ಕಾವ್ಯಯಾನ
ಗಾಂಧಿ
ಶ್ರೀನಿವಾಸ ಜಾಲವಾದಿ
ಸ್ವಪ್ರಶಂಸೆಯ ಕುನ್ನಿಗಳೇ ಇಲ್ಲಿ
ತುಂಬಿರುವಾಗ ನಿನ್ನ ಕಾರ್ಯಗಳ
ಹೇಳುವವರಾರು ತಂದೆ?
ಸತ್ಯ ಅಹಿಂಸೆ ನ್ಯಾಯಗಳು ಇಲ್ಲಿ
ಮಖಾಡೆ ಮಲಗಿವೆ ಗಾಢ
ನಿದ್ರೆಯಲಿ ಗಾಢಾಂಧಕಾರದಲಿ!
ಗೋಡ್ಸೆಗಳ ವೈಭವೀಕರಣವೇ ಎಲ್ಲ
ಮಹಾತ್ಮಾ ನೀನು ನಗುವೆಯಲ್ಲ?
ಮತ್ತೇನು ಬೇಕು ವೈರುಧ್ಯ?
ಗಾಂಧಿ ನೀನು ಎಂದಿಗೂ ನಾನೇ
ನಾನೇ ಎನ್ನಲೇ ಇಲ್ಲವಲ್ಲ?
ಈಗ ಬರೀ “ನಾನೇ”ಗಳ ದರ್ಬಾರ್!
ಕುನ್ನಿಗಳೇ ಈಗ ಪ್ರಭುಗಳು ನೋಡು
ಹಾಳೂರಿಗೆ ಉಳಿದವನೇ ಗೌಡ?
ಅಲ್ಲವೆನಯ್ಯ ಗಾಂಧಿ ಮಹಾತ್ಮ?
ಈಗ ಎಲ್ಲ ‘ಮಹಾತ್ಮ’ ರೇ ನೋಡು
ಅದನ ಖರೀದಿಸಿದವರ ಮೊಗ
ನೋಡು ದುರಹಂಕಾರದ ಮೊಟ್ಟೆ!
ತುಂಡು ಪಂಚೆಯ ನೀನು ಬ್ರಿಟೀಷರ
ನಡುಗಿಸಿ ಅಲ್ಲಾಡಿಸಿ ಬಿಟ್ಟೆ ನೋಡು!
ಈಗ ನಿನ್ನ ಮೂರುತಿ ಅಲ್ಲಾಡಿಸಿ
ಖುಷಿ ಪಡುವ ಪೆಡಂಭೂತಗಳೋ?
ನಿನ್ನ ಕನಸಿನ ಭಾರತ ಎಲ್ಲಿದೆ ತಾತಾ?
ಬ್ರಿಟೀಷ್ ಭಾರತದ ಪಳಿಯುಳಿಕೆ
ನೋಡು ಖುಷಿ ಪಡು!
ನಿನ್ನ ಹೆಸರಿನಿಂದ ನಡೆದಿದೆ ಅಧಿಕಾರ
ನಿನ್ನ ಹೆಸರೇ ಅವರಿಗೆ ಬೇಕು ಗಾಂಧಿ
ಇಲ್ಲದಿರೇ ಗದ್ದುಗೆ ಸಿಗದೇ ಅವು
ನೀರಿನಿಂದ ಹೊರ ತೆಗೆದ ಮೀನು!
ಗಾಂಧಿ ಇಂದು ಜಗತ್ತೇ ನಿನ್ನ
ಆರಾಧನೆಗಾಗಿ ಕಾತರಿಸುತಿದೆ!
ಆದರೆ ನಿನ್ನ ನೆಲದಲ್ಲಿ ಮಾತ್ರ
ನೀನು ಪರಿಹಾಸ್ಯದ ಕವನ!
ಗಾಂಧಿ ನಿನ್ನ ಮಂದಿ ನಾವೆಲ್ಲ ಎಂದು
ಯಾಮಾರಿಸುವ ಘೆಂಡಾಮೃಗಗಳ
ಮನವ ನಿನ್ನ ಉಪವಾಸದಿಂದಲೇ
ಪರಿವರ್ತಿಸು ತಂದೆ ಎಂದರೇಕೆ
ನಿನ್ನ ಮೊಗದಲಿ ಮುಗುಳ್ನಗೆ?
ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ
ಸಬ್ ಕೋ ಸನ್ಮತಿ ದೇ ಭಗವಾನ್
ಇದೇ ಗಾಂಧಿ ಜಗದ ಸತ್ಯ ಮಂತ್ರ!
ಶಾಸ್ತ್ರೀಜಿ ಮತ್ತು ಗಾಂಧೀಜಿ ಅವರ ಬಗೆಗಿನ ಕವನಗಳು ಅದ್ಭುತ ವಾಗಿವೆ