ಕಾವ್ಯಯಾನ
“ಕರುಣೆ ಇಲ್ಲವೇ ನಿನ್ನೊಳು”
ಹೇಮಚಂದ್ರ ದಾಳಗೌಡನಹಳ್ಳಿ
ಕರುಣೆ ಇಲ್ಲವೇ ನಿನ್ನೊಳು
ಎಲೆ ತರುಣಿ..!?
ಬಯಸಿದೆನ್ನತ್ತ ಬಂದೂ
ನೀರೊಳಗಿಳಿದ ಎಣ್ಣೆಯಾದೆ!
ಕನಸನೆಲ್ಲ ಕವಿತೆ ಮಾಡಿ ಹಾಡಿದರೂ
ಕಿನ್ನರಿ ನುಡಿಸುವವನ ಮುಂದೆ ಕೋಣವಾದೆ
ಪ್ರೇಮವಿಲ್ಲವೆ ಮನದಿ ಎಲೆ ತರುಣಿ
ಜಾಣ ಮೌನದಿ ಗೋಣು ಬಿಗಿದಿಯೋ!?
ಹೊನ್ನ ಹೊತ್ತಾರೆ ಕಳೆದು; ಸುಡು ಬಿಸಿಲು ಮುಗಿವ ಹೊತ್ತು
ಇದ್ದರೂ ಸುಮ್ಮನೆ; ಕಾಲಕಿಲ್ಲ ಕರುಣೆ
ಕರುಣಾಳು ನೀನು; ಕಳಿತ ಹಲಸು ಹಣ್ಣು
ಹಸಿದ ಪ್ರಾಯಕೆ ರಸದೂಟ; ಮೇಲೆ ಮುಳ್ಳು
ಇನ್ನೇಸು ಕಾಲ- ಹರಣಗೊಳಿಸುವೆ ಕಾಲ!?
ಸರಿದಂತೆ ಸರಿಯುವುದು; ಕಾಯ ತಪ್ಪೀತು ತಾಳ
ಪ್ರೇಮವಿಲ್ಲವೆ ಮನದಿ ಎಲೆ ತರುಣಿ
ಜಾಣ ಮೌನದ ಕಟ್ಟೆ ಎಷ್ಟೊಂದು ಭದ್ರ!?
ಕ್ಷಣಕ್ಷಣಕೂ ಬಯಕೆ ಭಾವದ ಮೀನು
ನೀನೋ ನೀರವ ನಿಂತ ನೀರು..
ಘನವಾಗದಿರು ಮೌನಶೀತಕೆ ಸೆಟೆದು
ಇರುಳ ಕನವರಿಕೆಯ ಕವಿತೆ
ಗೀಚುವುದಿದೆ ನಿನ್ನೆದೆಯ ಭಿತ್ತಿಯಲಿ
ಕರುಣೆ ಬಾರದೆ ಎಲೆ ತರಳೇ
ನೀನಿರದ ಬಾಳು; ನೀರಿರದ ಬಾಳೆ..
********************************
Super sir
Thanks madam
ಸಂಗಾತಿಯ ಸಾಂಗತ್ಯದ
ತುಮುಲ ಭಾವನೆಗಳನ್ನು
ಅದ್ಭುತವಾಗಿ ಕಟ್ಟಿದ್ದೀರಿ.. ಚಂದದ ಕವಿತೆ.
ಎದೆಯಾಳದ ಮಾತುಗಳು
Very nice sir
AWESOME sir