ನಾಗರಾಜ ಹರಪನಹಳ್ಳಿ ಕವಿತೆ

ಕಾವ್ಯಯಾನ

ತಪ್ಪಿಸಿಕೊಂಡು ಬಂದ ಉಲ್ಲಾಸದ ಗಾಳಿಯಂತೆ

ಸಮುದ್ರ ದಂಡೆಗೆ ಮುಖಮಾಡಿ‌ ನಿಂತ ಕಾರಲ್ಲಿ ಕುಳಿತು
ನಿನ್ನೊಡೆನೆ ಹರಟೆ ಹೊಡೆಯುವುದು ಚೆಂದ

ಮನೆಯ ಜಂಜಡಗಳಿಂದ ತಪ್ಪಿಸಿಕೊಂಡು ಬಂದ ಉಲ್ಲಾಸದ ಗಾಳಿಯಂತೆ

ದಾರಿಯಲ್ಲಿ ಹೋಗುವ ಪರಿಚಿತರು , ಗೆಳೆಯರಿಗೆ
ಕುಳಿತಲ್ಲಿಂದಲೇ ಕಣ್ಣೊಡೆದು, ಕೈ ಬೀಸಿ
ಮೂಗಿನಡಿಯಲ್ಲಿ ನಗೆ ಉಕ್ಕಿಸಿ ಸಾಗು ಹಾಕುತ್ತೇನೆ ; ನಿನ್ನೊಡನೆ
ಉತ್ಸಾಹದಿ ಮಾತಿಗಿಳಿದ ನಾನು

ಆಗ ಆಗಸದಲ್ಲಿ ಹಕ್ಕಿಗಳು ನಲಿಯುತ್ತವೆ
ಸಮುದ್ರದೊಳಗೆ ಮೀನುಗಳು ತಮ್ಮ ಕಿರು ಮಕ್ಕಳ ಜೊತೆ ಉಭಯಕುಶಲೋಪರಿ ನಡೆಸಿರುತ್ತವೆ

ಗಂಟೆ ಒಂದಾಯಿತು ಎರಡಾಯಿತು ಮಾತು ಮುಗಿಯುವುದಿಲ್ಲ
ಅದೆಷ್ಟು ತರ್ಕ ಸಂಶಯ ಆತಂಕ ಚರ್ಚೆ ವಿರಹ ನೋವು ಕಾಳಜಿ ಕೊನೆಗೆ ಪ್ರೀತಿ ತುಯ್ದಾಡಿ ಒಯ್ದಾಡಿ ಅರಳಿಕೊಂಡಿರುತ್ತವೆ

ದಾರಿಯ ಹುಲ್ಲಿನ ನಡುವೆ ಸಣ್ಣ ಹೂವೊಂದು‌ ಅರಳಿ ನಗುತ್ತಿದೆ

ದೂರವಿದ್ದು ಸಣ್ಣದೊಂದು ಲೈಫ್ ಸಪೂರ್ಟನಿಂದ ದಶಕಗಟ್ಟಲೆ ಕಾಯುತ್ತೇವೆ
ಕತ್ತಲನ್ನು ಕನಸಿನಿಂದ ದಾಟುತ್ತೇವೆ
ಹಗಲನ್ನು ಒಲವ ದಾರದಿಂದ ಹೊಲಿದು ಒಪ್ಪಮಾಡುತ್ತೇವೆ ;
ಎಂದಾದರೊಂದು ದಿನ
ಹಗಲು ರಾತ್ರಿಗಳನ್ನು ಬೆಸೆಯ ಬಹುದೆಂದು

ಆಕಾಶ ಸೂರ್ಯ ಚಂದ್ರ ಮೋಡ ಹಕ್ಕಿ ; ಕೊನೆಗೆ ಬೀದಿ ಬದಿ ನಿಂತು
ಅವ್ವನ ಕಾಯುವ ಮಗುವಿನ ಕಣ್ಣಂಚಿನ ಮೂಲಕ ಮಾತಾಡುತ್ತೇವೆ

ನಮ್ಮ ನಡುವೆ ಅದೆಷ್ಟು ದೌಪ್ರದಿ , ಸೀತೆ, ಕೈಕೆ,‌ ಮಂಡೋದರಿ, ಅಹಲ್ಯೆ, ಕೀಚಕ, ದುರ್ಯೋಧನ, ಧರ್ಮರಾಯ, ಏಕಲವ್ಯ , ಕರ್ಣಾರ್ಜುನ, ಭೀಮಸೇನರು …

ನಾವು ಮಾತ್ರ ಸಾಮಾನ್ಯ ಮನುಷ್ಯರಲ್ಲಿ ಸಾಮಾನ್ಯರು

ಟಾಲ್ಸ್ಟಾಯ್ , ಚೆಕಾಫ್, ಪ್ಯಾಬ್ಲೋ , ಪುಷ್ಕಿನ್ , ಲ್ಯಾಂಗ್ ಲೀವ್ , ಶಾಂತಿನಾಥ ದೇಸಾಯಿ, ವೀಣಾ ,ತಿವಿಯುವ ಚಂಪಾರನ್ನು ನೆನೆಯುತ್ತಾ ಬೆಳೆದೆವು

ಸುತ್ತಲಿನ ಜಗತ್ತಿಗೆ ಜಗಮಗಿಸುವ ಸುಳ್ಳು ಚೆಂದ ನೋಡು

ನಾವು ಸುಳ್ಳು ಹೇಳಲಿಲ್ಲ, ಬಡಿವಾರ ಮಾಡಲಿಲ್ಲ

ಮುಂಗಾರಿನ ಕಪ್ಪಿರುಳಲ್ಲಿ ,ಕಗ್ಗತ್ತಲ ಕಾರ್ಮೋಡದಲ್ಲಿ ಆರ್ಭಟಿಸಿದೆ ಮುಗಿಲು
ಫಳಾರನೆ ಮಿಂಚಿ‌ ಮರೆಯಾಗಿದೆ ಕೋಲ್ಮಿಂಚು

ತಣ್ಣಗೆ ಸುರಿದ ಮುಂಗಾರಿನಲ್ಲಿ ಮಿಂದೆದ್ದಿದೆ ಭೂಮಿಯಂಥ ನಿನ್ನ ತೋಳು, ತೆರೆದ ಬಾಹುಗಳಿಂದ ಕಾದಿದೆ ಹಗಲು
ಮೇಲಾಗಿ
ನೀ ಅರಳುವುದು
ನನ್ನ ಬಾಹುಗಳಲ್ಲಿ , ನಾ ಉಲ್ಲಾಸಗೊಳ್ಳುವುದು
ನಿನ್ನ ನಿಡಿದಾದ ಪ್ರೀತಿಯಲ್ಲಿ ತಾನೇ

********

Leave a Reply

Back To Top