ತಾಯಿಯೇ ಮಕ್ಕಳನ್ನು ಅಳಿಸಬಹುದೇ?

ಲೇಖನ

ತಾಯಿಯೇ ಮಕ್ಕಳನ್ನು ಅಳಿಸಬಹುದೇ?

ಶಾಂತಿ ವಾಸು

139,084 Mother Illustrations & Clip Art - iStock

ಮೂರೂವರೆ ವರ್ಷದ ಹಿಂದೆ ತೀರಿಹೋದ ನಮ್ಮಮ್ಮನನ್ನು ನೆನಪು ಮಾಡಿಕೊಳ್ಳದೆ ನನಗೆ ದಿನ ಮುಗಿಯುವುದೇ ಇಲ್ಲ ಕಣ್ರೀ. “ಇದ್ದಿದ್ರೆ, ಇಲ್ಲಿ ಕೂತ್ಕೋಳ್ತಿದ್ರು, ಈ ತಿಂಡಿ ಅವರಿಗಿಷ್ಟ” ಅಂದ್ಕೊಳ್ಳೋದು. ಮೆತ್ತಗಿನ ಸೀರೆ ಅದರಲ್ಲೂ ಶುದ್ಧ ಹತ್ತಿ ಸೀರೆ ಕಂಡ್ರಂತೂ ತಟ್ಟನೆ ಅಮ್ಮನ ನೆನಪು ಒದ್ದುಕೊಂಡು ಬರುತ್ತದೆ. ಒಮ್ಮೊಮ್ಮೆ ಏನೋ ಸುಮ್ಮನೆ ಎನ್ನುವಂತೆ ಹಾದು ಹೋಗುವ ನೆನಪು, ಒಂದೊಂದು ಸಲ ದಿನವನ್ನು ನೀರಸವಾಗಿಸಿಬಿಡುತ್ತದೆ. ಅವಳಿನ್ನು ಬರುವುದೇ ಇಲ್ಲ, ಮತ್ತೆಂದು ಅವಳು ಕಾಣುವುದೇ ಇಲ್ಲ, ನಾನು “ಅಮ್ಮಾ” ಎಂದರೆ ಅವಳಿಗೆ ಕೇಳಬಹುದೇನೋ? ಆದರೆ ಅವಳ ದನಿ ನನಗೆ ಕೇಳುವುದು ಮಾತ್ರ ಊಹೂಂ ಎಂದಿಗೂ ಸಾಧ್ಯವಿಲ್ಲ.

     ನನ್ನ ಮಕ್ಕಳು, ನನ್ನ ಅಕ್ಕ ತಂಗಿಯರ ಮಕ್ಕಳು ನಮ್ಮಮ್ಮನ ಹಲವು ವಿಡೀಯೋಗಳನ್ನೇನೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆದರೆ ಪ್ರೀತಿ ಅಕ್ಕರೆ, ಅಸ್ಥೆ ತುಂಬಿ ನನ್ನನ್ನ ಹೆಸರಿಡಿದು ಕರೆಯೋ ದನಿ ಕೇಳಲು ಸಾಧ್ಯವಿಲ್ಲವಲ್ಲ? ಅಂದರೆ ಮುಂದೆಂದಾದರೂ ಅವರಿಲ್ಲದಾಗ ಬೇಕಾಗಬಹುದೆನ್ನುವ ಅರಿವು, ಅವರಿರುವಾಗಲೇ ನನಗಾಗಲಿಲ್ಲ ಕಣ್ರೀ. ರೆಕಾರ್ಡೂ ಮಾಡಲಿಲ್ಲ. ಎಷ್ಟೋ ಸಲ ನನಗೆ ಅನ್ನಿಸುವುದುಂಟು “ಎಲ್ಲರೂ ಚೆನ್ನಾಗಿಯೇ ನೋಡಿಕೊಂಡೆವಲ್ಲ? ನಮಗೆ ಮೊಮ್ಮಕ್ಕಳಾದ ಮೇಲೂ ಕೂಡ ಅವಳು ಏನು ಕೇಳಿದರೂ, ಎಷ್ಟು ಹೊತ್ತಿಗೆ ಕೇಳಿದರೂ ಇಲ್ಲವೆನ್ನದೆ ಪಾಲಿಸುತ್ತಾ, ಎಲ್ಲರೂ ಅವಳನ್ನೇ ಸುತ್ತಿ ಸುತ್ತಿ ಬರುತ್ತಿದ್ದೆವಲ್ಲ? ಆದರೂ ಹೇಳದೆ ಕೇಳದೇ ಹೊರಟುಬಿಟ್ಟಿದ್ದು ಯಾಕೆ? ಎಲ್ಲಿ ಹೋದಳು? ನಮ್ಮನ್ನು ಬಿಟ್ಟು ಅವಳಿಗೆ ಬೇರೆ ಪ್ರಪಂಚ ಎಲ್ಲಿದೆ?” ಹೀಗೆ ಏನೇನೋ ಆಲೋಚನೆಗಳು. ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಮನರಂಜನೆಯ ವ್ಯಾಪ್ತಿ ಇಷ್ಟು ವಿಸ್ತಾರವಿದ್ದೂ ಕೂಡ ಇಷ್ಟು ಕಾಡುವುದು ತಾಯಿಯ ವಿಶೇಷವೇ ಇರಬೇಕು.

   ಸಂಸಾರವೆಂದರೆ ಸಾವಿರ ವಿಚಾರಗಳಿರುತ್ತದೆ. ಸಹಜ, ಹೌದು, ನಿಜ ತಾನೇ? ಆದರೆ ಎಷ್ಟೋ ವಿಷಯಗಳಿಗೆ “ಅಮ್ಮ ಇದ್ದಿದ್ದರೆ ಇದನ್ನು ಹೇಗೆ ನಿಭಾಯಿಸುತ್ತಿದ್ದಳು?” ಎನ್ನುವ ಆಲೋಚನೆ ಹೊತ್ತು, ಅವಳ ಸ್ಥಾನದಲ್ಲಿ ನನ್ನನ್ನು ಕಲ್ಪಿಸಿಕೊಂಡು ಸಮಸ್ಯೆ ಪರಿಹರಿಸಲು ಯತ್ನಿಸುವುದುಂಟು. ಆದರೇನು ಪ್ರಯೋಜನ? ಅವಳು ಬಾಳಿದ ಕಾಲಘಟ್ಟದ ಪರಿಸ್ಥಿತಿಗೂ, ಅವಳ ಜೀವನ ಕ್ರಮ, ಅನುಭವ, ಪರಿಸರ, ಬಂಧು ಬಾಂಧವರು, ಪ್ರಕೃತಿ ಹೀಗೇ ಹಲವಾರನ್ನು ಹೋಲಿಸಿಕೊಳ್ಳಲಾಗದಷ್ಟು, ಇಂದಿನ ನಮ್ಮ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದ್ದೇ ಇದೆ. ಅವಳೇ ಬೇರೆ ನಾನೇ ಬೇರೆ ಎನ್ನಿಸುವುದು ಆಗಲೇ.

      ಅಮ್ಮನ ಇಷ್ಟು ನೆನಪಿನ ನಡುವೆ ನನಗೆ ಕೆಲವೊಮ್ಮೆ “ನಾನು ಸತ್ತ ನಂತರ ನನ್ನ ಮಕ್ಕಳು ನನ್ನನ್ನು ಹೇಗೆ ನೆನೆಪು ಮಾಡಿಕೊಳ್ಳಬಹುದು? ನೆನಪಾಗುವುದಾದರೆ, ಒಳ್ಳೆ ಸೀರೆಯನ್ನು ಉಟ್ಟಂತೆ ನೆನಪಿಸಿಕೊಳ್ಳಲಿ, ನನ್ನ ಅಡುಗೆಯ ರುಚಿಯಂತೂ ನಾಲಿಗೆಯಲ್ಲಿಯೇ ಅಂಟಿಕೊಂಡಿರಬೇಕು. ನಾನೇ ವಿನ್ಯಾಸ ಮಾಡುವ ನನ್ನ ದುಪಟ್ಟಾಗಳನ್ನು ಮಗಳು, ಸೊಸೆ ನನಗೆ ಬೇಕು ನನಗೆ ಬೇಕು ಎಂದು ಒದ್ದಾಡಬೇಕು. ಒಟ್ಟಿನಲ್ಲಿ ಮಕ್ಕಳ ಮನಸ್ಸಿನಲ್ಲಿ ನಾನು ಸದಾ ಬದುಕಿರಬೇಕು” ಅನ್ನಿಸುವುದುಂಟು.

     ಇವತ್ತು ನಿಜ ಹೇಳ್ತೀನಿ ನೋಡಿ. ಭೂಮಿಯ ಮೇಲೇ ಇಲ್ಲದ, ಎಷ್ಟು ಆರ್ದ್ರತೆಯ ಕರೆಗೂ ಓಗೊಡದ, ಕರುಣೆಯಿಲ್ಲದ, ನನ್ನ ಅಮ್ಮನನ್ನು ನೆನೆದು ವಿಧ ವಿಧ ಭಾವ ಅನುಭವಿಸಿ ನಾನು ಅಳ್ತಿದ್ದೀನಲ್ಲಾ ಹಾಗೆ, ನನ್ನ ಯಾವ ನೆನಪುಗಳೂ ನನ್ನ ಮಕ್ಕಳನ್ನು ಮುತ್ತಿ, ಅವರೂ ಅಳುವಂತೆ ಮಾಡಬಾರದು ಅನ್ನೋದು ನನ್ನ ಅನಿಸಿಕೆ. ನಮ್ಮಮ್ಮನ ಹಾಗೆ ನಾನಾಗಬಾರದು ಅಂತಲೂ ಅನಿಸುತ್ತದೆ. ಆದರೇ, ನನ್ನ ನೆನಪಿಲ್ಲದೆ ಮಕ್ಕಳಿಗೆ ಇರೋಕ್ಕಾಗುತ್ತಾ? ಏನೋ ಗೊತ್ತಿಲ್ಲ ಕಣ್ರೀ. ಈಗ ಯಾಕೆ ಈ ಚಿಂತೆ ಅಲ್ವಾ? ಆದರೆ ಅವರನ್ನು ಈಗಲೇ ತಯಾರು ಮಾಡೋದ್ರಲ್ಲಿ ತಪ್ಪೇನಿದೆ? ಇವತ್ತು ತಿದ್ದಿಕೊಳ್ಳದಿದ್ದರೆ ಈಗ ನೋಡಿ ನಾನು ಅಳ್ತಿದ್ದೀನಲ್ಲ, ಹಾಗೆ ಮುಂದೆ ಅವರೂ ಹಾಗೇ ಅಳ್ತಾರೆ ಅಷ್ಟೇ. ತಾಯಿಯೇ ಮಕ್ಕಳನ್ನು ಅಳಿಸುವುದೇ?


Leave a Reply

Back To Top