ಗಜಲ್
ಅರುಣಾ ನರೇಂದ್ರ
ಬೇಡ ಬೇಡವೆಂದರೂ ನಾನೇ ಬೇಕೆಂದು ನೋವು ಅಪ್ಪಿಕೊಳ್ಳುತ್ತದೆ
ಬೇಕು ಬೇಕೆಂದರೂ ನಾನು ಬೇಡವೆಂದು ನಲಿವು ಸರಿಸುತ್ತದೆ
ಕೋಡಿಯಾಗಿ ಹರಿದ ಕಣ್ಣೀರಿಗೆ ಬೆಲೆ ಕಟ್ಟಲಾಗದು ಕೇಳು
ಭಂಗ ಪಡಲೆಂದೇ ಬಂದಿರುವೆ ಕತ್ತು ಹಿಡಿದು ಸುಖವು ನೂಕುತ್ತದೆ
ಕತ್ತಲಾದ ಮೇಲೆ ಬೆಳಕಾಗುತ್ತದೆ ನಿಸರ್ಗದ ನಿಯಮ
ಕುತ್ತು ಹೆಗಲೇರಿ ಕೈ ಕೊಟ್ಟು ಸೊಗವು ತಳ್ಳುತ್ತದೆ
ಕಷ್ಟ ಕೋಟಲೆಗಳ ದಾಟಿ ಬಂದಿದ್ದೇನೆಂದು ತಿಳಿದಿರುವೆ
ರಪ್ ಎಂದು ಸಗ್ಗದ ತೆರೆದಿಟ್ಟ ಕದವು ಮುಚ್ಚುತ್ತದೆ
ಮಸಣದಿ ಅರಳಿದ ಹೂವಿಗೂ ಸೂತಕ ತಂದಿಡುತ್ತಾರೆ
ಜಗ್ಗದ ಕುಗ್ಗದ ಅರುಣಾಳ ಕಂಡು ಸಂತಸವು ಬೆಚ್ಚುತ್ತದೆ