ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—44
ಆತ್ಮಾನುಸಂಧಾನ
ಅಂಕೋಲಾ ತಾಲೂಕು ‘ಸಾಹಿತ್ಯ ಪರಿಷತ್’
ಮತ್ತು ನಾನು
೧೯೭೮ ರಿಂದ ೧೯೮೦ ರವರೆಗೆ ಎರಡು ವರ್ಷಗಳ ಕಾಲ ಅಂಕೋಲೆಯ ಹಿರಿಯ ಸಮಾಜವಾದಿ ಚಿಂತಕರಾಗಿದ್ದ ಶ್ರೀ ವಿ.ಜೇ. ನಾಯಕ ಅವರು ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿದ್ದರು. ಈ ಕಾಲಾವಧಿಯಲ್ಲಿ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ವಿ.ಜೇ.ನಾಯಕ ಅವರು ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತಿನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಶ್ರಮಿಸಿದ್ದರು. ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನದ ಕುರಿತು ಸಿದ್ಧತೆ ಮಾಡುತ್ತಿರುವಾಗಲೇ ಅವಧಿಗೆ ಮುನ್ನ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾಗಿದ್ದ ಮಾನ್ಯ ಹಂಪ ನಾಗರಾಜ್ ಅವರು ವಿ.ಜೇ.ನಾಯಕ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ನಿವೃತ್ತಗೊಳಿಸಿದರು. ಇದರಿಂದ ತಾಲೂಕು ಮಟ್ಟದಲ್ಲಿ ನಿರೀಕ್ಷಿತವಾಗಿದ್ದ ಸಾಹಿತ್ಯ ಸಮ್ಮೇಳನದ ಕನಸು ಕನಸಾಗಿಯೇ ಉಳಿಯುವಂತಾಗಿತ್ತು.
ವಿ.ಜೇ. ನಾಯಕ ಅವರ ತರುವಾಯ ಜಿಲ್ಲಾ ಘಟಕದ ಅಧ್ಯಕ್ಷಗಾದಿಯೇರಿದ ಟಿ.ಕೇ.ಮಹಮೂದ ಎಂಬ ಹಿರಿಯರು ಇಪ್ಪತ್ತೊಂದು ವರ್ಷಗಳ ಕಾಲ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿಯೂ ಜಿಲ್ಲಾಧ್ಯಕ್ಷರಾಗಲೀ, ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಹಿರಿಯರಾಗಲೀ, ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವುದಾಗಲೀ, ಘಟಕವನ್ನು ಕ್ರಿಯಾಶೀಲ ಚಟುವಟಿಕೆಗಳಿಂದ ಮುನ್ನಡೆಸುವುದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.
ಕುಮಟೆಯ ನಿವೃತ್ತ ಅಬಕಾರಿ ಇಲಾಖೆಯ ಅಧಿಕಾರಿ ರೋಹಿದಾಸ ನಾಯಕ ಅವರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಿಲ್ಲೆಯುದ್ದಕ್ಕೂ ತಾಲೂಕು ಘಟಕಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಿಸಿ ಎಲ್ಲ ತಾಲೂಕು ಘಟಕಗಳನ್ನು ಪುನಃಶ್ಚೇತನಗೊಳಿಸಿದರು. ಈ ಪ್ರಕ್ರಿಯೆಯಲ್ಲಿ ಅಂಕೋಲಾ ತಾಲೂಕು ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷನಾಗಿ ಕಾಯಕ ನಿರ್ವಹಿಸುವ ಅವಕಾಶವು ನನಗೆ ದೊರೆಯಿತು.
ನಮ್ಮ ನೂತನ ಸಮಿತಿಯಲ್ಲಿ ನಾನು ಅಧ್ಯಕ್ಷನಾಗಿದ್ದರೆ, ಕಾರ್ಯದರ್ಶಿಗಳಾಗಿ ನಾಗಪತಿ ಹೆಗಡೆ, ಪ್ರೊ. ಸಿದ್ಧಲಿಂಗಸ್ವಾಮಿ ವಸ್ತ್ರದ ಕೋಶಾಧಿಕಾರಿಯಾಗಿ, ನಾಗೇಂದ್ರ ನಾಯಕ ತೊರ್ಕೆ, ಪರಿಶಿಷ್ಟ ಜಾತಿಯ ಪ್ರತಿನಿಧಿಯಾಗಿ ಪ್ರೊ. ನಾಗೇಶ ದೇವ ಅಂಕೋಲೆಕರ, ಮಹಿಳಾ ಪ್ರತಿನಿಧಿಯಾಗಿ ಶ್ರೀಮತಿ ಕವಿತಾ ವಿಷ್ಣು ನಾಯ್ಕ, ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ ಅಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಎನ್.ಜಿ. ನಾಯಕ ನನ್ನ ಜೊತೆಗೂಡಿದರು.
ಅವರೊಡನೆ ಸಾಹಿತ್ಯ ಪರಿಷತ್ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಬಿ. ಹೊನ್ನಪ್ಪ ಭಾವಿಕೇರಿ, ಎಸ್.ಜಿ. ಭಟ್, ಜೆ. ಪ್ರೇಮಾನಂದ, ಎನ್.ವಿ. ರಾಠೋಡ, ಜಿ.ಎಂ. ಹೆಗಡೆ, ಎನ್.ವಿ. ನಾಯಕ ಭಾವಿಕೇರಿ, ಮ್ಯಾಥ್ಯೂ ಕುರಿಯನ್ ಮೊದಲಾದವರು ಸಮಿತಿಯ ಇತರ ಸದಸ್ಯರಾಗಿ ಜೊತೆಗೂಡಿದರು.
ಹಿರಿಯರಾದ ವಿಷ್ಣು ನಾಯ್ಕ, ಶಾಂತಾರಾಮ ನಾಯಕ ಹಿಚ್ಕಡ, ವಿ.ಜೇ. ನಾಯಕ, ಪ್ರೊ. ಎಸ್.ಎನ್. ದಫೇದಾರ ಮುಂತಾದವರು ಶಾಶ್ವತ ಆಮಂತ್ರಿತರಾಗಿ ತಾಲೂಕು ಘಟಕಕ್ಕೆ ಬೆಂಬಲವಾಗಿ ನಿಂತರು.
ಈ ಎಲ್ಲ ಮಹನೀಯರ ಸಹಕಾರ ಮತ್ತು ಕ್ರಿಯಾಶೀಲತೆಯಿಂದ ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಹಲವಾರು ವಿಚಾರ ಸಂಕೀರಣಗಳನ್ನು, ಕವಿಗೋಷ್ಠಿಗಳನ್ನು, ಹಿರಿಯ ಕವಿ-ಸಾಹಿತಿಗಳ ಉಪನ್ಯಾಸ ಮತ್ತು ಕಾವ್ಯ ವಾಚನಗಳನ್ನು ಏರ್ಪಡಿಸುವುದು ಸಾಧ್ಯವಾಯಿತು. ಹಲವು ವರ್ಷಗಳಿಂದ ನಿಂತ ನೀರಾದ ಸಾಹಿತ್ಯ ಪರಿಷತ್ ಘಟಕದ ಕಾರ್ಯ ಚಟುವಟಿಕೆಗಳು ಪ್ರವಾಹದಂತೆ ಮುನ್ನಡೆಯಲು ಪ್ರೇರಣೆಯಾಯಿತು.
ಜಿಲ್ಲಾಧ್ಯಕ್ಷರಾದ ರೋಹಿದಾಸ ನಾಯಕ ಮತ್ತು ಜಿಲ್ಲಾ ಸಮಿತಿಯವರು ಕಾಲಕಾಲಕ್ಕೆ ಅಗತ್ಯವಾದ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡಿರುವುದರಿಂದ ಮುಂದಿನ ಎಲ್ಲ ವರ್ಷಗಳಲ್ಲಿಯೂ ಅದೇ ಉತ್ಸಾಹದಲ್ಲಿ ಕ್ರಿಯಾಶೀಲವಾಗಿ ಮುನ್ನಡೆಯುವುದು ಸಾಧ್ಯವಾಯಿತು.
ಇದೇ ಅವಧಿಯಲ್ಲಿ ಉಲ್ಲೇಖನೀಯವಾದ ಇನ್ನೊಂದು ಕಾರ್ಯಕ್ರಮದ ಕುರಿತಾಗಿಯೂ ನಾನು ಪ್ರಸ್ತಾಪಿಸಬೇಕು. ಅದು ಅಂಕೋಲೆಯ ಸಾಹಿತ್ಯ ಪರಿಷತ್ತು ಆಯೋಜಿಸಿದ ಅಂಕೋಲಾ ತಾಲೂಕಾ ಪ್ರಪ್ರಥಮ ಸಾಹಿತ್ಯ ಸಮ್ಮೇಳನ!
ಅಂಕೋಲಾ ತಾಲೂಕಿನಲ್ಲಿ ಹಲವಾರು ಕವಿ ಸಾಹಿತಿಗಳು, ಇದ್ದರಲ್ಲದೇ ಮಹತ್ವದ ಕೃತಿಗಳೂ ಬೆಳಕಿಗೆ ಬಂದಿದ್ದವು. ಅಲ್ಲಿ-ಅಲ್ಲಿ ನಡೆಯುವ ಬೇರೆ ಬೇರೆ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಉಪನ್ಯಾಸ-ಚರ್ಚೆ-ಕಾವ್ಯ ವಾಚನಗಳ ಮೂಲಕ ಗಮನ ಸೆಳೆಯುತ್ತಿರುವ ಹಿರಿ-ಕಿರಿಯ ಬರಹಗಾರರ ಪ್ರತಿಭಾ ಪ್ರದರ್ಶನಕ್ಕೆ ಒಂದು ಬೃಹತ್ ವೇದಿಕೆಯ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಒಂದು ದಿನದ ಸಾಹಿತ್ಯ ಸಮ್ಮೇಳನಕ್ಕೆ ಪರಿಷತ್ತಿನ ಪದಾಧಿಕಾರಿಗಳು ಸಂಕಲ್ಪ ಮಾಡಿದರು. ಸಲಹಾ ಸಮಿತಿ ಕೂಡಾ ಸಂಪೂರ್ಣ ಬೆಂಬಲ ಸೂಚಿಸಿತು. ನಮ್ಮ ನಿರೀಕ್ಷಿತ ಯೋಜನೆಯಂತೆ ಸಮ್ಮೇಳನ ನಡೆಯಲು ಕನಿಷ್ಟ ಎರಡು ಲಕ್ಷ ರೂಪಾಯಿಗಳಿಗೂ ಮಿಕ್ಕಿದ ಆರ್ಥಿಕ ಬೆಂಬಲದ ಅವಶ್ಯಕತೆಯಿದೆ. ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯಿಂದ ಅಷ್ಟು ದೊಡ್ಡ ಮೊತ್ತದ ಆರ್ಥಿಕ ನೆರವನ್ನು ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. ಸದಸ್ಯರು ಮತ್ತು ಸಾಹಿತ್ಯಾಸಕ್ತರ ದೇಣಿಗೆಯಿಂದ ನಿಗದಿತ ದಿನಗಳಲ್ಲಿ ಅಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವುದು ಸುಲಭದ ಮಾತಲ್ಲ. ಅಂಥ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳ ಕಣ್ಣಿಗೆ ಬಿದ್ದವರು ಅಂದು ಅಂಕೋಲೆಯ ಪ್ರಮುಖ ಉದ್ಯಮಿಯಾಗಿದ್ದ ದಿ|| ಆರ್.ಎನ್. ನಾಯಕರು.
ಯುವ ಉದ್ಯಮಿಯಾಗಿದ್ದ ಆರ್.ಎನ್. ನಾಯಕರು ತಾವು ತಮ್ಮ ಉದ್ಯಮದ ಮೂಲಕ ಬೆಳೆದು ನಿಂತುದಲ್ಲದೆ, ಊರಿನ ಅನೇಕ ಸಂಘ-ಸಂಸ್ಥೆಗಳ ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಉದಾರವಾಗಿ ಆರ್ಥಿಕ ನೆರವು ನೀಡುವ ಔದಾರ್ಯವನ್ನು ತೋರುತ್ತಿದ್ದರು.
ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳು ಅವರನ್ನು ಪ್ರತ್ಯಕ್ಷ ಕಂಡು ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದಾಗ ಆರ್.ಎನ್.ನಾಯಕರು “ನಿಮ್ಮ ಶಕ್ತ್ಯಾನುಸಾರ ಹಣ ಸಂಗ್ರಹ ಮಾಡಿರಿ. ಎಷ್ಟೇ ಕಡಿಮೆಯಾದರೂ ನಾನು ನಿಮ್ಮ ಬೆಂಬಲಕ್ಕೆ ನಿಲ್ಲುವೆ” ಎಂದು ಮುಕ್ತ ಭರವಸೆ ನೀಡಿದರು.
ಆರ್.ಎನ್.ನಾಯಕ ಅವರ ಅಧ್ಯಕ್ಷತೆ ಮತ್ತು ನಾನು ಕಾರ್ಯಾಧ್ಯಕ್ಷನಾಗಿ ರೂಪುಗೊಂಡ ಸ್ವಾಗತ ಸಮಿತಿಯಲ್ಲಿ ಅಂಕೋಲೆಯ ಎಲ್ಲ ಸಂಘ-ಸಂಸ್ಥೆಗಳ, ಸರಕಾರಿ ಇಲಾಖೆಗಳ ಪ್ರತಿನಿಧಿಗಳಿಂದ ಕೂಡಿದ ಒಂದು ಸ್ವಾಗತ ಸಮಿತಿಯು ರೂಪುಗೊಂಡಿತು. ಪ್ರಧಾನ ಕಾರ್ಯದರ್ಶಿಗಳಾಗಿ ಡಾ. ಶಿವಾನಂದ ನಾಯಕ, ಶಿಕ್ಷಕ ನಾಗಪತಿ ಹೆಗಡೆ, ಪ್ರೊ. ಎಸ್.ವಿ. ವಸ್ತ್ರ ದ, ಕೋಶಾಧಿಕಾರಿಗಳಾಗಿ ನಾಗೇಂದ್ರ ನಾಯಕ ತೊರ್ಕೆ, ರಾಮಕೃಷ್ಣ ನಾಯಕ, ಸೂರ್ವೆ ಮುಂತಾದವರು ವಿವಿಧ ವಿಭಾಗಗಳಲ್ಲಿ ಜವಾಬ್ದಾರಿ ವಹಿಸಿಕೊಂಡು ಕಾರ್ಯಪ್ರವೃತ್ತರಾದರು. ಅಂಕೋಲೆಯ ಹಿರಿಯ ಕವಿ ಶ್ಯಾಮ ಹುದ್ದಾರರ ಸರ್ವಾಧ್ಯಕ್ಷತೆಯಲ್ಲಿ ೨೦೦೬ ರ ಜನವರಿ ಎಂಟರಂದು ಅಂಕೋಲೆಯ ಸ್ವಾತಂತ್ರ್ಯ ಸ್ಮಾರಕ ಭವನದ ಆವರಣದಲ್ಲಿ (ಗಾಂಧೀ ಮೈದಾನ) “ನ ಭೂತೋ ನ ಭವಿಷ್ಯತಿ” ಎಂಬಂತೆ ಸಾಹಿತ್ಯ ಸಮ್ಮೇಳನವನ್ನು ನಡೆಸಿ ಸಂಭ್ರಮಿಸಿದ್ದು ನನ್ನ ಬದುಕಿನಲ್ಲಿ ಅತ್ಯಂತ ಹೆಮ್ಮೆ ಮತ್ತು ಸಂತಸದ ದಿನವಾಗಿದೆ.
ಅಂದು ರಾಜ್ಯ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿದ್ದ ಹಿರಿಯ ಕವಿ ಚಂದ್ರಶೇಖರ ಪಾಟೀಲ (ಚಂಪಾ) ಸಮ್ಮೇಳನವನ್ನು ಉದ್ಘಾಟಿಸಿದರೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾರೋಪ ಭಾಷಣ ಮಾಡಿದ್ದರು. ಹಿರಿಯ ಕಥೆಗಾರ ದಿ. ಡಾ. ಪ್ರಹ್ಲಾದ ಅಗಸನ ಕಟ್ಟೆ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆಯ ಸಾಂಕೇತಿಕ ಬಿಡುಗಡೆ ನೆರವೇರಿಸಿದ್ದರು.
ಸಾಹಿತ್ಯ ಸಮ್ಮೇಳನದ ಶುಭ ಸಮಾರಂಭದಲ್ಲಿಯೇ ಉದ್ಯಮಿ ಆರ್.ಎನ್.ನಾಯಕ ಇನ್ನೊಂದು ಮಹತ್ಕಾರ್ಯ ಮಾಡಿದುದನ್ನು ಇಲ್ಲಿ ಸ್ಮರಿಸಲೇ ಬೇಕು. ಅಂಕೋಲಾ ತಾಲೂಕಿನ ಎಲ್ಲ ಕವಿ-ಲೇಖಕರ ಪರಿಚಯವುಳ್ಳ “ಹಳೆಬೇರು-ಹೊಸಚಿಗುರು” ಎಂಬ ಕಿರು ಹೊತ್ತಿಗೆಯನ್ನು ಮುದ್ರಿಸಿ ಉಚಿತವಾಗಿ ಸಹೃದಯರಿಗೆ ಹಂಚಿದುದು ಅಂಕೋಲೆಯ ಸಾಹಿತ್ಯ ಕ್ಷೇತ್ರಕ್ಕೆ ಸಂದ ಮಹತ್ವದ ಕೊಡುಗೆಯಾಗಿ ಇಂದಿಗೂ ಓದುಗರಿಗೆ ಲಭ್ಯವಿದೆ.
ಅಂಕೋಲೆಯ ಸಾಹಿತ್ಯ ಪರಿಷತ್ತು ಅದರ ಕ್ರಿಯಾಶೀಲ ಚಟುವಟಿಕೆಗಳ ಆರಂಭದ ವರ್ಷದಲ್ಲಿಯೇ ನನಗೆ ಅಧ್ಯಕ್ಷತೆಯ ಜವಾಬ್ದಾರಿ ವಹಿಸಿದ್ದು, ಮತ್ತು ನಾನು ಇಲ್ಲಿಯ ಎಲ್ಲ ಹಿರಿ-ಕಿರಿಯ ಸಾಹಿತ್ಯ ಪ್ರೇಮಿಗಳ ಸಹಕಾರದಿಂದ ಯಶಸ್ವಿಯಾಗಿ ನಿರ್ವಹಿಸಿರುವುದು ನನ್ನ ಬದುಕಿನ ಸಂತಸದ ಒಂದು ಭಾಗವೇ ಆಗಿ ಉಳಿದುಕೊಂಡಿದೆ.
ಮುಂದೆ ಇದೇ ಸಾಹಿತ್ಯ ಪರಿಷತ್ ಘಟಕವು ೨೦೧೫ನೇ ಸಂವತ್ಸರದಲ್ಲಿ ಸಾಹಿತ್ಯ ಸಮ್ಮೇಳನವನ್ನು ನನ್ನ “ಸರ್ವಾಧ್ಯಕ್ಷತೆ”ಯಲ್ಲಿ ನೆರವೇರಿಸಿದ್ದು ನನ್ನ ಬದುಕಿನ ಅವಿಸ್ಮರಣೀಯ ಗಳಿಗೆಯಾಗಿದೆ..!
“ಮರೆತೇನೆಂದರೆ ಮರೆಯಲಿ ಹೆಂಗ, ಸಾಹಿತ್ಯ ಪರಿಷತ್ತಿನ ಸಂಗ!” ಎಂಬುದು ನನ್ನ ಬಾಳಿನುದ್ದಕ್ಕೂ ಹಚ್ಚ ಹಸಿರಾದ ನೆನಪು….
ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಅಂಕೋಲಾದ ಸಾಹಿತ್ಯ ಪರಿಷತ್ತಿನ ಹಾಗೂ ಸಮ್ಮೇಳನದ ಕುರಿತು ನಿಮ್ಮ ಅನುಭವಗಳನ್ನು ಹಂಚಿಕೊಂಡಿರುವಿರಿ. ನಿಜಕ್ಕೂ ಅವಿಸ್ಮರಣೀಯರಾಗಿರುವುದು.
ಧನ್ಯವಾದಗಳು ಸರ್
ತಮ್ಮ ಆತ್ಮಕಥನ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಧಾರಾವಾಹಿ ಯಂತೆ ಕುತೂಹಲ ಮೂಡಿಸಿದ್ದು ಪ್ರತೀ ವಾರದ ಕಂತಿಗಾಗಿ ಕಾಯುವಂತೆ ಮಾಡಿದೆ. ಧನ್ಯವಾದಗಳು.
ಥ್ಯಾ0ಕ್ಯೂ ವೆರಿಮಚ್ ಸರ್
ಸರ್ ತಮ್ಮ ಲೇಖನದ ಮೂಲಕ ಸಾಹಿತ್ಯ ಸಮ್ಮೇಳನ ಕಣ್ಣ ಮುಂದೆ ಬಂತು ವಾಸ್ತವಿಕ ಲೇಖನ