ಗಜಲ್
ಪ್ರಭಾವತಿ ಎಸ್ ದೇಸಾಯಿ
ಸುಂದರ ಕನಸುಗಳಿಗೆ ಅವನ ಹೆಗಲು ಜಗಲಿಯಾಗಿತ್ತು
ಸಂತಸದ ಸರೋವರಕೆ ಅವನ ಒಲವು ಸೆಲೆಯಾಗಿತ್ತು
ರವಿ ಕಿರಣ ತಾಪಕೆ ಕೊಳದಲಿ ಕೋಮಲ ಕುಸುಮ ಬಾಡಿದೆ
ನೈದಿಲೆ ಅರಳಲು ಅವನ ನಗುವು ಚಂದ್ರಿಕೆಯಾಗಿತ್ತು
ಅನುರಾಗದ ಹಂದರ ಬಿರುಗಾಳಿಗೆ ಉರುಳಿ ನೆಲಕಚ್ಚಿದೆ
ಬಾಳ ಲತೆ ಹಬ್ಬಲು ಅವನ ನಂಟು ಆಸರೆಯಾಗಿತ್ತು
ಪ್ರೀತಿಯ ಬಿತ್ತಲು ಫಲವತ್ತಾದ ಭೂಮಿಕೆ ಸಿಗಲಿಲ್ಲ
ಬೀಜ ಮೊಳಕೆ ಒಡೆಯಲು ಅವನ ಎದೆಹೊಲವು ನೆಲೆಯಾಗಿತ್ತು
ಮೊಗ್ಗು ಬಿರಿದು ಒಡಲ ಪರಿಮಳ ಜಗಕೆ ಪಸರಿಸ ಬಯಸಿತು
ಸುಮ ಘಮ ಹರಡಲು ಅವನ ಶ್ವಾಸವು ಗಾಳಿಯಾಗಿತ್ತು
ಪರಿವರ್ತನೆಗಾಗಿ ಕೋಶದಲಿ ಚಿಟ್ಟೆ ಬಂಧಿಯಾಗಿದೆ
ನಿಶೆ ಮುಸುಕು ಕಳೆಯಲು ಅವನ ಧ್ಯಾನವು “ಪ್ರಭೆ”ಯಾಗಿತ್ತು
**************************
ಗಜಲ್ ಪ್ರಕಟಿಸಿದ ಸಂಪಾದಕ ಮಂಡಳಿಗೆ ಧನ್ಯವಾದಗಳು
ತುಂಬಾ ಚೆನ್ನಾಗಿದೆ