ಆತ್ಮಸಖಿಯ ಧ್ಯಾನದಲಿ

ಪುಸ್ತಕ ಸಂಗಾತಿ

ಆತ್ಮಸಖಿಯ ಧ್ಯಾನದಲಿ

ಕೃತಿ ಶೀರ್ಷಿಕೆ…. ಆತ್ಮಸಖಿಯ ಧ್ಯಾನದಲಿ

ಲೇಖಕರ ಹೆಸರು.. ಸಿದ್ಧರಾಮ ಹೊನ್ಕಲ್ ಮೊ.೯೯೪೫೯೨೨೧೫೧

ಪ್ರಕಾಶಕರುಅಲ್ಲಮಪ್ರಭು ಪ್ರಕಾಶನ ಶಹಾಪೂರ

ಪ್ರಕಟಿತ ವರ್ಷ ೨೦೨೧.     ಬೆಲೆ ೧೨೦

ಪ್ರೊ.ಸಿದ್ಧರಾಮ ಹೊನ್ಕಲ್ ಅವರು ಕಲ್ಯಾಣ ಕನಾ೯ಟಕದ ದೈತ್ಯ ಕವಿಗಳೆಂದೇ ಎಲ್ಲರಿಗೆ ಚಿರ ಪರಿಚಿತರು. ಈಗಾಗಲೇ ಸಾಹಿತ್ಯದ‌ ವಿವಿಧ ಪ್ರಕಾರಗಳಾದ ಕಥೆ,ಪ್ರವಾಸ ಕಥನ,ಲಲಿತ ಪ್ರಬಂಧ, ಕವಿತೆಗಳು,ಗಜಲ್ ಗಳು,ಹಾಯ್ಕುಗಳು,ಹೀಗೆ ೪೫ ಕ್ಕೂ ಹೆಚ್ಚು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಯಿಂದ ಪ್ರಶಸ್ತಿ ಪಡೆದಿದ್ದಲ್ಲದೆ ಇನ್ನೂ ಅನೇಕ ಪ್ರಶಸ್ತಿಗಳು ಹಾಗೂ ಗುಲಬರ್ಗಾ ವಿ.ವಿ.ಯ ರಾಜಪುರೋಹಿತ ಕಥಾ ಸ್ಪದೆ೯ಯಲ್ಲಿ ಚಿನ್ನದ ಪದಕ ಮತ್ತು ಸತತವಾಗಿ ಆರು ಸಲ ಕಥಾ ಪುರಸ್ಕಾರ ಪಡೆದಿದ್ದಾರೆ. ಮೂರು ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ ಮತ್ತು ಅನೇಕ ಪ್ರಶಸ್ತಿಗಳು  ಇವರನ್ನು ಹುಡುಕಿಕೊಂಡು ಬಂದಿವೆ.

          ಶಹಪೂರ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷತೆ ಮತ್ತು ಯಾದಗಿರಿ ಜಿಲ್ಲಾ ೪ನೇ ಸಮ್ಮೇಳನದ ಸವಾ೯ಧ್ಯಕ್ಷರಾಗಿ ಗೌರವವನ್ನು ಪಡೆದಿದ್ದಾರೆ.ಇವರು ವೃತ್ತಿಯಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕ ರಾಗಿದ್ದರೂ ಪ್ರವೃತ್ತಿಯಲ್ಲಿ ದೈತ್ಯ ಸಾಹಿತಿಗಳಾಗಿ ಕನಾ೯ಟಕದ  ತುಂಬಾ ಪರಿಚಿತರಾಗಿದ್ದಾರೆ.

     ಈಗ ಸಿದ್ಧರಾಮ ಹೊನ್ಕಲ್ ಅವರು ಒಬ್ಬ ಶ್ರೇಷ್ಠ ಗಜಲ್ ಕಾರರಾಗಿ ಉತ್ತಮ ಗಜಲ್ಗಳನ್ನು ರಚಿಸುತ್ತಿದ್ದಾರೆ. ಅವರು ಈಗಾಗಲೇ ಒಂದು ವರ್ಷದಲ್ಲಿ ಮುೂರು ಗಜಲ್ ಸಂಕಲನಗಳನ್ನು ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದಾರೆ.೧. ಆಕಾಶಕ್ಕೆ ಮಹಲವು ಬಣ್ಣಗಳು. ೨. ಹೊನ್ನ ಮಹಲು.೩. ನಿನ್ನ ಪ್ರೇಮವಿಲ್ಲದೇ ಸಾಕಿ ಎಂಬ ಗಜಲ್ ಸಂಕಲನಗಳನ್ನು ಪ್ರಕಟಿಸಿ ಎಲ್ಲರಿಗೂ ಆಶ್ಚರ್ಯ ವನ್ನುಂಟು ಮಾಡಿದ ಅದ್ಭುತ ಗಜಲ್ ಕಾರರಿವರು.ಈಗ ನಾಲ್ಕನೇ ಗಜಲ್ ಸಂಕಲನ ಆತ್ಮಸಖಿಯ ಧ್ಯಾನದಲಿ ಎಂಬ ಗಜಲ್ ಸಂಕಲನ ವನ್ನು ಪ್ರಕಟಿಸಿದ್ದು ಓದುಗರ ಕೈಗೆ ಕೊಟ್ಟಿದ್ದಾರೆ.

ಗಜಲ್ ಗಳ ಮೂಲ ದ್ರವ್ಯವಾದ ಪ್ರೀತಿ,ಪ್ರೇಮ,ವಿರಹ, ನಿವೇದನೆ,ಕಾಯುವಿಕೆ,ಕನವರಿಸುವಿಕೆ,ಸಂದಾನ,ಲೌಕಿಕ ದಿಂದ ಅಲೌಕಿಕ ಕಡೆ ಹೋಗುತ್ತವೆ,   ನೋವು,ನಲಿವು,ತಳಮಳ,ಇವರ ಗಜಲ್ ಗಳಲ್ಲಿ ತಮ್ಮ ಆತ್ಮಸಖಿಯನ್ನು ಪಡೆಯುವ,ಆಕೆಯ ಬರುವಿಗಾಗಿ ಕಾಯುತ್ತಾ ವಿರಹದಲಿ ನರಳುವುದು,ಆಕೆ ಇಲ್ಲದೆ ನನಗೆ ಬದುಕೇ ಇಲ್ಲವೆಂಬ ಭಾವನೆಗಳೊಂದಿಗೆ ಆಕೆಯ ಹುಡುಕಾಟದಲ್ಲಿಯೇ ಗಜಲ್ ಗಳನ್ನು ರಚನೆ ಮಾಡಿದ್ದಾರೆ ,”ಹೊನ್ನಸಿರಿ” ಕಾವ್ಯ ನಾಮದಿಂದ ಬರೆದ ಗಜಲ್ ಗಳು ಉತ್ಕೃಷ್ಟ ವಾದ ಪ್ರೇಮಾಲಾಪದ ಗಜಲ್ ಗಳಿದ್ದು ಓದುಗರನ್ನು ಪ್ರೀತಿ ವಿರಹದಲ್ಲಿ ತೋಯಿಸಿ ಬಂಧಿಸುತ್ತವೆ.

   ಆತ್ಮಸಖಿ ಧ್ಯಾನದಲಿ ಈ ಗಜಲ್ ಸಂಕಲನದಲ್ಲಿ  ಒಟ್ಟು ೮೫ ಗಜಲ್ ಗಳಿದ್ದು ಎಲ್ಲಾ ಗಜಲ್ ಗಳಲ್ಲಿ ಹೆಚ್ಚಾಗಿ ಹೊನ್ಕಲ್ ಅವರು ತಮ್ಮ ಆತ್ಮಸಖಿ ಯೊಂದಿಗೆ ಪ್ರೀತಿ ,ಪ್ರೇಮ,ವಿರಹ,ಕಾಯುವಿಕೆ ಪ್ರೀತಿ ಪಡೆಯುವ ಹಂಬಲವನ್ನು ಬಹಳ ಸುಂದರವಾಗಿ ನಿವೇದಿಸಿ ಕೊಂಡಿದ್ದಾರೆ,ಮತ್ತು ಕೆಲವು ಗಜಲ್ ಗಳು ಸಮಾಜಿಕ ಕಳಕಳಿ,ಇಂದಿನ ಕರೋನಾದ ದುರಿತ ಕಾಲದ ವಾಸ್ತವಿಕ ಸ್ಥಿತಿಯನ್ನು ಅಸಹಾಯಕನಾದ ಮಾನವನ ಪರಿಸ್ಥಿತಿ ಬಗ್ಗೆಯೂ ಎಳೆ ಎಳೆಯಾಗಿ ಬಿಚ್ಚಿ ಬರೆದಿದ್ದಾರೆ.ಹಾಗೂ ಕೌಟುಂಬಿಕ ಗಜಲ್ ಗಳನ್ನು ಬರೆದಿದ್ದಾರೆ, ಸೂಫಿ ಸಂತರ ತತ್ವದಂತೆ ಆಧ್ಯಾತ್ಮಿಕ ಸ್ಪರ್ಶದ ಕೆಲವು ಗಜಲ್ ಗಳು ಇವೆ.ಲೌಕಿಕ ಪ್ರೀತಿಯಿಂದ ಅಲೌಕಿಕ ಪ್ರೀತಿಯ ಕಡೆಗೆ ಓದುಗರನ್ನು ಕರೆದುಕೊಂಡು ಹೋಗುತ್ತವೆ.ವಸುದೇವ ಕುಟುಂಬಕಂ ಎನ್ನುವಂತೆ ವಿಶ್ವ  ಮಾನವ ಒಂದೆಂಬ ಭಾವನೆಯ ಗಜಲ್ ಕೂಡಾ ಇವೆ. ಸದಾ ನಗು ನಗುತಾ ಮುಗ್ಧ ಮಗುವಿನ ಮನಸ್ಸಿನ ಹೊನ್ಕಲ್ ಅವರ ಗಜಲ್ ಗಳು ಯುನಕರನ್ನು ಬಹಳ ಕಾಡುತ್ತವೆ.ಕೆಲವು ಚಿಂತನೆಗೆ ಹಚ್ಚುತ್ತವೆ.

          ಆತ್ಮಸಖಿಯ ಧ್ಯಾನದಲಿ    ಗಜಲ್ ಸಂಕಲನಕ್ಕೆ ನಾಡಿನ ಹಿರಿಯ ಶ್ರೇಷ್ಠ  ಬಹುಭಾಷಾ ಗಜಲ್ ಕಾರರದ ಡಾ.ಕಾಶಿನಾಥ ಅಂಬಲಗೆ ಯವರು ಮೌಲಿಕ ವಾದ ಮುನ್ನುಡಿಯನ್ನು ಬರೆದಿದ್ದಾರೆ, ಬೆನ್ನುಡಿಯನ್ನು ನಾಡಿನ ಪ್ರಮುಖ ಲೇಖಕರು  ಮತ್ತು ಗಜಲ್ ಕಾರರು ಆದ ಡಾ.ಬಸವರಾಜ ಸಬರದ ಅವರು ಬರೆದು ಬೆನ್ನು ತಟ್ಟಿದ್ದಾರೆ. ಸಂಕಲನ ಪ್ರಕಟನೆ ಮುಂಚೆ ಗಜಲ್ ಗಳನ್ನು ಓದಿ ಗಜಲ್ ಕಾರರಾದ ಅಬ್ದುಲ್ ಹೈ ತೋರಣಗಲ್,ಯು.ಸಿರಾಜ ಅಹಮದ್ ಸೊರಬ,ನೂರ ಅಹ್ಮದ ನಾಗನೂರ,ಶ್ರೀ ದೇವಿ ಕೆರೆಮನೆ,ಪ್ರೇಮಾ ಹೂಗಾರ,ಪ್ರಭಾವತಿ ಎಸ್ ದೇಸಾಯಿ, ಇವರೆಲ್ಲ ಸಂಕಲನದ ಬಗ್ಗೆ  ಅಮುಲ್ಯವಾದ  ಮೌಲ್ಯಯುತ ಅನಿಸಿಕೆ ಗಳನ್ನು ಬರೆದು ಸಂಕಲನದ ಮೌಲ್ಯ ಹೆಚ್ಚಿಸಿದ್ದಾರೆ. ಕಲಾವಿದರಾದ ಹಾದಿಮನಿ ಯವರು ಮುಖ ಚಿತ್ರ,ಪುಟ ವಿನ್ಯಾಸವನ್ನು ಶ್ರೀ ಹರೀಶ್ ಕೆ .ಆರ್  ಅವರು ಮಾಡಿದ್ದಾರೆ ಈ ಇಬ್ಬರು ಕಲಾವಿದರ ಕಲೆಯಿಂದ ಸಂಕಲನದ ಸೌಂದರ್ಯ ಹೆಚ್ಚಿದ್ದು ಓದುಗರಿಗೆ ಸಂತಸವಾಗುತ್ತದೆ

ಆತ್ಮಸಖಿಯ ಧ್ಯಾನದಲಿ ಗಜಲ್ ಸಂಕಲನದಲ್ಲಿ ನನಗೆ ಕಾಡಿದ ಕೆಲವು ಗಜಲ್ ಗಳ ಮಿಸ್ರಾಗಳು

ಮನದಲೇ ಅವಿತು ಆಟವಾಡಿಸುವವಳೇ ನೀ ಈಗ ಎಲ್ಲಿರುವೆ

ಮನಸು ಹತ್ತಿರವಿದ್ದರೂ ದೂರಾದವಳೇ ನೀ ಈಗ ಎಲ್ಲಿರುವೆ   ( ಗಜಲ್ )

ಮೇಲಿನ ಮತ್ಲಾದಲ್ಲಿ ಕವಿ ತನ್ನ ಪ್ರಿಯತಮೆ ಆತ್ಮ ಸಂಗಾತಿಯನ್ನು ಹುಡುಕುತ್ತಾ ಎಲ್ಲಿ ಅವಿತುಕೊಂಡು ಕುಳಿತು ಆಟವಾಡಿಸುತ್ತಿರುವೆ,ಮನಸಿನಲ್ಲಿದ್ದರೂ ಕಣ್ಣಿಗೆ ಕಾಣದೆ ದೂರಾದೆ ಯಾಕೆ ಎಲ್ಲಿ ಅಡಗಿರುವೆ , ನೀ ಈಗ ಎಲ್ಲಿರುವೆ ಎಂದು ಹಪಹಪಿಸುತ್ತಾನೆ.

ಕದ್ದು ಕದ್ದು ನೋಡುವುದೇಕೆ ಹೀಗೆ ಕಾಡುವುದೇಕೆ ಸಖಿ

ಮನ ತುಂಬಾ ಪರಸ್ಪರ ನಾವಿರಲು ಬಿಗುಮಾನವೇಕೆ ಸಖಿ  (ಗಜಲ್ )

ಪ್ರಿಯತಮೆ ಕದ್ದು ಕದ್ದು ತನ್ನ ಪ್ರಿಯಕರನನ್ನು ಮರೆಯಲ್ಲಿ  ನಿಂತು ನೋಡುತ್ತಾ ಅವನ ಕೈಗೆ ಸಿಗದೆ ಕಾಡಿಸುತ್ತಾಳೆ.ಕವಿ ನಾವು ಪರಸ್ಪರ ಮನದಲ್ಲಿ ಬಂಧಿಯಾಗಿದ್ದೇವೆ,ಮತ್ತೇಕೆ ಈ ಬಿಗುಮಾನದಲ್ಲಿ ದೂರ ನಿಂತು ಕಾಡುತ್ತಿರುವೆ.ಬೇಗ ಬಂದು ನನ್ನ ಅಪ್ಪಿಕೋ ಸಖಿ ಎಂದು ಹಂಬಲಿಸುತ್ತಾರೆ.

ನಿಂತಲ್ಲೆ ನಿಂತು ನೀನು ಮಡುಗಟ್ಟಬೇಡವೇ ಸಖಿ

ನದಿಯಾಗಿ ಹರಿದು ಕಡಲು ಸೇರಬೇಡವೇ ಸಖಿ

ಗಜಲ್ ಕಾರರು ಮೇಲಿನ ಮಿಸ್ರಾದಲ್ಲಿ ನಿಂತ ನೀರಾಗಬೇಡ ,ನಿಂತ ನೀರು ಮಲೀನವಾಗುತ್ತದೆ. ಚಲನೆ ಶುದ್ಧ ಮತ್ತು ಪ್ರಗತಿಯ ಸಂಕೇತವೆಂದು ಹೇಳುತ್ತಾ ,ನೀ ನದಿಯಾಗಿ ಹರಿಯುವ ಗಂಗೆಯಾಗಿ ಬಂದು ನನ್ನ ಒಲವಿನ ಹೃದಯ ಸಾಗರದಲ್ಲಿ ಲೀನವಾಗು ,ನದಿ ಕಡಲು ಸೇರಿದಾಗಲೇ ಅದಕ್ಕೆ ಹೊಸ ಜನ್ಮ ಮುಕ್ತಿ ಎಂದು ಹೇಳಿದ್ದಾರೆ.

ನೀ ಈಗ ದೂರಾದರೂ ನೀ ನೀಡಿದ ಸುಖದ ಸಾಂಗತ್ಯ ಕಸಿಯಲಾರೆ ಸಖಿ

ಬಿಟ್ಟಿರಲಾರೆ ಆತ್ಮಸಖಿ ಆಗಿರೋದಕೆ ನಿನ್ನ ಮಾತು ನೆನಪಾಗದಿರೆ ಹಾಗೆ ಇದ್ದುಬಿಡೇ ಸಖಿ

ದಾಂಪತ್ಯ ಜೀವನದಲ್ಲಿ ಮುನಿಸು,ಸೆಡವು,ಸಿಟ್ಟುಗಳು ಆಗಾಗ ನಡೆಯುತ್ತಿರುತ್ತವೆ.ಸಂಗಾತಿ ಮುನಿದು ಮೌನವಾಗಿ ದೂರಾದರೂ ಅವಳು ಕೊಟ್ಟ ಸುಖ ಮರೆಯಲಾಗುವುದೆ? ಅದನ್ನು ಯಾರೂ ಕಸಿಯಲಾರರು , ನಿನ್ನ ಬಿಟ್ಟು ನಾನು ಬದುಕಲಾರೆ,ನೀನು ನನ್ನ ಆತ್ಮಸಂಗಾತಿ ಆಗಿದ್ದು ನಿನಗೆ ನೆನಪಾಗದೇ?ಎಂದು ಕವಿ ಹೃದಯ ಕೇಳುತ್ತದೆ.

ಹೊರ ಬಂದಾಗ ಅವನವ್ವ ಕೇಳುತ್ತಾಳೆ ಏನೆಂದರು ವೈದ್ಯರು ಅಂತ

ಅಳು ನುಂಗಿ ಯಾವ ತೊಂದ್ರೆ ಇಲ್ಲ ಅಂದ್ರು ಅಂತ ಪ್ರತಿ ಬಾರಿಯು ನಗುತ್ತಲಿರುತ್ತಾನೆ

ಈ ಒಂದು ಗಜಲ್ ಹೃದಯ ಹಿಂಡುವಂತಹದು ,ತಾಯಿಯ ಅನಾರೋಗ್ಯ, ಗುಣಪಡಿಸಲು ಅಲೆದಾಡುವ ಮಗ,ಪ್ರತಿ ಸಾರೆ ಬೇರೆ ಬೇರೆ ಹೊಸ ವೈದ್ಯರನ್ನು ಭೆಟ್ಟಿಯಾಗಿ ತಾಯಿಯನ್ನು ಬೇಗನ ಗುಣಪಡಿಸಲು ಬಯಸುವ ಮಗನ ಮನದ ನೋವು ಹಿಡಿದಿಟ್ಟಿದ್ದಾರೆ.ತಾಯಿಯ ತಪಾಸಣೆ ಮುಗಿದ ನಂತರ ಕೇಳುವ ಪ್ರಶ್ನೆ?ಅದಕ್ಕೆ ಉತ್ತರಿಸಲಾಗದ ಮಗನ ಸ್ಥಿತಿ ,ಮನದ ನೋವು ಗಜಲ್ ದಲ್ಲಿ ಚಿತ್ರಿಸಿದ್ದಾರೆ.ಆದರೂ ಮಗ ತನ್ನ ದುಃಖ ನುಂಗಿ ತಾಯಿಯ ಪ್ರಶ್ನೆಗೆ ಅವಳನ್ನು ಸಮಾಧಾನ ಪಡಿಸಲು  ಸುಳ್ಳು ಹೇಳುವುದು ,ತಾಯಿಗೆ ನೀನು ಬೇಗ ಆರಾಮ ಆಗುವೆ ಎಂದು ನಗುತ ಹೇಳುವ ದೃಷ್ಯ ಮನ ಮಿಡಿಯುವಂತೆ ಕಣ್ಣಿಗೆ ಕಟ್ಟುವಂತೆ ಗಜಲ್ ದಲ್ಲಿ ಹಿಡಿದಿಟ್ಟಿದ್ದಾರೆ.

ಯಾರಿಗಾಗಿ ಹಗಲಿರುಳು ಹಂಬಲಿಸಿದೇನೋ ಅವಳು ಬೆನ್ನು ತೋರಿಹಳು

ಚಕೋರಂಗೆ ಚಂದ್ರಮನ ಚಿಂತೆಯಂತೆ ಕಾದೆನೋ ಅವಳು ಮೋಡದಲಿ ಮರೆಯಾದಳು

“ಚಕೋರಂಗೆ ಚಂದ್ರಮನ ಉದಯದಾ ಚಿಂತೆ ” ಎಂಬ ಬಸವಣ್ಣ ನವರ ವಚನದ ಸಾಲುಗಳನ್ನು ರೂಪಕವಾಗಿ ಬಳಿಸಿದ್ದಾರೆ.ಚಂದ್ರನ ಬರುವನ್ನು ಚಕೋಕ ಪಕ್ಷಿ ಕಾಯುವಂತೆ ತನ್ನ ಪ್ರಯೆತಮೆಯು ಬರುವಳೆಂದು ಹಗಲು,ರಾತ್ರಿ ಹಂಬಲಿಸಿ ಕಾದರೂ ಅವಳು ಬರಲಿಲ್ಲ .ಮೋಡದಲ್ಲಿ ಚಂದಿರ ಮರೆಯಾಗುವಂತೆ ಪ್ರಯತಮೆ ಮರೆಯಾಗಿ ಮುಖ ತೋರಿಸದೆ ಬೆನ್ನು ತೋರಿಸುತ್ತಾಳೆಂಬ ನಿರಾಶಾಭಾವವು ಈ ಮಿಸ್ರಾ ದಲ್ಲಿ ವ್ಯಕ್ತಪಡಿಸಿದ್ದಾರೆ.

ಭಾವಗಳೇ ಸತ್ತು ಹೋದ ಮೇಲೆ ಬದುಕಲೇನಿದೆ

ಕನಸುಗಳೇ ಸತ್ತು ಹೋದ ಮೇಲೆ ನನಸಲೇನಿದೆ

“ಪ್ರೀತಿ ಇಲ್ಲದ ಮೇಲೆ ಹೂ ಅರಳೀತು ಹೇಗೆ ” ಎಂದ ಕವಿ ಜಿ ಎಸ್ ಎಸ್ ಅವರ ನುಡಿಯಂತೆ ಹೃದಯ ದಲ್ಲಿ ಭಾವನೆಗಳು ಸತ್ತ ಮೇಲೆ ಬದುಕುವುದು ಹೇಗೆ ,ಬದುಕಿನ ದಾರಿ ದೀಪವಾದ ಕನಸುಗಳೇ ನಂದಿ ಹೋದ ಮೇಲೆ ಬಾಳ ಬಂಡಿ ಸಾಗುವುದು ಹೇಗೆ,ಬದುಕು ನೀರಸವಾಗಿ ಜೀವನವೇ ನಿಸ್ಸಾರವಾಗುವುದುದೆಂದು ಗಜಲ್ ಕಾರರು ಭಗ್ನ ಪ್ರೇಮಿಯ ಮನ ಸ್ಥಿತಿಯನ್ನು ವಿವರಿಸಿದ್ದಾರೆ.

ಹೊನ್ಕಲ್ ಅವರು ಈ ಸಂಕಲನದಲ್ಲಿ ಕೆಲವು ತರಹೀ ಗಜಲ್ ಗಳನ್ನು ರಚಿಸಿದ್ದಾರೆ. ಮೂಲ ಕವಿಯ ಭಾವಕ್ಕೆ ಧಕ್ಕೆ ಬರದಂತೆ ಸುಂದರವಾಗಿ ಭಾವಪೂರ್ಣ ವಾಗಿ ಮುಂದುವರೆಸಿ ತರಹೀ ಗಜಲ್ ಗಳನ್ನು ರಚಿಸಿದ್ದಾರೆ.

ಈ ಸಂಕಲನದಲ್ಲಿ ಮುಸಲ್ ಸಿಲ್ ಹಜಲ್,ಗೈರ ಮುಸಲ್ ಸಿಲ್ ಗಜಲ್,ಮುರದ್ಧಫ್ ಗಜಲ್,ಗೈರ್ ಮುರದ್ಧಫ್ ಗಜಲ್ ,ಜುಲ್ ಕಾಫಿಯಾ ಗಜಲ್,ತರಹೀ ಗಜಲ್,ಸಂಪೂರ್ಣ ಮತ್ಲಾ ಗಜಲ್,ಹೀಗೆ ವಿವಿಧ ರೀತಿಯ ಗಜಲ್ ಗಳನ್ನು ನಾವು ಇಲ್ಲಿ ಓದ ಬಹುದು.

ಪ್ರೌಢ ಗಜಲ್ ಕಾರರಾದ ಸಿದ್ಧರಾಮ ಹೊನ್ಕಲ್ ಅವರು ಇನ್ನೂ ಅನೇಕ ಗಜಲ್ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಗಜಲ್ ಸಾಹಿತ್ಯ ಲೋಕವನ್ನು ಸಮೃದ್ಧ ಪಡಿಸಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.

**********************************

ಪ್ರಭಾವತಿ ಎಸ್ ದೇಸಾಯಿ

2 thoughts on “ಆತ್ಮಸಖಿಯ ಧ್ಯಾನದಲಿ

  1. ತುಂಬಾ ಆಪ್ತ ಬರಹ ಜೀ ಮೇಡಂ
    ತುಂಬು ಹೃದಯದ ಅಭಿನಂದನೆಗಳು ಸರ್ ಜೀ

  2. ಪ್ರಭಾವತಿ ಮೇಡಂ, ಸಂಕ್ಷಿಪ್ತವಾದರೂ ಸೊಗಸಾದ ವಿವರಣೆ, ‘ಆತ್ಮಸಖಿಯ ಧ್ಯಾನದಲಿ’ ಯಾವಾಗ ಓದುವೆನೋ ಅನಿಸುತ್ತಿದೆ, ನಮ್ಮ ಕಲ್ಯಾಣ ಕರ್ನಾಟಕದ ಹೆಮ್ಮೆಯ ಗಜಲ್ ಕವಿ ಸಿದ್ದರಾಮ್ ಹೊನ್ಕಲ್ ಸರ್ ಅವರಿಗೆ ಅಭಿನಂದನೆಗಳು

Leave a Reply

Back To Top