ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—43

ಆತ್ಮಾನುಸಂಧಾನ

ಜಿ.ಸಿ. ಕಾಲೇಜಿನಲ್ಲೊಂದು ‘ಅಭಿನಯ ಮಂಟಪ

Join These Theatre Groups For Lessons I LBB, Kolkata

ಅಂಕೋಲೆಯಲ್ಲಿ ಮಾನ್ಯ ದಿನಕರ ದೇಸಾಯಿ ಅವರ ನಾಯಕತ್ವದಲ್ಲಿ ಸ್ಥಾಪನೆಗೊಂಡ “ಕೆನರಾ ವೆಲ್‌ಫೇರ್ ಟ್ರಸ್ಟ್” ಎಂಬ ಶಿಕ್ಷಣ ಸಂಸ್ಥೆ ಜಿಲ್ಲೆಯಾದ್ಯಂತ ಹುಟ್ಟುಹಾಕಿದ ಜನತಾ ವಿದ್ಯಾಲಯಗಳೆಂಬ ಪ್ರೌಢಶಾಲೆಗಳು ಜಿಲ್ಲೆಯಲ್ಲಿ ಅಕ್ಷರ ಜ್ಯೋತಿ ಬೆಳಗಿಸುವ ಮಹತ್ವದ ಕಾರ್ಯಾಚರಣೆಗೆ ತೊಡಗಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾದದ್ದು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಒಂದು ಸುವರ್ಣಮಯ ಕಾಲಾವಧಿ. ಇದರ ಮುಂದಿನ ಹೆಜ್ಜೆಯಾಗಿ ಸ್ಥಾಪನೆಗೊಂಡದ್ದೇ ಅಂಕೋಲೆಯ ‘ಗೋಖಲೆ ಸೆಂಟನರಿ ಕಾಲೇಜ್’ ಎಂಬ ಮಹಾವಿದ್ಯಾಲಯ.

ತಮ್ಮ ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ ಆಯ್ಕೆಯಲ್ಲಿಯೂ ತುಂಬಾ ಕಾಳಜಿಪೂರ್ವಕ ಪರಿಶೀಲನೆ ನಡೆಸುವ ಮಾನ್ಯ ದೇಸಾಯಿಯವರು ಅತ್ಯಂತ ದಕ್ಷ ಪ್ರಾಮಾಣಿಕ ಪ್ರತಿಭಾ ಸಂಪನ್ನರನ್ನೇ ಆಯ್ಕೆ ಮಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಸೇವೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತ ಪ್ರತಿಯೊಂದು ಸಂಸ್ಥೆಯೂ ಯಶಸ್ವಿಯಾಗಿ ಬೆಳವಣಿಗೆ ಹೊಂದುವಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಇದಕ್ಕೆ ಉತ್ತಮ ನಿದರ್ಶನವೆಂಬಂತೆ ಕೇ.ಜಿ.ನಾಯ್ಕ ಎಂಬ ದಕ್ಷ ಆಡಳಿತಗಾರನೊಬ್ಬನನ್ನು ಗೋಖಲೆ ಸೆಂಟನರಿ ಕಾಲೇಜಿನ ಪ್ರಥಮ ಪ್ರಾಂಶುಪಾಲರನ್ನಾಗಿ ಆಯ್ಕೆ ಮಾಡಿದ್ದು, ಅವರ ಆಡಳಿತದಲ್ಲಿ ಕಾಲೇಜು ಕೆಲವೇ ಕೆಲವು ವರ್ಷಗಳಲ್ಲಿ ತನ್ನ ಶೈಕ್ಷಣಿಕ ಸಾಧನೆಗಳಿಂದಲೇ ರಾಜ್ಯಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಪ್ರಚುರ ಪಡಿಸಿದ್ದು ಚರಿತ್ರಾರ್ಹ ಸಂಗತಿಯಾಗಿದೆ.

ಕೇ.ಜಿ.ನಾಯ್ಕ ಜಿಲ್ಲೆಗೆ ಅಪರಿಚಿತರೇನಲ್ಲ. ಮೂಲತಃ ಇದೇ ಜಿಲ್ಲೆಯ ಕುಮಟಾ ತಾಲೂಕಿನ ಹನೇಹಳ್ಳಿಯೆಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಹನೇಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಧಾರವಾಡ ಇತ್ಯಾದಿಯಾಗಿ ಜಿಲ್ಲೆಯ ಹೊರಗಿದ್ದುಕೊಂಡೇ ಪದವಿ ಶಿಕ್ಷಣ, ಸ್ನಾತಕೋತ್ತರ ಪದವಿಗಳನ್ನು ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದವರು. ಬಹುಶಃ ಇದೇ ಕಾರಣದಿಂದ ಜಿಲ್ಲೆಯ ಬಹುಜನ ಸಮುದಾಯಕ್ಕೆ ಅಪರಿಚಿತರಾಗಿದ್ದವರು. ಇದು ಕೇ.ಜಿ.ನಾಯ್ಕರ ಪ್ರಾಂಶುಪಾಲ ಹುದ್ದೆಯ ಆಡಳಿತ ವ್ಯವಹಾರಗಳಿಗೆ ವರವಾಗಿಯೇ ಪರಿಣಮಿಸಿತು ಎಂಬುದು ಮುಂದಿನ ಅವರ ಕಾರ್ಯಕ್ಷಮತೆಯನ್ನು ಕಾಣುವಾಗ ಯಾರಿಗಾದರೂ ಮನವರಿಕೆಯಾಗುತ್ತದೆ. 

ಅಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಮಾನ್ಯ ಅಡಕೆಯವರಲ್ಲಿ ತಮ್ಮ ಬೇಡಿಕೆಯನ್ನು ಸಲ್ಲಿಸಿ ಸಮರ್ಥ ಆಡಳಿತಗಾರನೋರ್ವನನ್ನು ನೀಡುವಂತೆ ದೇಸಾಯಿಯವರು ಮಾಡಿದ ಮನವಿಗೆ ಸ್ಪಂದಿಸಿದ ಮಾನ್ಯ ಅಡಕೆ ಸಾಹೇಬರು ಅಂಕೋಲೆಗೆ ನೀಡಿದ ಕೊಡುಗೆಯೇ ಶ್ರೀಮಾನ್ ಕೇ.ಜಿ.ನಾಯ್ಕ ಎಂಬ ಗೋಖಲೆ ಶತಾಬ್ಧಿ ಮಹಾವಿದ್ಯಾಲಯದ ಪ್ರಪ್ರಥಮ ಪ್ರಾಂಶುಪಾಲರು.

ತೆಳ್ಳಗೆ-ಬೆಳ್ಳಗೆ ತುಂಬಾ ಎತ್ತರದ ನಿಲುವಿನ, ಸದಾ ಗಾಂಭೀರ್ಯವೇ ಮೂರ್ತಿವೆತ್ತಂತೆ ತೋರುವ ಕೇ.ಜಿ.ನಾಯ್ಕರು ತಮ್ಮ ಸಂಸ್ಥೆಯ ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಒಂದು ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡೇ ಇರುತ್ತಿದ್ದರು. ಅವರ ಪೂರ್ವಾನುಮತಿ ಇಲ್ಲದೆ ಅಧ್ಯಾಪಕರಾಗಲಿ, ಸಿಬ್ಬಂದಿಗಳಾಗಲಿ, ವಿದ್ಯಾರ್ಥಿಗಳಾಗಲಿ, ಸರಕಾರಿ ಅಧಿಕಾರಿಗಳಾಗಲೀ ಅವರ ಚೇಂಬರ್ ಪ್ರವೇಶಿಸುವ ಅವಕಾಶವಿರಲಿಲ್ಲ. ಇದು ಹಲವರಿಗೆ ತಲೆನೋವಿನ ಸಂಗತಿಯೆನಿಸಿದರೂ ಪ್ರಾಚಾರ್ಯ ಹುದ್ದೆಯ ಘನತೆಯನ್ನು ಅವರಂತೆ ಕಾಪಾಡಿಕೊಂಡ ಇನ್ನೊಬ್ಬ ವ್ಯಕ್ತಿ ಅಪರೂಪಕ್ಕೆ ಅಪರೂಪವಾಗಿಯೂ ನನಗೆ ಕಂಡಿಲ್ಲ.

ಮುಂಜಾನೆ ಹನ್ನೊಂದು ಗಂಟೆಗೆ ಅವರು ಕಾಲೇಜ್ ಕ್ಯಾಂಪಸ್ಸಿಗೆ ಬಂದರೆ ಪಾಠ ಪ್ರವಚನಗಳ ಧ್ವನಿ- ಪ್ರತಿಧ್ವನಿಗಳಲ್ಲದೆ ಬೇರೆ ಯಾವ ಸದ್ದುಗದ್ದಲವನ್ನೂ ಅವರು ಸಹಿಸುತ್ತಿರಲಿಲ್ಲ. ಅವರೊಮ್ಮೆ ಕಾರಿಡಾರಿನಲ್ಲಿ ನಿಂತು ಅತ್ತಿತ್ತ ಕಣ್ಣು ಹಾಯಿಸಿದರೆ ಒಂದು ನರಪಿಳ್ಳೆಯೂ ತರಗತಿಯಿಂದ ಹೊರಗೆ ಕಾಣಿಸುವುದು ಸಾಧ್ಯವಿರಲಿಲ್ಲ.

ವರ್ತಮಾನದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಯ ಆವರಣವನ್ನು ಪ್ರವೇಶಿಸಿದರೂ ಇಂಥ ಅನುಭವವನ್ನು ಪಡೆಯುವುದು ಸಾಧ್ಯವೇ ಇಲ್ಲ. ಆದರೆ ಮಾನ್ಯ ಕೇ.ಜಿ.ನಾಯ್ಕ ಅವರು ಅದು ಹೇಗೆ ಅಂದಿನ ದಿನಗಳಲ್ಲಿ ಅಂಥ ಗಾಂಭೀರ್ಯವನ್ನು ಕಾಯ್ದುಕೊಂಡರು? ಎಂದು ಯೋಚಿಸಿದರೆ ಅಚ್ಚರಿಯೇ ಆಗುತ್ತದೆ.

ಕಾಲೇಜಿನಂಥ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳನ್ನಲ್ಲದೇ ಪಠ್ಯೇತರ ವಿಷಯಗಳಲ್ಲಿಯೂ ಕಲಿಕೆಯ ಆಸಕ್ತಿ ತೋರಬೇಕು. ಇಲ್ಲವಾದರೆ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಖಂಡಿತ ಸಾಧ್ಯವಿಲ್ಲ.

ಕೇ.ಜಿ ನಾಯ್ಕರು ಆಡಳಿತದಲ್ಲಿ ದಕ್ಷತೆ ತೋರುವುದರೊಂದಿಗೆ ಕಠಿಣ ಶಿಸ್ತನ್ನು ಪಾಲಿಸುತ್ತಿದ್ದರು. ಅದರ ಜೊತೆಯಲ್ಲಿಯೇ ಅವರ ವ್ಯಕ್ತಿತ್ವದಲ್ಲಿ ವಿಶಾಲ ದೃಷ್ಠಿಕೋನ ಮತ್ತು ದೂರದರ್ಶಿತ್ವ ಅಡಗಿತ್ತು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಂಸ್ಥೆಯು ಕೊಡಬಹುದಾದ ಎಲ್ಲ ಅವಕಾಶಗಳನ್ನು ಪೂರೈಸಬೇಕೆಂಬ ಜವಬ್ದಾರಿಯಿತ್ತು. ಇಂಥ ಸಂದರ್ಭದಲ್ಲಿ ಅಧ್ಯಾಪಕರೊಡನೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಅದನ್ನು ಕಾರ್ಯಗತಗೊಳಿಸುವ ಸಂಕಲ್ಪ ಶಕ್ತಿಯಿತ್ತು.

ಕಾಲೇಜಿನ ಪಠ್ಯೇತರ ಚಟುವಟಿಕೆಗಳಿಗಾಗಿಯೇ ‘ಯೂನಿಯನ್’, ‘ಜಿಮಖಾನಾ’ ಎಂಬ ಎರಡು ವಿಭಾಗಗಳು ಕ್ರಿಯಾಶೀಲವಾಗಿದ್ದವು. ಅವು ತುಂಬ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದ್ದವು.

ಕೇ.ಜಿ. ನಾಯ್ಕ ಅವರ ಇನ್ನೊಂದು ವ್ಯಕ್ತಿ ವಿಶೇಷವೆಂದರೆ ಗುಣ ಗ್ರಾಹಿತ್ವ. ಯಾವ ಅಧ್ಯಾಪಕರಿಂದ ಯಾವ ಕೆಲಸವನ್ನು ಯಶಸ್ವಿಯಾಗಿ ಮಾಡಿಸಬಹುದೆಂಬ ಸೂಕ್ಷ್ಮಜ್ಞತೆ ಇರುವುದರಿಂದ ನಿರ್ದಿಷ್ಟ ವಿಭಾಗಕ್ಕೆ ಸೂಕ್ತ ವ್ಯಕ್ತಿಗಳನ್ನೇ ಆಯ್ದು ಜವಾಬ್ದಾರಿಯನ್ನು ಒಪ್ಪಿಸುತ್ತಿದ್ದರು.

ಆರಂಭದ ದಿನಗಳಲ್ಲಿ ಹೆಚ್ಚಿನ ಕಾಲಾವಧಿಗೆ ಯೂನಿಯನ್ / ಜಿಮಖಾನಾ ವಿಭಾಗದ ಜವಾಬ್ದಾರಿಯನ್ನು ಪ್ರೊ. ವಿ.ಎ.ಜೋಷಿ ಮತ್ತು ಪ್ರೊ.ಎಂ.ಪಿ.ಭಟ್ ನಿಭಾಯಿಸಿದ್ದಾರೆ. ಪ್ರಸಕ್ತ ಕಾಲಾವಧಿಯ ಚರ್ಚಾ ಸ್ಪರ್ಧೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಜಿಲ್ಲೆಯ ತುಂಬ ಇತರ ಶಿಕ್ಷಣ ಸಂಸ್ಥೆಗಳ ಗಮನ ಸೆಳೆಯುವಂತೆ ಇರುತ್ತಿದ್ದವು. ಕ್ರೀಡಾ ವಿಭಾಗದಲ್ಲಿ ಪ್ರತಿ ವರ್ಷವೂ ಎಂಟರಿಂದ ಹತ್ತರವರೆಗೂ ವಿವಿಧ ಕ್ಷೇತ್ರದ ಕ್ರೀಡಾಪಟುಗಳು “ಯೂನಿವರ್ಸಿಟಿ ಬ್ಲೂ” ಎನ್ನಿಸಿಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದರು,. ಉದಯ ಪ್ರಭು ಎಂಬ ವಿದ್ಯಾರ್ಥಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆದು ನಿಲ್ಲುವಲ್ಲಿ ಪ್ರಾಚಾರ್ಯ ಕೇ.ಜಿ ನಾಯ್ಕ ಮತ್ತು ಪ್ರೊ. ಎಂ.ಪಿ.ಭಟ್ ಅವರ ಕೊಡುಗೆ ತುಂಬಾ ಸ್ಮರಣೀಯವಾದುದೇ ಆಗಿದೆ.

ಯೂನಿಯನ್ ಮತ್ತು ಜಿಮಖಾನಾ ವಿಭಾಗಗಳ ಕಾರ್ಯಕ್ಷೇತ್ರಗಳ ಆಚೆಗೂ ಚಟುವಟಿಕೆಗಳನ್ನು ವಿಸ್ತರಿಸಬೇಕೆಂದು ಕೇ.ಜಿ.ನಾಯ್ಕರು ಸದಾ ಚಿಂತನೆ ನಡೆಸುತ್ತಿದ್ದರು. ಸಹ ಅಧ್ಯಾಪಕರೊಡನೆ ಚರ್ಚಿಸಿ ಸೂಕ್ತ ಸಲಹೆಗಳು ದೊರೆತಾಗ ಪರಿಪೂರ್ಣ ಸಹಕಾರ ನೀಡಿ ಕಾರ್ಯರೂಪಕ್ಕೆ ತರುತ್ತಿದ್ದರು. ಅದರ ಫಲಶೃತಿಯಾಗಿ ಹುಟ್ಟಿಕೊಂಡ ಮಹತ್ವದ ವೇದಿಕೆಗಳೆಂದರೆ ‘ಅಭಿನಯ ಮಂಟಪ’, ‘ಫೋಟೋ ಕ್ಲಬ್’ ಮತ್ತು ‘ಲೇಡಿಸ್ ಫೋರಂ’.

ವಿದ್ಯಾರ್ಥಿನಿಯರ ವೈಯಕ್ತಿಕ ಸಮಸ್ಯೆಗಳು ಮತ್ತು ಯೋಗಕ್ಷೇಮದತ್ತ ಗಮನ ಹರಿಸಲು ಸೂಕ್ತ ವೇದಿಕೆಯಾದದ್ದು ‘ಲೇಡಿಸ್ ಫೋರಂ’. ಅದನ್ನು ಸ್ಥಾಪಿಸುವುದರೊಂದಿಗೆ ವಿದ್ಯಾರ್ಥಿನಿಯರ ಮುಕ್ತ ಮಾತುಕತೆಗೆ ಅವಕಾಶ ಕಲ್ಪಿಸಿದ್ದು ಇದರ ಜವಾಬ್ದಾರಿಯನ್ನು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಾಂತಾ ಥಾಮಸ್ ಬಹು ದೀರ್ಘ ಕಾಲ ಯಶಸ್ವಿಯಾಗಿ ನಿರ್ವಹಿಸಿದರು.

ವಿದ್ಯಾರ್ಥಿಗಳಲ್ಲಿ ಫೋಟೋಗ್ರಾಫಿಯ ಅರಿವು ಮತ್ತು ಆಸಕ್ತಿಯನ್ನು ಬೆಳೆಸುವುದಕ್ಕಾಗಿಯೇ ಕಾಲೇಜಿನಲ್ಲಿ ‘ಫೋಟೋ ಕ್ಲಬ್’ ಒಂದನ್ನು ಸ್ಥಾಪಿಸಲಾಯಿತು. ಈ ಮಹತ್ವದ ಸಲಹೆ ಮತ್ತು ಯೋಜನೆಯನ್ನು ಪ್ರಾಚಾರ್ಯರ ಗಮನಕ್ಕೆ ತಂದ ರಸಾಯನ ಶಾಸ್ತ್ರ ಅಧ್ಯಾಪಕ ಪ್ರೊ.ವಿ.ಆರ್. ವೇರ್ಣೇಕರ್ ಮತ್ತು ಸಸ್ಯಶಾಸ್ತ್ರ ವಿಭಾಗದ ಪ್ರೊ.ಆರ್.ಬಿ ನಾಯ್ಕ ಎಂಬ ಅಧ್ಯಾಪಕರಿಗೆ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟು ಹತ್ತಾರು ವರ್ಷಗಳವರೆಗೆ ನೂರಾರು ವಿದ್ಯಾರ್ಥಿಗಳು ಫೋಟೋಗ್ರಾಪಿಯ ಕಲಿಕೆಯ ಪ್ರಯೋಜನ ಪಡೆಯುವ ಅವಕಾಶವನ್ನು ಪ್ರಾಚಾರ್ಯ ಕೇ.ಜಿ. ನಾಯ್ಕ ಪೂರೈಸಿದರು.

ಯೂನಿಯನ್ ವಿಭಾಗದ ‘ಕಲಾಮಂಡಲ’ದ ಅಧ್ಯಕ್ಷರಾಗಿ ಬಹಳಷ್ಟು ವರ್ಷ ಕಾರ್ಯನಿರ್ವಹಿಸಿದ್ದ ಪ್ರೊ. ಮೋಹನ ಹಬ್ಬು ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ಮತ್ತು ನಾಟಕ ಕಲಿಕೆಯ ಅವಕಾಶ ಕಲ್ಪಿಸಲು ಒಂದು ಪ್ರತ್ಯೇಕ ವೇದಿಕೆಯ ಅವಶ್ಯಕತೆಯಿರುವುದನ್ನು ನಮ್ಮ ಪ್ರಾಚಾರ್ಯರ ಗಮನಕ್ಕೆ ತಂದರು. ಅದಕ್ಕೆ ಒಪ್ಪಿಕೊಂಡ ಪ್ರಾಚಾರ್ಯರು ಅಗತ್ಯವಾದ ಎಲ್ಲ ನೆರವನ್ನೂ ನೀಡುವ ಭರವಸೆಯೊಂದಿಗೆ ವೇದಿಕೆಗೆ ಪ್ರೊ.ಹಬ್ಬು ಅವರೇ ಸೂಚಿಸಿದ “ಅಭಿನಯ ಮಂಟಪ” ಎಂಬ ಹೆಸರಿನೊಂದಿಗೆ ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಾರಂಬ ಮಾಡಿಸಿದ್ದರು.

ಆರಂಭದ ಎರಡು ವರ್ಷಗಳ ಕಾಲ ಇಂಗ್ಲೀಷ್ ವಿಭಾಗದ ಅಧ್ಯಾಪಕರಾದ ಎಸ್.ಎಸ್.ನಾಯಕ ವೇದಿಕೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರೆ, ಮುಂದಿನ ಹಲವು ವರ್ಷಗಳ ಕಾಲ ನಾನು “ಅಭಿನಯ ಮಂಟಪದ”ದ ಜವಾಬ್ದಾರಿ ವಹಿಸಿಕೊಂಡಿದ್ದೆ.

ಯಕ್ಷಗಾನ ಕಲಿಕೆಗೆ ಅಗತ್ಯವಾದ ಹಿಮ್ಮೇಳದ ವಾದ್ಯಪರಿಕರಗಳಾದ ಮೃದಂಗ, ಚಂಡೆ, ಶೃತಿ ಪೆಟ್ಟಿಗೆ, ತಾಳ ಇತ್ಯಾದಿಗಳನ್ನೆಲ್ಲ ಪೂರೈಸಿಕೊಟ್ಟ ನಮ್ಮ ಪ್ರಾಚಾರ್ಯರು ನಿರ್ದಿಷ್ಟ ದಿನಾಂಕಗಳಲ್ಲಿ ಕಲಿಕೆಯ ವೇಳಾಪತ್ರಿಕೆಯನ್ನು ಸಿದ್ಧಪಡಿಸುವಂತೆ ಮಾಡಿ ತರಬೇತಿ ನೀಡುವ ಭಾಗವತ, ಮದ್ದಳೆಗಾರರ ಸಂಭಾವನೆಗೂ ಆರ್ಥಿಕ ನೆರವನ್ನು ನಿರಂತರವಾಗಿ ಒದಗಿಸಿಕೊಟ್ಟಿದ್ದರು.

ಆರಂಭದ ದಿನಗಳಲ್ಲಿ ಹಿರಿಯರಾದ ಬುದ್ದು ಭಾಗ್ವತ ವಂದಿಗೆ, ಬಾಬಣ್ಣ ಮಾಸ್ತರ ವಂದಿಗೆ, ಕೃಷ್ಣ ಮಾಸ್ಕೇರಿ ಮುಂತಾದ ಮಹನೀಯರು ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕೆಯ ತರಬೇತಿ ನೀಡಿದ್ದರು.

ಇಂದು ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ವೃತ್ತಿಯಲ್ಲಿದ್ದೂ ಹವ್ಯಾಸಿ ಯಕ್ಷಗಾನ ಭಾಗವತರೆಂದು ಹೆಸರು ಮಾಡಿರುವ ಬೊಮ್ಮಯ್ಯ ಗಾಂವಕರ ಹಿತ್ತಲಮಕ್ಕಿ ಅವರು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಇದೇ ಅಭಿನಯ ಮಂಟಪದ ಸದಸ್ಯರಾಗಿ ಮಾರ್ಗದರ್ಶನ ಪಡೆದಿದ್ದರು. ವಿದ್ಯಾರ್ಥಿಯಾಗಿರುವಾಗಲೇ ಗೆಳೆಯರ ಬಳಗದೊಂದಿಗೆ ಯಕ್ಷಗಾನ ಪ್ರದರ್ಶನ ಏರ್ಪಡಿಸುತ್ತಿದ್ದರು. ವಿದ್ಯಾರ್ಥಿ ಭಾಗವತರಾಗಿಯೇ ಬೊಮ್ಮಯ್ಯ ಗಾಂವಕರರು ಕಾಲೇಜಿನಲ್ಲಿ ‘ತಾಳಮದ್ದಲೆ’ ಕಾರ್ಯಕ್ರಮವೊಂದನ್ನು ಸಂಘಟಿಸಿ “ಭೀಷ್ಮ ವಿಜಯ” ಪ್ರಸಂಗವನ್ನು ಸಾದರಪಡಿಸಿದ್ದರು. ಈ ತಾಳಮದ್ದಲೆ ಪ್ರದರ್ಶನದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರೊ. ಕೇ.ವಿ.ನಾಯಕ ಡಾ. ಶ್ರೀಪಾದ ಶೆಟ್ಟಿ ಮತ್ತು ನಾನು ಅರ್ಥಧಾರಿಗಳಾಗಿ ಭಾಗವಹಿಸಿದ್ದೆವು.

ಬೊಮ್ಮಯ್ಯ ಗಾಂವಕರ ತನ್ನ ಗೆಳೆಯರ ಬಳಗದೊಂದಿಗೆ ಸಾದರ ಪಡಿಸಿದ “ರುಕ್ಮಿಣೀ ಸ್ವಯಂವರ” ಎಂಬ ಯಕ್ಷಗಾನ ಪ್ರದರ್ಶನ ಬಹುಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇಂದು ವೃತ್ತಿಯಿಂದ ಪ್ರಸಿದ್ಧ ನ್ಯಾಯವಾದಿಯಾಗಿ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ ಕಾರವಾರದ ನಾಗರಾಜ ನಾಯಕ ನಮ್ಮ ಕಾಲೇಜಿನ ‘ಅಭಿನಯ ಮಂಟಪ’ದ ಸದಸ್ಯರಾಗಿದ್ದರು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಗೆಳೆಯರೊಂದಿಗೆ ಕಾಲೇಜಿನಲ್ಲಿ ಪ್ರದರ್ಶನಗೊಂಡ ‘ಲವ-ಕುಶ’ ಪ್ರಸಂಗದ ಕುಶನ ಪಾತ್ರನಿರ್ವಹಣೆಯಲ್ಲಿ ನಾಗರಾಜ ನಾಯಕ ತೋರಿದ ಕಲಾವಂತಿಕೆಯು ಬಹು ಜನರ ಮೆಚ್ಚುಗೆ ಗಳಿಸಿದ್ದು ಒಂದು ಸುಂದರ ನೆನಪಾಗಿದೆ.

ಸೂರ್ವೆಯ ಶಿಕ್ಷಕ ರಾಜೇಶ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಹೊಸ್ಕೇರಿ ಹೊನ್ನಪ್ಪ ನಾಯಕ, ಶಿಕ್ಷಕರಾಗಿರುವ ಶೀಳ್ಯ ರಮಾನಂದ ನಾಯಕ, ನಿತೀಶ ನಾಯಕ ಮುಂತಾದವರೆಲ್ಲ ಯಕ್ಷರಂಗದಲ್ಲಿ ಹೆಸರು ಮಾಡಿರುವುದಕ್ಕೆ ಕಾಲೇಜಿನ ‘ಅಭಿನಯ ಮಂಟಪ’ ಮಹತ್ವದ ಕೊಡುಗೆ ನೀಡಿದೆ ಎಂದು ನಾನು ಭಾವಿಸಿದ್ದೇನೆ.

ಅಂದಿನ ದಿನಗಳಲ್ಲಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವೆಂದರೆ ಎರಡು ದಿನಗಳ ಉತ್ಸವವೇ ಆಗಿರುತ್ತಿತ್ತು.

ಮೊದಲ ದಿನ ರಾಜ್ಯಮಟ್ಟದ ಖ್ಯಾತ ಸಾಹಿತಿಗಳು ಮುಖ್ಯ ಅಥಿತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ನೀಡುವ ಉಪನ್ಯಾಸ, (ಪಿ.ಲಂಕೇಶ್, ಆಲನಹಳ್ಳಿ ಕೃಷ್ಣ, ಬೀಚಿ, ಶ್ರೀರಂಗ, ವಿ.ಕೃ.ಗೋಕಾಕ್ ಮುಂತಾದವರು) ವಿದ್ಯಾರ್ಥಿಗಳ ಯೂನಿಯನ್/ಜಿಮಖಾನಾ ಪ್ರಶಸ್ತಿಗಳು, ಮೆರಿಟ್ ಪ್ರಶಸ್ತಿ ಪತ್ರಗಳ ವಿತರಣೆ, ಕೊನೆಯಲ್ಲಿ ಕಾಲೇಜಿನ ಕಲಾಮಂಡಲ ಸಾದರಪಡಿಸುವ ಮನರಂಜನೆ ಕಾರ್ಯಕ್ರಮಗಳು ಇರುತ್ತಿದ್ದವು.

ಎರಡನೆಯ ದಿನದ ರಾತ್ರಿಯಿಡೀ ಅಭಿನಯ ಮಂಟಪದ ಕಲಾವಿದರಿಂದ ನಾಟಕ ಮತ್ತು ಯಕ್ಷಗಾನ ಪ್ರದರ್ಶನಗಳು ಇರುತ್ತಿದ್ದವು.

ರಾಜೇಂದ್ರ ನಾಯಕ ಸಗಡಗೇರಿ, ಮನೋಹರ ನಾಯಕ ಜಮಗೋಡ, ತೇಜಸ್ವಿ ನಾಯಕ, ಗೋಕರ್ಣ, ಪೂರ್ಣಿಮಾ ಗಾಂವಕರ, ವಿಶ್ವಭಾರತಿ ನಾಯಕ, ದಾಮೋದರ ನಾಯ್ಕ ಮುಂತಾದ ವಿದ್ಯಾರ್ಥಿ ಕಲಾವಿದರು ನಾಟಕಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಅಧ್ಯಾಪಕರಲ್ಲಿ ಪ್ರೊ. ಹಬ್ಬು, ದಫೇದಾರ, ಎಲ್.ಎನ್. ನಾಯ್ಕ ಮತ್ತು ನಾನು ಪಾತ್ರಧಾರಿಗಳಾಗಿ ವಿದ್ಯಾರ್ಥಿಗಳ ಜೊತೆ ಸೇರುತ್ತಿದ್ದೆವು. ಅಂದು ನಾವು ಪ್ರದರ್ಶಿಸಿದ ‘ಜಾತ್ರೆ’ ‘ಕಂಬನಿ’ ಮುಂತಾದ ನಾಟಕಗಳು ನಮ್ಮೆಲ್ಲರಿಗೂ ಒಳ್ಳೆಯ ಹೆಸರು ತಂದುಕೊಟ್ಟಿದ್ದವು.

೧೯೬೬ ರಿಂದ ಆರಂಭಿಸಿ ಪ್ರಾಚಾರ್ಯ ಕೇ.ಜಿ.ನಾಯ್ಕರು ನಿವೃತ್ತಿ ಹೊಂದಿದ ೧೯೯೧ ರವರೆಗಿನ ಕಾಲಾವಧಿಯಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳೂ ನಿರಂತರವಾಗಿ ನಡೆಯುವಂತೆ ಎಲ್ಲರೂ ಸಹಕಾರ ನೀಡಿ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ತದನಂತರದ ದಿನಗಳಲ್ಲಿ ಈ ಮಹತ್ವದ ವೇದಿಕೆಗಳಲ್ಲಿಯೂ ಕಟ್ಟುನಿಟ್ಟಿನ ಕಾರ್ಯಕ್ರಮ ಸಂಘಟನೆ  ನಡೆಯಲಿಲ್ಲ. ಕಾಲಕ್ರಮೇಣ ನಾವೆಲ್ಲರಿದ್ದೂ ನಮ್ಮ ಕಣ್ಣೆದುರೇ ಈ ಮಹತ್ವದ ವೇದಿಕೆಗಳು ನಿಷ್ಕಿçಯವಾದದ್ದು ಒಂದು ದುರಂತವೆಂದೇ ಹೇಳಬೇಕು.

ಏನಿದ್ದರೂ ಪದವಿ ಮಹಾವಿದ್ಯಾಲಯದಂಥ  ಸಂಸ್ಥೆಯ ಆವರಣದಲ್ಲಿ ಇಂಥ ಮಹತ್ವದ ವೇದಿಕೆಗಳು ಉದಯವಾದದ್ದು ಹಲವು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ನಮ್ಮ ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ತುಂಬಾ ಮಹತ್ವದ ಕೊಡುಗೆ ನೀಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

***************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿ
ದೆ

5 thoughts on “

    1. ನಾನು ಕೂಡ ಅಭಿನಯ ಮಂಟಪದ ಸದಶ್ಯನಾಗಿದ್ದೆ ಎನ್ನಲು ಹೆಮ್ಮೆ ನಾನು ಹೊನ್ನಪ್ಪ ಬುದ್ದು ರವರ ಭಾಗವತಿಕೆಯಲ್ಲಿ ಯುವಜನ ಮೇಳದಲ್ಲಿ 2 ಬಾರಿ ಪ್ರಥಮ ಸ್ಥಾನ ಪಡೆದಿದ್ದವು ಡಾ ಲೋಕಪಾಲ್ ನಮ್ಮನ್ನು ಅಭಿನಂದಿಸಿದ್ದರು ತಮ್ಮ ನಾಯಕತ್ವದಲ್ಲಿ ಕಾಲೇಜಿನಲ್ಲಿ ಭೀಷ್ಮ ವಿಜಯ ಎಮ್ ಎಮ್ ನಾಯಕ ವಿಠೋಬ ನಾಯಕ್ ಹೆಬ್ಬಾರ್ ಸರ್ ಮಾಧವ್ ಪಟಗಾರ ನಾನು ಹೊನ್ನಪ ನಾರಾಯಣ ಭಾವಿಕೇರಿ ನೆನಪಿನಲ್ಲಿ ಉಳಿಯುವ ಘಟನೆಗಳು ಬರಹದ ಮೂಲಕ ನೆನಪಿಸಿದ್ದಕ್ಕೆ ಧನ್ಯವಾದಗಳು ಸರ್

  1. ಅಭಿನಯ ಮಂಟಪ’ ಹೆಸರೇ ಎಷ್ಟು ಚೆನ್ನಾಗಿದೆ..
    ಎಷ್ಟೋ ಪ್ರತಿಭೆಗಳು ಇಲ್ಲಿಂದ ಹೊರಬಂದು ಹೆಚ್ಚಿಸಿಕೊಂಡ ಆತ್ಮವಿಶ್ವಾಸವೇ ಬದುಕಿನ ದಾರಿ ತೋರಿಸಿದ್ದು..
    ಜಿಸಿ.ಕಾಲೇಜಿನ ಭಿತ್ತಿಪತ್ರ’ ವಿಭಾಗ ನನ್ನನ್ನು ಕಾವ್ಯದ ಕಡೆ ಸೆಳೆದದ್ದು.ನಾನು ಕವಿಯಾದದ್ದು ಅಲ್ಲಿಯೇ…
    ನೆನಪೊಂದೇ ಶಾಶ್ವತ..
    ಥ್ಯಾಂಕ್ಯೂ ಸರ್

  2. ತಾವು ಬೆಳೆದ ಪರಿಯ ಕರ್ನಾಟಕ ಸಂಘ ಹಾಗೂ ಕಾಲೇಜಿನ ಸಹೋದ್ಯೋಗಿ ಮಿತ್ರರನ್ನು ಮತ್ತು ಹಿರಿಯ ವಿದ್ಯಾರ್ಥಿಗಳನ್ನು ನೆನೆಯುತ್ತಾ ಪ್ರಾಚಾರ್ಯ ಕೆ.ಜಿ.ನಾಯ್ಕರ ಅವಧಿಯಲ್ಲಿ ಜರುಗಿದ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದ ಕುರಿತಂತೆ ವಿವರಗಳಿಗೆ ಧನ್ಯವಾದಗಳು ಸರ. ಇನ್ನು ಮುಂದೆ ನಿಮ್ಮಿಂದ ಸೇವಾ ಅವಧಿಯ ಅನುಭವ ಬರುವ ನಿರೀಕ್ಷೆ ಕಾದಿರುತ್ತೇವೆ.

Leave a Reply

Back To Top