ಗಜಲ್

ಗಜಲ್

ಮುತ್ತು ಬಳ್ಳಾ ಕಮತಪುರ

ನಗುವ ಗುಲಾಬಿ ಹೂಗಳ ಸುತ್ತ ಅಳಿಸುವ ಮುಳ್ಳುಗಳು ಸಖಿ |
ಬೆಳೆವ ಧರೆಯ ಪಾದದಡಿಯಲಿ ತುಳಿಯುವ ಕಲ್ಲುಗಳು ಸಖಿ ||

ನಡೆದ ದಾರಿ ಸವೆದ ಹಾಗೆ ಸಾವಿರ ಪ್ರಶ್ನೆಗಳು ಹೊಳೆದಿವೆ |
ಕಣ್ಣ ಪೊರೆಯು ಕಳಚುವಲಿ ಮಧುರ ಭಾವ ನೋಟಗಳು ಸಖಿ ||

ಬಿತ್ತಿದ ಬೀಜ ಬೆಳೆದು ಫಲ ಪಡೆಯುವಲಿ ಶತ್ರುಗಳ ದಾಳಿ |
ಅರಳು ಮಲ್ಲಿಗೆ ಹುಟ್ಟಿಗೆ ಸುತ್ತ ನಂಜು ಕಾರುವ ಜನಗಳು ಸಖಿ ||

ಬೆವರು ಹರಿಸಿ ದುಡಿದ ಅನ್ನದಲಿ ಬದುಕುವ ಛಲ ತುಂಬಿದೆ |
ಹೆಗಲ ಮೇಲೆ ಮೆರೆಸಿದ ಅಪ್ಪನಲಿ ಮುಗಿಲಿನತ್ತ ಕನಸುಗಳು ಸಖಿ ||

ಮದ್ಯ ಸವಿದ ಉಲ್ಲಾಸ ಮುತ್ತು ಸುರಲೋಕದ ಸೋಪಾನ |
ಆಕೆ ಮನದ ಗಾಯ ಮರೆಸುವ ಸುರಹೊನ್ನೆ ಮಾತುಗಳು ಸಖಿ ||

********************

Leave a Reply

Back To Top