ಕಾವ್ಯಯಾನ
ಹೀಗೆ ರಸ್ತೆಗೆ ಚೆಲ್ಲುವ ಮುನ್ನ
ಬಿ.ಶ್ರೀನಿವಾಸ
ಹೀಗೆ ರಸ್ತೆಗೆ ಚೆಲ್ಲುವ ಮುನ್ನ
ಮಕ್ಕಳಿಗೆ ಅವರು ಭರವಸೆಯನ್ನಿತ್ತಿದ್ದರು
ಮುದುಕರ ಕೈಯ್ಯ ಸ್ಪರ್ಶ
ಮಕ್ಕಳ ಹುಡುಗಾಟಿಕೆಯ ಕೀಟಲೆಗಳೂ
ರಸ್ತೆಗೆ ಬಿದ್ದ ಬೆಳೆಗಳಿಗೆ ಅಂಟಿಕೊಂಡಿದ್ದವು
ಹೀಗೆ ರಸ್ತೆಗೆ ಬೀಳುವ ಮುನ್ನ ಡಾಣಿ-ಮಂಡಕ್ಕಿ ತರುವುದಾಗಿ ಅವರು ಹೇಳಿದ್ದರು
ಅವರು
ಸುರಿಸಿದಷ್ಟು
ಸುರಿಸಿದ್ದರೂ ಸಾಕಿತ್ತು
ಬೆವರು
ಮೋಡಗಳು ಆಗುತ್ತಿದ್ದವು
ಅವರ ದೇವರು!
ಎಲ್ಲ ಆಗುವ ಮುನ್ನ
ಕಣ್ಣ ಪಸೆಯಲಿ ಆಸೆ
ಹೊತ್ತು ಕುಳಿತ
ಅವನ ಮೇಲೆಯೆ
ಹರಿದು ಹೋಯಿತು ಬದುಕು
ರಕ್ತವಿಲ್ಲ
ಕಣ್ಣೀರೂ ಇಲ್ಲ
ಕೊಲೆ!
ಯಾತರ ಕೊಲೆ?
ಇಂದು
ಲಿಖಿಂಪುರ-ಖೇರಿ
ನಾಳೆ
ನಿಮ್ಮದೇ ಕೇರಿ
ಹರಿದು ಹೋಗಬಹುದು ಬದುಕು
****************