ಶಾಲಿನಿ ಕೆಮ್ಮಣ್ಣು ಹೊಸ ಕವಿತೆ

ಕಾವ್ಯಯಾನ

ಮೂಗಿನ ಕವಿತೆ

ಶಾಲಿನಿ ಕೆಮ್ಮಣ್ಣು

ಮೂಗಿಗೆ ಒಂದು ಮನವಿ
ಗಿಡ್ಡ ಮೂಗು ನೀಳ ಮೂಗು
ಚಟ್ಟೆ ಮೂಗು ದುಂಡು ಮೂಗು
ಅಂಡೆ ಮೂಗು ವಕ್ರಮೂಗು
ಗಿಳಿ ಮೂಗು ಗಿಡುಗ ಮೂಗು
ವಿಧವಿಧ ಆಕಾರಗಳಿಂದ ಮೂಗೇ
ನೀ ಮುಖಕ್ಕೊಂದು ಶೋಭೆ
ಮೂಗು ತುದಿಯೊಳು ಅಡಗಿಹುದು
ಕೋಪದ ತೀವ್ರತೆ

ಓ ನನ್ನ ಮೂಗೇ ಮುನಿವೆ ನೀನೇಕೆ
ನಿನಗೇಕೆ ಅಲರ್ಜಿಯ ಆಪ್ತ ಬೆಸುಗೆ
ಪದೇಪದೇ ತೀರಿಸುವೆ ಅಸಮಾಧಾನದ ಧಗೆ
ಕೊನೆತನಕ ಸಾಧಿಸುವೆಯಾ
ಛಲಬಿಡದೆ ಶೀತ ಜ್ವರದ ಬಾಧೆ

ಕಣ್ಣು-ಕಿವಿ ಕಂಠಕ್ಕೂ ನಿನ್ನ ಶಾಪ
ನಾಡಿ ನಾಡಿಗಳಲ್ಲಿ ಬಿಸಿಯ ತಾಪ
ಸಂದು ಸಂದುಗಳಲ್ಲಿ ಚಳಿಯ ಆಲಾಪ
ಮೂಳೆ ಮಾಂಸಗಳಲ್ಲಿ ಯಾತನೆಯ ಪ್ರಕೋಪ

ಸೀನಿನೊಳು ನೀ ಸುರಿಸೆ ನೀರ ಸಿಂಬಳ ಧಾರೆ
ಚೆಲ್ಲಿ ಪಸರಿಸಿವೆ ಬಿಂದುಗಳು ಹಾರಿ ಹಾರಿ
ಒತ್ತರಿಸಿ ಅಳುವುದು ಕಣ್ಣು
ಕೆಂಪಗೆ ಹೊಳೆಯುವುದು ಕೆನ್ನೆ

ಗಾಳಿ ಕುಹರವ ಮುತ್ತಿ ಸೋಂಕಿನ ಕಣವು
ಅರಿವಿಗೆ ತರುವುದು ತಲೆಯ ಭಾರದ ಹೊರೆಯು
ರೆಪ್ಪೆ ತೆರೆಯಲು ಬಿಡದು ತಲೆಯ ಭಾರ
ಗಂಟಲೊಳು ಕಿರಿಕಿರಿಯ ತುರಿಕೆ ಅಪಾರ

ಹೋರಾಡು ಸೋಂಕಿನೊಡೆ
ಬಿಸಿ ಹಬೆಯ ನಾ ಕೊಡುವೆ
ಒಳ್ಳೆ ಆಹಾರ ಅಭ್ಯಾಸ ಮಾಡುವೆ
ಗಾಳಿ ಚೀಲವ ತೊಳೆದು ಹರಿಸು
ಪ್ರಾಣವಾಯು ಒಳಹರಿವು

ಸೋರುತಿಹೆ ನೀನೇಕೆ ಈ ಪರಿ
ನಿಲ್ಲಿಸೆಯ ಒಸರುವುದ ನನ್ನ ಬಿನ್ನಹ ನಿನ್ನ ಕೋರಿ
********************

Leave a Reply

Back To Top