ಸೊಪ್ಪಿನ ಸಾಕಮ್ಮ

ಕಾವ್ಯಯಾನ

ಸೊಪ್ಪಿನ ಸಾಕಮ್ಮ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಕೋಳಿ ಕೂಗಿ ಹೊತ್ತು ಮೂಡಿ
ಒಂದೆರಡು ತಾಸಿನ ಮೇಲೆ
ಆ ಸರಹದ್ದಿನ ಬಡಾವಣೆಗಳಲಿ
ಗಲ್ಲಿಗಲ್ಲಿಗಳಿಗೂ
ಮನೆಮನೆಗೂ
ಬಿತ್ತರವಾಗುವ ಕೊರಳ ಸದ್ದು
ಸೊಪ್ಪಿನ ಸಾಕಮ್ಮನದು
ಗಗನ ರಂಗೇರುವ ಹೊತ್ತಿಗೇ ಎದ್ದು
ಕುಕ್ಕೆಯ ಹೊಟ್ಟೆ ತುಂಬ ತುಂಬಿ
ಕೀರೆ ಸಬ್ಬಸಿಗೆ ಮೆಂತ್ಯ ಕೊತ್ತಂಬರಿ
ಕರಿಬೇವು ಪುದೀನ ದಂಟು
ಪಾಲಾಕು ಇನ್ನೂ ಥರಹಾವರಿ
ಸೊಪ್ಪು ಕಂತೆಕಂತೆ
ಜೋಡಿಸಿ ಹಂತಹಂತ
ನೇರ ಕತ್ತಿನ ತಲೆಮೇಲೆ ಹೊತ್ತು
ತನ್ನ ಕರಿಮಣಿ ಕೊರಳಂಥ
ಬಡ ಸೂರಿಂದಾಚೆ
ಜೋಡಿಲ್ಲದ ಕಾಲಿಟ್ಟರೆ
ಮತ್ತೆ ಕೈಲಿ ಖಾಲಿ ಮಂಕರಿ ಹಿಡಿದೆ
ವಾಪಸ್ಸು ಜೋಪಡಿಯತ್ತ

ತಳ್ಳು ಗಾಡಿಯಿಲ್ಲ
ಫುಟ್ಪಾತ್ ನೆಲದಮೇಲಿನ ಹಾಸು
ಅಂಗಡಿಯಿಲ್ಲ
ಆರಕ್ಷಕರ ಕೈಬಿಸಿ ಚಿಂತೆಯಿಲ್ಲ
ಅಂಥ ಇನ್ನಾವ ಥರದ ಜಿಗಣೆ ಕಾಟ
ಸುತರಾಂ ಇಲ್ಲ

ತನ್ನ ತುತ್ತಿನ ಜೊತೆ ಮೂರು
ತಿನ್ನುವ ಸಣ್ಣ ಮರಿಬಾಯಿಗಳು
ಮತ್ತು ಒಂದಿನಿತೂ ಮೈಬಗ್ಗದ
ಕುಡುಕ ಗಂಡ
ಗಂಟಲಿಗಿಳಿಸುವುದೂ
ಸೊಪ್ಪಿನ ಸಾಕಮ್ಮನ ಬೆವರು ಹನಿ!
ಇಂಥ ಅನೇಕ ಕುಟುಂಬ
ನಮ್ಮ ಹೆಮ್ಮೆ!

ಪಾಪ…!
ಪ್ರಥಮ ಲಾಕ್ಡೌನಿನ ಸಮಯ
ಅವಳ ಮೂರು ಕೂಸುಗಳ ಅಪ್ಪ
ನಾಲಗೆಗೆ ಹನಿಗಳಿಲ್ಲದ ಹುಚ್ಚ
ತುಂಬು ನಾಲೆ ಹಾರಿ ನಾಪತ್ತೆ
ಇಂದೋ ಇನ್ನೊಂದೋ ದಿನ
ಎಂಬ ಕುಂಕುಮದ ಬಯಕೆಯೂ
ಅಳಿಸಿ
ಬಾಯ್ಬಡಿದು ತಿಥಿ ಕೂಡ ಆದರೂ
ಪುಟ್ಟ ಅರಿವಿರದ ಕಣ್ಣುಗಳ
ದೃಷ್ಟಿ ಈಗಲೂ ಒಮ್ಮೊಮ್ಮೆ
ಬಾಗಿಲಾಚೆ ಬೀದಿಗುಂಟ
ಮತ್ತು ಹೌದು
ಸಾಕಮ್ಮನದೂ ಆಗೀಗೊಮ್ಮೊಮ್ಮೆ!

ಕಾಯಕ ಕೂಳು ಅರಸಿ
ತನ್ನೂರು ತೊರೆದು
ಮತ್ತೆ ಹಿಂತಿರುಗಲೆಂದು
ಗಡಿಗಳಾಚೆಯಿಂದ ಬಂದವಳಲ್ಲ
ಸೊಪ್ಪಿನ ಸಾಕಮ್ಮ
ಇಲ್ಲೇ ಹುಟ್ಟಿ ಬೆಳೆದ
ನೆಲದ ಮಗಳು!

ತನ್ನ ಹಿತ್ತಲಲಿ ಬೆಳೆದ ಸೊಪ್ಪಲ್ಲ
ದಿನದಿನವೂ ಕೊಂಡು ತಂದದ್ದು
ಈಗ ಈ ಸ್ಥಿತಿಯಲ್ಲಿ
ಎಲ್ಲಿಂದ ತರುವುದು ತನ್ನ ಸರಕು
ಹೊರಗೆಲ್ಲ ಗಸ್ತಿನಲ್ಲಿ
ಹರಿದಾಡುವ ಖಾಕಿ ಸರ್ಪಗಳು
ಬಡ ಮೈಗಳಿಗಷ್ಟೆ ತುಡಿವ ಲಾಠಿಗಳು

ಯಾವ ಅದೆಂಥ ಅಧಿಕಾರಕ್ಕಿದೆ
ಈ ಇಂಥ ‘ಜನವೇ ಅಲ್ಲದ ಜನಕ್ಕೆ’
ತುಡಿವ ಮಿಡಿವ ಎದೆ!
ಎಲ್ಲ ಮಾದರಿಯ ಸರಕಾರಿ
ಕೊಡುಗೆಗಳ ಕೈ ಕೆಳಗೆ
ಹಿಂದೆ ಮುಂದೆ
ಕೊಡು ತಗೋ ಕೊಡು ತಗೋ
ವ್ಯವಹಾರದ ಕುಹಕ ದಂಧೆ!

ಅಯ್ಯೋ…ಸಾಕವ್ವ
ನಿನ್ನ ಬಡಪಾಯಿ ಅಭಿಮಾನದ
ಪೇಟ ಬಿಚ್ಚೆಸೆಯವ್ವ
ನಿನ್ನ ಗೂಡ ಪುಟ್ಟ ಹಕ್ಕಿಗಳ
ಹಸಿದ ಕಿರುಚಿಗೆ ಕಿವಿಯಾಗವ್ವ

ನಿನ್ನ ಸೊಪ್ಪು ಕೊಳ್ಳುವ
ಕೆಲವೇ ಕೆಲವು
ಎದೆಯುಳ್ಳವರಾದರು ಈ ಕ್ಷಣ
ಇಲ್ಲ ಎನ್ನದೆ ನಿನ್ನ ಕೈ ಹಿಡಿವರು
ನೆನಪಿರಲಿ
ಸಮಯ ಹೀಗೇ ಇರದು
ನಿನಗೂ ಸಹ!

***********

3 thoughts on “ಸೊಪ್ಪಿನ ಸಾಕಮ್ಮ

  1. Kavana,Saralvaaggi,naijateinda koodi bandide.
    Obba dinanitya soppumaruvavala Chitra
    Idaagide
    Jotege obba maglu Tanna Shaleya ‘notes’ annu angadiyalle baredu oodi ‘pass’ maadiddare Kavana innoo
    parinaamakaariyaagiyoo
    mattu sahaja vaagiruttittu endu Nanna anisike.
    Badatanada naija Chitranavannu katti kottiddakke vanddranegalu.
    Dr DamodarK.P
    9620680828.
    Bengaluru.

  2. ಈ ಕವಿತೆ ಬಹಳ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು

Leave a Reply

Back To Top