ಕಾವ್ಯಯಾನ
ಬಾಲ್ಯವೆಂದರೆ
ಶಂಕರಾನಂದ ಹೆಬ್ಬಾಳ
ಬಾಲ್ಯವೆಂದರೆ ಹಾಗೆ
ಒಮ್ಮೆ ಜಂಗಿಕುಸ್ತಿ ಕಾದಾಟ
ಮತ್ತೊಮ್ಮೆ ಹೆಗಲ ಮೇಲೆ ಕೈ
ಮಗದೊಮ್ಮೆ ಸಾಂತ್ವನ
ಬಾಲ್ಯವೆಂದರೆ ಹಾಗೆ
ಮತಿಯು ತಿಳಿಯದ
ವಯಸ್ಸಿನಲ್ಲಿ
ಆಡಿದ್ದೆ ಆಟ
ಹೂಡಿದ್ದೆ ಹೂಟ
ಬಾಲ್ಯವೆಂದರೆ ಹಾಗೆ
ಗುಂಪಕಟ್ಟುವದು
ಏಕಾಂಗಿಯಾಗುವದು
ಜಗಳ ಜೋಟಿ
ಬಾಲ್ಯವೆಂದರೆ ಹಾಗೆ
ಹೆಣ್ಣುಗಂಡೆಂಬ ಬೇಧ
ಇನಿತು ಇಲ್ಲ
ಒಂದಾಗಿ ಕೂಡಿ
ನಕ್ಕು ನಲಿಯುವ ವಯಸ್ಸು
ಬಾಲ್ಯವೆಂದರೆ ಹಾಗೆ
ಬರಿ ಸಂತಸದ ಚಣಗಳೆ
ನಮ್ಮವರು ಅಗಲಿದಾಗ
ಹೃದಯಕ್ಕೆ ಕೊಂಚ ದುಃಖ
ಬಾಲ್ಯವೆಂದರೆ ಹಾಗೆ
ಮರಳಿ ಬರದ ಕಾಲ
ಈಗ ಅದರ ನೆನಪಷ್ಟೆ
********************