ಪ್ರಿಯ ಬಾಪುವಿಗೊಂದು ಪತ್ರ

ಪ್ರಿಯ ಬಾಪುವಿಗೊಂದು ಪತ್ರ

ಪ್ರಿಯ ಬಾಪು,

ದೇಶವೇ ಮೆಚ್ಚಿಕೊಂಡ, ನೆಚ್ಚಿಕೊಂಡ ಅಪ್ರತಿಮ ದೇಶಾಭಿಮಾನಿ ನೀವು. ಭಾರತಕೋಟಿಯ ಹೃದಯಕೋಣೆಯಲ್ಲಿ ನೀವು ಸದಾ ಅಮರರಾಗಿರುತ್ತೀರಿ. ಆದ್ದರಿಂದಲೇ ನನ್ನಂತಹ ಕೋಟಿ ಕೋಟಿ ಮನಸ್ಸುಗಳು ಇಂದಿಗೂ ನಿಮ್ಮನ್ನು ನೆನಪಿಸಿಕೊಳ್ಳುತ್ತಿವೆ.

ಬ್ರಿಟೀಷರ ಗುಂಡಿನೇಟಿನ ಬಿಸಿಯನ್ನು ‘ಅಹಿಂಸೆ’ ಎನ್ನುವ ಪರಮೋಚ್ಛ ಮಂತ್ರದ ಮೂಲಕ ಎದುರಿಸಿದ ನಿಮ್ಮ ಧೀಶಕ್ತಿಯನ್ನು ನೆನೆಸಿಕೊಂಡಾಗ ಇಂದಿಗೂ ಮೈಮನಸ್ಸು ರೋಮಾಂಚಿತವಾಗುತ್ತದೆ. ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಚುರುಕು ಮುಟ್ಟಿಸಿದ ತುಂಡುಡುಗೆಯ ಸಂತ ನೀವು. ಕಬ್ಬಿಣಕ್ಕಿಂತಲೂ ಕಠಿಣಹೃದಯೀ ಕಟುಕರೆದೆಯಲ್ಲಿಯೂ ಕಾರುಣ್ಯಜಲ ಚಿಮ್ಮಿಸಿದ ನೀವು ಶತಮಾನದ ಅದ್ಭುತ.

ಭಾರತದ ಉದ್ದಗಲದಲ್ಲಿಯೂ ಇಂದು ‘ಸ್ವಚ್ಛ ಭಾರತ’ದ ಘೋಷಣೆ ಮೊಳಗುತ್ತಿದೆ. ದೇಶವಾಸಿಗಳು ಭಾರತವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದರ ಹಿಂದಿನ ಪ್ರೇರಕಶಕ್ತಿ ನೀವು. ನಾನು ನಿಮ್ಮ ಆತ್ಮಕಥೆ ಓದಿದ್ದೇನೆ, ‘ನನ್ನ ಸತ್ಯಾನ್ವೇಷಣೆಯ ಕಥೆ’. ನೀವೇ ಬರೆದಿದ್ದೀರಿ, ಮನದ ಕಾಮನೆಯ ನಿಯಂತ್ರಣವನ್ನು ಅರಿಯುವುದಕ್ಕೋಸ್ಕರ ಬೆತ್ತಲಾಗಿ ಹೆಂಗಸರ ಗುಂಪಿನಲ್ಲಿ ಮಲಗಿಕೊಂಡಿದ್ದೀರಿ. ಮನದಲ್ಲಿ ಒಂದಿನಿತೂ ಕಲ್ಮಷವನ್ನಿರಿಸಿಕೊಳ್ಳದ ನಿಮ್ಮ ನಡತೆ ಆಶ್ಚರ್ಯ ಹುಟ್ಟಿಸುತ್ತದೆ. ಮನೆಯೊಳಗಿನಿಂದ ಮಾತ್ರವಲ್ಲ, ಮನದೊಳಗಿಂದಲೂ ಕಸವನ್ನು ಕಿತ್ತೊಗೆವ ಈ ನಿಮ್ಮ ಆದರ್ಶ ನಮ್ಮೆಲ್ಲರಲ್ಲಿಯೂ ಚಿರಸ್ಥಾಯಿಯಾಗಲಿ ಎಂಬ ಹಾರೈಕೆ ನನ್ನದು. ಬಹಿರಂಗ ಶುದ್ಧಿಯ ಜೊತೆಗೆ ಅಂತರಂಗ ಶುದ್ಧಿಯನ್ನೂ ಬೋಧಿಸಿದ್ದೀರಿ.

ನಿಮ್ಮ ಮೂಲಕವೇ ರೂಪುಗೊಂಡ ಪಾಕಿಸ್ತಾನ ಎನ್ನುವ ಪಾಪಿ ದೇಶ ಸುಮಾರು ಎರಡೂವರೆ ವರ್ಷಗಳಷ್ಟು ಹಿಂದೆ ಕುತಂತ್ರವನ್ನು ಮೆರೆಯಿತು. ಫೆಬ್ರವರಿ 14, 2019ರಂದು ಪುಲ್ವಾಮಾ ಪ್ರದೇಶದಲ್ಲಿ ಮೋಸದ ದಾಳಿ ನಡೆಸಿ ನಮ್ಮ ದೇಶದ 40 ಮಂದಿ ವೀರಯೋಧರನ್ನು ಹಣಿಯಿತು. ಹೊಸ ಬದುಕಿನ ಕನಸು ಹೊತ್ತು ಮದುವೆಯಾದವನು ಶವವಾಗಿ ಮನೆಗೆ ಮರಳುವಂತಾಯಿತು. ಕೆಲವೇ ತಿಂಗಳುಗಳ ಹಸುಗೂಸು ಅಪ್ಪನ ಛಿದ್ರ ಛಿದ್ರ ದೇಹವನ್ನು ಕಾಣುವಂತಾಯಿತು. ಅಸಹಾಯಕ ತಂದೆ- ತಾಯಿ ‘ನಮ್ಮ ಮಗನಿಗೆ ಇಂತಹ ಸಾವು ಏಕೆ ಕೊಟ್ಟೆ ದೇವರೇ?’ ಎಂದು ಮೊರೆಯಿಡುವಂತಾಯಿತು. ಇಂತಹ ಸಂದರ್ಭದಲ್ಲಿ ಪ್ರಪಂಚದ ಬೇರಾವುದೇ ರಾಷ್ಟ್ರವಾದರೂ ವಿವೇಚನೆಯನ್ನು ಕಳೆದುಕೊಳ್ಳುತ್ತಿತ್ತು. ಇದ್ದ ಶಸ್ತ್ರಾಸ್ತ್ರ- ಕ್ಷಿಪಣಿಗಳೆಲ್ಲವನ್ನೂ ಬಳಸಿ ತಪ್ಪಿತಸ್ಥರ ಜೊತೆಗೆ ಸಾಮಾನ್ಯ ನಾಗರಿಕರನ್ನೂ ನಾಶಪಡಿಸುತ್ತಿತ್ತು. ಆದರೆ ಭಾರತ ಅಂತಹ ಕಠಿಣ ಸಂದರ್ಭದಲ್ಲಿಯೂ ತನ್ನ ಮೂಲಗುಣವನ್ನು, ಅಂತಸ್ಸತ್ವವನ್ನು ಮರೆಯಲಿಲ್ಲ. ನೀವು ಬೋಧಿಸಿದ ಶಾಂತಿಮಂತ್ರವನ್ನು ನೆನೆಯಿತು. ತಪ್ಪು ಮಾಡಿದ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿ ನೈಜ ತಪ್ಪಿತಸ್ಥರನ್ನು ನಾಶಪಡಿಸಿತು. ಈ ಮೂಲಕ, ನೀವು ತೋರಿಸಿಕೊಟ್ಟ ಮಾರ್ಗದಲ್ಲಿಯೇ ಭಾರತ ಇನ್ನೂ ನಡೆಯುತ್ತಿದೆ ಎನ್ನುವ ಸಂದೇಶವನ್ನು ಜಗತ್ತಿಗೇ ಸಾರಿಹೇಳಿತು. ಹೌದು ಬಾಪು, ಇಂದಿಗೂ ಭಾರತದ ನಡೆ- ನುಡಿಗಳಲ್ಲಿ ನೀವು ಅಮರರಾಗಿದ್ದೀರಿ.

ಭಾರತದ ಪ್ರತಿಯೊಬ್ಬನ ಬದುಕನ್ನೂ ನಿಮ್ಮ ಸಿದ್ಧಾಂತ, ನೀವು ಬೋಧಿಸಿದ ಮೌಲ್ಯಗಳು ಪ್ರಭಾವಿಸುತ್ತಿವೆ. ನನ್ನದೇ ಉದಾಹರಣೆ ನೀಡುತ್ತೇನೆ. ಸರಳ ಉಡುಗೆಯನ್ನು ಧರಿಸಬೇಕಾಗಿ ಬಂದಾಗ ಮನಸ್ಸು ಹಿಂದೇಟು ಹಾಕುತ್ತದೆ, ಮುಜುಗರ ಅನುಭವಿಸುತ್ತದೆ. ಆದರೆ ನಿಮ್ಮ ಸರಳತೆ ನೆನಪಾದಾಗ ಮನಸ್ಸು ಹೇಳುತ್ತದೆ- ‘ಪ್ರಪಂಚವನ್ನೇ ಗೆದ್ದ ಅಂತಹ ಶ್ರೇಷ್ಠ ವ್ಯಕ್ತಿಯೇ ಎರಡು ತುಂಡು ಬಟ್ಟೆ ಹೊದ್ದು ಬದುಕು ನಡೆಸಿರಬೇಕಾದರೆ ನಾನು ಏನು ಮಹಾ?’ ಯಾವುದೋ ಕ್ಷುಲ್ಲಕ ಕಾರಣಕ್ಕೆ ಅವಮಾನಕ್ಕೆ ಈಡಾದಾಗ ಮನಸ್ಸು ರೋಷಗೊಳ್ಳುತ್ತದೆ. ದ್ವೇಷ ಸಾಧಿಸುವುದಕ್ಕೆ ಹವಣಿಸುತ್ತದೆ. ಮರುಕ್ಷಣವೇ ಮನಸ್ಸು ಹೇಳುತ್ತದೆ- ‘ಅಂತಹ ಗಾಂಧೀಜಿಯಂತಹ ಗಾಂಧೀಜಿಯನ್ನೇ ರೈಲಿನಿಂದ ಹೊರಕ್ಕೆ ತಳ್ಳಿ ಅವಮಾನಿಸಿದ್ದಾರಂತೆ. ಇನ್ನು ನೀನು ಯಾವ ಲೆಕ್ಕ?’

‘ವೈರಿಗಳನ್ನು ಗೆಲ್ಲಬೇಕಾದರೆ ಗಟ್ಟಿ ದೇಹ ಇರಬೇಕಾಗಿಲ್ಲ; ಗಟ್ಟಿ ಗುಂಡಿಗೆ ಇದ್ದರೆ ಸಾಕು’ ಎನ್ನುವುದಕ್ಕೆ ಅತ್ಯುತ್ತಮ ರೂಪಕ ನೀವು. ಬ್ರಿಟೀಷರಲ್ಲಿ ಬಲಿಷ್ಠವಾದ ಸೇನೆಯಿತ್ತು, ಶಸ್ತ್ರಾಸ್ತ್ರಗಳಿದ್ದವು, ಕ್ಷಿಪ್ರವಾಗಿ ಸಂಪರ್ಕ ಸಾಧಿಸುವ ಸಾಧನಗಳಿದ್ದವು. ಆದರೂ ನಿಮ್ಮೆದುರು ಅವರು ಗೆಲ್ಲಲಿಲ್ಲ. ಕಾರಣ, ನಿಮ್ಮ ಬತ್ತಳಿಕೆಯಲ್ಲಿದ್ದದ್ದು ಸತ್ಯ, ಅಹಿಂಸೆ ಹಾಗೂ ಕೋಟ್ಯಂತರ ಭಾರತೀಯರ ನಿಷ್ಕಲ್ಮಶ ಹಾರೈಕೆ ಎನ್ನುವ ಅಸ್ತ್ರಗಳು. ದೇಶವನ್ನು ಮೆರೆಸಿದ ನಿಮ್ಮನ್ನು ಭಾರತ ಯಾವತ್ತೂ ಮರೆಯಲಿಲ್ಲ, ಮರೆಯುವುದೂ ಇಲ್ಲ. ಏಕೆಂದರೆ, ನೀವು ವೈರಿಗಳನ್ನು ಸೋಲಿಸಿದವರಲ್ಲ; ವೈರಿಗಳನ್ನು ಗೆದ್ದವರು.

ರಾಮರಾಜ್ಯದ ಕನಸು ನಿಮ್ಮದಾಗಿತ್ತು. “ನಡುರಾತ್ರಿಯಲ್ಲಿ ಮೈತುಂಬಾ ಚಿನ್ನಾಭರಣಗಳನ್ನು ಧರಿಸಿಕೊಂಡು, ಒಂದಿಷ್ಟೂ ಭಯವಿಲ್ಲದೆ ಮಹಿಳೆಯೊಬ್ಬಳು ನಿರ್ಜನ ರಸ್ತೆಯಲ್ಲಿ ಒಬ್ಬಂಟಿಯಾಗಿ ಚಲಿಸುವಂತಾದರೆ ಭಾರತ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಪಡೆದಂತಾಗುತ್ತದೆ”- ಇದು ನಿಮ್ಮದೇ ಮಾತು. ಆದರೆ ನಿಮ್ಮ ಈ ಮಾತುಗಳು ನೈಜ ಅರ್ಥದಲ್ಲಿ ಇಂದಿಗೂ ಸಾಕಾರಗೊಂಡಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಆದರೆ ಮಹಿಳೆಯರ ಸ್ಥಿತಿಗತಿಗಳಲ್ಲಿ ಗಮನಾರ್ಹ ಬೆಳವಣಿಗೆ ಸಂಭವಿಸಿದೆ ಎನ್ನುವುದು ಸತ್ಯ. ಈ ಕಾರಣದಿಂದಲೇ ಮಹಿಳಾ ರಕ್ಷಣಾ ಸಚಿವೆಯನ್ನು ದೇಶ ಕಾಣುವಂತಾಗಿದೆ. ಜಗದಗಲಕ್ಕೂ ದೇಶದ ಕೀರ್ತಿಪತಾಕೆಯನ್ನು ಹಾರಿಸಿದ ವಿದೇಶಾಂಗ ಸಚಿವರು ಭಾರತದ ಒಬ್ಬ ಹೆಣ್ಣುಮಗಳು ಎನ್ನುವುದನ್ನು ಹೇಳಲು ಹೆಮ್ಮೆಯೆನಿಸುತ್ತದೆ. ಗಂಡನನ್ನು ಕಳೆದುಕೊಂಡಿದ್ದರೂ ಒಂದಿಷ್ಟೂ ಎದೆಗುಂದದೆ ಮನೆಯನ್ನು ಸಮರ್ಥವಾಗಿ ನಿಭಾಯಿಸುವ ಅಸಂಖ್ಯಾತ ಹೆಣ್ಣುಮಕ್ಕಳು ಈ ದೇಶದಲ್ಲಿದ್ದಾರೆ. ಒಂದು ಕಾಲಘಟ್ಟದಲ್ಲಿ ‘ಅಡುಗೆ ಮನೆಯೊಳಗೇ ಬದುಕು ಮುಗಿಸುವ ಹೆಣ್ಣುಮಕ್ಕಳಿಗೆ ಶಿಕ್ಷಣವೆಲ್ಲಾ ಏಕೆ?’ ಎಂದು ಸಂಕುಚಿತವಾಗಿ ಯೋಚಿಸುತ್ತಿದ್ದ ಹೆತ್ತವರ ಮನಃಸ್ಥಿತಿ ಇಂದು ಬದಲಾಗಿದೆ. ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಯೋಚಿಸುವಂತಾಗಿದೆ. ಹೆಣ್ಣುಮಕ್ಕಳೂ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ. ನೀವು ಕಂಡ ರಾಮರಾಜ್ಯದ ಕನಸು ಖಂಡಿತವಾಗಿಯೂ ನನಸಾಗಲಿದೆ ಎನ್ನುವ ವಿಶ್ವಾಸ ನನಗಿದೆ.

ಹೋರಾಟ, ಜೈಲು, ಉಪವಾಸ, ಬರಹ, ತ್ಯಾಗ- ಅಬ್ಬಬ್ಬಾ! ಬರೆಯುತ್ತಾ ಹೋದರೆ ಎಂದೂ ಮುಗಿಯದಿರುವ ಅಗಣಿತ ಅದ್ಭುತ ನೀವು. ನಿಮ್ಮ ಬದುಕಿನ ರೀತಿ, ನೀತಿ, ಸಿದ್ಧಾಂತಗಳು ಇಂದಿಗೂ ಚಾಲ್ತಿಯಲ್ಲಿರುವುದನ್ನು ಕಂಡಾಗ ನನ್ನ ಮನಸ್ಸು ಹೇಳುತ್ತದೆ- ‘ಬಾಪು, ನೀವು ಎಂದೆಂದಿಗೂ ಅಮರ.’


    ,        ವಿಶ್ವನಾಥ ಎನ್ ನೇರಳಕಟ್ಟೆ

Leave a Reply

Back To Top