ದಾರಿಯ ಮಾಯೆ

ಕಾವ್ಯಯಾನ

ದಾರಿಯ ಮಾಯೆ

ಮಮತಾ ಶಂಕರ್

ಒಂದು ನಡು ಮಧ್ಯಾಹ್ನ ನಿರಾಳ ಕೂತು ನೆನೆಯುತ್ತೇನೆ ಕಳೆದ ಕ್ಷಣಗಳ
ಹಿಂತಿರುಗಿ ನೋಡುತ್ತೇನೆ ಹಾದಿ ಕಿರುಗಣ್ಣ ಮಾಡಿ

ಸತ್ತಂತೆ ಇರಬಾರದಲ್ಲ ಏರಿಳಿತದ ಸೊಬಗಿನ ಕಡಲು
ಎಂಬಂತೆ ತೆರೆದ ನೆನಪುಗಳು
ಹಾದಿಯಲ್ಲಿ ತುಂಬಿದ ಕಲ್ಲು ಮುಳ್ಳುಗಳು
ಆ ಬದಿ ಈ ಬದಿಯ ಒಣಗಿದ ಗದ್ದೆ ಬಿರುಕುಗಳ ನಿಡುಸುಯ್ವ ಉಸಿರು

ಅಲ್ಲಲ್ಲಿ ಒಮ್ಮೊಮ್ಮೆ ಪುಟ್ಟ ತಂಪು ತೊರೆಗಳು
ನೆರಳು ನೀಡಲಾರದ ಮರಗಳು

ಯಾರೋ ಎಸೆದು ಹೋದ ತೂತಂಗಿಯ ತುಂಡುಗಳ ಕಣ್ಣೀರ ವಾಸನೆ
ಆಡಿ ಬಿಸಾಡಿದ ಕೈಕಾಲು ಮುಖ ಇಲ್ಲದ ಮಕ್ಕಳ ಆಟಿಕೆಗಳ ರೋದನೆ
ಮುರಿದ ಮನೆಯ ಸಾಕ್ಷಿಯಾಗಿ ಹರಡಿ ಬಿದ್ದ ಹೆಂಚು
ಭಾಗ ಮಾಡಿಕೊಂಡ ಸೋದರರ ಬೆಸೆಯಲಾಗದ
ವೇದನೆಯಲ್ಲಿ ಬೆಂದು ಬೇರಾದ ಹೊಲತಾಯಿ…

ಬಿಸಿಲು ದಾರಿಯಲ್ಲಿ ತಂಬೆಲರಿನಂತೆ
ಪುಟ್ಟ ಪಾದಗಳ ಅಡ್ಡಾದಿಡ್ಡಿ ಓಡಾಟದ ಗುರುತನುಳಿದು ಮತ್ತೆಲ್ಲಾ ತೊರೆದ ಸುಖ
ಮನಕೆ ಮುದ ನೀಡದ ಮೋಡಗಳು
ನಿರ್ಜೀವ ಹತ್ತಿ ಉಂಡೆಗಳಂತೆ ತೇಲುತ್ತಾ ನಿರ್ಭಾವುಕ ವಾಗಿ ಸಾಗಿದಂತಿದೆ ದಾರಿ ಗೊತ್ತಿಲ್ಲದೆ
ಎಂದೋ ಹನಿಬಿದ್ದ ನೆಲದಲ್ಲಿ ಒಣಗಿದ ಹಸಿರು ಪಾಚಿ

ಆದರೂ ಇದೆಲ್ಲಾ ದಾಟಿ ಬಂದದ್ದು ಹೇಗೋ?
ಮುಂದೆ ನೋಡಿದರೆ ಕಲ್ಲು ಮುಳ್ಳು ಮುಕ್ತ
ಆಯ್ಕೆಗಳಿಲ್ಲದ ಪಯಣ
ತಿರುವುಗಳಿಲ್ಲದ ನೇರ ನುಣುಪು ಹಾದಿ
ಕಲ್ಲೊತ್ತಿ ಚುಚ್ಚಿ ಅಭ್ಯಾಸವಾದ ರಕ್ತಸಿಂಚಿತ ಪಾದಗಳಿಗೇಕೋ ಹೊಸ ಹಾದಿ ಒಗರು
ಯಾಕೋ ಸಾಗಲಾರೆ ಎಂಬ ಸಣ್ಣ ಸಂಶಯ

ದಾರಿಯ ಮಾಯೆ ಎಷ್ಟೆಂದರೆ
ತಿರುಗಿದರೆ ಸವೆಸಿದ ಹಾದಿಯೂ ಅಪರಿಚಿತವಾಗುತಿದೆ
ನೋಡಿದರೆ ಮುಂದಿನ ಹಾದಿಯೂ ಅಪರಿಚಿತ ಅನಿಸುತಿದೆ


Leave a Reply

Back To Top