ಧಾರಾವಾಹಿ

ಆವರ್ತನ

ಅದ್ಯಾಯ-34

500+ Abstract Expressionism Pictures | Download Free Images on Unsplash

                               ಆವರ್ತನ

ಅಧ್ಯಾಯ: 34

ಗುರೂಜಿಯವರು ತಾವು ಮಸಣದ ಗುಡ್ಡೆಯ ನಾಗಬನವನ್ನು ಜೀರ್ಣೋದ್ಧಾರಗೊಳಿಸಲು ಇಚ್ಛಿಸಿದ ಕಾರ್ಯಕ್ಕೆ ಸಂಬಂಧ ಪಟ್ಟ ಹೊಸ ವಿಚಾರವೊಂದನ್ನು ಇತ್ಯಾರ್ಥಗೊಳಿಸಲು ಮನಸ್ಸು ಮಾಡಿ ಫೋನೆತ್ತಿಕೊಂಡವರು, ‘ಓಂ ನಾಗಾಯ ನಮಃ…!’ ಎಂದು ಭಾವಪೂರ್ಣವಾಗಿ ಅಂದು, ‘ನಮಸ್ಕಾರ ರೋಹಿತ್ ಅವರೇ… ನಾವು ಏಕನಾಥ ಗುರೂಜಿಯವರು ಮಾತಾಡ್ತಿರೋದು ಹೇಗಿದ್ದೀರೀ ತಾವು…?’ ಎಂದು ವಿಚಾರಿಸಿದರು.

ರೋಹಿತ್ ಈಶ್ವರಪುರದ ಒಬ್ಬ ಪ್ರಸಿದ್ಧ ಉರಗಪ್ರೇಮಿ. ಅವನು ತನ್ನ ನಾಡಿನ ಅಪೂರ್ವ ಉರಗಸಂತತಿಯನ್ನು ಸಂರಕ್ಷಣೆ ಮಾಡುತ್ತ ಬಂದವನಲ್ಲದೇ ಆ ಸರೀಸೃಪ ಜೀವವರ್ಗಗಳಿಂದ ಪ್ರಕೃತಿಗೂ ಮತ್ತು ಮುಖ್ಯವಾಗಿ ಮಾನವ ಪರಿಸರಕ್ಕೂ ದೊರಕುತ್ತಿರುವಂಥ ವಿವಿಧ ರೂಪದ ಉಪಕಾರಗಳು ಹಾಗೂ ನಿಸರ್ಗದಲ್ಲಿ ಆ ಜೀವರಾಶಿಗಳ ಪಾತ್ರ ಮತ್ತು ಮಹತ್ವಗಳು ಯಾವ ಬಗೆಯವು ಎಂಬಂಥ ಹತ್ತು ಹಲವು ವಿಚಾರಗಳ ಕುರಿತು ಅನೇಕ ವರ್ಷಗಳಿಂದ ಅಧ್ಯಯನ ಮಾಡುತ್ತ ಬಂದವನು. ಜೊತೆಗೆ ಒಂದಷ್ಟು ಜನರ ಪ್ರಕೃತಿ ವಿರೋಧಿ ಚಟುವಟಿಕೆ ಮತ್ತು ಜೀವನಕ್ರಮಗಳಿಂದ ಆಗಾಗ ಘಾಸಿಗೊಳ್ಳುವ ವಿವಿಧ ಜಾತಿಯ ಹಾವುಗಳನ್ನು ತಂದು ಶುಶ್ರೂಷೆ ನೀಡುವ ಸೇವೆಯಲ್ಲೂ ಸಾರ್ಥಕತೆಯನ್ನು ಕಾಣುತ್ತಿರುವವನು. ಅಷ್ಟಲ್ಲದೇ ಹಾವುಗಳು ಮತ್ತವುಗಳ ಮೇಲಿನ ಜನರ ನಂಬಿಕೆಗಳು ಹಾಗೂ ವಿಶೇಷತೆಗಳ ಕುರಿತು ಪತ್ರಿಕೆಗಳಿಗೂ ನಿರಂತರ ಬರೆಯುತ್ತ ಜನಜಾಗ್ರತಿ ಮೂಡಿಸುತ್ತ ಬರುತ್ತಿರುವವನು.ಹೀಗಾಗಿ ಅವನಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಮತ್ತು ಜನರ ಪ್ರೀತಿ, ಬೆಂಬಲಗಳೂ ಸಹಜವಾಗಿಯೇ ಒಲಿದು ಬಂದಿದ್ದವು.ಗುರೂಜಿಯವರಿಗೆ ರೋಹಿತ್‍ನ ಈ ಎಲ್ಲ ಕಾರ್ಯ ಚಟುವಟಿಕೆಗಳ ಕುರಿತು ಚೆನ್ನಾಗಿ ತಿಳಿದಿತ್ತು.ಹಾಗಾಗಿ ಅವರಿಂದು ಅವನನ್ನು ಪರಿಚಯಿಸಿಕೊಳ್ಳಲಿಚ್ಛಿಸಿ ಶಂಕರನಿಂದ ಫೋನ್ ನಂಬರ್ ಪಡೆದುಕೊಂಡು ಕರೆ ಮಾಡಿದ್ದರು.ಅತ್ತಲಿಂದ ರೋಹಿತನೂ ಕರೆ ಸ್ವೀಕರಿಸಿದ. ಅವನಿಗೂ ಗುರೂಜಿಯವರ ಕುರಿತು ತಿಳಿದಿತ್ತು.ಹಾಗಾಗಿ ಅವರೊಡನೆ ಮಾತಾಡುವ ಆಸಕ್ತಿ ಉಂಟಾಗದಿದ್ದರೂ ಶಿಷ್ಟಾಚಾರಕ್ಕೆ, ‘ನಮಸ್ಕಾರ ಸರ್ ಹೇಳಿ…?’ ಎಂದ.

‘ಏನಿಲ್ಲ ರೋಹಿತರೇ, ನಿಮ್ಮ ಬಗ್ಗೆ ಬಹಳಷ್ಟು ಕೇಳಿದ್ದೇವೆ ಮತ್ತು ಓದಿದ್ದೇವೆ.ಪ್ರಕೃತಿಗೂ ನಾಗಸಂತತಿಗೂ ನೀವು ಮಾಡುತ್ತಿರುವ ಸೇವೆ ನಿಜಕ್ಕೂ ಶ್ರೇಷ್ಠವಾದದ್ದು.ಆ ಸುಬ್ರಹ್ಮಣ್ಯ ಮತ್ತು ಆದಿಶೇಷರ ಆಶೀರ್ವಾದಗಳು ಸದಾ ನಿಮ್ಮ ಮೇಲಿರುತ್ತವೆ.ಹಾಗಾಗಿಯೇ ನೀವಿಂದು ನಮ್ಮ ರಾಜ್ಯದ್ಯಂತ ಪ್ರಸಿದ್ಧಿ ಪಡೆದಿದ್ದೀರಿ…!’ ಎಂದು ಹೊಗಳಿದರು.

ರೋಹಿತ್‍ಗೆ ಮುಜುಗರವಾಯಿತು.‘ಹಾಗೇನಿಲ್ಲ ಸರ್.ನಾನೂ ಎಲ್ಲರಂತೆಯೇ ಬದುಕುತ್ತಿರುವವನು.ಆದರೆ ಜೀವನವೆಂದ ಮೇಲೆ ಅದಕ್ಕೊಂದು ಚಟುವಟಿಕೆ ಮತ್ತು ಅರ್ಥವಿರಬೇಕೆಂದು ಅನ್ನಿಸಿದ್ದರಿಂದ ಈ ಹವ್ಯಾಸಕ್ಕೆ ಅಂಟಿಕೊಂಡೆ.ನೀವು ಹೇಳಿದಂತೆ ನನ್ನ ಕಾಯಕಕ್ಕೆ ದೇವರ ಆಶೀರ್ವಾದವೂ ದೊರಕಿರುವುದು ನನ್ನ ಪುಣ್ಯ. ಹ್ಞಾಂ! ಹಾಗಂತ ನನ್ನದೇನೂ ನಿಸ್ವಾರ್ಥ ಸೇವೆಯಲ್ಲ ಸರ್.ನನ್ನ ಕುಟುಂಬ ನಿರ್ವಹಣೆಗೆ ಅದೆಷ್ಟು ಬೇಕೋ ಅಷ್ಟನ್ನು ನನ್ನ ಹವ್ಯಾಸವೇ ಒದಗಿಸುತ್ತಿದೆ.ನಿಮ್ಮ ಹಾರೈಕೆಗೆ ಥ್ಯಾಂಕ್ಸ್!’ ಎಂದ.

‘ಅರೆರೇ, ಹಾಗಲ್ಲ ರೋಹಿತರೇ…! ನಿಮ್ಮ ಹವ್ಯಾಸವನ್ನು ನೀವು ಅಷ್ಟೊಂದು ಹಗುರವಾಗಿ ಭಾವಿಸಬೇಡಿ ಮತ್ತು ನಿಮ್ಮ ಕಾರ್ಯಕ್ಷೇತ್ರ ನಿಮ್ಮದೇ ಆಯ್ಕೆ ಎಂದು ಕೂಡಾ ತಿಳಿಯಬೇಡಿ. ಅದೆಲ್ಲ ನೀವು ನಿಮ್ಮ ಪೂರ್ವಜನ್ಮದಲ್ಲಿ ಮಾಡಿದ ಸತ್ಕಾರ್ಯದ ಫಲವೇ ಸರಿ! ಆದ್ದರಿಂದಲೇ ನಿಮ್ಮ ಸೇವೆಯನ್ನು ಎಲ್ಲರೂ ಹೊಗಳುವಂತಾಗಿರುವುದು! ಅಲ್ಲದೇ ಇನ್ನೊಂದು ಮಾತನ್ನೂ ಹೇಳುತ್ತೇವೆ ಕೇಳಿ. ಹಾವು ಹಿಡಿಯುವವರು ಬೇಕಾದಷ್ಟು ಜನ ಸಿಗುತ್ತಾರೆ ರೋಹಿತರೇ! ಆದರೆ ನಿಮ್ಮಂತೆ ಆ ಜೀವಿಗಳ ಮೇಲೆ ನಿಜವಾದ ಪೀತಿ ಮತ್ತು ಕಾಳಜಿಯಿಟ್ಟುಕೊಂಡು ಅವುಗಳೊಂದಿಗೇ ಬದುಕುವುದಿದೆಯಲ್ಲ ಅದು ಎಲ್ಲರಿಂದಲೂ ಸಾಧ್ಯವಾಗುವಂಥದ್ದಲ್ಲ. ಅದಕ್ಕೆ ಭಾರಿ ಧೈರ್ಯವೂ ಸಾಹಸವೂ ಬೇಕಾಗುತ್ತದೆ. ಅದೆಲ್ಲ ನಿಮ್ಮಲ್ಲಿದೆ.ಹಾವುಗಳ ಕುರಿತು ನೀವು ಜನರಲ್ಲಿರುವ ಅಜ್ಞಾನವನ್ನು ನಿವಾರಿಸುವಂಥ ಉಪನ್ಯಾಸಗಳನ್ನೂ ನೀಡುತ್ತಿರುವುದನ್ನು ಗಮನಿಸುತ್ತಿದ್ದೇವೆ.ಹಾಗಾಗಿಯೇ ಇವತ್ತು ನಿಮ್ಮೊಂದಿಗೆ ಮಾತಾಡಲು ನಮಗೆ ಮನಸ್ಸಾದುದು.ನಾವು ನಿಮ್ಮನ್ನು ಹೊಗಳಿದೆವು ಅಂತ ದಯವಿಟ್ಟು ಭಾವಿಸಬೇಡಿ!’ ಎಂದು ಗುರೂಜಿಯವರು ಅವನ ಮನಸ್ಸಿಗೆ ನಾಟುವಂತೆಯೂ ಮತ್ತು ತಮ್ಮ ಬಗ್ಗೆ ಅವನಲ್ಲಿ ಸದಾಭಿಪ್ರಾಯ ಮೂಡುವಂತೆಯೂ ಮಾತಾಡಿದರು. ಆದರೆ ಅವನ ಹವ್ಯಾಸ ಹಾಗೂ ಆ ಕುರಿತು ಅವನ ಜ್ಞಾನವನ್ನು ತಿಳಿದಿದ್ದ ಊರಿನ ಬಹುತೇಕರು ಒಂದಲ್ಲ ಒಂದು ಸಂದರ್ಭದಲ್ಲಿ ಅವನನ್ನು ಇದೇ ರೀತಿ ಪ್ರಶಂಸಿಸುತ್ತ ಬರುತ್ತಿದ್ದುದರಿಂದ ಇಂದು ಗುರೂಜಿಯವರ ಮಾತಿನಿಂದ ಅವನಿಗೆ ಖುಷಿಯೊಂದಿಗೆ ಅತೀವ ಸಂಕೋಚವೂ ಮೂಡಿತು. ‘ಎಲ್ಲಾ ತಮ್ಮಂಥವರ ಆಶೀರ್ವಾದ ಸರ್…!’ ಎಂದಷ್ಟೇ ಹೇಳಿ ಸುಮ್ಮನಾದ.

‘ನಮ್ಮ ಆಶೀರ್ವಾದ ಮತ್ತು ಹಾರೈಕೆಗಳು ಸದಾ ನಿಮ್ಮೊಂದಿಗೆ ಇರುತ್ತವೆ ರೋಹಿತರೇ.ಯಾಕೆಂದರೆ ನಾವು ಕೂಡಾ ನಿಮ್ಮ ಹಾಗೆಯೇ ಬೇರೊಂದು ರೀತಿಯಲ್ಲಿ ನಾಗನ ಸೇವೆ ಮಾಡುತ್ತ ಬರುತ್ತಿರುವವರು.ಆ ಸೇವೆಯಲ್ಲಿ ಸಿಗುವ ಒಂದು ಸಣ್ಣ ಮೊತ್ತವನ್ನು ನಿಮ್ಮಂಥವರ ಸತ್ಕಾರ್ಯಕ್ಕೂ ವಿನಿಯೋಗಿಸಬೇಕೆಂಬುದು ನಮ್ಮ ಬಹಳ ದಿನದ ಆಸೆಯಾಗಿತ್ತು.ಹಾಗಾಗಿ ನಿಮ್ಮನ್ನೊಮ್ಮೆ ಭೇಟಿಯಾಗಬೇಕು.ಅದಕ್ಕೆ ಯಾವಾಗ ಬರಬಹುದು ನಾವು…?’ ಎಂದರು ಆತ್ಮೀಯವಾಗಿ.ಆದರೆ ಅಷ್ಟು ಕೇಳಿದ ರೋಹಿತ್‍ನಿಗೆ ಪೇಚಾಟಕ್ಕಿಟ್ಟುಕೊಂಡಿತು.

ಆದರೂ ಸಂಭಾಳಿಸಿಕೊಂಡವನು, ‘ಅಯ್ಯೋ ಸರ್ ತಾವು ಯಾವತ್ತು ಬೇಕಿದ್ದರೂ ಬರಬಹುದು.ಆದರೆ ನನಗೀಗ ಹಣದ ಅವಶ್ಯಕತೆಯಿಲ್ಲ. ಆ ವಿಷಯದಲ್ಲಿ ದಯವಿಟ್ಟು ಕ್ಷಮಿಸಬೇಕು!’ ಎಂದು ನಯವಾಗಿ ನಿರಾಕರಿಸಿದ. ಅದರಿಂದ ಗುರೂಜಿ ತುಸು ನಿರಾಶರಾದರು.ಆದರೂ ಪ್ರಯತ್ನ ಬಿಡದೆ, ‘ಸರಿ ರೋಹಿತರೇ, ನೀವು ಬಹಳ ಸ್ವಾಭಿಮಾನಿ ಅಂಥ ತಿಳಿಯುತ್ತದೆ.ಹಾಗಾಗಿಯೂ ನಿಮ್ಮನ್ನು ಆದಷ್ಟು ಬೇಗ ಭೇಟಿಯಾಗಲು ಬಯಸುತ್ತೇವೆ.ನಾಳೆ ಬಂದರೆ ಹೇಗೆ…?’ ಎಂದು ಅಮಾಯಕರಂತೆ ಪ್ರಶ್ನಿಸಿದರು.

‘ಖಂಡಿತವಾಗಿಯೂ ಬನ್ನಿ ಸರ್..!’ ಎಂದ ರೋಹಿತ್.

ಗುರೂಜಿಯವರು ಮರುದಿನ ಮುಂಜಾನೆ ರೋಹಿತ್‍ಗೆ ಕರೆ ಮಾಡಿ ತಾವು ಹೊರಟಿರುವುದನ್ನು ತಿಳಿಸಿದರು.ಯಾವುದಕ್ಕೂ ಘನತೆಗಿರಲಿ ಎಂದುಕೊಂಡು ಒಬ್ಬ ಸಹಾಯಕನನ್ನೂ ಕರೆದುಕೊಂಡು ದೊಡ್ಡ ಟ್ಯಾಕ್ಸಿಯೊಂದರಲ್ಲಿ ರೋಹಿತ್‍ನ ಮನೆಗೆ ಹೋದರು. ಗುರೂಜಿಯವರ ವೇಷ ಭೂಷಣವನ್ನೂ, ಮತ್ತವರ ಎದೆಯ ಮೇಲೆ ತೂಗಾಡುತ್ತಿದ್ದ ವಿವಿಧ ದೇವತಾ ಮೂರ್ತಿಗಳಿದ್ದ ಅನೇಕ ಮಾಲೆಗಳನ್ನೂ ಕಂಡ ರೋಹಿತ್ ಕಸಿವಿಸಿಯಾಗಿಬಿಟ್ಟ. ಆದರೂ ತನ್ನ ಪುಟ್ಟ ಮನೆಗೆ ಅವರನ್ನು ಆದರದಿಂದ ಸ್ವಾಗತಿಸಿದ. ಅಂಗಳದಲ್ಲಿಯೇ ಕುರ್ಚಿಗಳನ್ನು ಹಾಕಿ ಅವರನ್ನು ಕುಳ್ಳಿರಿಸಿ ಕುಶಲೋಪರಿ ವಿಚಾರಿಸಿದ. ಗುರೂಜಿಯವರು ಸರಳ ಸಜ್ಜನಿಕೆಯ ಮೂರ್ತಿಯಂತೆ ಅವನೆದುರು ಕುಳಿತು ಮಾತಿಗಿಳಿದರು. ಅವನ ಸಾಧನೆ ಮತ್ತು ಪರಿಶ್ರಮವನ್ನು ಮರಳಿ ಪದೇಪದೇ ಹೊಗಳುತ್ತ ಒಲಿಸಿಕೊಳ್ಳಲು ಪ್ರಯತ್ನಿಸಿದರು.ಅದರಿಂದ ಅವನಿಗೂ ತಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡಿದಂತೆ ಅವರಿಗನ್ನಿಸಿತು.ಹಾಗಾಗಿ ಸುಮಾರು ಹೊತ್ತಿನ ಮಾತುಕತೆಯ ನಂತರ ತಾವು ಬಂದ ವಿಷಯದತ್ತ ಗಮನ ಹರಿಸಿದವರು ತಮ್ಮ ಸಹಾಯಕನಿಗೇನೋ ಸಜ್ಞೆ ಮಾಡಿದರು. ಅವನು ಕೂಡಲೇ ಕಾರಿನತ್ತ ಓಡಿಹೋಗಿ ಒಂದು ದೊಡ್ಡ ಚೀಲವನ್ನು ಹೊತ್ತು ತಂದ. ಅದರೊಳಗಿದ್ದ ಹಿತ್ತಾಳೆಯ ಹರಿವಾಣವನ್ನು ತೆಗೆದಿರಿಸಿದ. ಸೇಬು ಚಿಕ್ಕು ಮೋಸಂಬಿ ಮತ್ತು ಬಾಳೆಹಣ್ಣುಗಳನ್ನು ಆ ಹರಿವಾಣದಲ್ಲಿ ಓಪ್ಪವಾಗಿ ಜೋಡಿಸಿದ. ಗಂಧದ (ಅಕೇಶಿಯಾ ಮರದ ಕೀಸುಳಿಯಿಂದ ತಯಾರಿಸಿ, ತುಸು ಗಂಧದ ಪರಿಮಳವನ್ನು ಅದಕ್ಕೆ ಸಿಂಪಡಿಸಿ ಶ್ರೀಗಂಧದ ಹಾರವೆಂದು ಮಾರಾಟ ಮಾಡುವ ಮಾಲೆ!) ಹಾರವನ್ನೂ ರೇಶ್ಮೆಯ ಶಾಲನ್ನೂ ತೆಗೆದು ಗುರೂಜಿಯವರ ಕೈಗಿತ್ತ. ಆಗ ರೋಹಿತ್‍ಗೆ, ಗುರೂಜಿಯವರು ಸಾಧಕರ ಮನೆ ಬಾಗಿಲಿಗೇ ಬಂದು ಅವರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂಬುದು ಮನವರಿಕೆಯಾಯಿತು. ಅವನು ಸಂಕೋಚದಿಂದ ಹಿಡಿಯಾದ. ಆದರೂ ತನ್ನ ಒಳಮನಸ್ಸು ಆನಂದದಿಂದ ಅರಳಿದ್ದನ್ನೂ ಗಮನಿಸಿದ. ಜೊತೆಗೆ ಈ ಗುರೂಜಿಯವರ ಸನ್ಮಾನವನ್ನು ಸ್ವೀಕರಿಸಬೇಕೋ, ಬಿಡಬೇಕೋ ಎಂಬ ಗೊಂದಲಕ್ಕೂ ಬಿದ್ದ. ಆದರೆ ಅವನ ಯಾವ ಯೋಚನೆಗಳಿಗೂ ಆಸ್ಪದವಿಲ್ಲದಂತೆ ಗುರೂಜಿಯವರು ತಟ್ಟನೆ ಎದ್ದು ನಿಂತರು. ನಗುತ್ತ ಅವನ ಕೊರಳಿಗೆ ಗಂಧದ ಮಾಲೆ ತೊಡಿಸಿ ಫಲಪುಷ್ಪಾದಿಗಳು ತುಂಬಿದ ಹರಿವಾಣವನ್ನು ಅವನ ಮಡಿಲಲ್ಲಿಟ್ಟು ಪ್ರಶಸ್ತಿ ಫಲಕದ ಬದಲಾಗಿ ಕಾವಿ ಬಟ್ಟೆಯ ಸಣ್ಣದೊಂದು ಗಂಟನ್ನು ಅವನ ಕೈಯಲ್ಲಿಟ್ಟು ಪುರಸ್ಕರಿಸಿದರು.

ಗುರೂಜಿಯವರ ಅಭಿಮಾನಕ್ಕೆ ರೋಹಿತ್ ತುಸುಹೊತ್ತು ಮೂಕನಾದ. ಅವರ ಪಾದಗಳೆದುರು ಡೊಗ್ಗಾಲು ಬಿದ್ದು ನಮಸ್ಕರಿಸಿದ. ಗುರೂಜಿಯವರು ಅವನ ಹಿಂತಲೆಗೆ ಹಸ್ತಗಳನ್ನಿಟ್ಟು, ‘ನೂರು ಕಾಲ ಸಮಾಜಸೇವೆ ಮಾಡುತ್ತ ಪ್ರಸಿದ್ಧಿವಂತನಾಗಿ ಬಾಳು!’ ಎಂದು ಹರಸಿದರು. ತಮ್ಮ ಮನೆಗೆ ಧಾರ್ಮಿಕ ಗುರುಗಳೊಬ್ಬರು ಬಂದು ಕುಳಿತುಕೊಂಡು ತಮ್ಮೊಡನೆ ಪ್ರೀತಿಯಿಂದ ಮಾತನಾಡಿದ್ದು ರೋಹಿತ್‍ನ ತಾಯಿಗೆ ಮಠದ ಶ್ರೀ ಸ್ವಾಮಿಗಳೇ ಆಗಮಿಸಿದಷ್ಟು ಆನಂದವಾಗಿದ್ದರೆ ಅವನ ಹೆಂಡತಿಗೂ ಗುರೂಜಿಯವರು, ‘ಪ್ರತಿಯೊಬ್ಬ ಸಾಧಕನ ಯಶಸ್ಸಿನ ಹಿಂದೆ ಅವನ ಹೆಂಡತಿಯ ಪಾತ್ರವೂ ಅಷ್ಟೇ ಮಹತ್ವದ್ದಾಗಿರುತ್ತದೆ!’ ಎಂಬ ಮಾತನ್ನು ಒತ್ತಿ ಹೇಳಿದ್ದು ಮತ್ತು ತಮ್ಮಿಬ್ಬರನ್ನೂ ಅವರು ಯದ್ವಾತದ್ವ ಹೊಗಳಿ ಅಟ್ಟಕೇರಿಸಿ ಆಶೀರ್ವದಿಸಿದ್ದೆಲ್ಲವೂ ಅವಳಿಗೆ ಹೇಳತೀರದಷ್ಟು ಖುಷಿಕೊಟ್ಟಿತ್ತು. ಹಾಗಾಗಿ ಅವರಿಬ್ಬರೂ ಮಕ್ಕಳೊಂದಿಗೆ ಗುರೂಜಿಯವರ ಪಾದಕ್ಕೆ ಸಾಷ್ಟಾಂಗ ಬಿದ್ದು ಎದ್ದವರು ಇವತ್ತಿಗೆ ತಮ್ಮ ಜನ್ಮ ಸಾರ್ಥಕವಾಯಿತು ಎಂದುಕೊಂಡು ರೋಮಾಂಚಿತರಾದರು.ಅವರನ್ನು ಮನದುಂಬಿ ಹರಸಿದ ಗುರೂಜಿಯವರು ತಮ್ಮ ಕೆಲಸವಾಗುತ್ತಲೇ ರೋಹಿತ್‍ನಿಂದ ಬೀಳ್ಗೊಂಡು ಹಿಂದಿರುಗಿದರು.ಅವರು ಹೋದ ಬಳಿಕ ರೋಹಿತ್ ಅವರು ನೀಡಿದ್ದ ಕಾವಿಯ ಗಂಟನ್ನು ಬಿಚ್ಚಿದ. ಅದರಲ್ಲಿ ಒಂದು ಕುಂಕುಮದ ಕಟ್ಟಿನೊಂದಿಗೆ ಹತ್ತು ರೂಪಾಯಿ ನೋಟಿನ ಮೂರು ಕಟ್ಟುಗಳಿದ್ದವು.ಅದನ್ನು ಕಂಡವನಿಗೆ ಹಿಂಸೆಯಾಯಿತು.ಆದರೆ ಅವನಿಗೆ ಹಣದ ಅವಶ್ಯಕತೆ ಇರಲಿಲ್ಲವೆಂದಲ್ಲ. ಹಾವುಗಳ ಶುಶ್ರೂಷೆಗೆ ಬೇಕಾಗುವ ವಿವಿಧ ಔಷಧಿ ಮತ್ತು ಅವನ್ನಿಟ್ಟುಕೊಳ್ಳುವ ಪಂಜರಗಳಿಗೆ ಸದಾ ದುಡ್ಡಿನ ಅಗತ್ಯ ಬೀಳುತ್ತಿತ್ತು. ಆದರೆ ಅದನ್ನು ಅವನು ಎಲ್ಲರಿಂದಲೂ ಸ್ವೀಕರಿಸುತ್ತಿರಲಿಲ್ಲ. ಮೂಕ ಜೀವರಾಶಿಗಳ ಮೇಲೆ ನಿಜವಾದ ಪ್ರೀತಿಯಿದ್ದು ಪ್ರಚಾರದ ಗೀಳಿಲ್ಲದಂಥ ಜನರು ಅವರಾಗಿ ಬಂದು ನೀಡಿದರೆ ಸ್ವೀಕರಿಸುತ್ತಿದ್ದ. ಆದರೂ ಇಂದು ಯಾಕೋ ಅವನಿಗೆ ಈ ಹಣವನ್ನು ಗುರೂಜಿಯವರಿಗೇ ಹಿಂದಿರುಗಿಸಬೇಕು ಎಂದೆನ್ನಿಸಿಬಿಟ್ಟಿತು. ಕೂಡಲೇ ಕರೆ ಮಾಡಿದ.

‘ಹಲೋ ಸರ್, ನಮಸ್ಕಾರ…!’ ಎಂದ.

‘ಓಂ ನಾಗಾಯ ನಮಃ ಹೇಳಿ ರೋಹಿತರೇ…?’ ಎಂದರು ಗುರೂಜಿ.

‘ಸರ್ ತಪ್ಪು ತಿಳಿದುಕೊಳ್ಬೇಡಿ.ತಾವು ನನ್ನ ಮನೆ ಬಾಗಿಲಿಗೇ ಬಂದು ನನ್ನನ್ನು ಗೌರವಿಸಿರುವುದರ ಕುರಿತು ಅಪಾರ ಅಭಿಮಾನವಿದೆ. ಆದರೆ ಅದರೊಂದಿಗೆ ತಾವು ಹಣವನ್ನೂ  ನೀಡಿರುವುದು ನನಗ್ಯಾಕೋ ಸರಿಬರುತ್ತಿಲ್ಲ. ದಯವಿಟ್ಟು ತಾವು ಅದನ್ನು ಹಿಂದೆ ಪಡೆಯಬೇಕು. ಈ ವಿಷಯದ ಕುರಿತು ನಾನು ನಿನ್ನೆಯೇ ತಮಗೆ ತಿಳಿಸಿದ್ದೆ!’ ಎಂದ ನಯವಾಗಿ.

 ಅರೆರೇ, ಇವನೆಂಥ ಹುಚ್ಚನಪ್ಪಾ…? ಕಾಲಬುಡಕ್ಕ ಬಂದಂಥ ಲಕ್ಷ್ಮಿಯನ್ನು ದೂರತಳ್ಳುವ ಇವನಿಗೆ ಇನ್ನೂ ಬದುಕುವ ದಾರಿಯೇ ತಿಳಿದಿಲ್ಲ ಮೂರ್ಖನಿಗೆ!’ ಎಂದು ಮನಸ್ಸಿನಲ್ಲೇ ಬೈದುಕೊಂಡ ಗುರೂಜಿಯವರು, ‘ಅಯ್ಯಯ್ಯೋ ರೋಹಿತರೇ… ನಮ್ಮನ್ನು ತಪ್ಪು ತಿಳಿಯಬೇಡಿ! ನೀವು ತುಂಬಾ ಸ್ವಾಭಿಮಾನಿ ಅಂತ ಗೊತ್ತು.ಹಾಗಾಗಿ ಆ ಹಣವನ್ನು ನಾವು ನಿಮ್ಮ ಸ್ವಂತ ಖರ್ಚಿಗೆಂದು ಕೊಟ್ಟದ್ದಲ್ಲ. ನೀವು ಚಿಕಿತ್ಸೆ ಮಾಡುವ ನಾಗನ ಸಂತತಿಗೆ ನಮ್ಮಿಂದಲೂ ಸ್ವಲ್ಪ ಸಹಾಯವಾಗಲಿ ಅಂತ ಒಂದು ಸಣ್ಣ ಕಾಣಿಕೆಯಷ್ಟೆ.ನಮ್ಮ ಮೇಲೆ ಬೇಸರವಾಗಿದ್ದರೆ ಕ್ಷಮಿಸಿಬೇಕು!’ ಎಂದು ಕೃತಕ ನಮ್ರತೆಯಿಂದ ಮಾತಾಡಿದರು.

ಆಗ ರೋಹಿತ್‍ನಿಗೆ ಏನು ಹೇಳಲೂ ತೋಚಲಿಲ್ಲ. ಆದ್ದರಿಂದ, ‘ಹಾಗಾದರೆ ಸರಿ ಸರ್.ನಿಮ್ಮಿಚ್ಛೆಯಂತೆಯೇ ಆಗಲಿ!’ ಎಂದು ಹೇಳಿ ಸುಮ್ಮನಾದ. ಜೊತೆಗೆ ಗುರೂಜಿಯವರ ಬಣ್ಣದ ಮಾತುಗಳಿಂದ ಅವನಿಗೆ ಅವರ ಮೇಲೆ ಅಭಿಮಾನವೂ ಹೆಚ್ಚಿತು.ಅಂದಿನಿಂದ ಸಮಯ ಸಿಕ್ಕಾಗಲೆಲ್ಲ ಗುರೂಜಿಯವರು ಅವನಿಗೆ ಕರೆ ಮಾಡಿ ಸ್ನೇಹದಿಂದ ಮಾತಾಡುತ್ತಿದ್ದವರು ಒಂದೆರಡು ಬಾರಿ, ‘ನಿಮ್ಮೂರಿನಾಚೆಯೇ ಬರುವುದಿತ್ತು.ಹಾಗೆ ನಿಮ್ಮನ್ನೂ ಮಾತಾಡಿಸಿಕೊಂಡು ಹೋಗುವ ಅಂತ ಮನಸ್ಸಾಯಿತು!’ ಎಂದು ಸುಳ್ಳು ಹೇಳಿ ಭೇಟಿ ಕೊಟ್ಟು ಅವನಿಗೆ ತಮ್ಮ ಮೇಲೆ ಇನ್ನಷ್ಟು ಪ್ರೀತ್ಯಾದರ ಮೂಡುವಂತೆ ವರ್ತಿಸತೊಡಗಿದರು.ಅದರಿಂದ ಅವನೂ ಅವರ ಮೇಲಿನ ಹಿಂದಿನ ಧೋರಣೆಯನ್ನು ತೊರೆದು ಆತ್ಮೀಯವಾಗಿ ಇರತೊಡಗಿದ.

ಇತ್ತ ಮಸಣದಗುಡ್ಡೆಯ ನಾಗಭವನ ಜೀರ್ಣೋದ್ಧಾರದ ಸಮಯವೂ ಸಮೀಪಿಸುತ್ತಿತ್ತು.ಹಾಗಾಗಿ ಗುರೂಜಿಯವರು ಚುರುಕಾದರು.ಇನ್ನು ಸಮಯ ಕಳೆಯಬಾರದು.ರೋಹಿತನಿಗೆ ತಮ್ಮ ಮೇಲೆ ಸಂಪೂರ್ಣ ವಿಶ್ವಾಸ ಬಂದ ಹಾಗಿದೆ. ಕೂಡಲೇ ತಮ್ಮ ಕೆಲಸವನ್ನು ಸಾಧಿಸಬೇಕು! ಎಂದು ಯೋಚಿಸಿದವರು ಆವತ್ತೊಂದು ಮುಂಜಾನೆ ರೋಹಿತ್‍ನ ಮನೆಗೆ ದಿಢೀರ್ ಭೇಟಿಕೊಟ್ಟರು.ರೋಹಿತನೂ ಅವರನ್ನು ಆದರದಿಂದ ಮಾತಾಡಿಸಿದ. ಗುರೂಜಿಯವರು ಇವತ್ತು ಅವನೊಂದಿಗೆ ಹಿಂದೂ ಧರ್ಮ ಮತ್ತು ನಾಗಾರಾಧನೆ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ನಂಬಿಕೆ, ಆಚರಣೆಗಳ ಕುರಿತು ತುಂಬಾ ಹೊತ್ತು ಚರ್ಚಿಸಿದರು. ಅವನೂ ಅವರ ವಿಚಾರಧಾರೆಯನ್ನು ಕೇಳುತ್ತಿದ್ದ ಹಾಗೂ ತನಗೆ ಸರಿ ಅನ್ನಿಸಿದ್ದರ ಕುರಿತು ಅಭಿಮಾನದಿಂದ ತಲೆದೂಗುತ್ತಿದ. ತಪ್ಪು ಅನಿಸಿದ್ದನ್ನು ಪ್ರಶ್ನಿಸುತ್ತ ತನ್ನ ಅಧ್ಯಯನ ಮತ್ತು ಕೆಲವು ನೈಜ ಘಟನೆಗಳ ಮೂಲಕ ಅದಕ್ಕೆ ಸ್ಪಷ್ಟನೆ ನೀಡುತ್ತ ಅವರಿಗೆ ಒತ್ತಾಸೆಯಾಗಿದರೂ ತನ್ನ ವಿಚಾರ ಮತ್ತು ವ್ಯಕ್ತಿತ್ವಕ್ಕೆ ತಕ್ಕಂತೆ ಸ್ವತಂತ್ರವಾಗಿಯೇ ಮಾತನಾಡಿದ. ಹಾಗಾಗಿ ಅವರ ವಿಚಾರ ಮತ್ತು ಮನಸ್ಥಿತಿಗೂ ಇವನ ಸಿದ್ಧಾಂತಕ್ಕೂ ಅಜಗಜಾಂತರ ವ್ಯತ್ಯಾಸವೇಳುತ್ತಿತ್ತು. ಆದರೆ ಅದು ಗುರೂಜಿಯವರಿಗೆ ಬಹಳ ಹಿಂದೆಯೇ ಮನವರಿಕೆಯಾಗಿತ್ತಾದ್ದರಿಂದ ಇವನೊಡನೆ ಹೆಚ್ಚು ಚರ್ಚಿಸುವುದು ಒಳ್ಳೆಯದಲ್ಲ ಎಂದೂ ಅನ್ನಿಸಿತ್ತು.

   ಹೀಗಾಗಿ ಇಂದು ಅವರು ಕೂಡಲೇ ತಮ್ಮ ವಿಷಯವನ್ನು ಬದಲಿಸಿ, ‘ನೀವು ಏನೇ ಹೇಳಿ ರೋಹಿತರೇ, ನಮ್ಮ ಜನರಲ್ಲಿ ಈಗೀಗ ನಮ್ಮ ದೈವ ದೇವರು ಮತ್ತು ಅವಕ್ಕೆ ಸಂಬಂಧಿಸಿದ ನಂಬಿಕೆ, ಸಂಪ್ರದಾಯ, ಆಚರಣೆಗಳ ಮೇಲೆಲ್ಲ ಸ್ವಲ್ಪವೂ ಗೌರವಾಸ್ಥೆಗಳು ಇಲ್ಲವಾಗಿಬಿಟ್ಟಿವೆ. ಅದರಲ್ಲೂ ನಮ್ಮ ನಾಗದೇವರ ಮೇಲಂತೂ ಎಳ್ಳಷ್ಟೂ ಭಯಭಕ್ತಿಯೇ ಇಲ್ಲವೆಂಬಷ್ಟು ನಮ್ಮ ಯುವಜನತೆಯು ಹಾಳಾಗಿಬಿಟ್ಟಿದೆ.ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಅವರೆಲ್ಲರೂ ತಮ್ಮ ಮನಸ್ಥಿತಿಯೊಂದಿಗೆ ಭಾರತೀಯ ಸಂಸ್ಕೃತಿಯನ್ನೂ ಹಾಳುಗೆಡಿಸಿಬಿಟ್ಟಿದ್ದಾರೆ.ಇದನ್ನು ನಾವು ಬಹಳ ಕಾಲದಿಂದಲೂ ಗಮನಿಸುತ್ತ ಬಂದಿದ್ದೇವೆ.ಹಾಗಾಗಿ ಇಂಥದ್ದೊಂದು ಸಮಸ್ಯೆಯನ್ನು ನಮ್ಮಿಂದೇನಾದರೂ ಸರಿಪಡಿಸಲಿಕ್ಕಾದೀತಾ ಅಂತನೂ ಯೋಚಿಸುತ್ತಿದ್ದೆವು.ಹೀಗೊಮ್ಮೆ ಅದಕ್ಕೊಂದು ಸರಳ ದಾರಿಯೂ ಹೊಳೆಯಿತು.ಆದರೇ…!’ ಎಂದ ಗುರೂಜಿಯವರು ಮಾತು ನಿಲ್ಲಿಸಿ ಮೌನವಾದರು.ಅವರ ಮೌನವನ್ನು ಕಂಡ ರೋಹಿತ್, ‘ಹೌದಾ…ಸರ್?ಯಾವ ದಾರಿ ಅದು…?’ ಎಂದ ಉದಾಸೀನದಿಂದ.

(ಮುಂದುವರೆಯುವುದು)


*********************

ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

One thought on “

  1. ಏಕನಾಥ ಗುರೂಜಿಯ ಚಿಂತನೆಯ ಮಟ್ಟ ಬೇರೊಂದು ಗತಿಯಲ್ಲಿ ಸಾಗುತ್ತಿರುವುದನ್ನು ಈ ಅಧ್ಯಾಯದಲ್ಲಿ ಕಾಣಬಹುದು. ರೋಹಿತ್ ನ ಹೊಸ ಪಾತ್ರದ ಪ್ರವೇಶ ಹೊಸದೊಂದು ಮೆರುಗು ನೀಡಿದೆ. ಅಭಿನಂದನೆ ಸರ್

Leave a Reply

Back To Top