು ನೋಡದೆ ಬೇರೆ ದಾರಿಯಿರಲಿಲ್ಲ. ಕೆಲವೇ ಕೆಲವು ದಿನಗಳಷ್ಟೇ ನಡೆದ ಅವರ್ಸಾ ಗ್ರಾಮದ ಟೂರಿಂಗ್ ಟಾಕೀಸ್‌ಗೂ ಹೋಗಿ ಸಿನೆಮಾ ನೋಡಿ ಬರುತ್ತಿದ್ದೆವು.

ನನ್ನ ಪ್ರಮುಖ ಹವ್ಯಾಸಗಳಲ್ಲಿ ಒಂದಾದ ಯಕ್ಷಗಾನದ ಕುರಿತು ಸ್ನೇಹಿತರಿಬ್ಬರೂ ಒಲವು ಆಸಕ್ತಿ ಬೆಳೆಸಿಕೊಂಡರು. ಬೇರೆ ಬೇರೆ ಹಳ್ಳಿಗಳಲ್ಲಿ ನಾನು ಪಾತ್ರ ಮಾಡಲು ಹೊರಟಾಗ ಈ ಇಬ್ಬರೂ ಸ್ನೇಹಿತರು ನನ್ನ ಜೊತೆಗೇ ಹೊರಟು ಆಟ ನೋಡಿ ಆನಂದಿಸುತ್ತಿದ್ದರು. “ಅಮೃತೇಶ್ವರಿ” ಮೊದಲಾದ ತಿರುಗಾಟದ ಯಕ್ಷಗಾನ ಮೇಳಗಳು ಬಂದರೆ ನಾವು ಮುಂದಿನ ಸಾಲಿನ ಪ್ರೇಕ್ಷಕರಾಗಿ ಎಲ್ಲ ಆಟಗಳನ್ನು ನೋಡಲು ಹೋಗುತ್ತಿದ್ದೆವು. ನಾನು ಅಭಿಮಾನದಿಂದ ಕಾಣುವ ಚಿಟ್ಟಾಣಿ, ಜಲವಳ್ಳಿ, ಗಜಾನನ ಭಂಟಾರಿ, ಎಕ್ಟರ್ ಜೋಷಿ, ಎಂ.ಎ.ನಾಯ್ಕ, ಗೋವಿಂದ ನಾಯ್ಕ, ರಾಮನೈರಿ ಮುಂತಾದ ಬಹಳಷ್ಟು ಕಲಾವಿದರನ್ನು ಸ್ನೇಹಿತರಿಬ್ಬರೂ ಪರಿಚಯಿಸಿಕೊಂಡರಲ್ಲದೆ ಎಲ್ಲರ ಪ್ರೀತಿ-ಸ್ನೇಹವನ್ನು ಸಂಪಾದಿಸಿದ್ದರು.

ನಾನು ಅದಾಗಲೇ ಸಣ್ಣ ಕಥೆಗಳನ್ನು ಬರೆಯಲು ಆರಂಭಿಸಿದ್ದೆ. ಬರೆದು ಪತ್ರಿಕೆಗೆ ಕಳುಹಿಸುವ ಮುನ್ನ ದಫೇದಾರ ಮತ್ತು ಎಲ್.ಎನ್ ಇಬ್ಬರೂ ಅದರ ಮೊದಲ ಓದುಗರಾಗಿ ಓದಿ ವಿಮರ್ಶಿಸಿ ತಿದ್ದುಪಡಿಯ ಸಲಹೆಯನ್ನೂ ನೀಡಿ ಪರಿಷ್ಕರಿಸಿದ ಬಳಿಕವೇ ಅದನ್ನು ವಿವಿಧ ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆವು. ಅವು ಪ್ರಕಟವಾದಾಗ ನನಗಿಂತ ಹೆಚ್ಚು ಖುಷಿ ಪಟ್ಟು ಗೆಳೆಯರಿಬ್ಬರೂ ಸಂಭ್ರಮಿಸುತ್ತಿದ್ದರು.

ನನ್ನ ಮೊದಲ ಕಥಾ ಸಂಕಲನ “ಅವಾರಿ”. ನಾವು ಮೂವರೂ ಒಟ್ಟಿಗೆ ಇರುವಾಗಲೇ ಪ್ರಕಟವಾಯಿತು. ಅದನ್ನು ಬಿಡುಗಡೆ ಮಾಡಲು ಖ್ಯಾತ ವಿಮರ್ಶಕರಾದ ಟಿ.ಪಿ.ಅಶೋಕ್ ಶಿವಮೊಗ್ಗೆಯಿಂದ ಆಗಮಿಸಿದ್ದರು. ಡಾ.ಆರ್.ವಿ.ಭಂಡಾರಿ ಯವರು ಸಂಕಲನಕ್ಕೆ ಮುನ್ನುಡಿ ಬರೆದು ಸಮಾರಂಭದಲ್ಲಿಯೂ ಉಪಸ್ಥಿತರಿದ್ದು ಆಶೀರ್ವದಿಸಿದ್ದರು. ಈ ಪುಸ್ತಕ ಬಿಡುಗಡೆಗೆ ಮುನ್ನ ಪುಸ್ತಕದ ವಿನ್ಯಾಸದಿಂದ ಆರಂಭಿಸಿ ಬಿಡುಗಡೆಯ ಸಮಾರಂಭದವರೆಗೂ ಪ್ರಕಾಶಕ ವಿಷ್ಣು ನಾಯ್ಕರ ಜೊತೆಗೂಡಿ ಕೆಲಸ ಮಾಡಿದ ಸ್ನೇಹಿತರ ಸಹಕಾರಕ್ಕೆ ಬೆಲೆ ಕಟ್ಟುವುದು ಅಸಾಧ್ಯ. ತಮ್ಮದೇ ಪುಸ್ತಕವೊಂದು ಪ್ರಕಟವಾದಂತೆ ಅಂದು ರಾತ್ರಿಯಿಡೀ ಸಂಭ್ರಮಿಸಿದ ಗಳಿಗೆಯನ್ನು ಈಗಲೂ ನೆನೆದರೆ ರೋಮಾಂಚನವಾಗುತ್ತದೆ!

ನನ್ನ ನಾಟಕ ಮತ್ತು ಯಕ್ಷಗಾನ ಆಸಕ್ತಿಯನ್ನು ಪ್ರೀತಿಸಿದ ಇಬ್ಬರೂ ಗೆಳೆಯರು ನಾಟಕ ರಂಗದಲ್ಲಿ ಸಕ್ರಿವಾಗಿಯೇ ಭಾಗವಹಿಸಿದ್ದರು. ಕಾಲೇಜಿನ ‘ಅಭಿನಯ ಮಂಟಪ’ ಮತ್ತು ಅಂಕೋಲೆಯ ‘ಕರ್ನಾಟಕ ಸಂಘ’ ಇತ್ಯಾದಿಗಳು ಸಂಘಟಿಸಿದ ನಾಟಕಗಳಲ್ಲಿ ಇಬ್ಬರೂ ಪಾತ್ರವಹಿಸುತ್ತ ಮೆಚ್ಚುಗೆ ಗಳಿಸಿದ್ದರು.

ನಮ್ಮ ಅನ್ಯೋನ್ಯತೆಯ ನಡುವೆಯೇ ಹಲವಾರು ಸಂದರ್ಭದಲ್ಲಿ ಚರ್ಚೆಯೂ ವಿಕೋಪಕ್ಕೆ ಹೋಗಿ ಸಂಘರ್ಷಗಳಾದುದೂ ಇದೆ. ಸಂಘರ್ಷಗಳು ಮಾತನ್ನು ಮೀರಿ ಹೊಡೆದಾಟದಲ್ಲಿಯೇ ಕೊನೆಯಾದ ಹಲವು ಸಂದರ್ಭಗಳಿವೆ. ಬಹುತೇಕ ನಾನು ಇಬ್ಬರಿಗೂ ಹಿರಿಯನಾಗಿ ಕೈ ಕೈ ಮಿಲಾಯಿಸುವ ಸಂದರ್ಭದಲ್ಲಿ ಸಂಧಾನಕಾರನಾಗಿಯೇ ಕ್ರಮ ಕೈಗೊಳ್ಳುತ್ತಿದ್ದೆ. ಒಂದೇ ಮನೆಯಲ್ಲಿ ವಾಸಿಸುತ್ತಲೇ ವಾರಗಟ್ಟಲೆ ಪರಸ್ಪರ ಮಾತೇ ಇಲ್ಲದ ಮುನಿಸುಗಳು ಕೂಡ ಇರುತ್ತಿದ್ದವು. ಇವೆಲ್ಲವೂ ಒಂದು ವಿಧದಿಂದ ಮಧುರ ಅನುಭವದ ಕ್ಷಣಗಳೇ ಎನಿಸುತ್ತಿದ್ದವಲ್ಲದೆ ಎಂದೂ ಶಾಶ್ವತ ದ್ವೇಷಕ್ಕೆ ಅವಕಾಶ ನೀಡಲಿಲ್ಲ.

೧೯೮೪ರಲ್ಲಿ ನಾನು ವಿವಾಹಿತನಾದೆ. ಗೆಳೆಯರು ಅನಿವಾರ್ಯವಾಗಿ ಬೇರೆ ಮನೆಗಳನ್ನು ನೋಡಿಕೊಂಡರು.

ಕೆಲವೇ ವರ್ಷಗಳಲ್ಲಿ ಎಲ್.ಎನ್. ನಾಯ್ಕ ತಾವು ಓದಿದ ಕಾರವಾರ ಶಿವಾಜಿ ಮಹಾವಿದ್ಯಾಲಯಕ್ಕೆ ವರ್ಗಾವಣೆ ಪಡೆದು ಹೊರಟು ಹೋದರು. ಮತ್ತೆ ಸರಕಾರದ ನೇಮಕಾತಿಯಲ್ಲಿ ಆಯ್ಕೆಗೊಂಡು ಅಮದಳ್ಳಿಯ ಪದವಿಪೂರ್ವ ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದರು.

ಎಲ್ಲಿದ್ದರೂ ನಮ್ಮೊಡನೆ ಬೆಸೆದ ಸ್ನೇಹದ ಬೆಸುಗೆ ಎಂದೂ ಸಡಿಲುಗೊಳ್ಳಲಿಲ್ಲ. ಎಲ್.ಎನ್. ನಮ್ಮ ಕಾಲೇಜಿನಲ್ಲಿ ಪಾಠ ಮಾಡುವಾಗಲೇ ಪ್ರೀತಿಸಿದ ವಿದ್ಯಾರ್ಥಿನಿಯನ್ನೇ ಕೈ ಹಿಡಿದು ದಾಂಪತ್ಯ ಜೀವನ ಆರಂಭಿಸಿದರು. ಇಬ್ಬರು ಗಂಡು ಮಕ್ಕಳಿಗೆ ತಂದೆಯೂ ಆದರು. ಮಕ್ಕಳು ಎಂಜಿನಿಯರಿಂಗ್ ಇತ್ಯಾದಿ ಓದು ಮುಗಿಸುವ ಹೊತ್ತಿಗೆ ನಮ್ಮ ಪ್ರೀತಿಯ ಗೆಳೆಯ ಎಲ್.ಎನ್.ನಾಯ್ಕ ಗೋವಾದಿಂದ ಕಾರವಾರಕ್ಕೆ ಬರುತ್ತ ಬೈಕ್ ಅಕಸ್ಮಿಕದಲ್ಲಿ ದುರಂತ ಸಾವು ಕಂಡದ್ದು ನಮ್ಮ ಪ್ರೀತಿಯ ಸ್ನೇಹ ಸಂಬಂಧಕ್ಕೆ ಲಕ್ವ ಹೊಡೆದಂತೆಯೇ ಆಗಿ ಹೋಯಿತು!

ಗೆಳೆಯ ಸುರೇಂದ್ರ ದಫೇದಾರ ಕೆಲವು ವರ್ಷಗಳ ಬಳಿಕ ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ ವರ್ಗಾವಣೆಗೊಂಡರು. ಅವರೂ ಗ್ರಹಸ್ಥ ಜೀವನದ ಸವಿಯಲ್ಲಿ ಇಬ್ಬರು ಮಕ್ಕಳ ತಂದೆಯೂ ಆದರು. ಒಬ್ಬ ಮಗಳು, ಇನ್ನೊಬ್ಬ ಮಗ, ಮಗಳ ಮದುವೆ ಮುಗಿಸಿದ್ದಾರೆ. ಮಗ ಎಂಜಿನಿಯರ್ ಆಗಿದ್ದಾನೆ. ಈಗ ಅವರೂ ನನ್ನಂತೆ ಸೇವಾ ನಿವೃತ್ತಿ ಹೊಂದಿ ತಮ್ಮ ಸ್ವಂತ ಊರು ಸಿದ್ಧಾಪುರದಲ್ಲಿ ನಿವೃತ್ತಿಯ ಸುಖ ಜೀವನ ನಡೆಸುತ್ತಿದ್ದಾರೆ.

***********************

ರಾಮಕೃಷ್ಣ ಗುಂದಿ

ಕನ್ನಡದಖ್ಯಾತಕತೆಗಾರ. ಅವಾರಿ, ಕಡಲಬೆಳಕಿನದಾರಿಗುಂಟ, ಅತಿಕ್ರಾಂತ, ಸೀತೆದಂಡೆಹೂವೇ …ಈನಾಲ್ಕುಅವರಕಥಾಸಂಕಲನಗಳು. ಅವರಸಮಗ್ರಕಥಾಸಂಕಲನಸಹಈಚೆಗೆಪ್ರಕಟವಾಗಿದೆ.‌ಯಕ್ಷಗಾನಕಲಾವಿದ.‌ ಕನ್ನಡಉಪನ್ಯಾಸಕರಾಗಿಅಂಕೋಲಾದಜೆ.ಸಿ.ಕಾಲೇಜಿನಲ್ಲಿಸೇವೆಪ್ರಾರಂಭಿಸಿ, ಕಾರವಾರದದಿವೇಕರಕಾಲೇಜಿನಲ್ಲಿಪ್ರಾಂಶುಪಾಲರಾಗಿಕರ್ತವ್ಯನಿರ್ವಹಿಸಿನಿವೃತ್ತರಾಗಿದ್ದಾರೆ. ಯಕ್ಷಗಾನಅಕಾಡೆಮಿಸದಸ್ಯರಾಗಿಸೇವೆಸಲ್ಲಿಸಿದ್ದಾರೆ. ಮಗಅಮೆರಿಕಾದಲ್ಲಿಸಾಫ್ಟ್‌ವೇರ್ಎಂಜಿನಿಯರ್. ಅಗೇರಸಮುದಾಯದಿಂದಬಂದಗುಂದಿಅವರುಅದೇಜನಾಂಗದಬಗ್ಗೆಪಿಎಚ್ಡಿಪ್ರಬಂಧಮಂಡಿಸಿ, ಡಾಕ್ಟರೇಟ್ಸಹಪಡೆದಿದ್ದಾರೆ‌ . ದಲಿತಜನಾಂಗದಕಷ್ಟನಷ್ಟನೋವು, ಅವಮಾನ, ನಂತರಶಿಕ್ಷಣದಿಂದಸಿಕ್ಕಬೆಳಕುಬದುಕುಅವರಆತ್ಮಕಥನದಲ್ಲಿದೆ. ಮರಾಠಿದಲಿತಸಾಹಿತಿಗಳ,‌ಲೇಖಕರಒಳನೋಟ , ಕನ್ನಡನೆಲದದಲಿತಧ್ವನಿಯಲ್ಲೂಸಹಇದೆ.‌ ರಾಮಕೃಷ್ಣಗುಂದಿಅವರಬದುಕನ್ನುಅವರಆತ್ಮಕಥನದಮೂಲಕವೇಕಾಣಬೇಕು. ಅಂತಹನೋವಿನಹಾಗೂಬದುಕಿನ‌ ಚಲನೆಯಆತ್ಮಕಥನವನ್ನುಸಂಗಾತಿ ..ಓದುಗರಎದುರು, ‌ಕನ್ನಡಿಗರಎದುರುಇಡುತ್ತಿ

2 thoughts on “

  1. ನೆನಪಿನ ಭಂಡಾರದಿಂದ ಒಳ್ಳೆಯ ವಿಚಾರ ಹೊರಬರುತ್ತಿದೆ ಸರ್. ಮುಂದೆ ಬರುವ ಸಂಚಿಕೆಯ ನಿರೀಕ್ಷೆಯಲ್ಲಿ.

Leave a Reply

Back To Top