ಕಾವ್ಯಯಾನ
ದಂಡೆಯನ್ನೊಮ್ಮೆ…..
ನಾಗರಾಜ್ ಹರಪನಹಳ್ಳಿ
ದಂಡೆಯನ್ನೊಮ್ಮೆ ಮಾತಾಡಿಸಿ ಬರುವೆ
ಯಾಕೆ ಗೊತ್ತಾ ??
ಅಲ್ಲಿ ನಿನ್ನ ಪಾದದ ಗುರುತು ಮಾತಾಡುತ್ತದೆ
ಪ್ರೀತಿಯ ದಂಡೆಗೆ ಚೆಲ್ಲಿದೆ
ಜಗವ ಬೆಳಗುವ ಬೆಳಕು ಹುಟ್ಟಿದ್ದು ನಿನ್ನ ಪಾದಗಳಿಂದ
ಜಗದ ಪ್ರೇಮಿಗಳು ಪ್ರೇಮವ ಕಡ ಪಡೆದದ್ದು
ನಿನ್ನದೇ ದನಿಯಿಂದ
ದಂಡೆಯನ್ನೊಮ್ಮೆ ಮುದ್ದಿಸಿ ಬರುವೆ
ಮಗುವಿನ ಜೋಗುಳ ಹುಟ್ಟಿದ್ದೆ ನಿನ್ನ ಸೆರಗಿನಿಂದ
ದಂಡೆಯ ಮರಳಲ್ಲಿ ಕಟ್ಟಿದ ಮನೆಗಳೆಷ್ಟು?
ಕೂಡಿ ಆಡಿ ನಲಿದು ಗೂಡು ಕಟ್ಟಿ ಪ್ರೀತಿಸಿ ಮದುವೆಯಾಗಿ
ಕೆಡೆಸಿದ ಆಟಗಳೆಷ್ಟು?
ದಂಡೆಯ ಜೊತೆ ಜಗಳವಾಡಿ ಬರುವೆನೊಮ್ಮೆ
ಅದೆಷ್ಟು ಜೀವಗಳ ತುಂಬಿ ಸಾಕಿ ಸಲುಹಿ
ಕೆಲವಷ್ಟು ಜೀವಗಳ ಬಲಿಪಡೆದದ್ದಕ್ಕೆ ಕೋಪಿಸಿಕೊಂಡು ಬರುವೆನೊಮ್ಮೆ
ಇದೇ ದಂಡೆಯಲ್ಲಿ ಪ್ರೀತಿ ಬಿತ್ತಿ
ಕೋಪದಲ್ಲಿ ಮುನಿಸಿಕೊಂಡು
ಮತ್ತೆ ಮತ್ತೆ ರಮಿಸಿ ಪ್ರೀತಿಸಿದವಳ , ಎದೆಯಲ್ಲಿ ಉಳಿದು ಬೆಳೆದವಳ
ಮಾತಾಡಿಸಿ ಬರುವೆ ದಂಡೆಯನ್ನೊಮ್ಮೆ
******************