ಗಜಲ್ ಜುಗಲ್ ಬಂದಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-12

ರೇಖಾಭಟ್

ಬರೆದಿಟ್ಟ ಹಾಡುಗಳಿಗೆ ದನಿಗಳನ್ನು ಹುಡುಕಬೇಕಿದೆ
ಹರವಿಟ್ಟ ಕನಸುಗಳಿಗೆ ಬೊಗಸೆಗಳನ್ನು ಹುಡುಕಬೇಕಿದೆ

ಅವರು ಬರಡು ಎದೆಯೊಳಗೆ ಸಸಿ ನೆಟ್ಟು ಹೋಗಿದ್ದಾರೆ
ನಿಯಮಿತವಾಗಿ ನೀರೆರೆವ ಕರಗಳನ್ನು ಹುಡುಕಬೇಕಿದೆ

ಅವರಿತ್ತ ಅಪೂರ್ವ ಗಮ್ಯದ ನಕ್ಷೆ ಜೊತೆಯಲ್ಲಿಯೇ ಇದೆ
ಅತ್ತ ಹೊರಡಲು ಜೊತೆ ಹೆಜ್ಜೆಗಳನ್ನು ಹುಡುಕಬೇಕಿದೆ

ಅವರು ಬಂಡೆ ಗಟ್ಟಿಯೆಂದು ಪರೀಕ್ಷಿಸಿ ಹೋಗಿದ್ದಾರಲ್ಲವೇ
ಕಡೆದು ಮೂರ್ತಿಯಾಗಿಸುವ ಶಿಲ್ಪಿಗಳನ್ನು ಹುಡುಕಬೇಕಿದೆ

ರೇಖೆ ಹೊಡೆತಗಳಿಗೆ ಬಾಗದೆಂದು ಅವರು ಸ್ವತಃ ಕಂಡುಕೊಂಡರಂತೆ
ಪ್ರೀತಿಯಲ್ಲಿ ಪೂರ್ತಿ ಕರಗಿಸುವವರನ್ನು ಹುಡುಕಬೇಕಿದೆ

==================.

ಸ್ಮಿತಾ ಭಟ್

ಬರೆಯದೇ ಬಿಟ್ಟ ಭಾವಗಳಿಗೆ ನೆಲೆಯೊಂದ ಹುಡುಕಬೇಕಿದೆ
ಬಳಸದೇ ಬಿಟ್ಟ ನೆನಪುಗಳಿಗೆ ರೆಕ್ಕೆಯೊಂದ ಹುಡುಕಬೇಕಿದೆ

ತೇವ ಆರದ ಕಣ್ಣುಗಳಲಿ ಕನಸಿನ ಜನನ ಆಗುವುದೆಂತು
ಉದುರಿದ ಎಲೆ ಕವಲಿನಲಿ ಬದುಕೊಂದ ಹುಡುಕಬೇಕಿದೆ

ಗೊತ್ತು ಗುರಿ ಇಲ್ಲದೇ ಸಾಗಿದರೆ ದಾರಿ ಸುಗಮ ಹೇಗೆ
ಎದೆ ಕದವ ತೆರೆದು ಬೆಳಕ ಜಾಡೊಂದ ಹುಡುಕಬೇಕಿದೆ

ಮೆತ್ತಗಿರುವಲ್ಲೇ ಮತ್ತೆ ಮತ್ತೆ ಗುದ್ದಲಿ ಏಟು ಬೀಳುವುದು
ಅಗೆದ ನೆಲದಾಳದಲಿ ನಿಧಿಯೊಂದ ಹುಡುಕಬೇಕಿದೆ

ಹಕ್ಕಿ ನಂಬುವುದು ತನ್ನ ರೆಕ್ಕೆಯನ್ನು ಮಾತ್ರ “ಮಾಧವ”
ನೆಲ ಮುಗಿಲಿನ ಪ್ರೀತಿಯಲಿ ಎಳೆಯೊಂದ ಹುಡುಕಬೇಕಿದೆ.

**********************

Leave a Reply

Back To Top