ಗಜಲ್
ಅಶೋಕ ಬಾಬು ಟೇಕಲ್
ಒಳ ಸುಳಿಯೊಂದು ಇಣುಕಿ ಅಣಕಿಸುತ್ತಿದೆ ಅಂಜಬೇಡ
ಒಳ ಬೇಗುದಿಯೊಂದು ಕರುಳು ಕಿವುಚುತ್ತಿದೆ ಅಂಜಬೇಡ
ನಡು ರಾತ್ರಿ ಬಿದ್ದ ಕನಸುಗಳಿಗೂ ಆಗಾಗ ಜೀವ ಬರುವುದು
ಸಮಯ ಸಾಧಕ ಗೊಂಬೆ ಹೊತ್ತು ಹೊರಳಿಸುತ್ತಿದೆ ಅಂಜಬೇಡ
ನೀ ಸಾಗುವ ಹಾದಿಗೆ ಕಲ್ಲು ಮುಳ್ಳುಗಳ ರತ್ನಗಂಬಳಿ ಹಾಸುವರು
ಹಸಿದು ಬಿರಿದ ಕಣ್ಣು ನೆತ್ತರಿಗೆ ನಾಲಿಗೆ ಚಾಚುತ್ತಿದೆ ಅಂಜಬೇಡ
ಅಮಾವಾಸ್ಯೆ ಆಭೀಲ ಛಾಯೆಗೆ ಚಂದ್ರ ಮರೆಯಾಗಿರಬಹುದು
ಜಗದಗಲ ನಸುನಗಲು ಶಶಿಗೂ ಕಾಲ ಪಕ್ವವಾಗುತ್ತಿದೆ ಅಂಜಬೇಡ
ಮೊಸರಲಿ ಕಲ್ಲು ಹುಡುಕಲು ದೊಂದಿ ಹಿಡಿಯುವರು ಧೂರ್ತರು
ಅಬಾಟೇ ನಿನ್ನ ಧುರೀಣತೆಯೇ ಧೂಪವಾಗುತ್ತಿದೆ ಅಂಜಬೇಡ
ಆಭೀಲ. ಭಯಂಕರ
ದೊಂದಿ – ಪಂಜು, ಹಿಲಾಲು
ಧೂಪ- ಸಾಂಬ್ರಾಣಿ
ಧುರೀಣತೆ- ಕಾರ್ಯಕೌಶಲ
**********************************
ಚಂದದ ಅಭಿವ್ಯಕ್ತಿ..
ಆತ್ಮೀಯ ಧನ್ಯವಾದಗಳು ಸುಜಾತ ಲಕ್ಮನೆ ಮೇಡಂ..