ಕಾವ್ಯಯಾನ
ಗಜಲ್
ಪ್ರಭಾವತಿ ಎಸ್ ದೇಸಾಯಿ
ಬುವಿ ಬಾನುಗಳು ಒಂದಾಗಿ ಉರಿಯುತ್ತಿವೆ ಬದುಕಲೆಲ್ಲಿ ಓಡುವೆ
ಉಳುವ ಭೂಮಿಗಳೆಲ್ಲಾ ಮಸಣವಾಗಿವೆ ಬದುಕಲೆಲ್ಲಿ ಓಡುವೆ
ಬದುಕೆಲ್ಲ ಮೂರಾಬಟ್ಟೆ ಯಾಗಿ ಜೀವಿಗಳು ಕಂಗಾಲಾಗಿವೆ
ಕೈತುತ್ತು ಉಣಿಸುವ ಉಸಿರುಗಳು ಆರಿವೆ ಬದುಕಲೆಲ್ಲಿ ಓಡುವೆ
ಅಂಗಡಿ ಸಾಲಿನಲಿ ಹಣ್ಣು ಹಂಪಲಗಳೆಲ್ಲ ಕಾಣೆಯಾಗಿವೆ
ಸಂತೆಯಲ್ಲಿ ಆತ್ಮಗಳು ಹರಾಜಿಗಿವೆ ಬದುಕಲೆಲ್ಲಿ ಓಡುವೆ
ಮೊಗ್ಗುಗಳು ಕಂಡ ಕನಸುಗಳೆಲ್ಲ ಉದುರಿ ಅವನಿಯಲ್ಲಿ ಸೇರಿವೆ
ಮನದ ಬಯಕೆಗಳು ದೆವ್ವಾಗಿ ಕಾಡುತಿವೆ ಬದುಕಲೆಲ್ಲಿ ಓಡುವೆ
ಜಗದ ಮುಖಗಳು ಹೆದರಿ ರಂಗಿನ ಮುಖವಾಡದಲ್ಲಿ ಬದುಕುತ್ತಿವೆ
ಮಿಡಿ ಹಾವುಗಳು ಪೊರೆ ಕಳಚಿ ಚುರುಕಾಗಿವೆ ಬದುಕಲೆಲ್ಲಿ ಓಡುವೆ
ಗತಕಾಲದ ವೈಭವವನ್ನು ನೆನೆಯುತಾ ಮೌನದಲಿ ನಿದ್ರಿಸಿದೆ
ವಿಶ್ವ ತುಂಬ ವಿಷ ವೈರಾಣು ಚಲಿಸುತಿವೆ ಬದುಕಲೆಲ್ಲಿ ಓಡುವೆ
ಅರ್ಧರಾತ್ರಿಯಲಿ ಗೊಂಬೆಗಳನ್ನು ಅಪ್ಪಿ ಮುದ್ದಾಡುವೆ “ಪ್ರಭೆ”
ಕರುಳ ಬಳ್ಳಿಗಳು ಸುಡುಗಾಡಲಿ ಮಲಗಿವೆ ಬದುಕಲೆಲ್ಲಿ ಓಡುವೆ
*************