ಆತ್ಮಸಖಿ ಗಜಲ್ ಗಳು

ಪುಸ್ತಕ ಸಂಗಾತಿ

ಆತ್ಮಸಖಿ ಗಜಲ್ ಗಳು

ಕೃತಿ ಶೀಷಿ೯ಕೆ….  ಆತ್ಮಸಖಿ  ಗಜಲ್ ಗಳು

ಲೇಖಕರ ಹೆಸರು……  ಅರುಣಾ ನರೇಂದ್ರ   ಮೊ.೭೯೨೯೦೪೬೬೯೮

ಪ್ರಕಾಶನ…….  ಸಿದ್ಧಾರ್ಥ ಪ್ರಕಾಶನ ನಂದಿನಗರ ಕೊಪ್ಪಳ  ಮೊ೯೮೪೫೦೧೭೩೧೬

ಪ್ರಥಮ ಮುದ್ರಣ೨೦೨೧ಬೆಲೆ ೧೫೦

ಶ್ರೀ ಮತಿ ಅರುಣಾ ನರೇಂದ್ರ ಅವರು ಕೊಪ್ಪಳ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜ ಕಿನ್ನಾಳದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ವೃತ್ತಿ ಯಲ್ಲಿ ಇವರು ಅಧ್ಯಾಪಕರಾಗಿದ್ದರು ಪ್ರವೃತ್ತಿಯಲ್ಲಿ ಉತ್ತಮ ಸಾಹಿತಿಗಳಾಗಿದ್ದಾರೆ.ಈಗಾಗಲೇ ಮಕ್ಕಳ ಸಾಹಿತ್ಯ, ಆಧುನಿಕ ವಚನಗಳು, ತತ್ವಪದಗಳು,ಹೈಕುಗಳು,ರುಬಾಯಿಗಳು,ಗಜಲ್ ಗಳು ,ಹೀಗೆ ವಿವಿಧ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿ ಅನೇಕ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಮಕ್ಕಳ ಕವಿತೆ ಇಂಗ್ಲಿಷ್ ಮಾಧ್ಯಮದ ೩ನೇ ತರಗತಿಯ ದ್ವೀತಿಯ ಭಾಷೆಯ ಕನ್ನಡ ಪಠ್ಯಪುಸ್ತಕ ದಲ್ಲಿ ಸೇರ್ಪಡೆಯಾಗಿದೆ.

ಮಕ್ಕಳ ಒಡನಾಟ ದಿಂದ ಮಕ್ಕಳ ಸಾಹಿತ್ಯಿಯಾಗಿ,ಕವಿಯತ್ರಿಯಾಗಿ,ಗಜಲ್ ಕಾತಿ೯ಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರ ದತ್ತಿ ಪ್ರಶಸ್ತಿ, ಕನಾ೯ಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿ ಗಳನ್ನು ಪಡೆದಿದ್ದಾರೆ, ಅರುಣಾ ನರೇಂದ್ರ ಅವರು ಕಲ್ಯಾಣ ಕನಾ೯ಟಕ ನೆಲದ ಸಾಹಿತ್ಯ ವಲಯದ ಭರವಸೆಯ ಬೆಳಕಾಗಿದ್ದಾರೆ.

ಅರುಣಾ ನರೇಂದ್ರ ಅವರು ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ  ಮಾತು ಮೌನದ ನಡುವೆ    ಹಿಮದೊಡಲ ಬೆಂಕಿ  ಎಂಬ ಎರಡು ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಬ್ಧು ಗಜಲ್ ಕಾತಿ೯ಎಂದು ಗುರುತಿಸಿಕೊಂಡಿದ್ದಾರೆ. ಆತ್ಮಸಖಿ  ಇವರ ಪ್ರಕಟಿತ ಮೂರನೇ ಗಜಲ್ ಸಂಕಲನವಾಗಿದೆ.ಗಜಲ್ ಪ್ರೇಮಿಗಳಿಗೆ ಓದುಲು ಅಪಿ೯ಸಿದ್ದಾರೆ,

ಗಜಲ್ ಸಾಹಿತ್ಯವು ಒಂದು ಆಕರ್ಷಕ ವಾದ ಮನ ಸೂರೆಗೊಳ್ಳುವ ಹೃದಯಕ್ಕೆ ಬಹಳ ಹತ್ತಿರವಾದ ಛಂದೋಬದ್ಧ ವಾದ ಕಾವ್ಯ ಸಾಹಿತ್ಯ., ಇದು ಸಂಗೀತಕ್ಕೆ ಹೊಂದಿ ಮನಕ್ಕೆ ಉಲ್ಲಾಸ ಉಂಟುಮಾಡುವ ಹಾಡುಗಬ್ಬ.ಮನದ ತುಡಿತವನ್ನು ,ಹೃದಯದ ಮಿಡಿತವನ್ನು ,ಹಂಚಿಕೊಳ್ಳುವ ಪ್ರಣಯಿಗಳ ವಿರಹ,ಪ್ರೇಮಾಲಾಪ,ಅನುರಾಗ,

ಕಾಯುವಿಕೆಯನ್ನು ಹೃದಯ ದಿಂದ ಹೃದಯ ಕ್ಕೆ ಪಿಸು ಮಾತಿನಲ್ಲಿ ಹಂಚಿಕೊಳ್ಳುವ ಸುಂದರ ಕಾವ್ಯ.ಶರಣ ಸತಿ ಲಿಂಗ ಪತಿ ಎಂಬ ಸತಿ ಭಾವದಲ್ಲಿ ಭಗವಂತನ ಜೊತೆ ಪ್ರಣಯ ಭಕ್ತಿಯನ್ನು ಹೊಂದುವ,ಮತ್ತು ಸೂಫಿಸಂತರ ಪ್ರಕಾರ ದೇವರು ಸತಿ,ಭಕ್ತ ಪತಿ ಎಂಬ ಅಲೌಕಿಕ ಪ್ರೀತಿ,ಹಾಗೂ ತತ್ತ್ವ ಪದಗಳ ಭಾವ ತೋರಿಸುವ ನೀತಿ ,ಆತ್ಮದೊಂದಿಗೆ ಸಂದಾನ ಮಾಡುವ ಸುಕೋಮಲ ಮೃದು ಮಧುರ ರೂಪಕ ಪ್ರತಿಮೆ ಗಳೊಂದಿಗೆ ಅನುಸಂದಾನಕ್ಕೆ ಇಳಿಯುವ ಸುಂದರ ಕಾವ್ಯ ವಾಗಿದೆ.ಮೊದ ಮೊದಲು ಗಜಲ್ ರಚನೆಯ ಸ್ಥಾಯಿಗುಣವಾದ ಪ್ರೀತಿ,ಪ್ರೇಮ,ಲೌಕಿಕ,ಅಲೌಕಿಕ,ಪ್ರಣಯದ ಗಜಲ್ ಗಳು ರಚನೆಯಾಗುತ್ತಿತ್ತು,ಈಗ ಅವುಗಳ ಜೊತೆಗೆ ಸಮಾಜಿಕ,ಮತ್ತು ಧರ್ಮಗಳ ಒಳ ತಿರುಳುಗಳನ್ನು ಸೂಚಿಸುವ ಗಜಲ್ ಗಳು ರಚನೆಯಾಗುತ್ತಿವೆ.

ಶ್ರೀ ಮತಿ,ಅರುಣಾ ನರೇಂದ್ರ ಅವರ ಮೂರನೇ ಗಜಲ್ ಸಂಕಲನವಾದ  ಆತ್ಮಸಖಿ ಗಜಲ್ ಕೃತಿಯಲ್ಲಿ ಒಟ್ಟು ೫೦ ಗಜಲ್ ಗಳಿವೆ,ಇದು ಇವರ ಮೂರನೇ ಸಂಕಲನವಾದ ಕಾರಣ ಗಜಲ್ ನಿಯಮಗಳನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಗಜಲ್ ಗಳನ್ನು  ಛಂದೋಬದ್ಧ ವಾದ  ಸಮರ್ಪಣಾ ಮನೋಭಾವದಿಂದ  ಗಜಲ್ ಗಳನ್ನು ರಚಿಸಿದ್ದಾರೆ, ಬಾಳಿನ ಪ್ರತಿಕ್ಷಣದ ಪ್ರತಿಕ್ರಿಯೆ ಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಗಜಲ್ ಗಳನ್ನು ಹೆಣೆದಿದ್ದಾರೆ.ಸಮಾಜದ ಕೆಲವು ಅನಿಷ್ಟ ಪದ್ದತಿಗಳನ್ನು ಅನಾವರಣ ಗೊಳ್ಳುವಂತೆ ಗಜಲ್ ಗಳನ್ನು ಸೃಷ್ಟಿ ಸಿದ್ದಾರೆ.ಜೊತೆಗೆ ಶರಣ ಜೀವನ, ತತ್ವ ಪದಗಳ ನೀತಿಗಳನ್ನು ಗಜಲ್ ಗಳಲ್ಲಿ ರೂಪಕಗಳಾಗಿ ಬಳಿಸಿಕೊಂಡು ಅರ್ಥಪೂರ್ಣ ವಾಗಿ ಮನಕ್ಕೆ ಹಿತವಾಗುವಂತೆ ಗಜಲ್ ಗಳ ರಚನೆಯಾಗಿದ್ದು ಇವು ಇವರ ಪ್ರೌಢತೆಯನ್ನು ತೋರಿಸುತ್ತವೆ.ಸರಳವಾಗಿ ಓದಿಸಿಕೊಂಡು ಓದುಗ ತನ್ನಷ್ಟಕೆ ತಾನೇ ಗುನ್ ಗುನಾಯಿಸುವಂತೆ ಗಜಲ್ ಗಳು ಗೇಯತೆಯಿಂದ ಕೂಡಿವೆ.

 ಆತ್ಮಸಖಿ ಗಜಲ್ ಸಂಕಲನಕ್ಕೆ ಉತ್ತಮ ಅನುಭವಿ ಗಜಲ್ ಕಾತಿ೯ಯವರಾದ ಶ್ರೀ ಮತಿ ಮೆಹಬೂಬ್ ಬೀ ಎಂ ಶೇಖ ಮೇಡಂ ಅವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ, ಎಲ್ಲರೂ ಗಜಲ್ ಗುರು ಗಳೆಂದು  ಕರೆಯುವ  ಅಲ್ಲಾಗಿರಿರಾಜ್ ಕನಕಗಿರಿ ಯವರು ಸಂಕಲನಕ್ಕೆ ಬೆನ್ನುಡಿಯನ್ನು ಬರೆದು ಬೆನ್ನುತಟ್ಟಿದ್ದಾರೆ.ಪ್ರಕಟನೆಗೆ ಮೊದಲೇ ಗಜಲ್ ಗಳನ್ನು ಓದಿ ತಮ್ಮ ಮೆಚ್ಚುಗೆಯನ್ನು ,ಪ್ರೇಮಾ ಹೂಗಾರ, ಸಿದ್ಧರಾಮ ಹೊನ್ಕಲ್, ಶಿವಕುಮಾರ ಕರನಂದಿ,ಕೃಷ್ಣದೇವಾಂಗಮಠ,ಹಾಗೂ ಪ್ರಭಾವತಿ ಎಸ್ ದೇಸಾಯಿ, ಡಾ,ದಸ್ತಗೀರ ಸಾಬ್ ದಿನ್ನಿ ,ಹೀಗೆ ಹಲವಾರು ಗಜಲ್ ಕಾರರು ತಮ್ಮ ನುಡಿಗಳನ್ನು ಬರೆದಿದ್ದಾರೆ. ಇವೆಲ್ಲವುಗಳಿಂದ ಸಂಕಲನದ ಮೌಲ್ಯ ಹೆಚ್ಚಾಗಿ ಗೆಂದು ಹೇಳಬಹುದು.

ಪ್ರತಿಯೊಬ್ಬ ವ್ಯಕ್ತಿಗೆ ಒಬ್ಬ ಆತ್ಮಸಖಿ ಅಥವಾ ಆತ್ಮಸಂಗಾತಿ ಇರುತ್ತಾರೆ ಇದರಿಂದ ಕವಿ ಯಾವಾಗಲೂ ತನ್ನ ಆತ್ಮಸಖಿ ಅಥವಾ ಆತ್ಮಸಂಗಾತಿ ಯೊಂದಿಗೆ ತನ್ನ ಮನದಾಳದ ನೋವು ನಲಿವು ಗಳನ್ನು ಹಂಚಿಕೊಂಡು ಮನ ಹಗುರ ಮಾಡಿಕೊಳ್ಳುತ್ತಾನೆ.ಇಲ್ಲಿ ಅರುಣಾ ಅವರು ತಮ್ಮ ಭಾವನೆಗಳನ್ನು ಆತ್ಮಸಖಿ ಯೊಂದಿಗೆ ನಿವೇದಿಸಿಕೊಂಡಿದ್ದಾರೆ.ಅವು ಸಾರ್ವತಿಕ ವಾಗಿದ್ದು ಸಂಕಲನದ ಗಜಲ್ ಗಳನ್ನು ಓದಿದಾಗ ಓದುಗನಿಗೆ ಇವು ತನ್ನವೇ ಭಾವನೆಗಳೆಂದು ಅನಿಸುತ್ತವೆ.

ಆತ್ಮಸಖಿ ಸಂಕಲನದಲ್ಲಿ ನನಗೆ ಕಾಡಿದ ಕೆಲವು ಗಜಲ್ ಗಳ ಮಿಸ್ರಾಗಳು

ಗೆಜ್ಜೆ ಕಟ್ಟಿದ ನಿನ್ನ ಹೆಜ್ಜೆ ನಾದದ ಜಾಡು ಹಿಡಿದು ನಿನ್ನ ಹುಡುಕುತ್ತೇನೆ

ಬೆಳದಿಂಗಳಂತಿರುವ ನಿನ್ನ ಚೆಲುವನೆ ಕುಡಿದು ನಿನ್ನ ಹುಡುಕುತ್ತೇನೆ

ಮೇಲಿನ ಮತ್ಲಾದಲ್ಲಿ ಕವಿಯತ್ರಿ ಗೆಜ್ಜೆ ನಾದದ ಮೂಲಕ ಅವನನ್ನು ಹುಡುಕುವುದು ಎಂದರೆ ಭಕ್ತಿ ಮಾರ್ಗ ಮೂಲಕ ದೇವರನ್ನು ಹುಡುಕುವುದು,ಅವನ್ನೊಂದಿಗೆ ಸಂದಾನ ಮಾಡುವುದು ,ಆರಾಧನೆ ಮಾಡಿ ಅವನಲ್ಲಿ ಲೀನವಾಗುವುದು,ಅವನ ಕರುಣೆಯ ಬೆಳದಿಂಗಳು ಕುಡಿದು ತಲೀನವಾಗುವುದು,ಅನುಗ್ರಹಿಸಿದ ಪ್ರಸಾದ ಸ್ವೀಕರಿಸಿ ಧನ್ಯಳಾಗುವುದು ಎಂಬ ಭಾವದ ಗಜಲ್,ಇಲ್ಲಿ ಲೌಕಿಕ ದಿಂದ ಅಲೌಕಿಕದ ಕಡೆ ಜಾರುವ ಆಧ್ಯಾತ್ಮಿಕ ಸ್ಪರ್ಶ ಹೊಂದಿದ ಗಜಲ್ ಇದು.

ಇಂಚು ಇಂಚಿಗೂ ಹಿಂಸಿಸಿ ಬಾರಿ ಬಾರಿಗೂ ಹೀಗೆ ಸಾಯಿಸದಿರು

ನಿನ್ನ ತೊಡೆಯ ಮೇಲೆ ಮಲಗುತ್ತೇನೆ ಅರುಣಾ ಮುಕ್ತಿ ಕಾಣಿಸಿ ಬಿಡು

ಬದುಕಿನಲಿ ನಿತ್ಯ ನೋವು ಹಿಂಸೆ ಬಡತನದ ಬವಣೆ ಯಲ್ಲಿ ಬೇಸತ್ತ ಮನ ನನ್ನನ್ನು ನೀನು ಹೀಗೆ ನಿತ್ಯ ಚಿತ್ರಹಿಂಸೆ  ಕೊಟ್ಟು ಕೊಲ್ಲುವುದಕ್ಕಿಂತ ಒಂದೇಸಾರಿಗೆ ಸಾಯಿಸಿಬಿಡು,ನಿನಗೆ ಶರಣಾಗುವೆ,ನಿನ್ನ ತೊಡೆಯ ಮೇಲೆ ಮಲಗುತ್ತೇನೆ   ಬಾಳಿಗೆ ಮುಕ್ತಿಯನ್ನು ದಯಪಾಲಿಸೆಂದು ಕಾಣದ ಭಗವಂತನಲ್ಲಿ ಬೇಡಿಕೊಳ್ಳುವ ಪರಿಯನ್ನು ಗಜಲ್ ದಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.

ಅದ್ಯಾರದೋ ತಲೆಗೆ ನಿನ್ನ  ತೋಳೇಕೆ ತಲೆದಿಂಬಾಗ ಬೇಕು ಸಖಾ

ಯಾರದೋ ಹಾಡಿಗೆ ನಿನ್ನ ಮುರಳಿಯೇಕೆ ಶ್ರುತಿ ಬೆರೆಸಬೇಕು ಸಖಾ

ಮೇಲಿನ ಮತ್ಲಾದಲ್ಲಿ ಪ್ರಿಯತಮೆ ತನ್ನ ಪ್ರಿಯಕರನಿಗೆ ಪ್ರಶ್ನಿಸುತ್ತಾಳೆ ,ನೀನು ನನ್ನವ ,ನಿನ್ನ ತೋಳು ಇನ್ನೊಬ್ಬರ ತಲೆಗೆ ಆಸರೆಯಾಕೆ? ಯಾರದೋ ಹಾಡಿಗೆ  ನಿನ್ನ ಮುರಳಿಯಾಕೆ  ಶ್ರುತಿ ಕೊಡಬೇಕು,ಎಂದು ಕೇಳುವಿಕೆಯಲ್ಲಿ,ಹೆಣ್ಣಿನ ಸ್ವಾರ್ಥ ಹೊಟ್ಟೆ ಕಿಚ್ಚು ಕಂಡು ಬರುತ್ತದೆ ,ತನ್ನ ವಸ್ತು ಪರರಿಗೆ ಯಾಕೆ ಆಸರೆಯಾಗಬೇಕೆಂಬ ಸ್ವಾರ್ಥದಲ್ಲಿ ಅತಿಯಾದ ಮೋಹ ಪ್ರೀತಿ ಅಡಗಿದೆ.

ಊರ ಗಲ್ಲಿಯಲಿ ಹಾರಾಡುತ್ತಿದ್ದ ಬಿಳಿ ಪಾರಿವಾಳ ಮಾಯವಾಗಿ ಹೋದವು

ಜನರ ಉದ್ಧರಿಸಬೇಕಾದ ಮಠದ ಬಿಳಿಸುಣ್ಣ ಗೋಡೆ ಕೆಂಪಾಗಿ ಹೋದವು

ಈ ಗಜಲ್ ಸಾಮಾಜಿಕ ಕಳಕಳಿಯದು ಆಗಿದೆ,ಮೊದಲು ಎಲ್ಲಾ ಸಮುದಾಯದ ವರು ಒಂದಾಗಿ ಭಾವೈಕ್ಯತೆಯಿಂದ ನೆಮ್ಮದಿ ಮತ್ತು ಶಾಂತಿಯಿಂದ ಬಾಳುತ್ತಿದ್ದರು,ಆದರೆ ಈಗ ಧರ್ಮಗಳ  ದಳ್ಳುರಿಯಲ್ಲಿ ಸಮಾಜದ ಭಾವೈಕ್ಯತೆ,ಶಾಂತಿ ನೆಮ್ಮದಿ ಹಾಳಾಗಿವೆ,ಸಮಾಜದ ಎಲ್ಲಾ ಸಮುದಾಯ ಗಳನ್ನು ಸಮಾನ ದೃಷ್ಟಿಯಿಂದ ಕಾಣುವ ಮಠ ಮಂದಿರ ಮಸೀದಿಗಳು ಇಂದು ಉಗ್ರರ ತಾಣವಾಗಿದ್ದು ಶಾಂತಿ ಹಾಳಾಗಿದೆಂದು ರೂಪಕದ ಮೂಲಕ ವ್ಯಕ್ತಪಡಿಸಿದ್ದಾರೆ.

ಮನದೊಳಗಿನ ಮಾತು ಹೇಳಲಾರದೆ ನೀ ಅಂದು ಹೊರಟು ಹೋದೆ

ತನುವಿನೊಳಗಿನ ತಾಪ ನೀಗಲಾರದೆ ನೀ ಇಂದು ಹೊರಟು ಹೋದೆ

ಮೇಲಿನ ಮತ್ಲಾದಲ್ಲಿ ಕವಿಯತ್ರಿಯು ವಿರಹದ ತಾಪನ್ನು ವ್ಯಕ್ತಪಡಿಸಿದ್ದಾರೆ. ಪ್ರೇಮಿಗಳು ಒಬ್ಬರಿಗೊಬ್ಬರು ತಮ್ಮ ಮನದಲ್ಲಿನ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲಾಗದೆ ದೂರಾದ ಪರಿ ಮತ್ತು ತನು ಮನದ ಬೇಗುದಿಯನ್ನು ಅರ್ಥಮಾಡಿಕೊಳ್ಳದೆ ,ಏನು ಹೇಳದೆ ಹೊರಟು ಹೋದ ಪ್ರಿಯಕರನಿಗೆ ಇಂದು ಸಹ ನೀನು ತನುವಿನ ಬಯಕೆ ತೀರಿಸಲಾರದೆ ಯಾಕೆ ಹೋದೆ ಎಂದು

ಪರಿತಪಿಸುವ ಗಜಲ್ ಇದಾಗಿದೆ.

ಅವಳ ಕೈ ಬಳೆಯ ನಾದವಿರದೆ ಮನವು ಖಾಲಿ ಖಾಲಿ ಎನಿಸುತಿದೆ ಸಾಕಿ

ಇರುಳು ಸರಿದು ಬೆಳಕಾದರೂ ನನಗೆ ಕತ್ತಲೆ ಆವರಿಸುತಿದೆ ಸಾಕಿ

ಇಲ್ಲಿ ಗಜಲ್ ಕಾತಿ೯ ಪರಕಾಯ ಪ್ರವೇಶಿಸಿ ಗಂಡಿನ ಭಾವದಲ್ಲಿ ಗಜಲ್ ಹೆಣೆದಿದ್ದಾರೆ.

ಮನದನ್ನೆಯ ಕೈ ಬಳೆಯ ಸದ್ದು ಇರದೆ ಮನವು ಖಾಲಿ ಖಾಲಿ ಆಗಿದೆ ,ಹೃದಯ ಮೌನದಲಿ ಮುದುಡಿದೆ,ಅವಳು(ಧರ್ಮಪತ್ನಿ) ಇಲ್ಲದ ಇರುಳು  ಅಮವಾಸ್ಯೆ ಯ ಇರುಳಾಗಿ ಕಾಡುತಿದೆ,ಅವಳ ಕಣ್ಣ ಕಾಂತಿ,ನಗು ಮೊಗದ ಬೆಳದಿಂಗಳು ಇಲ್ಲದೆ ಇರುಳ ಕತ್ತಲೆ ಸರಿದು ಹಗಲಾಗಲಿಲ್ಲ ವೆಂದು ಸಾಕಿಯ ಮುಂದೆ ಹೇಳುವ ಭಾವಗಳನ್ನು ಸುಂದರವಾಗಿ ಗಜಲ್ ದಲ್ಲಿ ವ್ಯಕ್ತ ಪಡಿಸಿದ್ದಾರೆ.ಇಲ್ಲಿ ಕವಿಯತ್ರಿ ಪರಕಾಯ ಪ್ರವೇಶ ಮಾಡಿದ್ದರೂ ಭಾವಕ್ಕೆ ಧಕ್ಕೆ ಬರೆದಂತೆ ಗಜಲ್ ರಚಿಸಿದ್ದಾರೆ.

ನೀ ನಡೆದಾಡದ ಈ ಹಾದಿಯಲ್ಲಿ ಹೂವು ಅರಳಲೇ ಇಲ್ಲ ಸಖಾ

ನಿನ್ನ ಧ್ವನಿ ಕೇಳದೇ ಹಕ್ಕಿಗಳು ಮೌನ ಮುರಿದು ಹಾಡಲೇ ಇಲ್ಲ ಸಖಾ

ಪ್ರಿಯತಮೆ ತನ್ನ ಪ್ರಿಯಕರನ ಬರುವ ಹಾದಿ ಕಾಯುತ್ತಿದ್ದಾಳೆ,ತನ್ನ ಬಾಳಿನಲ್ಲಿ ವಸಂತನಾಗಿ ಬರುವನೆಂಬ ಭರವಸೆಯಲ್ಲಿ ಬದುಕಿದವಳಿಗೆ ಅವನು ಬರುವು ಸುಳ್ಳಾದಾಗ ಮನನೊಂದು ಹೇಳುತ್ತಾಳೆ.ನೀ ನಡೆದಾಡದ ಈ ಹಾದಿಯಲ್ಲಿ ಹೂವು ಅರಳಲೇ ಇಲ್ಲ ,ನೀ ನನ್ನ ಬಾಳಬನದಲ್ಲಿ ಹೂ ಅರಳಿಸಲಿಲ್ಲ, ವೆಂದು ಹೇಳುತ್ತಾ ,ನಿನ್ನ ಧ್ವನಿ ಕೇಳದೆನನ್ನ ಹೃದಯ ಕೋಗಿಲೆ ಮೌನವಾಗಿದೆ,ಪ್ರಕೃತಿಯ ಚರಾಚರ ವಸ್ತುಗಳು ಮುನಿಸಿನಲ್ಲಿವೆಂದು ,ಪ್ರಿಯೆತಮೆ ತನ್ನ ಪ್ರಿಯಕರನ ಗೈರ್ ಹಾಜಿರಿಯಲ್ಲಿ ಹೇಳುವ ಪರಿಯನ್ನು ಗಜಲ್ ದಲ್ಲಿ ಸುಂದರವಾಗಿ ಕಟ್ಟಿದ್ದಾರೆ.

ನೀ ನಿಟ್ಟ ದಿಟ್ಟ ಹೆಜ್ಜೆ ಗುರುತಿನ ಮೇಲೆ ತೈಲವಿಲ್ಲದ ದೀಪ ಬೆಳಗುತಿದೆ ಅಕ್ಕ

ಸ್ತ್ರೀ ಸ್ವಾತಂತ್ರ್ಯ ಕ್ಕಾಗಿ ನೀನಂದು ಎತ್ತಿದ ಧ್ವನಿ ಪ್ರತಿಧ್ವನಿಯಾಗಿ ಕೇಳುತ್ತಿದೆ ಅಕ್ಕ

ಈ ಗಜಲ್ ದಲ್ಲಿ ೧೨ ನೇ ಶತಮಾನದ ಶರಣೆ ಅಕ್ಕಮಹಾದೇವಿಯ ಬದುಕಿನ ಸುತ್ತ ಹೆಣೆದಿದ್ದಾರೆ.

೧೨ ನೇ ಶತಮಾನದಲ್ಲಿಯೇ ಅಕ್ಕ ಸ್ತ್ರೀ ಸ್ವತಂತ್ರ ಕ್ಕಾಗಿ ಸಮಾಜದ ಕಟ್ಟುಪಾಡುಗಳನ್ನು ಧಿಕ್ಕರಿಸಿ ತನ್ನ ಮನದ ಇಚ್ಛೆಯಂತೆ ವೈರಾಗಿಯಾಗಿ ,ಲೌಕಿಕ ಸಂಸಾರ ,ಗಂಡನನ್ನು ತ್ಯಜಿಸಿ ಮಲ್ಲಿಕಾರ್ಜುನ ತನ್ನ ಪತಿ ಎಂದು ಘೋಷಿಸಿ ದಿಟ್ಟತನದಿಂದ ಇಟ್ಟ ಹೆಜ್ಜೆ ಇಂದಿಗೂ ಮಹಿಳೆಯರಿಗೆ ಮಾರ್ಗ ದರ್ಶನ ಮಾಡುತ್ತಿದೆ.ಅಂದು ಅಕ್ಕ ಹಚ್ಚಿದ ಸ್ವಾತಂತ್ರ್ಯ  ದೀಪ ಇಂದಿಗೂ ತೈಲವಿಲ್ಲದೆ ಮಹಳೆಯರ ಎದೆ ಗೂಡಿನಲ್ಲಿ ಪ್ರಜ್ವಲಿಸುತ್ತಿದೆ,ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಎತ್ತಿದ ಧ್ವನಿ ಇಂದಿಗೂ ಪ್ರತಿ ಮಹಿಳೆಯ ಮನದಲ್ಲಿ  ಪ್ರತಿಧ್ವನಿಸುತ್ತಿದೆಂದು ಗಜಲ್ ಕಾತಿ೯ ವ್ಯಕ್ತಪಡಿಸಿದ್ದಾರೆ.

ಅರುಣಾ ನರೇಂದ್ರ ಅವರ ಆತ್ಮಸಖಿ ಗಜಲ್ ಸಂಕಲನದಲ್ಲಿ ಇಂತಹ ಕಾಡುವ ಅನೇಕ ಗಜಲ್ ಗಳ ಮಿಸ್ರಾ ಗಳಿದ್ದು ಓದಿಸಿಕೊಂಡು ಹೋಗುತ್ತವೆ.ಮತ್ತು ಮನಕ್ಕೆ ಮುದನೀಡುತ್ತವೆ.

ಅರುಣಾ ನರೇಂದ್ರ ಅವರು ಒಬ್ಬ ಪ್ರೌಢ ಗಜಲ್ ಕಾತಿ೯  ಎಂಬುದಕ್ಕೆ ಎರಡು ಮಾತಿಲ್ಲ,ಆದರೂ ನನಗೆ ಅನಿಸಿದ್ದು ಕೆಲವು ಗಜಲ್ ಗಳಲ್ಲಿ ಮಿಸ್ರಾ ಗಳು ಬಹಳ ಉದ್ದವಾಗಿದ್ದು ಅವುಗಳನ್ನು ಸಣ್ಣವು ಮಾಡಬಹುದಾಗಿತ್ತು,.ಗಜಲ್ ಸಂಕಲನದ ಮುಖ ಚಿತ್ರ ಸೊಗಸಾಗಿ ಮೂಡಿಬಂದಿದೆ,ಮತ್ತು ಒಳಗಿನ ರೇಖಾಚಿತ್ರ ಗಳು ಭಾವಕ್ಕೆ ತಕ್ಕಂತೆ ಚಿತ್ರಿಸಿದ್ದು ಗಜಲ್ ಒಂದು ರೀತಿಯ ಸೊಬಗು ಕೊಟ್ಟಿವೆ.

ಅರುಣಾ ನರೇಂದ್ರ ಅವರು ಇನ್ನೂ ಉತ್ತಮವಾದ ಗಜಲ್ ಗಳನ್ನು ರಚಿಸಿ ಕನ್ನಡ ಗಜಲ್ ಸಾಹಿತ್ಯ ವನ್ನು ಸಮೃದ್ಧಿ ಪಡಿಸಲೆಂದು ಹಾರೈಸುತ್ತಾ ನನ್ನಂಬರಹಕ್ಕೆ ವಿರಾಮಮನೀಡುವೆನು.

********

ಪ್ರಭಾವತಿ ಎಸ್ ದೇಸಾಯಿ

Leave a Reply

Back To Top