ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಅಳಿದ ಮೇಲಿನ ಭಯ!

ಅಳಿದ ಮೇಲಿನ ಭಯ!

ನನಗೆ ಧರೆಯ ಮೇಲಿನ
ಈ ಬದುಕಲ್ಲೆ
ಬಗೆಬಗೆಯ ಭಯವಿದೆ
ನನ್ನ ಸುತ್ತಮುತ್ತಲ ಜನಜಂಗುಳಿ
ಮುಸುಕಿನೊಳಗೆ ನುಸುಳಿ
ಥರಹಾವರಿ ಭಯೋತ್ಪಾದಕರಂಥ
ಹಾವಳಿ
ತುಳುಕಿದೆ ಎಡೆಬಿಡದೆ ನನ್ನೊಳಗೆ

ನೆಮ್ಮದಿಯಲಿದ್ದವರ
ಕಾಲಕೆರೆದು ಕೆಣಕುವವರು
ಇಂದು ಬೆಳ್ಳಬೆಳಗ್ಗೆ ತಾನೆ
ಬಿಳಿಯ ನಗೆ ನಕ್ಕವರು
ನಾಳೆ ಅಟಮಟಿಸಿ ಚುಚ್ಚಿ
ಕತ್ತಲೆಯಲಿ ಕರಗುವವರು
ಕೂತಲ್ಲೆ ನಿಂತಲ್ಲೆ ಇದ್ದದ್ದು
ದಿಢೀರನೆ ಇಲ್ಲವಾಗಿಸುವವರು
ನಾಯಿಗೂ ಸುಳ್ಳುಬೊಗಳು ಕಲೆ
ಕಲಿಸುವವರು ಕಚ್ಚಿಸುವವರು
ಶುಭ್ರ ಸೂಟಿನಲ್ಲಿ ದೋಚುವವರು
ಅನ್ಯರ ಬೆವರಿಗೂ ಹೇಸದ
‘ವಿದ್ಯಾವಂತ ಸಮಗ್ರ ಸಂಸಾರ’ಗಳು
ಬೀಭತ್ಸ ಅತ್ಯಾಚಾರಿಗಳು
ಬರ್ಬರ ಕೊಲೆಪಾತಕ ಭೀಷಣರು
ಹಗಲನ್ನೆ ರಾತ್ರಿ ಮಾಡುವ
ಕರಾಳ ಕ್ರೌರ್ಯಾವತಾರಗಳ
ತದೇಕ ಭಯವಿದೆ
ಹಾಗಾಗಿ ರಾತ್ರಿಗಳಲಿ ಇನ್ನೂ ಭಯ
ಅಥವ ರಾತ್ರಿಗಳದೆ ಭಯ!

ನೊಣ ಸೊಳ್ಳೆ ಕ್ರಿಮಿಕೀಟ
ವೈರಸ್ಸು ಬ್ಯಾಕ್ಟೀರಿಯ
ಸಂಕ್ರಾಮಿಕಗಳ ಭಯವೂ ಇಲ್ಲದೆ
ಬದುಕೆದ್ದು ನಿಲ್ಲುವ ನನಗೆ
ನನ್ನ ಸಹ ಜೀವಾತ್ಮರಿಗೆ
ಎಲ್ಲಕಿಂತ ಮಿಗಿಲಾಗಿ
ನಮ್ಮ ಹೆಗಲ ಸಮಕ್ಕೇ ನಡೆವ
ಈ ಇಂಥವರ ಭಯ!
ದಟ್ಟಕಾನನದ ಅಂಧಕಾರದಲೂ
ಇರದು ಇಂಥ ಭಯ

ಈ ನಡವೆ ಈಗೀಗ ಸಾವಿಗಿಂತ
ನಾನು ಸತ್ತ ನಂತರದ ಭೀತಸ್ಥಿತ!

ಇಲ್ಲೇ ಈ ಭುವನದ ಮೇಲೆ
ನನ್ನ ಬಳಗದವರು
ಗೆಳೆಯರು
ಸುತ್ತ ಗಿರಕಿ ಹೊಡೆವ ನನ್ನಂಥವರು
ನಂಬಿದವರು
ನೆಚ್ಟಿನ ನಾಯಿ
ನಿಷ್ಠ ಚೈತನ್ಯಗಳು
ಎಲ್ಲರ ನಡುವೆ ಇದ್ದೂ ಇಂಥ ಭಯ
ಅಂದಮೇಲೆ ಸತ್ತು
ಒಳಗಿಳಿದ ತರುವಾಯ…

ನನ್ನ ಒಬ್ಬಂಟಿ ಆತ್ಮದ ಸುತ್ತ
ಸದಾ ಇಂಥವರ
ಭೂತ ದರ್ಶನದ ಭಯ
ನೆಲದ ಮೇಲಿದ್ದೇ ನನ್ನ
ನಡುಗಿಸಿದ್ದವರು
ಈಗ ಒಳಗಿಳಿದಿರುವವರು
ಈ ಪೈಶಾಚಕ ಪಿಶಾಚಿಗಳು
ಇಂಥವರ ನಡುವೆ
ಸತ್ತ ಮೇಲೆ
ಹೇಗೆ ಎಂಬ ಅಗಾಧ ಭಯ
ಈಗಲೆ!


About The Author

1 thought on “ಅಳಿದ ಮೇಲಿನ ಭಯ!”

Leave a Reply

You cannot copy content of this page

Scroll to Top