ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು

ಪುಸ್ತಕ ಸಂಗಾತಿ

ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು

ಮುಖ್ಯಮಂತ್ರಿ ಅವರ ತಾಯಿಯ “ಅವ್ವ” ಮಾಲಿಕೆಯ ಪ್ರಕಟಣೆಗಳು

ಸಮುದ್ರದ ತೆರೆಗಳು, ಬಂಗಾರದ ಮರಳು,

ಯಾತ್ರಿಕರ ಭಕ್ತಿ, ರಾಮೇಶ್ವರದ ಮಸೀದಿ ರಸ್ತೆ

ಇವೆಲ್ಲವು ವಿಲೀನವಾದರೆ, ನನ್ನ ತಾಯಿ“.

ಅಬ್ದುಲ್ ಕಲಾಂ

ಗಂಡಿರಲಿ, ಹೆಣ್ಣಿರಲಿ ಎಲ್ಲದರಲ್ಲೂ ತಾಯ್ತನದ ಭಾವವನ್ನು ತಾಯಿಯೇ ತುಂಬಿರುತ್ತಾಳೆ. ನಂತರದ ದಿನಗಳಲ್ಲಿ ಬದುಕಿನ ಅನೇಕ ಆವರಣಗಳು ಆ ಅಂತಃಕರಣವನ್ನು ಮಟ್ಟಿ ಮಾತೃತ್ವವನ್ನು ಮರೆ ಮಾಡಿರುತ್ತವೆ.‌ “ಅವ್ವ – ಪುಸ್ತಕ ಮಾಲೆ”ಯ ಉದ್ದೇಶ ಎಲ್ಲರೊಳಗೂ ಸುಪ್ತವಾಗಿರುವ ಆ ಮಾತೃತ್ವವನ್ನು ಉದ್ದೀಪಿಸುವುದು – ಆಕೆಯನ್ನು ಸ್ಮರಿಸುವ ಮೂಲಕ. ಇಂದಿನ ಅನೇಕ ತಲ್ಲಣಗಳಿಗೆ ಇದೊಂದೇ ಉತ್ತರ.

ಹೀಗೆ ತಾಯಿ ಕುರಿತ ಆಲೋಚನೆಯನ್ನು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಹರಿಯಬಿಟ್ಟಿರುವುದು “ಅವ್ವ” ಮಾಲಿಕೆಯ ಆತ್ಮಕತೆಯ ಸಂಪುಟದಲ್ಲಿ.

ತಮ್ಮ ತಾಯಿ ಬಗ್ಗೆ “ಅವ್ವ” ಬೃಹತ್‌ 10 ಸಂಪುಟಗಳ ‌ಮಾಲಿಕೆ‌ ಆರಂಭಿಸಿದ್ದು ಇದುವರೆವಿಗೂ 6 ಸಂಪುಟ ಹೊರಬಂದಿವೆ.

1. ಕನ್ನಡ ಕಾವ್ಯದಲ್ಲಿ‌ ‘ಅವ್ವ‘.

2. ಕನ್ನಡ, ಭಾರತೀಯ ಹಾಗೂ ವಿಶ್ವ ಸಾಹಿತ್ಯದ ಕತೆಗಳಲ್ಲಿಅವ್ವ‘.

3. ಜಾನಪದ ಸಾಹಿತ್ಯದಲ್ಲಿಅವ್ವ“.

4. ನಾಟಕಗಳಲ್ಲಿಅವ್ವ“.

5. ಆತ್ಮಕತೆಗಳಲ್ಲಿಅವ್ವ” , ಸಂಪುಟ 1 ಮತ್ತು 2 (ಎರಡುಸಂಪುಟಗಳಲ್ಲಿ ಕನ್ನಡ ಮತ್ತು ಇತರೆ ಭಾಷೆಗಳ ಬರಹಗಳಿವೆ)

6. ಸಂಶೋಧನೆಯಲ್ಲಿ  “ಅವ್ವ“.

7. ಜನಸಾಮಾನ್ಯನ ದೃಷ್ಟಿಯಲ್ಲಿಅವ್ವ” (ಬರಲಿರುವ ಸಂಪುಟ)

… ಹೀಗೆ ದೊಡ್ಡ ಪ್ರಮಾಣದ ಯೋಜನೆ‌ 2006ರಿಂದ ನಡೆಯುತ್ತಿದ್ದು; ಒಂದು‌ ವಿಶ್ವವಿದ್ಯಾಲಯ ಮಾಡಬಹುದಾದ ಕಾರ್ಯ  ಇದಾಗಿದೆ. ಇದು ಅಷ್ಟು ‌ಸುಲಭದ ಕೆಲಸವಲ್ಲ. ಜವಾಬ್ದಾರಿಯುತವಾದದ್ದು. ಇದನ್ನು ಸಂಶೋಧಿಸಿ, ಬರಹ ಬರೆಯಿಸಿ, ಬೇರೆಬೇರೆ ಕೃತಿಗಳಲ್ಲಿ ಪ್ರಕಟವಾಗಿರುವ ಬರಹ ಹುಡುಕಿ, ಸಂಪಾದಿಸಿ ಕೃತಿ ಹೊರತರುವುದೂ ಕಷ್ಟದ ಕೆಲಸ‌ವೆ. ಈ ಮಾಲಿಕೆಯ ಸಂಪಾದಕರಾಗಿ ಗದಗ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಪ್ರೊ. ಚಂದ್ರಶೇಖರ ವಸ್ತ್ರದ ಹೊಣೆ ಹೊತ್ತಿದ್ದಾರೆ. ಜವಾಬ್ದಾರಿಯುತವಾಗಿ ಇವುಗಳನ್ನು ಹೊರ ತಂದಿದ್ದಾರೆ. ಈ ಕೃತಿಗಳ ಹಿಂದಿನ ಶ್ರಮದ ವಿಚಾರಗಳನ್ನು ಈ ಕೃತಿಗಳ ಸಂಪಾದಕರ ಮಾತಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಆತ್ಮಕತೆಯ ಮಾಲಿಕೆ ಬಗ್ಗೆ ಪ್ರಸ್ತಾಪಿಸಲೇಬೇಕಾದ ಒಂದು ಅಂಶವಿದೆ. ಕನ್ನಡದ ಆತ್ಮಕಥೆ ಜೊತೆಗೆ ಇಂಗ್ಲಿಷ್, ಮಲೆಯಾಳಂ (ಕೆ.ಕೆ. ನಾಯರ್ ಅನುವಾದಿಸಿದ ಏಳು ಆತ್ಮಕತೆ ಭಾಗ ಇವೆ), ಮರಾಠಿ, ತಮಿಳು, ಹಿಂದಿ ಭಾಷೆಯ ವೈವಿಧ್ಯಮಯ ಬರಹಗಳು ಇಲ್ಲಿವೆ. ರಷ್ಯಾದ ಪ್ರಖ್ಯಾತ ಲೇಖಕ ಲಿಯೋ ಟಾಲಸ್ಟಾಯ್, ಭಾರತದ ರಾಷ್ಟ್ರಪತಿ ಆಗಿದ್ದ ಅಬ್ದುಲ್ ಕಲಾಂ ಅಂಥವರ ಬರಹ ಒಳಗೊಂಡಂತೆ, ಕನ್ನಡದ ಬಹುಮುಖ್ಯ ಚಿಂತಕರಾದ ಡಾ. ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕೋ. ಚೆನ್ನಬಸಪ್ಪ ಅವರುಗಳು ತಮ್ಮ ತಾಯಿ ಬಗ್ಗೆ ಬರೆದ ಬರಹಗಳೂ ಇಲ್ಲಿವೆ.

ಈ ಮಾಲಿಕೆಯ ಸಂಪಾದಕ ಪ್ರೊ. ಚಂದ್ರಶೇಖರ ವಸ್ತ್ರದ ಒಂದು ಮಹತ್ವದ ಘಟನೆಯನ್ನು‌ ಸ್ಮರಿಸಿದ್ದಾರೆ. ಅದು ನ್ಯಾಯಮೂರ್ತಿ, ಸಾಹಿತಿ ಕೋ. ಚೆನ್ನಬಸಪ್ಪ ಅವರು ಬರೆದ ಮೌಲಿಕ ಮಾತು:

“ಮಧ್ಯಾಹ್ನ ಊಟ ಮಾಡಿ ನೀವು ಕಳುಹಿಸಿದ  “ಆತ್ಮಕತೆಗಳಲ್ಲಿ ಅವ್ವ ಭಾಗ – ೧” ಓದಲು ಕುಳಿತೆ. ಓದಿಯೇ ಕರಗಿಬಿಟ್ಟೆ. ಹೃದಯ ದ್ರವಿಸಿ ಹೋಯಿತು. ಓದುತ್ತಿದ್ದ ಹಾಗೆಯೇ ಕಣ್ಣೀರು ಸುರಿಯುತ್ತಿತ್ತು. ಒಸರಿಕೊಳ್ಳಲು ಎದ್ದು ಹೋದರೆ ಎಲ್ಲಿ ಭಾವೋತ್ಕರ್ಷಕ್ಕೆ ಭಂಗವುಂಟಾಗುತ್ತದೆಯೋ ಎಂದುಕೊಂಡು ಕುಳಿತಲ್ಲಿಯೇ ಪಂಚೆಯ ತುದಿ ಕಣ್ಣೀರಿನಿಂದ ಒದ್ದೆಯಾಗಿತ್ತು”.

ಈ ಮಾತುಗಳನ್ನು‌ ಓದಿ, ವಸ್ತ್ರದ ಹೇಳುತ್ತಾರೆ: “ಒಬ್ಬ ಸಂಪಾದಕನ‌ ಶ್ರಮಕ್ಕೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಪತ್ರ ಇನ್ನೊಂದು ಇರಲಾರದು”.

ನಿಜ. ” ಅವ್ವ” ಇಡೀ ಮಾಲಿಕೆಯ ಒಂದೊಂದು ಸಂಪುಟದಲ್ಲೂ ಇಂಥ ಹೃದಯಸ್ಪರ್ಶಿ ಸಂದರ್ಭಗಳು ಬರುತ್ತವೆ. “ಅವ್ವ” ಎಂಬ ಹೆಸರಲ್ಲಿ ಮಾಂತ್ರಿಕ ಶಕ್ತಿಯಿದೆ. ಆಕೆ ಭೂಮಿಯಂತೆ ಎಲ್ಲವನ್ನೂ‌ ಸಹಿಸಿಕೊಂಡಾಕೆ. ಪೊರೆದಾಕೆ. ಶಿಕ್ಷಿತಳಿರಲಿ, ಅನಕ್ಷರಸ್ಥೆ ಇರಲಿ ಎಲ್ಲ ಮಕ್ಕಳು, ಬಂಧು ಬಳಗವನ್ನು ಒಂದೇ ದೃಷ್ಟಿಯಿಂದ ನೋಡಿದಾಕೆ.

ಕನ್ನಡ ಕಾವ್ಯದಲ್ಲಿ ಅವ್ವನ ಬಗ್ಗೆ ಸಾಕಷ್ಟು ಕವಿಗಳು ಬರೆದಿದ್ದರೂ ಪಿ. ಲಂಕೇಶರ “ಅವ್ವ” ಕವಿತೆ ಚರ್ಚೆ ಆದಷ್ಟು ಯಾರ ಕವಿತೆಯೂ ಆಗಿಲ್ಲ. ಅವರು ಆರಂಭ ಸಾಲಿನಲ್ಲೇ ಹೇಳುತ್ತಾರೆ : “ನನ್ನವ್ವ ಫಲವತ್ತಾದ ಕಪ್ಪುನೆಲ. ಅಲ್ಲಿ ಹಸುರು ಪತ್ರದ ಹರವು..”

“ಮಕ್ಕಳೊದ್ದರೆ ಅವಳ ಅಂಗಾಂಗ ಪುಳಕ”

ಹೀಗೆ ಒಂದೆರಡು ಬರಹದ ಪ್ರಸ್ತಾಪ ಮಾತ್ರ ನಾನಿಲ್ಲಿ ಮಾಡಿದ್ದೇನೆ. 

ತಮ್ಮ ತಾಯಿ ಹೆಸರಿನ   “ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ”ವನ್ನು‌ ಬಸವರಾಜ ಬೊಮ್ಮಾಯಿ, ಅವರ ಸಹೋದರ ಮಹೇಶ ಬೊಮ್ಮಾಯಿ ಹಾಗೂ ಕುಟುಂಬದವರು ಇದರ ನಿರ್ವಹಣೆ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ಹಲವು ಸಂಪುಟಗಳಿಗೆ ಆಯಾ ವಿಚಾರಗಳಿಗೆ ತಕ್ಕಂತೆ ಮೌಲಿಕ ಪ್ರಸ್ತಾವನೆಯನ್ನು ‌ಬರೆದಿದ್ದಾರೆ. ಅದು ಬಹಳ ಮುಖ್ಯ ವಿಚಾರವೂ ಹೌದು.

ಸಂಶೋಧನಾ ‌ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ ಇವು ಉತ್ತಮ ಸಾಹಿತ್ಯ ಉಣಬಡಿಸುವ ಕೃತಿಗಳಾಗಿವೆ.

******************************

ಆರ್ ಜಿ‌‌ ಹಳ್ಳಿ ನಾಗರಾಜ

Leave a Reply

Back To Top