ಗಜಲ್ ಜುಗಲ್ ಬಂದಿ-11
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-11
ನಾ ಗೂಡು ಕಟ್ಟುವಾಗ ನಿನ್ನ ಆಗಮನಕ್ಕೆ ಕಾಯುತ್ತಿದ್ದೆ
ನೀ ಗೂಡು ಕಟ್ಟುವಾಗ ನನ್ನ ನಿರ್ಗಮನಕ್ಕೆ ಕಾಯುತ್ತಿದ್ದೆ
ಬದುಕಿನ ಸರಕನ್ನು ಬಿಕರಿಗಿಟ್ಟು ಬಡವಾಗುವುದು ಸರಿಯೇ
ಹೇಗೆ ಹೇಳಲಿ ಹಿಡಿ ಪ್ರೀತಿ ಸಿಗದ ಹಿಡಿತಕ್ಕೆ ಕಾಯುತ್ತಿದ್ದೆ.
ಅರಿವಿರದೆ ಏನು,ಸಾಗಿದ ದಾರಿಯದು ಕಡಿಮೆಯೇನು?
ಅರಳುವ ಬೆಳಕು ಕಣ್ಣ ತುಂಬಿಸುವುದಕ್ಕೆ ಕಾಯುತ್ತಿದ್ದೆ
ಮಡಿಲೊಳಗಿನ ಕಂಪು,ತಂಪು,ಇಂಪು,ಇನ್ನೂ ತಾಜಾ
ಮುಗಿಯಲಾರದನಗು ಮರಳುವುದಕ್ಕೆ ಕಾಯುತ್ತಿದ್ದೆ
ಭವದ ಹಂಬಲಗಳು ಹಾಗೇ ಎಂದೂ ಮುಗಿಯದು ಸ್ಮಿತ
ಉದುರಿದ ಎಲೆಕವರಿನಲೇ ಚಿಗುರುವುದಕ್ಕೆ ಕಾಯುತ್ತಿದ್ದೆ.
ಸ್ಮಿತಾ ಭಟ್
*************************
ಎದೆ ಬಯಲಲಿ ನೀ ಬಿತ್ತಿದ ಪೈರು ಮೊಳೆಯುವುದಕ್ಕೆ ಕಾಯುತ್ತಿದ್ದೆ
ಮನದಂಗಳದಲ್ಲಿ ನೀ ನೆಟ್ಟ ಗಿಡ ಹೂವಾಗುವುದಕ್ಕೆ ಕಾಯುತ್ತಿದ್ದೆ
ಜತನದಲಿ ಕಾಪಿಟ್ಟ ಜೀವಭಾವದ ಫಲ ವಿಫಲವಾಯಿತೇಕೆ
ನಾಳೆ ನಿನ್ನ ಬೆಳಕಿನ ದಾರಿ ನನ್ನ ಆವರಿಸುವುದಕ್ಕೆ ಕಾಯುತ್ತಿದ್ದೆ
ನನ್ನ ನಿನ್ನ ಋಣದ ಪಾಲು ಇಷ್ಟೆಯೇ ಇರಬೇಕು ನೋಡು
ಎಲ್ಲೋ ಇರುವ ನೀನು ಇಲ್ಲಿ ಎಲ್ಲ ಆಗುವುದಕ್ಕೆ ಕಾಯುತ್ತಿದ್ದೆ
ಆಗೊಮ್ಮೆ ಈಗೊಮ್ಮೆ ಬಲಿಯಾಗುತ್ತಾ ಬಲಿಯಬೇಕೇನು ಇಲ್ಲಿ
ಒಲಿದ ಬಯಕೆಗಳು ಬದುಕ ತುಂಬಿ ಹರ್ಷಿಸುವುದಕ್ಕೆ ಕಾಯುತ್ತಿದ್ದೆ
ಬರೀ ತಿರುವಿನಲ್ಲಿ ಸರಳರೇಖೆಯ ಚಲನೆಯಿದೆಯೆಂಬ ಅರಿವಿರಲಿಲ್ಲ
ನಿಟ್ಟುಸಿರ ಹುಗಿದು ಬಾಳಿಗೆ ಹೊಸ ಹಸಿರ ಹಾಸುವುದಕ್ಕೆ ಕಾಯುತ್ತಿದ್ದೆ
ರೇಖಾ ಭಟ್
***************************
ಸ್ಮಿತಾ ಭಟ್
ರೇಖಾ ಭಟ್
ಇಬ್ಬರ ಗಜಲ್ ಗಳೂ ಸುಂದರ. ಅಭಿವ್ಯಕ್ತಿ ಚಂದ..