ನೀನಾರಿಗಾದೆಯೋ

ಸಣ್ಣ ಕಥೆ

ನೀನಾರಿಗಾದೆಯೋ

ನಾಗರತ್ನ ಎಂ.ಜಿ.

ಕಾವ್ ಕಾವ್ ಕಾವ್ ಒಂದೇ ಸಮನೇ ಅರಚುತ್ತಿದ್ದ ಕಾಗೆಗಳ ಕರ್ಕಶ ಕೂಗಿಗೆ ಬೆಳಗಿನ ಝಾವದ ನನ್ನ ಸಕ್ಕರೆ ನಿದ್ದೆಗೆ ಭಂಗ ಬಂತು. ಹೊದಿಕೆಯನ್ನು ಮತ್ತಷ್ಟು ಬಿಗಿಯಾಗಿ ಹೊದ್ದು ಕಿವಿ ಮುಚ್ಚಿ ಮಲಗಲು ಪ್ರಯತ್ನಿಸಿದೆ. ಕಾವ್.. ಕಾವ್…ಇಲ್ಲ ಮಲಗಲು ಬಿಡಲಿಲ್ಲ. ಛೇ ಏನು ಬಂತು ಈ ದರಿದ್ರ ಕಾಗೆಗಳಿಗೆ ಬೆಳ್ಳಂಬೆಳಿಗ್ಗೆ ರೋಗ..ಭಾನುವಾರದ ನಿದ್ದೆ ಹಾಳಾದ ಸಿಟ್ಟಿಗೆ ಹೊದಿಕೆ ಕಿತ್ತು ಬಿಸುಟು ಬಿರ ಬಿರ ಬಾಗಿಲಿಗೆ ಬಂದು ಚಿಲಕ ತೆಗೆದು ಅಂಗಳದಲ್ಲಿ ಕತ್ತು ಉದ್ದ ಮಾಡಿ ಇಣುಕಿದೆ.
ಗಾಯಗೊಂಡ ಕಾಗೆಯೊಂದು ರೆಕ್ಕೆ ಬಡಿಯಲೂ ಶಕ್ತಿಯಿಲ್ಲದೇ ರಸ್ತೆಯಲ್ಲಿ ಬಿದ್ದಿತ್ತು. ಅದರ ಸುತ್ತ ನಿಂತ ಹತ್ತಾರು ಕಾಗೆಗಳು ಒಂದೇ ಸಮನೇ ಅರಚುತ್ತಿದ್ದವು. ಓ ಸರಿ ಇನ್ನು ಈ ಕಾಗೆ ಮತ್ತೆ ಏಳುವ ಹಾಗಾಗುವವರೆಗೂ ಇವುಗಳೆಲ್ಲ ಹೀಗೇ ಕಿರುಚುತ್ತವೆ. ಅತೀವ ಬೇಸರದಿಂದ ಕಾಲು ಝಾಡಿಸಿದೆ. ಇನ್ನು ಮಲಗಿದ ಹಾಗೇ..ಛೇ..ಒಂದು ಕಾಗೆಗಾಗಿ ಇಷ್ಟು ಅರಚಾಟವೇ? ಕೂದಲು ಕಿತ್ತುಕೊಳ್ಳುತ್ತ ಹಿಂದಿರುಗಿ ಹೋಗಲು ಹೊರಟವನಿಗೆ ಯಾಕೋ ಹಿಂದಿನ ರಾತ್ರಿ ನಡೆದ ಘಟನೆ ಕಣ್ಮುಂದೆ ಬಂದಂತಾಗಿ ಯಾರೋ ಕಪಾಳಕ್ಕೆ ಬೀಸಿ ಹೊಡೆದಂತಾಯಿತು. ಇದ್ದಕ್ಕಿದ್ದಂತೆ ಅವುಗಳ ಅರಚಾಟ ಆರ್ತನಾದದಂತೆ ಕೇಳಿಸಿತು. ಯಾರಾದರೂ ನಮ್ಮ ಮಿತ್ರನನ್ನು ಉಳಿಸಿ ಎಂದು ಬೇಡುತ್ತಿರುವಂತೆ…. ನನ್ನ ಮೇಲೆ ನನಗೇ ಅಸಹ್ಯ ಹುಟ್ಟಿ.. ಪಾಪ ಪ್ರಜ್ಞೆ ಕಾಡಿತು.
ತಡ ರಾತ್ರಿ ಬೈಕ್ನಲ್ಲಿ ಮನೆಗೆ ಹಿಂದಿರುಗುವಾಗ ನಡು ರಸ್ತೆಯಲ್ಲಿ ಅತೀವವಾಗಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯ ಕಡೆ ಕಣ್ಣು ಹೊರಳಿದರೂ ಕಂಡರೂ ಕಾಣದಂತೆ ಮತ್ತಷ್ತು ವೇಗವಾಗಿ ಗಾಡಿ ಓಡಿಸಿಕೊಂಡು ಬಂದು ಮನೆ ಸೇರಿದ್ದೆ..ನನಗೇಕೆ ಬೇಕು ಇಲ್ಲದ ಉಸಾಬರಿ ಎಂದು ಸಮರ್ಥಿಸಿಕೊಳ್ಳುತ್ತ…ನೆಮ್ಮದಿಯಾಗಿ ಮಲಗಿದ್ದೆ. ನನ್ನಂತೆಯೇ ಉಳಿದವರೂ ಒಮ್ಮೆ ನೋಡಿ ಚು ಚು ಎಂದು ಪೇಚಾಡಿಕೊಳ್ಳುತ್ತ ಮುಂದೆ ಸಾಗಿದರೇ ಹೊರತು ಯಾರೂ ಆ ವ್ಯಕ್ತಿಗೆ ಸಹಾಯ ಮಾಡುವ ಸೌಹಾರ್ದತೆ ತೋರಿಸಲಿಲ್ಲ. ಇದು ನಮ್ಮ ಇಂದಿನ ನಾಗರೀಕತೆ…ಯಾರನ್ನೂ ಅಂಟಿಸಿಕೊಳ್ಳದ ಮಾನವೀಯತೆ.
ಇನ್ನೂ ಅರಚುತ್ತಲೇ ಇದ್ದ ಕಾಗೆಗಳು..ನಿಮಗಿಂತ ನಾವೇ ವಾಸಿ.. ಹೇ ಮನುಜ..ನೀನಾರಿಗಾದೆಯೋ…ಎಂದು ತಿವಿದಂತಾಯಿತು.


Leave a Reply

Back To Top