ಕಾವ್ಯಯಾನ
ಭೂಮಿ ತೂಕದ ನಡಿಗೆ
ಡಾ. ಸದಾಶಿವ ದೊಡಮನಿ

ಅವ್ವ
ಅಲ್ಲಿ ನೋಡೇ
ಡೊಂಬರಾಟ ಆಡುವ ಬಾಲೆ
ಹನ್ನೆರಡರೂ ತುಂಬಿಲ್ಲ
ಪಣಕ್ಕಿಟ್ಟು ಜೀವ
ಹಗ್ಗ-ಗಾಲಿಯ ಮೇಲೆ
ನಡೆಯುತ್ತಿದ್ದಾಳೆ
ಉಸಿರು ಬಿಗಿ ಹಿಡಿದು
ಕಾತರತೆಯ ಮೊಟ್ಟೆ
ಎದೆಯಲೊಡೆದು
ನಮ್ಮ ಕೈ ಹಿಡಿದು ನಡೆಸುತ್ತಿದ್ದಾಳೆ
ನನಗೂ ಹನ್ನೆರಡೇ…
ನೀ ನೋಡು
ನನ್ನ ಕೈ ಹಿಡಿದು ಶಾಲೆಗೆ
ಕರೆದೊಯ್ಯುತ್ತಿಯೇ
ಮನೆಗೆ ಕರೆದು ತರುತ್ತಿಯೆ
ಅವ್ವ
ಅಲ್ಲಿ ನೋಡೇ
ಕಲಿಸಿದ ನಾಲ್ಕಕ್ಷರ
ಒಪ್ಪಿಸಲು ನಾನು ತೊದಲುತ್ತೇನೆ
ಸಣ್ಣಗೆ ನಡುಗುತ್ತೇನೆ
ಅವಳೋ…
ಜಗವ ಹೊತ್ತು ಹಗ್ಗ-ಗಾಲಿಯ ಮೇಲೆ
ಬಿಮ್ಮನೆ ನಡೆಯುತ್ತಿದ್ದಾಳೆ
ಅವ್ವ
ಅಲ್ಲಿ ನೋಡೇ
ಬಟ್ಟೆಗೆ ಒಂದು ಎಳೆ ದಾರ ಹಾಕಲು
ಅಲ್ಲಲ್ಲ ಸೂಜಿಗೆ ದಾರ ಪೋಣಿಸಲೂ
ನನಗೆ ಬೇಕು ನೀನು
ಅವಳು ಹರಿದ ಬದುಕನ್ನೇ
ಹೊಲಿಯುತ್ತಿದ್ದಾಳೆ
ಹಸಿದ ಒಡಲಿಗೆ ಅನ್ನವೀಯುತ್ತಿದ್ದಾಳೆ
ಅವ್ವ
ಅಲ್ಲಿ ನೋಡೇ
ಕಲಿಯಲು ಶಾಲೆ
ಕಲಿಸಲು ಗುರು
ತಿರುಗಾಡಲು ಗಾಡಿಯೂ ನನಗೆ
ಅವಳಿಗೇನಿದೆ
ಜಗವೇ ಪಾಠಶಾಲೆ ಅರಿವೆ ಗುರು
ನಡೆದದ್ದೇ ದಾರಿ
ಕಲಿತದ್ದೇ ಬಿಜ್ಜೆ
ಅವಳದು ‘ಭೂಮಿ ತೂಕದ ನಡಿಗೆ’
ಅವಳಂಗೇ ಯಾರಿಹರೆ?
ಈ ಜಗವ ನಡೆಸುತಿಹಳೇ
ಅವ್ವ
ಅಲ್ಲಿ ನೋಡೆ
*******************
Beautiful
Realistic, emotional