ಕಾವ್ಯಯಾನ
ನೋವುಗಳೆ ಲಾಲಿ
ಶಾಲಿನಿ ಆರ್.
ನನ್ನ ನೋವುಗಳೇ
ನನ್ನೊಳಗೆ ಲಾಲಿ ಹಾಡುತ್ತಿವೆ
ಸ್ತಬ್ಧವಾಗಿ ಮಿಡುಕದೆ
ಮೌನದಾಲಾಪನೆಗೆ
ಕಾರುಣ್ಯವಿರಿಸಿ
ಅರಿವಿಲ್ಲದಾ ತಾರುಮಾರಿನ
ಸಂತೆಯೊಳಗೆ ಭಿಕರಿಯಾಗದಂತೆ
ಮೋಸ ಮಾಡದಂತೆ
ಅವುಡುಗಚ್ಚಿ ಕುಳಿತಿವೆ
ಚಳಿಮಳೆಗೆ ರಮಿಸಿ
ಬಯಲ ಸಿಡಿಲಿಗೆ
ಬಸವಳಿದ ನಂಟಿಗೆ
ನನ್ನೊಳಗೆ ಲಾಲಿ ಹಾಡುತಿವೆ,
ನನಸಾಗದ ಕನಸ
ಕ್ಯಾನ್ವಸ್ಸಿಗೆ ಹಸಿರ
ಬಣ್ಣ ಹುಡುಕುತ
ಚಿಗುರಿನ ಆಸರೆಯಲಿ
ಮುಳ್ಳು ಕೊನೆ ನಗುತ
ನಾಳಿನ ಜಾವಕೆ
ಕರಿಮೋಡ ಕಾನನದ
ತುಂಬ ಹುಸಿ ಮಳೆ
ತುಂಬಿದಂತೆ ನೋವು
ತುಟಿಯಂಚಿನ ಕೊನೆಗೆ
ಹುಸಿ ನಗೆಯನಿರಿಸಿ
ನನ್ನೊಳಗೆ ಲಾಲಿ ಹಾಡುತಿವೆ,
ನೋವಿನ ಭಾರ
ಹೊತ್ತ ಮನಕೆ
ಬತ್ತಲಾಗುವಿಕೆಯ
ಭಯವಿಲ್ಲ ಶಬ್ಧವಿಲ್ಲ
ತಪ್ತ ಮನದಲಿ
ಮೌನವೇ ಬೆಲ್ಲ
ಶಬ್ಧವೊಡೆದರೆ
ನಿಶಬ್ಧಕೆ ಬೆಲೆಯಿಲ್ಲ
ಮೌನದ ಮೆರವಣಿಗೆಯಲಿ
ಸಿಂಗಾರಗೊಂಡ ಮಾತುಗಳ
ಮದುವೆ ದಿಬ್ಬಣ
ಮಮತೆಯಲಿ ಕನಲಿ
ನೋವು ಮೈದಡವಿ
ನನ್ನೊಳಗೆ ಲಾಲಿ ಹಾಡುತಿವೆ…
****************