ಕಾವ್ಯಯಾನ
ಮತಿ ಮೀರಿದೊಡೆ
ವಿದ್ಯಾಶ್ರೀ ಅಡೂರ್


ಹೊತ್ತಿಲ್ಲ… ಗೊತ್ತಿಲ್ಲ… ಅಮಲಿನ ಭ್ರಾಂತಿಗೆ..
ಮತ್ತಿನ್ನೂ ಇಳಿದಿಲ್ಲ ಏರಿಹುದು ತಲೆಗೆ
ತುತ್ತು ತಿನಿಸಿದ ಅಮ್ಮ ನೆನಪಲ್ಲೇ ಉಳಿದಿಲ್ಲ
ಮುತ್ತಿಟ್ಟ ಮನೆಯಾಕೆಯೂ ಅಹಮಿಕೆಗೆ ಸಮವಲ್ಲ
ತನ್ನದೇ ಆಕಾಶ… ಕಾಲಡಿಯೂ ತನ್ನದೇ
ಬೆನ್ನ ಹಿಂದಿನ ಭೂತ…ಭವಿತಗಳೂ ಹೊರೆ
ಇನ್ನಿರದೆ ಸೆಳೆದಿರಲು ಇಂದಿನದೇ ಪೊರೆ
ಮುನ್ನೆಚ್ಚರಿಸುವರಾರು ನಡೆಯೊಂದು ಎಡವದೆ??
ಬಿದ್ದ ಪೂರ್ವಾಪರಕೆ ಜಗದೊಳಗೆ ಮದ್ದಿಲ್ಲ
ಸದ್ದೆಷ್ಟೇ ಆದರೂ ಹೊದ್ದವರು ಎದ್ದಿಲ್ಲ..
ಇದ್ದು ಹೋದವರೆಷ್ಟೋ ಹಿಂತಿರುಗಿ ಬಂದಿಲ್ಲ
ಗುದ್ದಿಸಿಕೊಂಡೂ ಬುದ್ಧಿ ಬರದಿರೆ…. ಹಿಂದಿಲ್ಲ… ಮುಂದಿಲ್ಲ
************************