ನೋವುಂಡು ನಗುತ್ತ ಬದುಕಿದ
ಡಾ. ಗಿರಿಜಮ್ಮ ನೆನಪು
ಲೇಖಕರು-ಆರ್.ಜಿ.ಹಳ್ಳಿ ನಾಗರಾಜ್
ವೃತ್ತಿಯಲ್ಲಿ ಜನಪ್ರಿಯ ಡಾಕ್ಟರ್, ಬಡವರ ಹಾಗೂ ನಿರ್ಗತಿಕರ ಬಗ್ಗೆ ಅಪಾರ ಕಾಳಜಿ ಹಾಗೂ ವಿಶೇಷ ಪ್ರೀತಿ. ಅಂಥ ಬಡತನದಲ್ಲಿ ಹುಟ್ಟಿ ಬೆಳೆದುದ್ದರ ಪರಿಣಾಮ ಅವರ ಹೃದಯ ಮಾನವೀಯತೆಗೆ ತುಡಿಯುತ್ತಿತ್ತು. ಅವರು ವೈದ್ಯಕೀಯ ವೃತ್ತಿ ಜೊತೆಗೆ ಹಲವು ಹವ್ಯಾಸ ಹೊಂದಿದ್ದರು. ಬರವಣಿಗೆಯಲ್ಲಿ ಕತೆ, ಕಾದಂಬರಿ, ವೈಚಾರಿಕ ಲೇಖನ, ವೈದ್ಯಕೀಯದಲ್ಲಿ ಪ್ರಸೂತಿ ಬಗ್ಗೆ ಕೃತಿ ರಚನೆ, ದೂರದರ್ಶನಕ್ಕೆ ಕಿರು ಧಾರಾವಾಹಿ, ಸಿನಿಮಾ ನಿರ್ದೇಶನ… ಹೀಗೆ ಬಹುಮುಖ ಪ್ರತಿಭೆಯವರಾಗಿದ್ದ ಇವರು ಡಾ. ಎಚ್. ಗಿರಿಜಮ್ಮ.
ಇಂಥ ಕ್ರಿಯಾಶೀಲ ಡಾಕ್ಟರ್ ದಾವಣಗೆರೆಯಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾದರೆಂಬ ಸುದ್ದಿ ತಿಳಿದು ಅತೀವ ನೋವು, ದುಃಖ ಉಂಟಾಯಿತು. ಅವರು ನಮ್ಮ ಕುಟುಂಬದ ಪ್ರೀತಿಯ ವೈದ್ಯೆ. ಮಾರ್ಗದರ್ಶಿ. ನನಗೆ ಅಕ್ಕನಂತೆ ಇದ್ದವರು. ನನ್ನ ಪತ್ನಿ ಕವಯಿತ್ರಿ ಡಾ. ಎಚ್.ಎಲ್. ಪುಷ್ಪಾಗೆ ಅಚ್ಚುಮೆಚ್ಚಿನ ವೈದ್ಯೆ, ಲೇಖಕಿ. ಹಿತಚಿಂತಕಿ. ಅವರು ನಿಧನರಾದಾಗಾ ಒಂಟಿಯಾಗೆ ಮನೆಯಲ್ಲಿದ್ದರು. ಅವರ ಬದುಕಲ್ಲಿ ಅನೇಕ ಏರಿಳಿತಗಳಿದ್ದವು. ಎದೆಯಲ್ಲಿ ದುಃಖ ಇಟ್ಟುಕೊಂಡು ಜಗದ ಎದುರು ಸದಾ ನಗುನಗುತ್ತ, ಹಾಸ್ಯ ಚಟಾಕಿ ಹಾರಿಸುತ್ತ, ನಿಮ್ಮಂತೆ ನಾವು ಬುದ್ದಿಜೀವಿಗಳಲ್ಲ. ಜನ ಸಾಮಾನ್ಯರ ಸಾಹಿತಿಗಳು ಎಂದೇಳುತ್ತ ಅಸಾಧ್ಯ ಸಾಧನೆಗಳನ್ನು ಮಾಡಿದವರು. ಗೌರವಯುತವಾಗಿ ಬಾಳಿದವರು. ಯಾರ ಮನಸ್ಸನ್ನೂ ನೋಯಿಸದ ಇವರ ಬಗ್ಗೆ ಏನು ಬರೆಯಲಿ?
ಅದು 1987 – 88. ನಾವು ಬೆಂಗಳೂರಿನ ಹೌಸಿಂಗ್ ಬೋರ್ಡ್ ಹತ್ತಿರ ನಾಗರಬಾವಿ ರಸ್ತೆಯ ಮನೆಯಲ್ಲಿ ವಾಸವಿದ್ದೆವು. ಆ ಪ್ರದೇಶದಲ್ಲಿ ಆಗ ಹರಿಹರದಿಂದ ಬಂದ ಡಾ. ಎಚ್. ಗಿರಿಜಮ್ಮ ಅವರು ಒಂದು ನರ್ಸಿಂಗ್ ಹೋಂ ತೆರೆದಿದ್ದರು. ನಮಗೆ ಲೇಖಕಿ, ಕತೆಗಾರ್ತಿ, ಕಾದಂಬರಿಕಾರರಾಗಿ ಆಗಲೇ ಅವರು ಪರಿಚಯ ಇದ್ದುದರಿಂದ ಕುಟುಂಬದ ಸಖ್ಯ ಬೇಗನೆ ಬೆಳೆಯಿತು. ಜೊತೆಗೆ ನಮ್ಮ ಊರಿನವರೆಂಬ ಅಭಿಮಾನ. ಅವರು ಆ ಪ್ರದೇಶದ ಪ್ರಸಿದ್ದ ಪ್ರಸೂತಿತಜ್ಞೆಯಾಗಿ ಹೆಸರಾದರು. ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು.
ಮದುವೆಯ ನಂತರದ ನಮ್ಮ ಬದುಕು ಕಷ್ಟಕರವಾಗಿತ್ತು. ನಾವು ಒಂದು ರೀತಿ ಹೋರಾಟದ ಬದುಕು ನಡೆಸುತ್ತಿದ್ದರಿಂದ ವೈದ್ಯಕೀಯ ಚಿಕಿತ್ಸೆಗೆ ಅವರ ಆಶ್ರಯ ಪಡೆಯುವುದು ಅನಿವಾರ್ಯ ಆಗಿತ್ತು. ಪತ್ನಿ ಪುಷ್ಪಾ ಗರ್ಭಿಣಿ ಆದಾಗ ಅವರೆ ಪ್ರತಿಯೊಂದನ್ನೂ ಮಾರ್ಗದರ್ಶನ ಮಾಡಿ, ಚಿಕಿತ್ಸೆ ನೀಡುತ್ತಿದ್ದರು.
ಸ್ವಲ್ಪ ಕಾಲ ಆದ ನಂತರ ಡಾ. ಗಿರಿಜಮ್ಮನವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿತಜ್ಞೆಯಾಗಿ ಕೆಲಸ ಸಿಕ್ಕಿತು. ನರ್ಸಿಂಗ್ ಹೋಂ ಮುಚ್ಚಿದರು. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಅವರು ವೃತ್ತಿ ಆರಂಭಿಸಿದರು. ಆಗ ಆ ಆಸ್ಪತ್ರೆ ರಾಜಕಾರಣಿಗಳು ಚಿಕಿತ್ಸೆ ಪಡೆಯುವ ವಿಶೇಷ ಆಸ್ಪತ್ರೆಯೂ ಆಗಿತ್ತು. ಅವರಿಗಾಗಿ ವಿವಿಐಪಿ ಅತ್ಯಾಧುನಿಕ ವಾರ್ಡುಗಳು ಇದ್ದವು. ಅವು ಪುಟ್ಟ ಮನೆಯಂತೆ ಇರುತ್ತಿದ್ದುದು ವಿಶೇಷವಾಗಿತ್ತು.
ಆ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ವಿಶೇಷ ಸವಲತ್ತಿನ ವೈದ್ಯಕೀಯ ಉಪಕರಣಗಳೂ ಇದ್ದವು. ಅಲ್ಲೂ ಗಿರಿಜಮ್ಮ ವೈದ್ಯೆಯಾಗಿ ಜನಪ್ರಿಯರಾದರು. ತಮ್ಮ ವಾಸ್ತವ್ಯವನ್ನೂ ಆಸ್ಪತ್ರೆ ಆವರಣದ ಕ್ವಾಟ್ರಸ್ಸಿಗೆ ಬದಲಾಯಿಸಿದ್ದರು.
ಪುಷ್ಪಾಗೆ ಹೆರಿಗೆ ಸಂದರ್ಭ ತಾವೇ ಮುತುವರ್ಜಿ ವಹಿಸಿ, ಆಸ್ಪತ್ರೆಗೆ ಸೇರಿಸಿಕೊಂಡು, ಹೆರಿಗೆ ಕಷ್ಟವಾದಾಗ ಆಪರೇಷನ್ ಮಾಡಿ ತಾಯಿ ಮಗುವನ್ನು ಆರೋಗ್ಯಕರವಾಗಿ ನೋಡಿಕೊಂಡು ಮಾನವೀಯತೆ ಮೆರೆದವರು. ವಿಶೇಷ ವಾರ್ಡನ್ನು ಕೊಡಿಸಿ ಉಪಕಾರ ಮಾಡಿದ್ದರು.
ನಮಗೊಬ್ಬರಿಗೇ ಅವರು ಆಪ್ತ ವೈದ್ಯರಾಗಿರಲಿಲ್ಲ. ಅನೇಕ ಬರಹಗಾರರು, ಟಿವಿ, ಸಿನಿಮಾ ಕಲಾವಿದರಿಗೂ ಅವರು ಆಪ್ತ ವೈದ್ಯೆ, ಮಾರ್ಗದರ್ಶಕರಾಗಿದ್ದರು. ಗೆಳೆಯ ನಾಗತಿಹಳ್ಳಿ ಚಂದ್ರಶೇಖರ ಆಗ ಉಪನ್ಯಾಸಕ ವೃತ್ತಿ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಹೆಸರಾಗಿದ್ದ. ಅವನ ಶ್ರೀಮತಿ ಶೋಭಾ ಕೂಡ ಅದೇ ಆಸ್ಪತ್ರೆಯಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಅವರ ಮಗಳು ಕನಸು, ನಮ್ಮ ಮಗಳು ಅಂಕಿತನಿಹಾರಿ ಒಂದೇ ದಿನ ಬೌರಿಂಗ್ ಆಸ್ಪತ್ರೆಯಲ್ಲಿ ಹುಟ್ಟಿದಾಗ ಡಾ.ಗಿರಿಜಮ್ಮ ಅವರೆ ಎಲ್ಲಾ ಆರೈಕೆ, ಯೋಗಕ್ಷೇಮ ನೋಡಿಕೊಂಡದ್ದು… ಅದೇ ಸಂದರ್ಭ ನಾಗತಿಹಳ್ಳಿ “ಪ್ರಜಾವಾಣಿ”ಯಲ್ಲಿ “ಕನಸು ಹುಟ್ಟಿತು ನೋಡ” ಎಂಬ ಕತೆ ಬರೆದ. ಅದರಲ್ಲಿ ಆಸ್ಪತ್ರೆಯಲ್ಲಿನ ಆಡಳಿತಾತ್ಮಕ ನ್ಯೂನತೆಯ ಎಳೆ ಇತ್ತು. ಆಗ ಡಾ. ಗಿರಿಜಮ್ಮ ಸಣ್ಣ ಬೇಸರದಲ್ಲಿ ಗೊಣಗಿಕೊಂಡಿದ್ದರು. ಆದರೆ ಇದಾವುದೂ ಅವರ ಸ್ನೇಹಕ್ಕೆ ಕುಂದುಂಟಾಗಲಿಲ್ಲ.
ಬೌರಿಂಗ್ ಆಸ್ಪತ್ರೆಯ ನಂತರ ಅವರು ಗೌಸಿಯಾ ಸರ್ಕಾರಿ ಹೆರಿಗೆ ಆಸ್ಪತ್ರಗೆ ವರ್ಗವಾಗಿ ಬಂದರು. ಮುಂದಿನ ದಿನಗಳ ಅವರ ಬದುಕು, ಬರಹ, ಟಿವಿ ಧಾರಾವಾಹಿ, ಸಿನಿಮಾ, ಹೋರಾಟ… ಎಲ್ಲಾದರಲ್ಲೂ ಕೈಯಾಡಿಸಿದಾಗ ನಾವು ಜೊತೆ ಇದ್ದೆವು. ಅವೆಲ್ಲ ಈಗಲೂ ಹಸಿರಾಗಿವೆ.
ಅವರು ಉತ್ತರ ಕನ್ನಡ ಜಿಲ್ಲೆಯ ಒಬ್ಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಅವನು ನೋಡಲು ಸುಂದರವಾಗಿದ್ದ. ಅವನನ್ನು ಹಾಕಿಕೊಂಡು ಕೆಲವು ಟೆಲಿಫಿಲಂ ಹಾಗೂ ಒಂದು ಸಿನಿಮಾಕೂಡ ಮಾಡಿದರು. ಅವನಿಗೆ ಓಡಾಡಲು ಒಂದು ಕಾರನ್ನೂ ಕೊಡಿಸಿದ್ದರು. ಇಷ್ಟಾಗ್ಯೂ ಅವನು ಮುಂದೆ ಡಾ. ಗಿರಿಜಮ್ಮ ಅವರಿಗೆ ನಿಷ್ಠನಾಗಿ ಇರಲಿಲ್ಲ! ಸಿನಿಮಾ ಕಲಾವಿದೆಯರ ಜೊತೆ ಚಕ್ಕಂದ ಶುರುವಿಟ್ಟುಕೊಂಡ. ಕೆಲವು ದುಶ್ಚಟಗಳ ದಾಸನೂ ಆದ. ಅವರಿಗೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಕೊಡಲು ಶುರು ಮಾಡಿದ. ಇದರಿಂದ ಕುಗ್ಗಿಹೋದ ಅವರು ಅವನಿಂದ ಬಿಡುಗಡೆ ಆದರೆ ಸಾಕು ಎಂದು ಮನದಲ್ಲೇ ಕೊರಗಿದರು. ಹೀಗಾಗಿ ಪ್ರತಿಷ್ಠಿತ ವೈದ್ಯೆ, ಸಾಹಿತಿಯಾದ ಅವರು ಯಾರಲ್ಲೂ ಹೇಳಿಕೊಳ್ಳದೆ ಮಾನಸಿಕ ಹಿಂಸೆ ಅನುಭವಿಸಿದರು.
ಕೆಲ ವರ್ಷಗಳ ನಂತರ ಇಬ್ಬರೂ ಬೇರೆಬೇರೆಯಾದರು. ಆರಂಭದ ಟಿವಿ ಟೆಲಿ ಫಿಲಂಗೆ ಅವರು ಆಯ್ಕೆ ಮಾಡಿಕೊಂಡ ವಿಷಯ “ಭ್ರೂಣ ಹತ್ಯೆ”. ಇದರ ಮುಖ್ಯ ಪಾತ್ರದಲ್ಲಿ ನಟಿ ಉಮಾಶ್ರೀ, ಪ್ರಕಾಶರೈ ಅಭಿನಯಿಸಿದ್ದರು. ಉಮಾಶ್ರೀ ಹಾಗೂ ಪ್ರಕಾಶ ರೈ ರಂಗಭೂಮಿ ಪ್ರತಿಭೆಗಳು. ಆಗಿನ್ನು ಉಮಾಶ್ರೀ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರಲಿಲ್ಲ. ಪ್ರಕಾಶ ರೈ ಸಿನಿಮಾ ಎಂಟ್ರಿಗೆ ಪ್ರಯತ್ನ ನಡೆಸುತ್ತಿದ್ದ. ಈ ಟೆಲಿ ಫಿಲಂ ನಂತರ ಅವರು ಹಲವು ಕಿರುಚಿತ್ರ, ಧಾರಾವಾಹಿಗೆ ತಮ್ಮದೇ ಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದರು. ಕಿರುತೆರೆ ಕ್ಷೇತ್ರ ಬೆಳೆದಂತೆಲ್ಲ ವ್ಯಾವಹಾರಿಕ ವಿಚಾರಗಳು, ಲೇವದೇವಿ ಶುರುವಾದಾಗ, ಈ ಕ್ಷೇತ್ರ ನಮ್ಮಂಥವರಿಗಲ್ಲ ಎಂದು ದೂರ ಸರಿದರು. ಆಗ ದೂರದರ್ಶನ ಒಂದೇ ಜನಪ್ರಿಯ ವಿದ್ಯುನ್ಮಾನ ಮಾಧ್ಯಮ. ಅಲ್ಲಿ ಭ್ರಷ್ಟಾಚಾರ ಹೆಚ್ಚಾದಾಗ ಹಲವು ಅಧಿಕಾರಿಗಳು ಸಿಕ್ಕಾಕಿಕೊಂಡದ್ದು ನಡೆಯಿತು. ಅದೇ ಸಂದರ್ಭ ಖಾಸಗಿ ವಾಹಿನಿಗಳು ಹೆಜ್ಜೆ ಊರತೊಡಗಿದವು.
ಕಾಲಚಕ್ರ ಉರುಳಿದಂತೆ ಬೆಂಗಳೂರು ಬೇಸರವಾಗಿ ದಾವಣಗೆರೆಗೆ ವಾಪಾಸು ಬಂದರು. ಬೆಂಗಳೂರಿನ ಜಯನಗರದಲ್ಲಿ ಕೊಂಡಿದ್ದ ಅಪಾರ್ಟ್ ಮೆಂಟ್ ಮಾರಿ ತಮ್ಮ ಹಳೆ ನೆಲೆ ಹುಡುಕಿಕೊಂಡರು. ಅಲ್ಲೂ ಜನಪ್ರಿಯ ಪ್ರಸೂತಿವೈದ್ಯೆಯಾಗಿ ಜನ ಮನ್ನಣೆ ಗಳಿಸಿದರು. ಜತೆಗೆ ತಮ್ಮ ಹವ್ಯಾಸದ ಬರವಣಿಗೆಯನ್ನು ಮುಂದುವರೆಸಿದರು. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ “ಗರ್ಭಿಣಿ”, “ಸ್ತ್ರೀ ದೇಹ”, “ರಕ್ತದ ಕಾಯಿಲೆಗಳು”, “ಸಂತಾನಹೀನತೆ” ಮೊದಲಾದ ಕೃತಿ ರಚಿಸಿದರು. ಬೆಂಗಳೂರಿನಲ್ಲಿ ಕೆಲ ಕಾಲ ವಯಸ್ಸಾದ ತಮ್ಮ ತಾಯಿಯನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದರು. ಅವರು ವೃತ್ತಿಯಲ್ಲಿ ದಾದಿಯಾಗಿ, ತಮ್ಮ ಮಗಳು ವೈದ್ಯೆ ಆಗಬೇಕು ಎಂದು ಕನಸು ಕಂಡು, ಅದನ್ನು ನನಸಾಗಿಸಿಕೊಂಡವರು. ಕೆಲಕಾಲದ ನಂತರ ಅವರ ತಾಯಿ ದಾವಣಗೆರೆಯಲ್ಲಿ ನೆಲೆಸಿದರು. ಗಿರಿಜಮ್ಮ ಅವರ ತಂದೆ ತಾಯಿ ಮೂಲತಃ ಬಳ್ಳಾರಿ ಜಿಲ್ಲೆ ಕೊಟ್ಟೂರಿನವರು. ತಂದೆ ತೀರಿದ ಬಳಿಕ, ತಾಯಿ ಇಬ್ಬರು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ದಾವಣಗೆರೆಗೆ ವಲಸೆ ಬಂದರು. ದಾದಿಯಾಗಿ ಆಸ್ಪತ್ರೆಯಲ್ಲಿ ಸೇವೆ ಮಾಡಿದರು. ಕಷ್ಟವೋ, ಸುಖವೋ ತನ್ನ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅವರ ಕಾಲಮೇಲೆ ಅವರು ನಿಂತುಕೊಳ್ಳುತ್ತಾರೆ ಎಂದು ಭಾವಿಸಿ ಗಿರಿಜಮ್ಮನವರಿಗೆ ಎಂ.ಬಿ.ಬಿ.ಎಸ್ ಓದಿಸಿದರು. ಮೈಸೂರಿನಲ್ಲಿ ಅವರು ಕಲಿಯುವಾಗಲೆ ಸಾಹಿತ್ಯದ ಗೀಳನ್ನು ಅಂಟಿಸಿಕೊಂಡರು. ಜನಪ್ರಿಯ ಲೇಖಕಿಯರ ಕೃತಿಗಳ ಜೊತೆಗೆ ತರಾಸು, ಅನಕೃ, ಕುವೆಂಪು, ಕಾರಂತ ಮುಂತಾದವರನ್ನು ಓದಿಕೊಂಡರು.
ಡಾ. ಗಿರಿಜಮ್ಮ ಅವರ ವೈದ್ಯಕೀಯ ಹಾಗೂ ಸಾಹಿತ್ಯ ಸೇವೆ ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಇವರ ಪ್ರತಿಭೆ, ಸೇವೆ ಗುರುಸಿ ಪ್ರಶಸ್ತಿ ಮಾನ್ಯ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
ನವಂಬರ್ 1ರ ಆ ಸಮಾರಂಭ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದರೆ; ಅಂದು ಬೆಳಗ್ಗೆ “ಡಿ.ಎಸ್. ಮ್ಯಾಕ್ಸ್ ಸಾಹಿತ್ಯ ಪುರಸ್ಕಾರ”ದ ಪ್ರಶಸ್ತಿ, ಫಲಕ, ರೂ.15,000/- ನಗದಿನ ಸಮಾರಂಭವೂ ಬೆಂಗಳೂರಲ್ಲಿ ನಡೆಯಿತು. ಆಗ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪನವರು ವೇದಿಕೆಯಲ್ಲಿ ಇದ್ದದ್ದು ಸ್ಮರಣೀಯ ಗಳಿಗೆಯಾಯಿತು.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಅವಧಿ ವೆಬ್ ಪತ್ರಿಕೆಗಾಗಿ ಪತ್ರಕರ್ತ, ಕವಿ ಬಿ.ಎನ್. ಮಲ್ಲೇಶನಿಗೆ ಒಂದು ಸಂದರ್ಶನ ನೀಡಿದ್ದರು. ಸಮಕಾಲೀನ ಲೇಖಕಿಯರ ಬಗ್ಗೆ ಅವರು ಅಲ್ಲಿ ಮಾತಾಡಿದ್ದರು. ಸಾಹಿತ್ಯದ ಹೊಸ ಬೆಳವಣಿಗೆ ಅವರಿಗೆ ಚೆನ್ನಾಗಿ ಅರಿವಿತ್ತು. ಅವರು ಈ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ, ತಮ್ಮ ಬದುಕಿನ ಅನೇಕ ಘಟನೆ, ವ್ಯಕ್ತಿಗಳ ನೆನಪುಗಳನ್ನು ದಾಖಲಿಸುತ್ತಿದ್ದರು. ಅವರ ಸಂದರ್ಶನದ ಮಾತುಗಳು ಮುಖ್ಯವಾದ್ದರಿಂದ ಇಲ್ಲಿ ದಾಖಲೆ ಮಾಡುತ್ತಿದ್ದೇನೆ:
“ಮಹಿಳಾ ಸಾಹಿತ್ಯವನ್ನು ನೋಡುವ ದೃಷ್ಟಿಕೋನ ಈಗ ಬಹಳಷ್ಟು ಬದಲಾಗಿದೆ. ನಮ್ಮದು ಅಡುಗೆಮನೆ ಸಾಹಿತ್ಯ ಅಂತ ಈಗ ಕರೆಯೋ ಹಾಗಿಲ್ಲ. ಈಗಿನ ಲೇಖಕಿಯರು ತುಂಬಾ ಗಟ್ಟಿತನದಿಂದ ಬರೀತಿದ್ದಾರೆ. ಮುಖ್ಯವಾಗಿ ಎಚ್. ನಾಗವೇಣಿ, ಎಚ್.ಎಸ್. ಅನುಪಮ, ರೂಪ ಹಾಸನ, ಎಚ್.ಎನ್. ಆರತಿ, ಆಶಾದೇವಿ…. ಮೊದಲಾದವರು… ಅಷ್ಟೇ ಏಕೆ ನಮ್ಮ ಎಚ್.ಎಲ್. ಪುಷ್ಪ ಮುಂತಾದವರೆಲ್ಲ ತುಂಬಾ ಶಕ್ತಿಯುತವಾಗಿ ಬರೆಯುತ್ತಿದ್ದಾರೆ. ಈ ಸಂಖ್ಯೆ ಇನ್ನೂ ದೊಡ್ಡದಿದೆ. ದೊಡ್ಡದಾಗಬೇಕು”.
ಕಳೆದ ವರ್ಷ ಡಾ.ಎಚ್. ಗಿರಿಜಮ್ಮ ಅವರು “ಕಾಡುತಾವ ನೆನಪುಗಳು” ಎಂಬ ಆತ್ಮಚರಿತ್ರೆ ಬರೆದರು. ಇದನ್ನು ಬೆಂಗಳೂರಿನ ನಿಡಸಾಲೆ ಪುಟ್ಟಸ್ವಾಮಯ್ಯ ತಮ್ಮ ಪ್ರಕಾಶನದಿಂದ ಹೊರತಂದರು. ಅದು ಅಂತರಂಗದ ನೋವನ್ನೆ ಬಸಿದಿಟ್ಟ ಕೃತಿ. ತಮ್ಮ ಎಲ್ಲಾ ನೋವುಗಳನ್ನು ಅಲ್ಲಿ ಹೇಳದಿದ್ದರು, ಪುರುಷ ಪ್ರಧಾನ ಸಮಾಜ ಒಬ್ಬ ವೈದ್ಯೆಯನ್ನೂ ನಡೆಸಿಕೊಂಡ ರೀತಿಯನ್ನು ಚಿತ್ರಿಸಿದ್ದಾರೆ. ಈ ಕೃತಿಯ ಮುಖಪುಟದಲ್ಲಿ ಅವರು ಒಂದು ಕೆರೆದಂಡೆ ಮೇಲೆ ನಡೆದು ಹೋಗುತ್ತಿದ್ದಾರೆ. ಹಾಗೇ ನಡೆದು ನಡೆದು ಅವರು ಹೊರಟೇ ಹೋದರು. ಅದು ಅವರ ಕೊನೆಯ ಕೃತಿಯೂ ಹೌದು. ಮುಖಪುಟದ ಫೋಟೋಗೂ, ಅವರ ಅಂತ್ಯವಾದ ಬದುಕಿಗೂ ಎಂಥಾ ಕಾಕತಾಳಿಯ…!
ಕೊನೆಯಮಾತು: ರಾಜ್ಯದಲ್ಲಿ ಜನಪ್ರಿಯರಾದ ಡಾಕ್ಟರ್ ಎಚ್. ಗಿರಿಜಮ್ಮ ಅವರಿಗೆ ದಾವಣಗೆರೆಯಲ್ಲಿ ಸಾಹಿತ್ಯಕ್ಕೆ ಸಿಕ್ಕಬೇಕಾದ ಮಾನ್ಯತೆ ಸಿಕ್ಕಲಿಲ್ಲವೇನೋ ಅನ್ನಿಸುತ್ತದೆ. ಅವರಿಗೆ ತಾಲ್ಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಎಲ್ಲಾ ಅರ್ಹತೆ ಇತ್ತು. ಆದರೆ ಕಾಲ ಕೂಡಿ ಬರಲಿಲ್ಲ. ಆ ವೇದನೆಯೂ ಅವರ ಅಂತರಂಗದಲ್ಲಿ ಇತ್ತು
ಡಾ. ಎಚ್. ಗಿರಿಜಮ್ಮ ಅವರ ಪ್ರಬಂಧವೊಂದರ ಹಸ್ತಪ್ರತಿ. ಇದು ಬೆಂಗಳೂರಿನಲ್ಲಿ ಇದ್ದಾಗ ಬರೆದ ಅಪ್ರಕಟಿತ ಲೇಖನ.
ಡಾ. ಎಚ್. ಗಿರಿಜಮ್ಮ ಅವರ ಪ್ರಬಂಧವೊಂದರ ಹಸ್ತಪ್ರತಿ. ಇದು ಬೆಂಗಳೂರಿನಲ್ಲಿ ಇದ್ದಾಗ ಬರೆದ ಅಪ್ರಕಟಿತ ಲೇಖನ. ೧೩ ಪುಟಗಳ ಲೇಖನ ನನ್ನ ದಾಖಲೆಯಲ್ಲಿ ಸಿಕ್ಕಿದೆ.
Very touching article. Thanks for writing it. She is a great soul. Let her soul rest in peace.
ಡಾ ಗಿರಿಜಮ್ಮ ಬಗ್ಗೆ ಗೊತ್ತಿಲ್ಲದ ಮಾಹಿತಿ ನೀಡಿದ ಉತ್ತಮ ಲೇಖನ…. ಧನ್ಯವಾದಗಳು ಸರ್ ಹಂಚಿಕೊಂಡಿದ್ದಕ್ಕೆ.. ಒಂದು ಸಹೃದಯಿ ಜೀವ ಇಲ್ಲವಾದದ್ದು ದುಃಖ…..ಅವರ ಆತ್ಮಕ್ಕೆ ಶಾಂತಿ ಸಿಗಲಿ
ಪ್ರೀತಿಯ ನಾಗರಾಜ್, ಇದು ಒಂದು ಉತ್ತಮವಾದ ಬರವಣಿಗೆ , ಇದನ್ನು ಕೇವಲ ಶ್ರದ್ಧಾನಂಜಲಿ ಎನ್ನಲಾಗದು , ಒಂದು ಕಿರು ಆತ್ಮಕಥನ ಎನ್ನುವಷ್ಟರ ಮಟ್ಟಿಗೆ Dr ಗಿರಿಜಮ್ಮ ಅವರ ಪರಿಚಯ ಮಾಡಿಸಿದ್ದೀರಿ.
ಇದನ್ನು ಓದಿದ ನನಗೆ ಅವರ ಮೇಲೆ ಮೆಚ್ಚಗೆಯೂ , ಅಭಿಮಾನವೂ ಹಾಗೂ ಅವರು ಅನುಭವಿಸಿರಬಹುದಾದ ನೋವಿನ ಬಗ್ಗೆ ವಿಷಾದವೂ ಉಂಟಾಯಿತು .
ನಿಮ್ಮ ಬರವಣಿಗೆ ಹೆಚ್ಚು ಜನರಿಗೆ ತಲಿಪಿ , ಗಿರಿಜಮ್ಮ ಅವರ ಸಾರ್ಥಕ ಬದುಕು ಎಲ್ಲರಿಗೂ ಮಾದರಿಯಾಗಲಿ ಎಂದು ಆಶಿಸುತ್ತೇನೆ.
ಅವರ ಆತ್ಮಕ್ಕೆ ಶಾಂತಿ ದೊರಕಲಿ
ಇಂತಹ ಮಾನವೀಯ ತುಡಿತವನ್ನು ಹೊಂದಿರುವ ನಿಮ್ಮ ಹೃದಯ ವೈಶಾಲತೆಗೆ ನನ್ನ ನಮನ
ಒಳ್ಳೆ ಮಾಹಿತಿ ನೀಡಿದ್ದೀರಿ ಸರ್. ಡಾ. ಎಚ್ ಗಿರಿಜಮ್ಮ ಅವರ ಸಾಹಿತ್ಯದ ಮೇಲೆ ಪಿ ಎಚ್ ಡಿ ಅಧ್ಯಯನ ನಡೆದಿದಿಯೇ ತಿಳಿಸಿ,