ಕಾವ್ಯಯಾನ
ನನ್ನ ಖಯಾಲಿಗಳೆ ಹಾಗೆ
ಚೈತ್ರಿಕಾ ನಾಯ್ಕ.
ಮುತ್ತುಕೊಡುವ ಬದಲು
ಹಲ್ಲು ನಾಟುವಂತೆ ಕಚ್ಚುವುದು
ಪ್ರೀತಿಯಿಂದ ಅಪ್ಪಿಕೊಳ್ಳುವ ಬದಲು
ಏಡಿ ಬಿಗಿತದಲ್ಲಿ ಚಿವುಟುವುದು
ಅವನು ಹತ್ತಿರವಿದ್ದಾಗ ದೂರತಳ್ಳುವುದು
ದೂರವಿದ್ದಾಗ ಸನಿಹಕ್ಕೆ ಪರಿತಪಿಸುವುದು
ಏನೊ ಗಂಭೀರವಾಗಿ ಆತ ಮಾತನಾಡುತ್ತಿದ್ದರೆ
ಮತ್ತೇನೊ ಕ್ಷುಲ್ಲಕ ಸಂಗತಿ ಎತ್ತುವುದು
ಜಾಸ್ತಿ ಮಾತನಾಡಿದರೆ ನನಗಿಷ್ಟವಿಲ್ಲ ಎಂದು
ಅವನ ಬಾಯಿ ಮುಚ್ಚಿಸುವುದು
ಸುಮ್ಮನೆ ಪಾಪಚ್ಚಿಯಂತೆ ಕೂತ ಅವನನ್ನು
ನಿನ್ನ ಗಂಟೇನು ಹೋಗಲ್ಲ ಮಾತಾಡು ಎನ್ನುವುದು
ಅಳು ಬಂದಾಗ ತುಟಿಬಿಗಿದು ಸುಮ್ಮನಿರುವುದು
ಅಕಾರಣವಾಗಿ ಹಟ ಮಾಡಿ ಸುಳ್ಳೆಪಳ್ಳೆ ಅಳುವುದು
ಜಗಳ ಆಡಲೆಬೇಕಾದಾಗ ತುಟಿ ಹೊಲೆದು ಕೊಳ್ಳುವುದು
ಎಲ್ಲಾ ಸಮಾಧಾನ ಇರುವಾಗ ಜಗಳ ಕಾಯುವುದು
ನನ್ನ ಖಯಾಲಿಯೆ ಇಂತವು ಪ್ರೀತಿಯ ಬಗೆಯೆ ಹೀಗೆ
***************
ಚೈತ್ರಿಕಾ ಲವ್ಲೀ ಕವಿತೆ.
ನನ್ನ ಖಯಾಲಿಗಳು ಹೀಗೇ…..