ಕಾಂತರಾಜು ಕನಕಪುರ ಅವರ ಕವಿತೆಗಳು
ಜಾತಿ
ಹೇವರಿಕೆ ಹುಟ್ಟಿಸುವ
ವಿಕಾರ ವೃಕ್ಷ
ಎಲ್ಲಿರುವುದೋ ಬೇರು
ಯಾರೂ ಅರಿಯರು…
ರೆಂಬೆ-ಕೊಂಬೆಗಳು ಲೆಕ್ಕಕ್ಕೆ
ಸಾವಿರಾರು…!
ಅವರವರ ಅನುಕೂಲಕೆ
ಯಾರೋ ನೆಟ್ಟರು…
ಯಾರೋ ನೀರಿಟ್ಟರು…
ಯಾರೋ ಗೊಬ್ಬರ ಕೊಟ್ಟರು…
ಹಲವರು ಕಣ್ಣೀರಿಟ್ಟರು…
ಅಂತು ಬೆಳೆದು ನಿಂತಿದೆ
ಉದ್ದಂಡ ವಿಷ ವೃಕ್ಷ…!
ಈ ಮರದ ನೆರಳು ನೆರಳಲ್ಲ ಅದು
ಅನುನಯದಿ ನೇಯ್ದ ಉರುಳು
ಅನುಕೂಲ ಪಡೆದಿಹರು ಕೆಲವರು
ಸಿಕ್ಕಿಬಿದ್ದು ನರಳುತ್ತಿರುವರು ಹಲವರು
ಇನ್ನಾದರೂ…
ನಾವು ಹಿಡಿಯಬೇಕಿದೆ
ಅರಿವಿನಿಂದ ಮಸೆದ ಸಮಾನತೆಯ ಅಸ್ತ್ರವನು
ಕಡಿದುರುಳಿಸಲು ಜಾತಿಯ ವಿಷ ವೃಕ್ಷವನು
ಆಗ ಮಾತ್ರ ಆಗಬಹುದು ದೇಶದ ಏಳಿಗೆ
ತಪ್ಪಿದರೆ ನಮ್ಮನ್ನು ಕ್ಷಮಿಸದೆಂದೆಂದೂ
ಮುಂಬರುವ ಪೀಳಿಗೆ…
———————–
ನಿನ್ನ ಹಾಗೆಯೇ ಇದೆ
ಮನದಣಿಯೆ ನೋಡಿ ಮಣಿದೆ
ತುಟಿ ತಲುಪಿದ ಮಾತುಗಳು
ಅಲ್ಲಿಯೇ ದಸ್ತಗಿರಿಯಾದವು
ಆಹಾ…! ಎಷ್ಟೊಂದು ಚೆಲುವು?
ಇಬ್ಬನಿಯ ಹನಿಗಳು ನೆತ್ತಿಯ
ಮೇಲೆ ಮುತ್ತಿನಂದದಿ ನಿಂದಿಹವು
ಕದಪುಗಳಲಿ ರಾತ್ರಿ ಕಂಡ ಕನಸಿನ
ಎಳೆಗಳು ಹಸಿಹಸಿಯಾಗಿಹವು…!
ತೀಡುತಲಿದ್ದ ತಂಗಾಳಿಗೆ ಗಂಧವು
ಬೆರೆತು ಸುತ್ತಲೂ ಹರಡುತಲಿತ್ತು
ಸೂರ್ಯರಶ್ಮಿಗೆ ಸವಾಲೊಡ್ಡುತಿರುವ
ಪಕಳೆಗಳು ಬೆಳಕಿಗೆ ಬಣ್ಣ ಬಳಿಯುತಲಿದ್ದವು…!
ಗಾಳಿಯಲ್ಲಿ ಬೆರತ ಗಂಧವು
ಬಟ್ಟೆಗಳಲ್ಲಿ ಸಿಕ್ಕಿಬಿದ್ದಿತ್ತು
ಬೆಳಕಿಗೆ ತೀಡಿದ್ದ ಬಣ್ಣ
ಕಂಗಳಿಗೆ ಮೆತ್ತಿಕೊಂಡಿತ್ತು…!
ಮುಟ್ಟಬೇಕೆಂಬ ತುಡಿತವನು
ಕಷ್ಟಪಟ್ಟು ತಡೆದುಕೊಂಡೆನು
ಕಣ್ಣಿಗೆ ಮೆತ್ತಿದ ಬಣ್ಣ, ಬಟ್ಟೆಗೆ ಅಂಟಿದ ಗಂಧ
ಮನದೊಳಗಿಳಿದು ಮನೆವರೆಗೂ ಬಂದಿವೆ..!
ಥೇಟ್ ನಿನ್ನ ಹಾಗೆಯೇ ಇದೆ
ಅದೋ ಅಲ್ಲಿ ಅರಳಿ ನಿಂತ
ಬೇಲಿ ಮೇಲಿನ ಒಂಟಿ ಹೂ…!
—————————
ಗತ
ಎಂದೋ ಮೀಟಿದ ಶ್ರುತಿಯ ಜಾಡು ಹಿಡಿದು
ಇಂದು ವೀಣೆಯೊಂದು ಮಿಡಿಯುತಿರುವುದು
ಹಳೆಯ ಶ್ರುತಿಯ ಹಾಡಿನ ಮೊನೆಯಿದು
ಕರುಣೆ ಇರದೆ ಎದೆಯನು ಇರಿಯುತಿರುವುದು
ಮರೆತ ನೋವನು ಬಿಡದೆ ಕೆದಕುತಿರುವ
ಹಳೆಯ ಗುರುತಿನ ಹಾಡಿದು
ಕಾಣದಾವುದೋ ಕೈಯ್ಯಿ ಎಡೆಬಿಡದೆ
ಎದೆಯುರಿಗೆ ತಿದಿಯನು ಒತ್ತುತಿರುವುದು
ಇರುವ ಸಂತಸದ ಬನವನು
ಎದೆಯ ಬೆಂಕಿಯು ದಹಿಸುತಲಿರುವುದು
ಗತದ ಮೇಲೆನ ಪರದೆ ಸರಿಸಿ
ಕೊಳೆತ ನೆನಪುಗಳ ಕಾಡುತಿರುವುದು
ಸತ್ತುಹೋದ ಆತ್ಮದ ಹಾಡಿದು
ಧುತ್ತನೆದ್ದು ಕಾಡುತಿರುವುದು
ಗತದ ನೆನಪುಗಳು ಗತಿಸುವವರೆಗೂ
ಕಣ್ಣೀರಿನ ಮಳೆಯನು ಸುರಿಸುವುದನು
ತಪ್ಪದೆ ಜಾರಿ ಇರಿಸಿರುವುದು
*******
Very nice sir
Very nice, u r not only a good teacher but also a good poet sir, keep it up
ಸುಮಧುರ ವಾದ ಕವಿತೆಗಳು ಸರ್
Very nice . Katha
ಅರ್ಥಪೂರ್ಣ ಸಾಲುಗಳು, ಅದ್ಭುತ ಕಲ್ಪನೆ
ಅಭಿಪ್ರಾಯ ವ್ಯಕ್ತಪಡಿಸಿ, ಬರವಣಿಗೆಯನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು…