ಲಘು ಬರಹ
ತಲಿಮೇಟು ಆಲಿಯಾಸ್ ಹೆಲ್ಮೇಟು
ಶಾಲಿನಿ ರುದ್ರಮುನಿ
ಅಯ್ಯೋ! ನಿಮ್ಮ ಬಾಬಾ ತಲಿಮೇಟೇ ಬಿಟ್ಹೋದ್ರಲ್ಲೇ ಆಫೀಸ್ಗೆ , ಅಂತ ಅಮ್ಮ ಅವಲತ್ತುಗೊಳ್ಳೊದು ಈಗಲೂ ಕಿವಿಲಿ ಮಾರ್ಧನಿ. ಇದು ಮೂವತ್ತು ವರ್ಷದ ಹಿಂದಿನ ಡೈಲಾಗು. ಆಗ ಬಾಬಾ ಹತ್ತಿರ ‘ಬಜಾಜ್ ಚೇತಕ್’ ಸ್ಕೂಟರ್ ಇತ್ತು. ಇವತ್ತು ಬಾಬಾ’ ಇಲ್ಲ ಆದರೆ ಆ ತಲಿಮೇಟು ಅನ್ನೋ ಪದ ನನ್ನ ನಿತ್ಯದ ಬದುಕಲಿ ಅಚ್ಚಾಗಿದೆ.
ಒಂದಲ್ಲ ಎರಡಲ್ಲ ಮೂರು ಬಾರಿ ಈ ತಲಿಮೇಟು, ಕ್ಷಮಿಸಿ ಹೆಲ್ಮೇಟ್ ಅಪಘಾತದಲ್ಲಿ ನನ್ನ ತಲೆನಾ ಸಂರಕ್ಷಿಸಿದೆ. ಶ್ರಾವಣದ ಜಡೀ ಮಳೆ , ಮಳೆ ಅಂದ್ರೆ ಮಮತೆಯ ಸಂಕೋಲೆ ಅಲ್ವಾ! ಅದೇನೋ ಹುಚ್ಚು ನನಗೆ, ಸುರಿವ ಮಳೆಲಿ ‘ರಿಮ್ ಜಿಮ್ ಗಿರೆ ಸಾವಾನ್ ಸುಲಗ ಸುಲಗ ಜಾಯೇ ಮನ್’ ಅರಿವಿಲ್ಲದೆ ಈ ಹಾಡು ಮನದೊಳಗಿನಿಂದ ತುಟಿಯಂಚಿನಲಿ ಗುನುಗುನಿಸುತ್ತೆ. ಅವತ್ತು ಹಾಗೇನೆ ಸಂಗೀತ ಕ್ಲಾಸ್ ಮುಗಿಸಿ ಮನೆಗೆ ಹೊರಡೋ ಸನ್ನದ್ದಿನಲ್ಲಿ. ನಿಲ್ಲದ ಮಳೆಯ ಬಗ್ಗೆ ಜಾಸ್ತಿ ಯೋಚಿಸದೆ. ಆ್ಯಕ್ಟೀವ್ ಹೊಂಡಾ ಚಾಲೂ ಮಾಡಿ ತಲಿಮೇಟು ಆಲಿಯಾಸ್ ಹೆಲ್ಮೇಟ್ ಧರಿಸಿ ಮನೆ ಕಡೆ ಹೊರಟೆ .ಮತ್ತದೆ ಹಾಡು , ಸುರಿವ ಮಳೆ ಹನಿಯನ್ನ ನಾಲಿಗೆ ಚಾಚಿ ಒಡಲೊಳಗಿಳಿಸಿ ನಲಿವ ಪರಿಯನ್ನ ಅನುಭವಿಸಿದ ನನಗೆ ಗೊತ್ತು. ಅರ್ಧ ತಾಸು ಭರ್ತಿ ಸುರಿದ ಮಳೆಗೆ ರಸ್ತೆಯೆಲ್ಲ ನೀರೋ ನೀರು. ಅದು ಮುಖ್ಯರಸ್ತೆ , ನನಗೆ ಹತ್ತು ವರುಷದ ಚಿರಪರಿಚಿತವೇ ಜೊತೆಗೆ ಗುಂಡಿಗಳು ಸಹ.
ಆ ರಸ್ತೆಲಿ ಪ್ರತಿ ಮಳೆಗಾಲದಲ್ಲೂ ಅಪಘಾತಗಳ ಅವಾಂತರಗಳು ಸರ್ವೇ ಸಾಮಾನ್ಯ.ಮುಚ್ವಿದ ಗುಂಡಿಗಳು ಮತ್ತೆ ಮಳೆಗಾಗಿ ಹಪಹಪಿಸುವಂತೆ ಬಾಯ್ದೆರೆದಿರತ್ವೇ. ಆದರೂ ಅಂದಾಜಿತ್ತು ಅಲ್ಲೊಂದು ದೊಡ್ಡಗುಂಡಿ ತುಂಬಿದೆ ,ವೇಗವನ್ನ ಕಡಿಮೆ ಮಾಡಿ ಎಡಬದಿಯಲ್ಲಿಯೇ ಸಾಗಿದೀನಿ ನನ್ನ ಎಡಬದಿ ಗುಂಡಿಯಿರುವ ಅರಿವಿದೆ ನನಗೆ.ಆದರೆ ತಿರುವಿನಲ್ಲಿ ಎದುರಿನ ಸವಾರ ಕಾರನ್ನ ಓವರ್ ಟೇಕ್ ಮಾಡೋಕೆ ಹೋಗಿ ನನ್ನ ಆ್ಯಕ್ಟೀವ್ ಹೋಂಡಾಕೆ ತಗಲೋ ಸಂಭವ ಹೆಚ್ಚಿತ್ತು, ಅದನ್ನ ತಪ್ಪಿಸೋಕೆ ಸ್ವಲ್ಪ ಎಡಬದಿ ಚಲಿಸುವ ಹುನ್ನಾರದಲಿ , ನಾನು ಮತ್ತು ನನ್ನ ಆ್ಯಕ್ಟೀವ್ ಹೊಂಡಾ ನೀರು ತುಂಬಿದ ಗುಂಡಿಯಲ್ಲಿ ಜಾರಿಯಾಗಿತ್ತು. ಪಕ್ಕದಲ್ಲಿ ಗಾತ್ರದಲ್ಲಿ ಹಿರಿದೆನುವ ಕಲ್ಲು ಎದ್ದಿದೆ, ತಲೆ ಸೀದಾ ಹೋಗಿ ಬಡೀತು. ಯಾರ್ಯಾರೋ ಬಂದ್ರು, ಆ್ಯಕ್ಟೀವ್ಗೆ ಸಾಥ್ ನೀಡಿದರು, ಎತ್ತಿ ನಿಲ್ಲಿಸಿದರು. ಕಾರ್ಪೋರೇಷನ್ನವರಿಗೆ ಹಿಡಿ ಶಾಪ ಹಾಕಿದ್ರು ಕೆಲವರು, ಸರಣಿ ತಂದ ಅಪಘಾತ ಗಳ ವರದಿ ಒಪ್ಪಿಸೋರು ಮತ್ತೊಬ್ಬರು . ಕ್ಷಣ ಮಾತ್ರದಲಿ ಎಲ್ಲವೂ ಮುಗಿದಿತ್ತು , ಆದರೆ ನಾ ಮಾತ್ರ ಕೈಯೂರಿ ಏಳೋಕಾಗ್ತಿಲ್ಲ ,ಗೊತ್ತಾಯ್ತು ಟಕ್ ಅನ್ನೋ ಶಬ್ದ ಆ ಮಳೆಲು ಅನುಭವಕ್ಕೆ ಬಂತು ಸಾವರಿಸಿ ಮೇಲೆದ್ದೆ ಮೊಣಕೈಗೆ ವೇಲ್ ಗಟ್ಟಿಯಾಗಿ ಸುತ್ತಿ ಸಿಕ್ಕಿಸಿ , ಸಾವಕಾಶವಾಗಿ ಸುಮ್ಮನೆ ಆ್ಯಕ್ಟೀವಾ ಸ್ಟಾರ್ಟ ಮಾಡೋಣಾಂತ ತಿರುಗಿದೆ ದೊಡ್ಡ ಕಲ್ಲಿಗೆ ಬಡಿದ ರಭಸ ಆದರೂ ನಾ ಧರಿಸಿದ್ದ ಹೆಲ್ಮೇಟ್ ಇನ್ನೂ ನನ್ನ ತಲೆಲಿದೆ. ತೆಗೆವ ಧೈರ್ಯ ಮಾಡಿದೆ ಅರೆ! ಏನೂ ಆಗಿಲ್ಲ ಸ್ವಲ್ಪ ಗೀರಿದೆ ಮಾತ್ರ. ಒಮ್ಮಲೆ ಹೃದಯ ಕರುಳು ಎಲ್ಲ ಬಾಯಿಗೆ ಬಂದ ಹಾಗೆ ಆಯ್ತು. ಕ್ಷಣ ಮಾತ್ರದಲಿ ಹೆಲ್ಮೇಟ್ ಇಲ್ಲದಿದಿದ್ದರೆ??? ಅನ್ನೋ ಕಲ್ಪನೆ ನೆ ಅಘಾತವಾಗಿತ್ತು ನನಗೆ. ಇದು ಮತ್ತೆರಡು ವರ್ಷಕ್ಕೆ ಪುನರಾವೃತ್ತಿ,ರಸ್ತೆ ನಿಯಮಗಳನ್ನ ಪಾಲಿಸದೆ ನಮ್ಮ ಎಡಬದಿಗೆ ಬಂದು ಓವರ್ ಟೇಕ್ ಮಾಡೋ ಪಡ್ಡೇ ಹುಡುಗರಿಂದ ಭಾರಿ ಅಲ್ಲದಿದ್ರೂ ನನ್ನ ಹೊಂಡಾ ಹ್ಯಾಡಲ್ ಹಿಂಬದಿಯಿಂದ ವೇಗವಾಗಿ ಬಡಿದು ಬಿದ್ದಾಗ ಎಡ ಮೊಣಕೈ ಕಾಲು ಕ್ರಾಕ್ ಬಿಟ್ಟು ಟಿಶ್ಯೂ ಹರಿತು. ಆದರೆ ತಲೆಯನ್ನ ಮತ್ತೊಮ್ಮೆ ಹೆಲ್ಮೇಟ್ (ತಲಿಮೇಟು) ಭಾರಿ ಆಘಾತದಿಂದ ರಕ್ಷಿಸಿತು. ನನ್ನ ತಲೆಯನ್ನ ಸುರಕ್ಷಿಸಿ ನಾನಾಗಿ ಉಳಿವಂತೆ ಮಾಎಇದ ಹೆಲ್ಮೇಟ್ ನ ರುಣಿಗಾಗಿ ಈ ಲೇಖನ ನಿಮ್ಮಮುಂದೆ.
ಹೆಲ್ಮೇಟ್’ ನಮಗೆ ಎಷ್ಟೆಲ್ಲ ರಕ್ಷಣೆ ಕೊಟ್ರು ಶೋಕಿಗಾಗಿ ಹೆಲ್ಮೇಟ್ ಇಲ್ಲದೆ ಓಡಿಸೋ ಮಂದಿಗೆ ಖರೆನೆ ಏನ್ನೆನ್ನಬೇಕು ಗೊತ್ತಾಗೊಲ್ಲ. ಹೆಲ್ಮೆಟ್ ಇಲ್ಲದೇ ತಲೆಗೆ ಪೆಟ್ಟು ಬಿದ್ದು ಅದೆಷ್ಟೋ ಜನರ ಜೀವನವೆ ಬಲಿಯಾಗಿದೆ ಇತ್ತೀಚೆಗೆ ನಮ್ಮನ್ನಗಲಿದೆ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವು ನಮಗೊಂದು ಪಾಠವಾಗಬೇಕಿದೆ. ಇಂತಹ ಹಲವು ಉದ್ದುದ್ದಾ ಪ್ರಕರಣಗಳು ನಮ್ಮ ಕಣ್ಮುಂದಿದೆ.
ಹೆಲ್ಮೇಟ್ ಧರಿಸದಿರೋಕೆ ನೂರು ನೆಪಗಳನ್ನ ಹುಡುಕ್ತಿದಾರೆ ಇಂದಿನ ಯುವಜನತೆ.ನೆಪಗಳು ಸಾವಿರವಿರಲಿ ಹೆಲ್ಮೆಟ್ ಯಾಕೆ ಧರಿಸಬೇಕು? ಅದು ಮುಂಬದಿ ಸವಾರ ಇರಲಿ ಅಥವಾ ಹಿಂಬದಿ ಸವಾರ ಇರಲಿ,ಹೆಲ್ಮೆಟ್ ಧರಿಸುವುದು ಎಲ್ಲ ರೀತಿಯಿಂದ ಒಳ್ಳೆಯದು ಅನ್ನೋ ಇಚ್ಛೆ ದೃಢವಾಗಿರಲಿ.ರಸ್ತೆ ಗುಂಡಿಯಾಗಿದೆ, ಹಂಪ್ ಸರಿ ಇಲ್ಲ, ಸಿಗ್ನಲ್ ಸರಿ ಇಲ್ಲ ಎಂಬುದು ಖರೆನೆ ಒಪ್ಪಿಕೊಳ್ಳಬೇಕಾದ ಸಂಗತಿ . ಆದರೆ ನಮ್ಮ ಸಂರಕ್ಷಣೆಗೆ ಹೆಲ್ಮೆಟ್ ಧರಿಸಿದರೆ ಯಾವ ನಷ್ಟವೂ ಇಲ್ಲ ಅಲ್ವಾ?. ಸರಕಾರದ ಹೊಸ ನಿಯಮದಂತೆ
ರಸ್ತೆ ಅಪಘಾತಗಳಲ್ಲಾಗುತ್ತಿರುವ ಸಾವುಗಳ ಸಂಖ್ಯೆ ತಡೆಗಟ್ಟುವ ಪ್ರಯತ್ನದಲ್ಲಿ ಭಾರತ ಸರ್ಕಾರದ ಸಾರಿಗೆ ಸಚಿವಾಲಯ
ಸುಪ್ರೀಂ ಕೋರ್ಟ್ ಸಮೀತಿ ನೀಡಿದ ಆದೇಶದ ನಿರ್ದೇಶನದ ಹಿನ್ನೆಲೆಯಲ್ಲಿ ಸಮಿತಿಯಲ್ಲಿನ ಬಿಐಎಸ್ ಮತ್ತು ಏಮ್ಸ್ ತಜ್ಞರ ಸಮಿತಿಯು ಈ ನಿಟ್ಟಿನಲ್ಲಿ ಮಾರ್ಚ್ 2018 ರ ಮಾರ್ಗಸೂಚಿಗಳ ನಿಯಮದ ಮೇರೆಗೆ ಹಗುರವಾದ ಮತ್ತು ಬಲವಾದ ಹೆಲ್ಮೆಟ್‌ಗಳನ್ನು ಬಳಸಲು ಸೂಚಿಸಲಾಗಿದೆ. ಆದ್ದರಿಂದ ಪ್ರತಿ ವರ್ಷ ಭಾರತದಲ್ಲಿ 17 ಮಿಲಿಯನ್ ಹೆಲ್ಮೆಟ್‌ಗಳನ್ನು ತಯಾರಿಸಲಾಗುತ್ತದೆ.
ರಸ್ತೆ ಬದಿಯಲ್ಲಿ ಸಿಗುವ ಕಡಿಮೆ ಬೆಲೆಯ ಕೆಳಗುಣ ಮಟ್ಟದ ಹೆಲ್ಮೆಟ್ ಗಳ ಖರೀದಿಯ ಬಗ್ಗೆ ಯೋಚಿಸದಿರಿವುದೇ ಒಳಿತು . ಐಎಎಸ್ ಮಾನ್ಯತೆಯಿರುವ ಹೆಲ್ಮೇಟ್ ಗುಣಮಟ್ಟದಲ್ಲಿ ಯೋಗ್ಯವಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಬಿಐಎಸ್ (Bureau of Indian Standards) ಸ್ಟ್ಯಾಂಡರ್ಡ್ ಸರ್ಟಿಫೈಡ್ ಹೆಲ್ಮೆಟ್ ಧರಿಸಲು ಮಾತ್ರ, ಅವಕಾಶವಿದೆ.
ಅಷ್ಟಕ್ಕೂ ಹೆಲ್ಮೇಟ್ ಯಾಕೆ ಧರಿಸಬೇಕು ಅನ್ನುವ ಒಂದು ಗಂಭೀರ ಚಿಂತನೆಗೆ ಉತ್ತರವಾಗಿ
ನ್ಯೂರೊಸರ್ಜನ್ ಗಳ ವಿವರಣೆ ಹೀಗಿದೆ.
ಅಪಘಾತ ಸಂದರ್ಭ ಹೆಲ್ಮೆಟ್ ತಲೆಗೆ ಮತ್ತು ಮೆದುಳಿಗೆ ಗಂಭೀರ ಏಟಾಗುವುದನ್ನು ತಡೆಯುತ್ತದೆ. ತಲೆಬುರುಡೆ ಆಕಾರ ಕಳೆದುಕೊಳ್ಳುವುದನ್ನು ತಪ್ಪಿಸಬಹುದು. ಕಿವಿ ಮತ್ತು ಕಣ್ಣಿಗೂ ಸಂರಕ್ಷಣೆ ಒದಗಿಸುತ್ತದೆ. ಮೆದುಳಿಗೆ ಅಥವಾ ತಲೆಗೆ ಸಂಬಂಧಿಸಿದ ಚಿಕಿತ್ಸೆಗೆ ಅತಿ ಹೆಚ್ಚಿನ ವೆಚ್ಚ ತಗಲುತ್ತದೆ ಎಂಬುದಾಗಿದೆ.
ಹ್ಞಾಂ! ಹೆಲ್ಮೆಟ್ ಹಾಕಿದರೆ ಕೂದಲು ಉದುರುತ್ತದೆ ಎಂಬುದು ಸಮಸ್ಯೆನೆ ಅಲ್ಲಅಲ್ವಾ? ಅದರ ಬದಲಿಗೆ ಬೇರೆ ಪರಿಹಾರ ಮಾರ್ಗ ಅನುಸರಿಸಬಹುದು.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಸಂಬಂಧಿತ ಅಪಘಾತದಿಂದ ಪ್ರತಿನಿತ್ಯ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿದ್ದಾನೆ. ದ್ವಿಚಕ್ರ ವಾಹನದ ಅಪಘಾತದಿಂದ ಮರಣಿಸುವ ನಾಲ್ವರಲ್ಲಿ ಒಬ್ಬರು ಹಿಂಬದಿ ಸವಾರರಾಗಿರುತ್ತಾರೆ. ಪ್ರತಿವರ್ಷ 1.2 ಮಿಲಿಯನ್ ಜನರು ರಸ್ತೆ ಅಪಘಾತಗಳಲ್ಲಿ ಮರಣಿಸುತ್ತಾರೆ ಮತ್ತು ಲಕ್ಷಾಂತರ ಮಂದಿ ಗಾಯಗೊಳ್ಳುತ್ತಾರೆ ಮತ್ತು ವಿಕಲತೆ ಹೊಂದುತ್ತಿದ್ದಾರೆ.
ಹೆಲ್ಮೇಟಿಗೂ ಒಂದು ಇತಿಹಾಸವಿದೆ ಗೊತ್ತಾ!
ಮೊದಲ ಮಹಾ ಯುದ್ಧದ ನಾಯಕರಲ್ಲಿ ಒರ್ವರಾಗಿದ್ದ ಲಾರೆನ್ಸ್ ,ಇವರು ಲಾರೆನ್ಸ್ ಆಫ್ ಅರೇಬಿಯಾ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಉಂಟಾಗಿರುವ ಅರಬ್ ಕ್ರಾಂತಿ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಲಾರನ್ಸ್ ಅಪಘಾತ ಇಂದಿಗೂ ನಿಗೂಢ. ‘
‘ಬ್ರೌ ಸುಪೀರಿಯರ್100’ ಮೋಟಾರುಸೈಕಲ್ ನಿಂದ ಮನೆಯಿಂದ ತೆರಳಿದ್ದ ಲಾರನ್ಸ್ ಇಬ್ಬರು ಸೈಕಲ್ ಸವಾರರನ್ನು ಬಚಾವ್ ಮಾಡುವ ಎಡವಟ್ಟಿನಲ್ಲಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡ ಲಾರನ್ಸ್ ಬಳಿಕ ಕೋಮಾವಾಸ್ಥೆಗೆ ಜಾರಿದ ಆರು ದಿನಗಳ ಬಳಿಕ ಸಾವನ್ನಿಪ್ಪಿದ್ದರು. ಬಳಿಕ ನಡೆದ ವಿಚಾರಣೆಯಲ್ಲಿ ಲಾರನ್ಸ್ ಹೆಲ್ಮೆಟ್ ಧರಿಸಿರಲಿಲ್ಲವೆಂಬುದು ತಿಳಿದ ನಂತರ ಹೆಲ್ಮೆಟ್ ಬಳಕೆ ಜಾರಿಗೆ ಬಂದಿತು. ಯಾರು
ಎಣಿಸಿರಲಿಲ್ಲ ಮುಂದೆ ಈ ದುರ್ಘಟನೆಯೆ ಭವಿಷ್ಯದಲ್ಲಿ ಲಕ್ಷಾಂತರ ಮಂದಿಯ ಜೀವ ರಕ್ಷಣೆಗೆ ಹೆಲ್ಮೇಟ್ ಕಾರಣವಾಗತ್ತೇಂತ. ಲಾರನ್ಸ್ ಮರಣದ ಬಳಿಕ ಹೆಲ್ಮೆಟ್ ಬಗೆಗಿನ ಅಧ್ಯಯನಕ್ಕೆ ಚುರುಕು ಮುಟ್ಟಿತು. ಅಲ್ಲದೆ ನಾಗರಿಕ ಸೇರಿದಂತೆ ಮಿಲಿಟರಿ ಅಗತ್ಯಗಳಿಗಾಗಿ ಸವಾರರು ಹೆಲ್ಮೆಟ್ ಧರಿಸುವುದು ಅನಿವಾರ್ಯ ಎಂಬುದು ಕಂಡುಬಂತು. 1950ರಲ್ಲಿ ಮೋಟಾರು ರೇಸಿಂಗ್ನಲ್ಲಿ ಸವಾರರು ಫುಲ್ ಫೇಸ್ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿತ್ತು. ಅಂತೆಯೇ 1954ರಲ್ಲಿ ಬೆಲ್ ತನ್ನ ಮೊದಲ ಆಟೋ ರೇಸಿಂಗ್ ಹೆಲ್ಮೆಟ್ ಗಳನ್ನು ನಿರ್ಮಿಸಿತ್ತು.
ಇನ್ನೂ ನಮ್ಮ ತಲೆ ರಕ್ಷಕನಾಗಿರುವ ಹೆಲ್ಮೇಟ್ ವಿವಿಧತೆಯಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಫುಲ್ ಫೇಸ್, ಆಫ್ ರೋಡ್ , ಮೊಟೊ ಕ್ರಾಸ್, ಪ್ಲಿಪ್ ಆನ್, ಓಪನ್ ಫೇಸ್ ಮತ್ತು ಹಾಲ್ಪ್ ಹೆಲ್ಮೆಟ್ ,ಆದರೆ ಸಾಮಾನ್ಯವಾಗಿ ಫುಲ್ ಫೇಸ್ ಹೆಲ್ಮೆಟ್ ಗಳು ಅತ್ಯಂತ ಸುರಕ್ಷತೆಯನ್ನು ನೀಡುತ್ತದೆ. ಹೆಲ್ಮೇಟ್ನನ್ನು
ಪ್ಲಾಸ್ಟಿಕ್, ಫೈಬರ್ ಗ್ಲಾಸ್ ಹಾಗೂ ಕಾರ್ಬರ್ ಫೈಬರ್ ನಿಂದ ತಯಾರಿಸಲಾಗುತ್ತದೆ.
ಹಾಗಿದ್ರೆ ನಮ್ಮ ತಲೆಗೆ ಸರಿಹೊಂದುವ ಹೆಲ್ಮೇಟ್ ಖರಿದಿ ಪ್ರಕ್ತಿಯೆಗಾಗಿ ಏನೆಲ್ಲ ಗಮನಿಸಬೇಕೆಂಬ ಅವಲೋಕನ ಮಾಡೋಣಾ. ತಲೆಯ ನೆತ್ತಿಗೆ ಸರಿಯಾಗಿ ಹೊಂದಿಕೆಯಾಗಿರಬೇಕು, ಇದರಲ್ಲಿ ಹೊಂದಾಣಿಕೆಯೆಂಬುದೇ ಇಲ್ಲ.
ಒಮ್ಮೆ ಗುಣಮಟ್ಟದ ಹೆಲ್ಮೆಟ್ ಖರಿದಿಸಿದರೆ ಐದು ವರ್ಷಗಳಷ್ಟು ಬಾಳಿಕೆ ಬರುತ್ತೆ. ಬೇಕಾದಷ್ಟು ಅಲ್ವಾ? ಒಮ್ಮೆ ಹೂಡಿಕೆ ನಮ್ಮ ತಲೆಯ ರಕ್ಷಣೆಗೆ. ಬೆಲೆಯಲ್ಲಿ ಹೊಂದಣಿಕೆ ಬೇಡ ಗುಣಮಟ್ಟ ಹಿರಿದಾದಾಗ ಅಲ್ವಾ?.
ಆದರೆ ಈಗಲೂ ಆ್ಯಕ್ಟೀವ್ ಹೊಂಡಾ ಓಡಿಸುವಾಗ ಅಕ್ಕ ಪಕ್ಕದ ಸವಾರರು ಟ್ರಾಫಿಕ್ ನಿಯಮಗಳಿಂದ ಪಾರಾಗಲು ಹೆಲ್ಮೆಟ್ ಧರಿಸಿದ ಸವಾರರು ಸಿಗ್ನಲ್ ದಾಟಿದ ಕೂಡಲೇ ತೆಗೆಯುವುದು ತುಂಬಾ ಶೋಚನೀಯ ಸಂಗತಿಯಾಗಿದೆ.
ದಯವಿಟ್ಟು ಇದು ನನ್ನ ಅನುಭವದ ಮಾತು ಗೆಳೆಯರೆ, ಸ್ಟೈಲ್ ಗಾಗಿ ಹೆಲ್ಮೇಟ್ ಧರಿಸಬೇಡಿ.ಕೇವಲ ನಿಮಗಾಗಿ ನಿಮ್ಮ ನಂಬಿದವರಿಗಾಗಿ, ನಿಮ್ಮನ್ನು ಅವಲಂಬಿಸಿದವರಿಗಾಗಿ ,ನಿಮ್ಮದೇ ಸುರಕ್ಷಿತೆಗಾಗಿ ಹೆಲ್ಮೇಟ್ ಧರಿಸಿ.
ಬದಲಾವಣೆ ಜಗದ ನಿಯಮ. ನಿಮ್ಮ ಜೀವನ ಶೈಲಿಯಲ್ಲಿನ ಖಡ್ಡಾಯದ ಈ ಚಿಕ್ಕ ಬದಲಾವಣೆಗಾಗಿ ಹೆಲ್ಮೇಟಿಗೊಂದು ಮಹತ್ತಮ ಸ್ಥಾನವಿರಲಿ.
ಹ್ಯಾಪಿ ಡ್ರೈವಿಂಗ್ ಮತ್ತು ಸೇಫ್ ಡ್ರೈವಿಂಗ್, ಶುಭವಿರಲಿ
*****************************************