ಡಾ. ಸದಾಶಿವ ದೊಡಮನಿಯವರ
ಹೊಸ ಕವಿತೆಗಳು
ಪ್ರೇಮ ಭಿಕ್ಷು
ಏನು ಕೇಳಿದೆ ನೀನು
‘ಹಿಡಿ ಪ್ರೀತಿ’ಯೇ?
‘ಹಿಡಿ’ ಹಾಗಾದರೆ
ಹೃದಯ ಕಡಲಲ್ಲಿ ಹಾಕಿ
ಅದೇ ಪ್ರೀತಿ ಕಡಗೋಲಿಲೆ ಮಥಿಸಿ ಮಥಿಸಿ
ಹಂಚು ಮನ ಮನೆಗೆ
ಏನು ಕೇಳಿದೆ ನೀನು
‘ಹಿಡಿ ಪ್ರೀತಿ’ಯೇ?
ಹೃದಯ ತುಂಬಿ ತಂದಿರುವೆ
ಅಳತೆ ಮಾಡದೇ ತೆಗೆದುಕೋ
ಅದೇ ಉಣ್ಣು, ಉಣಿಸು
ಮುಚ್ಚಿಡಬೇಡ
ಗೆದ್ದಲು ಹತ್ತುತ್ತದೆ
ಹಂಚು ಪರರಿಗೆ
ಅಳತೆ ಮಾಡದೆ
ಏನು ಕೇಳಿದೆ ನೀನು
ಹಿಡಿ ಪ್ರೀತಿಯೇ?
ಹಿಡಿ ತೆಗೆದುಕೋ
ಅನ್ನಕ್ಕೆ, ಧನಕ್ಕೆ ಬಡತನವಿರಬಹುದು
ಪ್ರೀತಿಗೆ ಬಡತನವೇ?
ಎಂದೂ ಬಾರದು
ಹಂಚಿದಷ್ಟು ಬೆಳೆಯುವುದು
ಅದೇ ಪ್ರೀತಿಯ ಗುಣವು
ಪ್ರೀತಿಯೇ ಬೇಡು, ಪ್ರೀತಿಯೇ ಹಂಚು
ಎಂದೆಂದಿಗೂ
ಜಗದಲಿ ಇರುವುದು
ಎಂದೆಂದಿಗೂ ಒಂದೇ
ಅದೇ ಪ್ರೀತಿಯ ಹುಡಿ
ಅದರಲ್ಲೇ ಹೃದಯ ಬಿದ್ದು ಹೊರಳಾಡಲಿ
ಬಿಟ್ಟು ಬಿಡು
ಹೃದಯ ಅಂಟಿದ ಪ್ರೀತಿ ಹುಡಿಯ
ಪ್ರತಿ ಹೃದಯಕೆ
ಮುಡಿಸುತ್ತಲೇ ಸಾಗು ನೀ
ಆಗುವೆ ಕೊನೆಗೆ ನೀ ಪ್ರೇಮ ಭಿಕ್ಷು,
ಜಗದ ಅಕ್ಷು
ಅಪೂರ್ವ
ನೀನು ಬಂದಾಗಿನಿಂದಲೂಏನೋ ಒಂದು ತರಹದ ಕಳೆ ಕೆನೆಗಟ್ಟಿದೆ
ಮಗಳೇ
ಮನ- ಮನೆಯೊಳಗೆ
ನಿನ್ನ ಅಳು, ನಗು ಗಾನದಂತಿದೆ!
ನಿನ್ನ ಗಾಜುಗಣ್ಣೋಟದ ಮುಂದೆ ದೀಪಗಳೂ
ಡಲ್ಲು ಹೊಡೆಯುತ್ತಿವೆ
ನಮ್ಮಲ್ಲಿ ಉತ್ಸಾಹ ಇಮ್ಮಡಿಗೊಳಿಸಿವೆ
ಅಕ್ಷರಾ-ಸಂಸ್ಕೃತಿಗೆ ಅಕ್ಕರೆಯ ಬೊಂಬೆ ಸಿಕ್ಕಂತಾಗಿದೆ!
ಆಟ, ಊಟವ ಮರೆತು ತಂಗಿಯ ಆಟ, ನೋಟ ನೋಡುವುದೇ ಹಬ್ಬವಾಗಿದೆ ಅವರ ಮನಕೆ
ಹೆಸರಿಡಲು ಫೇಸ್ ಬುಕ್ ದಲಿ ಹೆಸರು ಸೂಚಿಸಲು ಕೋರಿದರೆ,
ಸ್ನೇಹಿತರು ತರತರದ ನಾಮವ ಸೂಚಿಸಿ, ಶುಭವ ಕೋರಿಹರು ನಿನಗೆ
ಅತ್ತೆ, ಮಾವ, ಚಿಕ್ಕಿಯರೂ ಹೇಳಿಹರು ಹೆಸರು ಒಂದರ ಮೇಲೊಂದರಂತೆ
ಸಂಭ್ರಮವೇ ಹಾಸಿ ಮಲಗಿದೆ ಮಗಳೇ ಎದೆಗೂಡಲ್ಲಿ
ಬೆಚ್ಚಗೆ
ನೀ ಬಂದ ಕ್ಷಣವೇ ನಮ್ಮೊಳಲೊಬ್ಬಳಾಗಿ
ಬೆರೆತು ಹೋದೆ
ಹೆಸರಿಟ್ಟು ಕರೆಯುವುದೊಂದೇ ಬಾಕಿ ಉಳಿದಿದೆ
ಹೀಗೆಯೇ ನಗುನಗುತ, ನಮ್ಮ ನಲಿಸುತ ಇರು ಮಗಳೆ
ನಮ್ಮೊಂದಿಗೆ
ಶುಭದ ನೆರಳಿರಲಿ ನಿನ್ನ ಬೆನ್ನು, ನೆತ್ತಿಗೆ
***************
ಚೆಂದದ ಕವಿತೆಗಳು ಸರ್.
ಮುಂದುವರಿಯಲಿ.
ಹಾಗೆಯೇ ಅಭಿನಂದನೆಗಳು ಮಗಳ ಹೆಮ್ಮೆಗೆ
ಧನ್ಯವಾದಗಳು ತಮಗೆ…