ರವಿ ಬುವಿಯೆದುರು ಮುಂಗಾರಮ್ಮ – ಭಾಗ 2

ರವಿ ಬುವಿಯೆದುರು
ಮುಂಗಾರಮ್ಮ – ಭಾಗ 2

ಕವಿತಾ ಹೆಗಡೆ ಅಭಯಂ

ಆಷಾಢದ ವಿರಹ ಸೃಜಿಸಿದ
ಅದೃಶ್ಯ ಜನಕನೆಡೆಗೆ
ವಿಲಕ್ಷಣ ಕಿಚ್ಚಿನ ಸೇಡು
ರವಿಯ ಕಣ್ಣುಗಳಲಿ.
ಬುವಿಯ ಬರಸೆಳೆದೊಯ್ವ
ತಹ ತಹ ಎದೆಯಲಿ ಹೊತ್ತು
ಸುಧೆ ಸುರಿಸುತ್ತಿದ್ದ ಒಲವ
ಕಸಿದ ಮುಂಗಾರಮ್ಮನೆಡೆ
ಕಿರಣ ಕತ್ತಿ ಝಳಪಿಸುವ ಬಿಸುಪು.

ಆಷಾಢದುದ್ದಕ್ಕೂ ಬುವಿಯ
ಮನದಲ್ಲಿ ಮುಚ್ಚಿಡಲಾಗದ ಮುನಿಸು,
ಇನಿಯನಾಗಸದೆದೆಯಲ್ಲಿ
ದಕ್ಕಬೇಕಿದ್ದ ಬೆಚ್ಚಗಿನ ಭಾವಗಳನೆಲ್ಲ
ಯಾರೋ ಎಂದೋ ರೂಪಿಸಿದ
ಅಕ್ಷಮ್ಯ ಅಲಿಖಿತ ಕಾನೂನಿಗೆ
ಒಪ್ಪಿಸಿದ ಅಮೂರ್ತ ಅಳಲು.

ರಮಿಸಿ ಉಣಿಸಿ ವಾತ್ಸಲ್ಯವರ್ಷದಿ
ನೆನೆಸಿ ಬೆಳೆಸಿದ ಕೂಸು
ಮಾಸವಿಡೀ ಅನ್ಯಮನಸ್ಕತೆಯಲಿ
ಅನವರತ ವಿರಹಾಗ್ನಿಯಲಿ
ಕುದಿಯುತ ತನ್ನನೇ ಕೊಲುವ ಪರಿಗೆ
ಮುಂಗಾರಮ್ಮನೆದೆಯಲ್ಲಿ
ಅಧೀರತೆಯ ಕುಲುಮೆ.

ಎದೆಯನಲಂಕರಿಸಿದ್ದ ಹಾರ
ಹರಿದು ಹರಡಿದ ನೋವು
ಶಿರದ ಕಿರೀಟದ ವಜ್ರ
ಕಳಚಿ ಉರುಳಿಹೋದ ದುಗುಡ
ಸವಿ ಕೈತುತ್ತು ಹಳಸಿತೋ
ತವರ ತಂಪು ಹಾವಸೆಗಟ್ಟಿಸಿತೋ
ಮುಚ್ಚಟೆಯ ಮುಸುಕು
ಉಸಿರುಗಟ್ಟಿಸಿತೋ
ರವಿ ಹಿಡಿದ ಚುಂಬಕ
ಬುವಿಗೆ ತಪ್ಪಿಸಿಕೊಳದ ಸೆಳೆತವೋ
ಎರಡು ಒಂದಾಗುವ ಕರಗಿ
ನೀರಾಗುವ ಕನಸು ಕುಣಿಸುತಿಹುದೋ

ಪ್ರೇಮಿಗಳ ಪುನರ್ಮಿಲನಕೆ
ಶ್ರಾವಣದ ಸಜ್ಜೆಯ ಸೃಜಿಸಿ
ಒಂದೊಂದೇ ಹೆಜ್ಜೆ ಹಿಂದಿಡುವಾಗ
ತಾಯೆದೆಯಲ್ಲಿ ಅದೇಕೋ
ಹೇಳತೀರದ ತಳಮಳ.

ತ್ರಿಕೋನವಾಗಿ ತಾವು ಮೂವರನೂ ಜೋಡಿಸಿಡುವ ಕನಸು
ಮುಂಗಾರಮ್ಮನಿಗೆ,
ರವಿ ಬುವಿ ಎಂಬ ಎರಡೇ ಬಿಂದುಗಳ
ಸಂಧಿಸುವ ರೇಖೆಯಾಗುವ ಕನಸು
ಪ್ರಣಯ ಪಕ್ಷಿಗಳಿಗೆ.

************************

One thought on “ರವಿ ಬುವಿಯೆದುರು ಮುಂಗಾರಮ್ಮ – ಭಾಗ 2

  1. Wonderful ಶಬ್ದಗಳ ಬಾಣ ಇಷ್ಟು ತೀವ್ರ ಇದೆ ಅಂದ್ರೆ ಅದಕ್ಕೆ ತುಂಬಾ ನಿದಾನ ವಾಗಿ ಒದ್ಬೇಕು ….nice

Leave a Reply

Back To Top