ಇಂಟರ್ ಲಾಕ್‌ ಅಂಗಳ

ಕಾವ್ಯಯಾನ

ಇಂಟರ್ ಲಾಕ್‌ ಅಂಗಳ

ಬಾಲಕೃಷ್ಣ ದೇವನಮನೆ

ಮಳೆಗಾಲ ಮುಗಿದು
ಗದ್ದೆ ಕೊಯ್ಲಿನ ಬೆನ್ನಲ್ಲೇ
ಗದ್ದೆ ಮಣ್ಣೋ, ಬೆಟ್ಟದ ಕೆಮ್ಮಣ್ಣೋ
ಮನೆ ಮುಂದೆ ವಾರಗಟ್ಟಲೆ ಮೆತ್ತಿ
ಹಳ್ಳದಂಚಿಂದ ತಂದ ಸಪಾಟು ಕಲ್ಲಲ್ಲಿ
ನೆಲದ ಮೈ ಉಜ್ಜಿ ಉಜ್ಜಿ
ತಾಯಂದಿರು ಮದುವೆ ನೆನಪಲಿ ನಾಚಿ
ಧಾರೆ‌ ಸೀರೆಯಷ್ಟೇ ನಯಗೊಳಿಸಿ
ಸಗಣಿ ಸಾರಿಸಿ
ಶೇಡಿ ಪಟ್ಟೆ ಹಲಿ ತೆಗೆದು ಚಂದಗೊಳಿಸುವ
ಅಂಗಳ ಎಲ್ಲಿ ಹೋದವು?

ಮನೆ ಮುಂದಿನ‌ ಅಂಗಳಕ್ಕೆ
ನೇಯ್ದ ಮಡ್ಲಿನ ಚಪ್ಪರ
ಸೆಕೆಗೆ ಬಯಲ ಗಾಳಿಗೆ ಮೈಯೊಡ್ಡಲು
ಅಂಗಳದಲ್ಲೇ ಚಾಪೆ ಹಾಸಿ ಮಲಗಿ
ಚಪ್ಪರ ತೂತಿಂದ‌ ತೂರಿ ಬರುವ
ಬೆಳದಿಂಗಳ ಜೊತೆ ನಕ್ಷತ್ರ ಎಣಿಸುವಾಗ
ಅಮ್ಮಂದಿರ ಚಂದಮಾಮ ಕತೆಗಳು
ಕಣ್ಣಲ್ಲಿ ಕುಣಿವಾಗಲೇ
ಸೆರಗು ಮುಚ್ಚುವ ನಿದಿರೆ
ನಸುಕಿನ ಕೋಳಿ ಕೂಗಿಗೆ
ಮಗ್ಗಲು ಮುರಿದೇಳುವ ಬೆಳಗು…
ಎಲ್ಲಿ ಹೋದವು?

ಮನೆ ಮುಂದೆ‌
ತಗಡಿನ‌ ಶೀಟ್ ಛಾವಣಿ ಹೊದ್ದು
ಬೆಚ್ಚಗೆ ಮಲಗಿದ ಇಂಟರ್ ಲಾಕ್ ಅಂಗಳ
ಮನೆ ಮಂದಿಗೆ
ಕೋಣೆಯೊಳಗೆ ಎಸಿ ಹಾಕಿ ಲಾಕ್ ಮಾಡಿದೆ
ಅಂಗಳಕೆ ಇರುಳ ಚುಕ್ಕಿ ಎಣಿಸುವ
ಕನಸುಗಳೇ ಬೀಳುತ್ತಿಲ್ಲಾ…!

***********************

Leave a Reply

Back To Top