ಚಮಚಾಯಣ…

ಲಲಿತ ಪ್ರಬಂಧ

ಚಮಚಾಯಣ...

ಸಮತಾ.ಆರ್

Girls in Sweden told to hide spoons in underwear to avoid forced marriage |  AFRICA CHINA ECONOMY

ಬೆಳಿಗ್ಗೆ ಬೆಳಿಗ್ಗೆ ಮಧ್ಯಾಹ್ನದ ಊಟದ ಡಬ್ಬಕ್ಕೆ ಉಪ್ಪಿಟ್ಟು ಹಾಕಿಕೊಂಡು,ತಿನ್ನಲು ಚಮಚ ಹಾಕಿಕೊಳ್ಳುವ ಎಂದು ನೋಡಿದರೆ ಒಂದೂ ಸಿಗಲಿಲ್ಲ. ವರ್ಷಕ್ಕೆ ಒಂದರವತ್ತು ಚಮಚ ತಂದಿಟ್ಟರೂ ಬೇಕಾದ ಸಮಯಕ್ಕೆ ಒಂದೂ ಸಿಗದೆ ರೇಗಿ ಹೋಗುತ್ತದೆ.ಎಲ್ಲವೂ ದಿನ ಕಳೆದಂತೆ ಎಲ್ಲಿ ಕಾಣೆಯಾಗುತ್ತವೋ ಕಾಣೆ.ಮಕ್ಕಳ ಲಂಚ್ ಬಾಕ್ಸ್ ಗೆ ಹಾಕಿ ಕಳುಹಿಸಿದ್ದವು ವಾಪಸ್ ಬರುವ ಸಾಧ್ಯತೆ ಎಲ್ಲೋ ನೂರಕ್ಕೆ ಐವತ್ತು ಮಾತ್ರ. ಇನ್ನು ಇರೋ ಬರೋ ಡಬ್ಬಗಳಿಗೆಲ್ಲ ತುಂಬಿರುವ ಅಡುಗೆ ಸಾಮಗ್ರಿಗಳ ತೆಗೆಯಲು ಅಂತ ಹಾಕಿಟ್ಟಿರೋ ಚಮಚಗಳಲ್ಲೆ ಒಂದನ್ನು ತೆಗೆದು ತೊಳೆದು ತೆಗೆದುಕೊಂಡು ಹೋಗ ಬೇಕು.ಚಮಚ ಇದ್ದರೆ ತಿನ್ನುವ ಸಮಯ ಸ್ವಲ್ಪ ಉಳಿಯುತ್ತೆ.ಉಪ್ಪಿಟ್ಟು ಕೈಯಲ್ಲಿ ತಿಂದರೆ ಕೈಗೆಲ್ಲ ಅಂಟಿಕೊಂಡು ತಿನ್ನಲು ಹಿಂಸೆ.ಏನೋ ಚಮಚ ಅನ್ನೋ ಸಲಕರಣೆ ತಿನ್ನೋದನ್ನು ಸುಲಭ ಮಾಡಿಬಿಟ್ಟಿದೆ.

ಚಮಚಗಳಿಲ್ಲದ ಮನೆಯುಂಟೇ? ಯಾರ ಮನೆಯ ಅಡುಗೆ ಮನೆ ಹೊಕ್ಕರೂ ವಿಧ ವಿಧ,ವಿನ್ಯಾಸ,ಆಕಾರ,ಗಾತ್ರದ ,ಬೇರೆ ಬೇರೆ ಕೆಲಸಕ್ಕೆ ಬಳಕೆಯಾಗುವ, ಪ್ಲಾಸ್ಟಿಕ್,ಮರ,ಸ್ಟೀಲ್,ಅಲ್ಯೂಮಿನಿಯಂ ,ಹಿತ್ತಾಳೆ,ತಾಮ್ರ. ಹೀಗೆತರ ತರದ ಪದಾರ್ಥಗಳಿಂದ ಮಾಡಿರುವ ಚಮಚಗಳ ಕಾಣಬಹುದು.
ಅಡುಗೆ ಮಾಡುವಾಗ ಬಳಸುವ ಸೌಟು, ಮಗಚುವ ಕೈ,ಜಾಲರಿ,ಅನ್ನದ ಕೈ ಎಲ್ಲವೂ ಇಂಗ್ಲಿಷ್ ನಲ್ಲಿ ಹೇಳುವಾಗ ಸಾಮಾನ್ಯರ ಬಾಯಲ್ಲಿ ಸ್ಪೂನ್ಗಳೇ.ಇಂಗ್ಲಿಷ್ನಲ್ಲಿಯೂ ಸೌಟು,ಜಾಲರಿಗೆ ತಕ್ಕ ಹೆಸರುಗಳಿಂದ ಕರೆಯುತ್ತಾರೇನೋ ಆದ್ರೆ ಅದೆಲ್ಲ ತಿಳ್ಕೊಳಷ್ಟು ಸಮಯ ಯಾರಿಗಿದೆ ಬಿಡಿ.ಸ್ಪೂನ್ ಅಂದ್ರೆ ಮುಗಿತಪ್ಪ.ನಿಘಂಟು ಹಿಡ್ಕೊಂಡು ಅಡುಗೆ ಮಾಡಕ್ಕಾಗುತ್ತ ಹೇಳಿ.!

ಈ ಸ್ಪೂನ್ ಗಳೆಂಬ ಚಮಚಗಳಿಲ್ಲದೆ ಇದ್ದರೇ ಅಡುಗೆ ಮಾಡೋದು ಹರಸಾಹಸ ಅಲ್ಲವೇ.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೆ ಚಿಕ್ಕ ಉಪಕರಣಗಳಾದ್ರೂ ಕೆಲಸ ಮಾತ್ರ ಅತ್ಯುಪಯುಕ್ತ ಅಂದ್ರೆ ಅತ್ಯುಪಯುಕ್ತ.ಇದೇನು ಒಂದು ಚಮಚಕ್ಕಾಗಿ ಇಷ್ಟೊಂದು ಚಮಚಾಗಿರಿ ಅಂದುಕೊಂಡು ಮೂಗು ಮುರಿತಾ ಇದ್ದೀರಾ! ಸರಿ ಹಾಗಾದ್ರೆ ನಿಮ್ಮನೆ ಬೋಂಡಾ ಇಲ್ಲವೇ ಯಾವುದಾದರೂ ಎಣ್ಣೆ ತಿಂಡಿ ಮಾಡುವಾಗ ಜಾಲರಿ ಬಳಸದೆ ಬರಿ ಕೈಲಿ ತೆಗೀರಿ ನೋಡೋಣ.

ನಾವು ಚಿಕ್ಕವರಿದ್ದಾಗ,ಅಡುಗೆ ಮಾಡಲು ಮಾತ್ರವಲ್ಲದೆ,ಸೌಟು, ಮಗಚುವ
ಕೈಗಳು ಅಮ್ಮಂದಿರಿಗೆ ಮಕ್ಕಳ ಹೆದರಿಸುವ ಕೋ ಲುಗಳಾಗಿಯೂ ದ್ವಿಪಾತ್ರ ಮಾಡುತ್ತಿದ್ದವು. ಆಗಲೋ ಮನೆ ತುಂಬಾ ಮಕ್ಕಳು,ಎಲ್ಲರನ್ನೂ ಮುದ್ದು ಮಾಡಿ,ಸಾಕುವಷ್ಟು,ಸಮಾಧಾನ ,ಪುರುಸೊತ್ತು ಅಮ್ಮಂದಿರಿಗೆಲ್ಲಿ ಇತ್ತು ಹೇಳಿ.ತಪ್ಪು ಮಾಡಿದರೆ ಏಟು ಕೊಟ್ಟೇ ತಿದ್ದುತ್ತಿದ್ದಿದ್ದು.ಅಡುಗೆ ಮನೆಯಲ್ಲಿ ಇರುವಾಗ ಸುಲಭಕ್ಕೆ ಸಿಗುವ ಸೌಟು, ಮಗಚುವ ಕೈ ಅಮ್ಮಂದಿರಿಗೆ ಸುಲಭಕ್ಕೆ ಸಿಕ್ಕಿ,ಮಕ್ಕಳ ತಿದ್ದಲು ಮಾಡಿರೋ ಸಹಾಯ ಎಷ್ಟೊಂದು ಅಲ್ವೇ.ನಮ್ಮ ಈ ಕಾಲದಲ್ಲಿ ಮಾತ್ರ ಒಂದೋ ಎರಡೋ ಮಕ್ಕಳ ಮಾಡಿಕೊಂಡು,ಅವರ ಸುತ್ತವೇ ಇಡೀ ಜೀವನ ಸುತ್ತುವ ನಾವು ಅವರ ಮೇಲೆ ಸೌಟು, ಮಗಚುವ ಕೈ ಬಳಸುವುದುಂಟ.!

ಇಷ್ಟೇ ಅಲ್ಲ ಅಡುಗೆ ಸಾಮಗ್ರಿಗಳ ಅಳತೆ ಪ್ರಮಾಣಗಳಿಗೂ ಈ ಚಮಚಗಳೇ ಬೇಕು.
ಯಾವುದೇ ಟಿವಿ ಚಾನಲ್ ನಲ್ಲಿ ಯಾವುದೇ ಅಡುಗೆ ಶೋ ನೋಡಿ,ಅದರಲ್ಲಿ ಬೇಕಾಗುವ ಸಾಮಗ್ರಿಗಳ ಅಳತೆ ಹೇಳುವಾಗ ಟೀ ಸ್ಪೂನ್, ಟೇಬಲ್ ಸ್ಪೂನ್ ಅಂತಾನೆ ಹೇಳೋದು.ಒಂದು ಟೇಬಲ್ ಸ್ಪೂನ್  ಅಳತೆ ಮೂರು ಟೀ ಸ್ಪೂನ್ ಅಳತೆಗೆ ಸಮನಂತೆ.ಇನ್ನೂ ಖಚಿತವಾಗಿ ಹೇಳೋದಾದ್ರೆ ಒಂದು ಟೇಬಲ್ ಸ್ಪೂನ್ ಹದಿನೈದು ಮಿಲಿ ಲೀಟರ್ ಆದ್ರೆ ಟೀ ಸ್ಪೂನ್ ಅದರ ಮೂರನೇ ಒಂದು ಭಾಗ.ಹಂಗಂದ್ರೆ ಎಷ್ಟು ಎಂಎಲ್ ನೀವೇ ಲೆಕ್ಕ ಹಾಕೊಳ್ಳಿ.ಏನಾದ್ರೂ ಟೀ ಸ್ಪೂನ್ ಅಳತೆ ಟೇಬಲ್ ಸ್ಪೂನ್ ಅಂತ ಗೊಂದಲ ಮಾಡ್ಕೊಂಡ್ರೆ ಅಡುಗೆ ಹಾಳಾಗೋದೆ ಸೈ.ಒಂದು ಟೀ ಸ್ಪೂನ್ ಉಪ್ಪು ಹಾಕಿ ಕಲಸಿ ಅಂತಾ ಇರೋದು ಗೊಂದಲವಾಗಿ ಒಂದು ಟೇಬಲ್ ಸ್ಪೂನ್ ಉಪ್ಪು ಹಾಕಿದರೆ ಏನಾಗಬಹುದು ಯೋಚನೆ ಮಾಡಿ.ಅದಕ್ಕೆ ಯಾವುದರಲ್ಲೂ ಅಳತೆ ಇರ್ಬೇಕು ಅಂತ ನಮ್ಮ ಹಿರಿಯರು”ಹೊಳೆಗೆ ಹಾಕಿದ್ರೂ ಅಳೆದು ಹಾಕು” ಅನ್ನೋ ಗಾದೆ ಮಾಡಿರೋದು.

         ಆದರೆ  ನನಗಂತೂ ಅಡುಗೆ ಮಾಡುವಾಗ,
ಹುರಿಯಲು,ಕರಿಯಲು,ಕೆದಕಲು, ಮಗುಚಲು,ಬಾಡಿಸಲು, ಬಡಿಸಲು ಅಂತೆಲ್ಲ ಬೇರೆ ಬೇರೆ ಚಮಚಗಳ ಬಳಸಿದರೂ,ಊಟ ತಿಂಡಿ ತಿನ್ನಲು ಕೈ ಬೆರಳುಗಳ ಬಳಸಿ ತಿನ್ನುವ ಸುಖವೇ ಬೇರೆ.ನಮ್ಮ ಭಾರತೀಯ ಪದ್ಧತಿಯ ಖಾದ್ಯಗಳ ಸೇವಿಸಲು ಕೈ ಬೆರಳುಗಳ ಬಳಸುವುದೇ ಉಪಯುಕ್ತ.ದೋಸೆ,ಪೂರಿ,ರೊಟ್ಟಿ,ಚಪಾತಿ,ನಾನ್,ಪರೋಟ,ಇತ್ಯಾದಿಗಳ ಚಮಚ ಬಳಸಿ ತಿನ್ನಲು ಸಾಧ್ಯವೇ ಇಲ್ಲ.ಇಡ್ಲಿ ವಡೆ ತಿನ್ನಲು ಹೋಟೆಲ್ಗಳಲ್ಲಿ ಎರಡೆರಡು ಚಮಚ ಕೊಡ್ತಾರೆ.ಇಡ್ಲಿ ಏನೋ ಮೃದುವಾಗಿರುತ್ತೆ,ಚಮಚದಿಂದ ಸುಲಭವಾಗಿ ತೆಗೆದು ಸಾಂಭಾರ್ ನಲ್ಲಿ ಮುಳುಗಿಸಿ ಸವಿಯಬಹುದು.ಆದ್ರೆ ವಡೆ ಮಾತ್ರ ಚಮಚದಲ್ಲಿ ತಿನ್ನಲು ಇದುವರೆಗೂ ನಾನು ಕಲಿತಿಲ್ಲ.ವಡೆ ಕೈಯಲ್ಲಿ ಮುರಿದು ಚಟ್ನಿಯಲ್ಲಿ ಅದ್ದಿ ಅದ್ದಿ ತಿನ್ನೋದೆ ಸುಖ.
ಪಲಾವ್,ಚಿತ್ರಾನ್ನ, ಉಪ್ಪಿಟ್ಟು ,ಅವಲಕ್ಕಿ ಇವಕ್ಕೆಲ್ಲ ಚಮಚ ಬಳಸಬಹುದು ಆದ್ರೆ ವಗ್ಗರಣೆ ತಿಂಡಿಗೆ ಚೆನ್ನಾಗಿ ಮೊಸರು ಸುರಿದುಕೊಂಡು ಕಲಸಿ ತಿಂದಾಗ ಆಗೋ ತೃಪ್ತಿ ಸಮಾಧಾನ,ಚಮಚದಲ್ಲಿ ಕೆದಕಿ ಕೆದಕಿ ತಿಂದಾಗ ನನಗಾಗದು ಅಂದ್ರೆ ಆಗದು.

ಹೊರಗಡೆ ತಿನ್ನುವ ಚಾಟ್ ಗಳು,ಸಿಹಿ ತಿಂಡಿ, ಐಸ್ಕ್ರೀಮ್ ಗಳ ತಿನ್ನಲು ಚಮಚವೇ ಬೇಕು.ಅದರಲ್ಲೂ ಮೊಳದುದ್ದ ಇರುವ ಗಾಜಿನ ಲೋಟದಲ್ಲಿ ಹಾಕಿ ಕೊಡುವ ಗಡ್ಬಡ್ ಐಸ್ಕ್ರೀಮ್ ತಿನ್ನಲು ಅಷ್ಟೇ ಉದ್ದದ ಚಮಚ ಕೊಡ್ತಾರೆ.ನಾವೆಲ್ಲ ಕಾಲೇಜ್ ದಿನಗಳಲ್ಲಿ ಅದಕ್ಕೆ ಅಮಿತಾಭ್ ಬಚ್ಚನ್ ಸ್ಪೂನ್,ಚಿಕ್ಕ ಕಪ್ ಗಳಲ್ಲಿ ಕೊಡುವ ಐಸ್ಕ್ರೀಮ್ ಜೊತೆ ಕೊಡುವ ಚೋಟುದ್ದ ಮರದ ಸ್ಪೂನ್ ಗೆ ಜಯ ಬಚ್ಚನ್ ಸ್ಪೂನ್ ಆಂತ ಹೆಸರಿಟ್ಟುಕೊಂಡು ನಗುತ್ತಿದ್ದೋ.
ಮನೆಯಲ್ಲೂ ಅಡುಗೆ ಮಾಡುವಾಗ ಬೇರೆ ಬೇರೆ ಸಾಮಗ್ರಿಗಳ ಅಳತೆ ಮಾಡಲು ಬೇರೆ ಬೇರೆ ಅಳತೆ ಸ್ಪೂನ್ಗಳ ಬಳಕೆ ಅನಿವಾರ್ಯವಾಗಿಬಿಟ್ಟಿದೆ.ಆದರೆ ನಮ್ಮಮ್ಮಂದಿರೆಲ್ಲ ಅಡುಗೆ ಮಾಡುವಾಗ ಯಾವ ಟೀ ಸ್ಪೂನ್ ಟೇಬಲ್ ಸ್ಪೂನ್ ಹಾವಳಿಯೂ ಇರಲಿಲ್ಲ.ಚಿಟಿಕೆ ಅರಿಶಿನ, ಹಿಡಿ ಉಪ್ಪು,ಅರ್ಧ ಹಿಡಿ ಸಕ್ಕರೆ,ಒಂದು ಪಾವು ಅಕ್ಕಿ,ಅಚ್ಚೇರು ಬೆಣ್ಣೆ,ಕಣ್ಣಳತೆಯ,ಕೈ ಅಳತೆಯ ಲೆಕ್ಕದಲ್ಲಿ ಅಡುಗೆ ಮಾಡಿದರೂ ಹದವೆಂದಿಗೂ ತಪ್ಪಿರಲಿಲ್ಲ.

ಆಗೆಲ್ಲ ನಾವು ಬೇಸಿಗೆ ರಜೆಯಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಮದುವೆ ಸೀಸನ್ ನಲ್ಲಿ ನಮ್ಮಜ್ಜಿಊರಲ್ಲೇ ಇರುತ್ತಿದ್ದದ್ದು ಹೆಚ್ಚು.ಅಮ್ಮನ ತಮ್ಮ ತಂಗಿಯರು,ಕಸಿನ್ ಗಳು ಒಂದು ಗಾಡಿ ಜನ ಇದ್ರು.ಅವರೆಲ್ಲರ ಮದುವೆ ಆಗಿದ್ದು ಅಜ್ಜಿ ಮನೆಯಂಗಳದಲ್ಲೇ. ಹೇಗಿದ್ರೂ ಮನೆ ಅಂಗಳ ದೊಡ್ಡದಾಗಿ ಇರುತ್ತಿತ್ತು,ಮನೆ ಮುಂದೆ ದೊಡ್ಡದಾಗಿ ಹಸಿರು ತೆಂಗಿನ ಗರಿಯ ಚಪ್ಪರ ಹಾಕಿ,ಹೂವಿನ ಮಂಟಪ ಮಾಡಿ ಮದುವೆ ಮಾಡೋರು.

ಮದುವೆ  ಗಿದುವೆ  ಕಾರ್ಯಗಳಲ್ಲಿ ಅಡುಗೆ ಮಾಡೋರು ಮನೆ ಹಿಂದೆಯೇ ತಾತ್ಕಾಲಿಕ ಅಡುಗೆ ಮನೆ ಮಾಡಿಕೊಂಡು ಮಾಡೋರು.ಕಾರ್ಯದ ಹಿಂದಿನ ದಿನವೇ ಬಂದು ದೊಡ್ಡ ದೊಡ್ಡ ಸೈಜುಗಲ್ಲು ಗಳ ಹೂಡಿ ಕಾರ್ಯಕ್ಕೆ ಅಂತ ಒಡೆಸಿಟ್ಟ ಸೌದೆಗಳ ಬಳಸಿಒಲೆ ಮಾಡೋರು.ಹಿಂದಿನ ದಿನ ಮಧ್ಯರಾತ್ರಿ ಯಿಂದಲೇ ಸಿಹಿ ತಯಾರಿಸುವ,ತರಕಾರಿ ಹೆಚ್ಚುವ,ತೆಂಗಿನಕಾಯಿ ತುರಿಯುವ,ಮಸಾಲೆಗಳ ಅರೆಯುವ ಸಡಗರ.ಬೆಳಿಗ್ಗೆ ನಾವು ಮಕ್ಕಳೆಲ್ಲಾ ಎದ್ದು ತಯಾರಾಗಿ ಮನೆ ಹಿಂದಿನ ಅಡುಗೆ ಜಾಗಕ್ಕೆ ಓಡಿ ಹೋಗಿ ನಿಂತು ನೋಡುವಷ್ಟರಲ್ಲಿ ಅಡುಗೆ ಅರ್ಧ ಮುಗಿದೇ ಹೋಗಿರುತ್ತಿತ್ತು. ತೊಟ್ಟಿ ಗಳಷ್ಟು ದೊಡ್ಡ ದೊಡ್ಡ ಪಾತ್ರೆಗಳು, ನಮ್ಮಷ್ಟೇ ಎತ್ತರದ ಕಬ್ಬಿಣದ ಸೌಟು, ಮಗಚುವ ಕೈಗಳು,ಅಷ್ಟೊಂದು ಅಗಲಕ್ಕೆ ಉರಿಯುತ್ತಿದ್ದ ಬೆಂಕಿ ಎಲ್ಲವೂ ನೋಡಿ ಬೆರಗೋ ಬೆರಗು.ಆಗ ಏನು ಈಗಿನಂತೆ ಹಿಂದಿನ ರಾತ್ರಿ ರಿಸೆಪ್ಷನ್,ಬೆಳಗಿನ ತಿಂಡಿಗೆ ಅಂತ ಥರಾವರಿ ಅಡುಗೆ ಮಾಡಿಸಿ ಜನ ಕರಿತಿರಲಿಲ್ಲ.ಮನೆ ಜನಕ್ಕೆ ಮಾತ್ರ ರಾತ್ರಿ ಊಟ, ಬೆಳಿಗ್ಗೆ ತಿಂಡಿ ಮಾಡಿಸೋರು.ಕಾರ್ಯಕ್ಕೆ ಬರೋ ಜನಕ್ಕೆ ಮಧ್ಯಾಹ್ನದ ಊಟ ಮಾತ್ರ.
ಮದುವೆ ದಿನಧಾರೆ ಎಲ್ಲಾ ಆದ ಬಳಿಕ, ಚಪ್ಪರದಡಿಯಲ್ಲೇ ಅಚ್ಚುಕಟ್ಟಾಗಿ ನೆಲದ ಮೇಲೆ ಉದ್ದಕ್ಕೆ ಹುಲ್ಲು ಹರಡಿ ಅದರ ಮೇಲೆ ಚಾಪೆ ಇಲ್ಲ ಜಮಕಾನ ಹಾಕಿ ಕೂರಿಸಿ,ಎಲೆ ಹಾಕಿ ಬಡಿಸಿ ಉಪಚಾರ ಮಾಡೋರು.
ಸಾರು ಪಾಯಸ ಬಡಿಸಲು ಮಾತ್ರ ಸೌಟು ಬಳಸೋರು. ಅನ್ನ ಬಡಿಸಲು ಒಂದು ಚಿಕ್ಕ ತಟ್ಟೆ, ಇನ್ನು ಬಾಕಿ ಇದ್ದ ಪಲ್ಯ,ಕೋಸಂಬರಿ,ಹಪ್ಪಳ, ಉಪ್ಪಿನಕಾಯಿ, ಉಪ್ಪು ಎಲ್ಲಾ ಕೈಯಲ್ಲೇ ಬಡಿಸೋರು.ನಾವು ಮಕ್ಕಳಿಗೆ ಉಪ್ಪಿನ ಡಬ್ಬ ಕೈಯಲ್ಲಿ ಹಿಡಿದು ಪ್ರತೀ ಎಲೆಗೂ ಒಂದೊಂದು ಚಿಟಿಕಿ ಉಪ್ಪು ಹಾಕುವ ಸಂಭ್ರಮ.ಇಲ್ಲ ಉಪ್ಪಿನಕಾಯಿ ಬಕೆಟ್ ನಿಂದಾ ಒಂದೊಂದೇ ಹೋಳು ಉಪ್ಪಿನ ಕಾಯಿ ತೆಗೆದು ಎಲೆ ಅಂಚಿಗೆ   ಇಡುವ ಕೆಲಸ.ಅದಕ್ಕೆಲ್ಲ ಚಮಚ ಗಿಮಚ ಬಳಸಿದ್ದೇ ಇಲ್ಲ.ಮಾಡುತ್ತಾ ಇದ್ದದ್ದೇ ಕಡಿಮೆ ವಿಧದ ಪದಾರ್ಥಗಳು.ಒಂದು ತರಕಾರಿ ಬಾತು  ,ಮೊಸರುಳಿ,ಒಂದು ಪಲ್ಯ, ಅನ್ನ,ಸಾರು,ಹಪ್ಪಳ ಉಪ್ಪು, ಉಪ್ಪಿನ ಕಾಯಿ.ಇವುಗಳ ಜೊತೆಗೆ ಒಂದೇ ಒಂದು ಸಿಹಿ.ಸಿಹಿ ಅಂದ್ರೆ ಸಾಮಾನ್ಯವಾಗಿ ಬೂಂದಿ ಪಾಯಸ,ಲಾಡು ಪಾಯಸ,ಇಲ್ಲವೇ ಮೈಸೂರು ಪಾಕ್ ಅಷ್ಟೇ.ಚಿರೋಟಿ ಹಾಲು,ಇಲ್ಲವೇ ಫೇಣಿಹಾಲು,ಸ್ವಲ್ಪ ಅನುಕೂಲವಾಗಿರೋರು ಮಾಡಿಸೋರು. ಊಟದ ಕೊನೆಗೆ ಒಂದು ಬಾಳೆ ಹಣ್ಣು,ಜೊತೆಗೆ ಎಲೆಯಡಿಕೆ ಅಷ್ಟೇ ಕೊಡ್ತಾ ಇದ್ದದ್ದು. ಐಸ್ಕ್ರೀಮ್,ಫ್ರೂಟ್ಸಲಾಡ್ ಎಲ್ಲಾ ಕೇಳಿಯೂ ಇರಲಿಲ್ಲ.

ಈಗೀಗ ಮದುವೆಗಳ ವೈಭೋಗ ನೋಡಲು ಎರಡು ಕಣ್ಣು ಸಾಲವು.ಅರಮನೆ ಹೋಲುವ ಛತ್ರಗಳು, ಚಿತ್ರ ವಿಚಿತ್ರವಾಗಿ ಅಲಂಕೃತವಾಗಿರೋ ವೇದಿಕೆ,ಮಂಟಪ ಗಳು,ಅಡಿಯಿಂದ ಮುಡಿಯವರೆಗೆ,ತಲೆಗೆ ಕಿರೀಟ ವೊಂದಿರದ  ಅಲಂಕೃತ ಹೆಂಗಳೆಯರು ಮದುವೆ ಮನೆಯನ್ನು  ತಣ ತಣ ಗುಟ್ಟಿಸುತ್ತಿರುತ್ತಾರೆ. ಆ ಊಟದ  ಹಾಲ್ ನಲ್ಲಿಯಂತು ಯುದ್ಧಕ್ಕೆ ಸನ್ನದ್ಧರಾದವರಂತೆ ಅಡುಗೆ ಸಿಬ್ಬಂದಿ ಸಮವಸ್ತ್ರಧಾರಿಗಳಾಗಿ,ತಮ್ಮ  ಬಕೆಟ್ ಗಳಲ್ಲಿ ತುಂಬಿರುವ ಖಾದ್ಯಗಳ ಚಮಚಗಳಲ್ಲಿ ಬಡಿಸುತ್ತ ಸಾಗುತ್ತಾರೆ.ಕೈಗಳಲ್ಲಿ ಬಡಿಸುವುದು ಉಂಟೇ ಈ ಹೈಜಿನಿಕ್ ಕಾಲದಲ್ಲಿ. ಉಪ್ಪಿಗೂ ಚಮಚವ ಬಳಸಿ,ಸಿಹಿ ಬಡಿಸಲು ವಿಧ ವಿಧ ವಿನ್ಯಾಸದ ಚಿಮುಟಗಳಲ್ಲಿ ನಾಜೂಕಾಗಿ ಎಲೆ ಮೇಲಿಡುತ್ತಾ ಹೋಗುತ್ತಾರೆ.ಸ್ವಲ್ಪ ಸ್ವಲ್ಪ ಬಡಿಸಿದರೂ , ನೂರೆಂಟು ತರಹದ ಖಾದ್ಯಗಳ ಮಾಡಿಸೋದರಿಂದಾಗಿ ಎಲೆ ತುಂಬಿ ತುಳುಕುವ ಹಾಗೆ ಆಗಿ, ಯಾವುದನ್ನೂ  ತೃಪ್ತಿಯಿಂದ ತಿಂದ ಹಾಗೆ ಆಗದು.ಅದರಲ್ಲೂ,ಸಿಹಿಗೆ ಒಂದು ,ಐಸ್ಕ್ರೀಮ್ ಗೆ ಒಂದು ಅಂತ ಪ್ಲಾಸ್ಟಿಕ್ ಚಮಚಗಳ ಹಾವಳಿ ಬೇರೆ.ಊಟ ಮುಗಿಸಿ ಎದ್ದ ಬಳಿಕ ಆಚೀಚೆ ಎಲೆಗಳ ನೋಡಿದರೆ ಇನ್ನೂ ಒಂದು ಮದುವೆಗೆ ಆಗುವಷ್ಟು ಆಹಾರ ವ್ಯರ್ಥವಾಗಿರುವುದ ಕಂಡು ಹೊಟ್ಟೆಯುರಿದು ಹೋಗುತ್ತದೆ.ಜನರ ಹೊಟ್ಟೆ ತುಂಬಿಸಲು ಅಡುಗೆ ಮಾಡಿಸೋದಕ್ಕಿಂತ ಹೆಚ್ಚಾಗಿ ತಮ್ಮ ಡೌಲು ತೋರಿಸಲು ಥರಹಾವರಿ ಅಡುಗೆ ಮಾಡಿಸೋರೆ ಹೆಚ್ಚು.
ಹೀಗೆ ಡೌಲು ತೋರಿಸೋ ಶ್ರೀಮಂತರ ಬಗ್ಗೆ ಹೇಳುವಾಗ,”ಅವನಿಗೇನು ಬಿಡು,ಚಿನ್ನದ ಇಲ್ಲವೇ ಬೆಳ್ಳಿಯ ಚಮಚವನ್ನೇ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದಾನೆ,”ಅಂತಾನೇ ಜನ ಹೇಳೋದು.
ಚಿನ್ನದ,ಬೆಳ್ಳಿಯ,ಇಲ್ಲವೇ ಮರದ ಚಮಚವೇ ಆಗಿರಲಿ,ಅವುಗಳ ಬಳಸಿ ತಿನ್ನುವ ಅನ್ನ ಮಾತ್ರ ಎಲ್ಲರಿಗೂ ಒಂದೇ.ಚಿನ್ನದ ಚಮಚದಲ್ಲಿ ಚಿನ್ನದನ್ನ ತಿಂದದ್ದು ಯಾರೂ ಇಲ್ಲ.  

ಈಗೀಗ ಮರದ ಚಮಚ, ಸೌಟು, ಮಗುಚುವ ಕೈಗಳಿಗೆ ಬೇಡಿಕೆ ಇದೆ.ಪರಿಸರ ಮಾಲಿನ್ಯದ ಘೋರ ಪರಿಣಾಮ ಗಳಿಗೆ ಪ್ರಪಂಚ ತತ್ತರಿಸುತ್ತಿರುವ ಈ ಕಾಲದಲ್ಲಿ ಎಷ್ಟೊಂದು ಜನ ಪರಿಸರ ಪ್ರೇಮಿಗಳಾಗಿ ಬದಲಾಗುತ್ತಿದ್ದಾರೆ.ಮೊನ್ನೆ ಚಾಟ್ಸ್ ತಿನ್ನಲು ಹೋದಾಗ ಪ್ಲಾಸ್ಟಿಕ್ ಚಮಚದ ಬದಲು ಮರದ್ದು ಕೊಟ್ರು.
ಮರದ ಚಮಚಗಳ ನೋಡಿದಾಗ ಚೈನೀಸ್ ಫುಡ್ ತಿನ್ನಲು ಬಳಸುವ ಚಾಪ್ ಸ್ಟಿಕ್ಸ್ ನೆನಪಾಯಿತು.ನನಗಂತೂ ಚಾಪ್ ಸ್ಟಿಕ್ಸ್ ಬಳಸಿ ತಿನ್ನುವವರ ನೋಡಿದರೆ ಅತ್ಯಾಷ್ಚರ್ಯ ವಾಗುತ್ತೇ.ಅದೊಂದು ಯಕ್ಷಿಣಿ ವಿದ್ಯೆಯೇ ಬಿಡಿ.ಒಂದು ಉದ್ದಿನ ವಡೆ ಚಮಚದಲ್ಲಿ ತಿನ್ನಲಾಗದ ನಾನು ಇನ್ನು ಚಾಪ್ ಸ್ಟಿಕ್ಸ್ ಬಳಸುವುದು ಕಲಿಯಬೇಕಾದರೆ ಮುಂದಿನ ಜನ್ಮದಲ್ಲಿ ಚೈನಾದಲ್ಲಿ ಹುಟ್ಟಬೇಕು ಬಿಡಿ.
ಚಾಪ್ ಸ್ಟಿಕ್ಸ್ ಇರಲಿ ಚಾಕು ಫೋರ್ಕ್ ಗಳ ಬಳಸಿ ತಿನ್ನುವವರ ಕಂಡರೂ ನನಗೆ ಬೆರಗು. ಎರಡೂ ಕೈಗಳಲ್ಲಿ ಚಾಕು ಫೋರ್ಕ್ ಹಿಡಿದು ನಾಜೂಕಾಗಿ ತಿನ್ನುವವರು ನನಗಂತೂ ಜಾಣರಲ್ಲಿ ಜಾಣರೆನಿಸುತ್ತಾರೆ.ಅಯ್ಯೋ ಬಿಡಿ ವಿದೇಶಿಯರ ಅಡುಗೆ ತಿಂಡಿಗಳಿಗೇ ಸರಿ ಆ ಚಾಕು ಫೋರ್ಕು.ನನ್ನಂತೆ ರಾಗಿ ಮುದ್ದೆ,ಹುರುಳಿ ಕಟ್ಟು ಪ್ರಿಯರಿಗೆ ದೇವರು ಕೊಟ್ಟಿರುವ ಐದು ಬೆರಳುಗಳೇ ಚಾಕು, ಫೋರ್ಕೂ ಮತ್ತೊಂದು ಎಲ್ಲಾ.
ಮರದ ಚಮಚದಲ್ಲಿ ಚಾಟ್ಸ್ ಮೆಲ್ಲುವಾಗ ಇವುಗಳ
ಮಾಡಲು ಎಷ್ಟು ಮರ ಕಡಿತಾರೋ ಅಂತ ನನ್ನ ಗಣಿತ ಟೀಚರ್ ಮನಸ್ಸು ಲೆಕ್ಕ ಹಾಕಿತು.ಪ್ಲಾಸ್ಟಿಕ್ ಸ್ಪೂನ್ ಬಳಸಿದ್ರೆ ಪರಿಸರಕ್ಕೆ ಮಾರಕ,ಸ್ಟೀಲ್ ಸ್ಪೂನ್ ಕೂಡಾ ಗಣಿಗಳಿಂದ ತೆಗೆದ ಕಬ್ಬಿಣದಿಂದ ಮಾಡೋದು. ಪ್ರಪಂಚದಲ್ಲಿ ಇರೋ ಪ್ರತಿಯೊಬ್ಬರಿಗೂ ಒಂದೊಂದು ಸ್ಪೂನ್ ಸ್ಟೀಲ್ ನದು ಕೊಟ್ರೆ ಅಷ್ಟು ಸ್ಟೀಲ್ ಮಾಡೋಕೆ ಎಷ್ಟು ಕಾಡು ಕಡಿದು,ಎಷ್ಟು ಗಣಿಗಳ ತೋಡಬೇಕೋ ಅಲ್ಲವೇ.ಸುಮ್ಮನೆ ತೆಪ್ಪಗೆ ಕೈಬೆರಳುಗಳಲ್ಲಿ ತಿಂದರಾಗದೆ ಅನ್ನೋ ತರ್ಕದಲ್ಲೆ ಚಾಟ್ಸ್ ಮುಗಿದಿದ್ದು ತಿಳಿಯಲಿಲ್ಲ.

ಅದೇನೋ ಒಂದು ಗಾಯದ ಹುಲಿ ಕಥೆ ಇದೆ.ಒಂದು ಕಾಡಿನಲ್ಲಿ ಒಂದು ಹುಲಿಗೆ ಮೈಯಲ್ಲಿ ಏನೋ ಒಂದು ಗಾಯವಾಗಿ ಒಂದಿಷ್ಟು ಚರ್ಮ ಕಿತ್ತು ಹೋಯಿತಂತೆ,ಅದನ್ನು ಸರಿ ಮಾಡಲು ಹುಲಿ ತನ್ನ ಮೈಯಿಂದ ಸ್ವಲ್ಪ ಚರ್ಮ ಕಿತ್ತು ಗಾಯಕ್ಕೆ ಅಂಟಿಸಿ ಕೊಂಡಿತಂತೆ.ತೊಗೊ ಈಗ ಎರಡು ಗಾಯವಾದವು,ಹೊಸ ಗಾಯಕ್ಕೆ ಮತ್ತೆ ಚರ್ಮ ಕಿತ್ತು ಅಂಟಿಸು, ಹೀಗೆ ಮತ್ತೆ ಮತ್ತೆ ಚರ್ಮ ಕಿತ್ತು ಕಿತ್ತು ಗಾಯಗಳಿಗೆ ಅಂಟಿಸಿಕೊಳ್ಳುತ್ತಾ ಇಡೀ ಮೈ ರಂಪ ಮಾಡಿಕೊಂಡು ಹುಲಿ ಸತ್ತಿತಂತೆ.ಹಂಗೆ  ಕೈಗಳ ಬಿಟ್ಟು ಸ್ಟೀಲ್ ಗೆ ಹೋಗಿ,ಸ್ಟೀಲ್  ಬಿಟ್ಟು,ಪ್ಲಾಸ್ಟಿಕ್ ಗೆ ಹೋಗಿ,ನಂತರ ಮರಕ್ಕೆ
ಬರೋವಷ್ಟರಲ್ಲಿ ಭೂಮಿ ಕೂಡ ಮೈತುಂಬಾ ಕೆತ್ತಿಸಿಕೊಂಡು ನರಳುವಂತಾಗಿದೆ.

ಒಂದು ಸಣ್ಣ ಚಮಚದ ಸುತ್ತಾ ಇಷ್ಟೊಂದು ವಿಷಯ ಸುತ್ತಿ ಬಂದದ್ದಾಯಿತು. ಇನ್ನು ಕೈ ತೊಳೆದು ಊಟಕ್ಕೆ ಕೂರಬೇಕು. ಇನ್ನು ನೀವೂ ಊಟಕ್ಕೆ ಹೊರಡಿ, ಸ್ಟೀ ಲೋ, ಪ್ಲಾಸ್ಟಿಕ್ಕೋ,ಮರವೋ ಇಲ್ಲವೇ ಬರಿ ಕೈ ಚಮಚ ವೋ ಆಯ್ಕೆ ಮಾತ್ರ ನಿಮ್ಮದೇ.

*****************************

7 thoughts on “ಚಮಚಾಯಣ…

    1. ಆನೆ ಬೆಲೆ ಆನೆಗೆ ಅಡಿಕೆ ಬೆಲೆ ಅಡಿಕೆಗೆ ಅನ್ನೋ ಮಾತನ್ನು ಸಾಬೀತು ಮಾಡಿದಿರಿ ಸಮತ ಮೇಡಂ. ಪ್ರತಿಯೊಂದು ವಸ್ತುವಿಗೂ ಅದರದ್ದೇ ಮಹತ್ವವಿದೆ. ನಮ್ಮ ನೋಟ ಹೇಗಿರುತ್ತೆ ಹಾಗೆ ಅದರ ಬೆಲೆ ಇರುತ್ತೆ ಅಂತ ನಿಮ್ಮ ಬರಹದಲ್ಲಿದೆ. ಜೀವ ಇಲ್ಲದ ವಸ್ತುವಿಗೆ ಜೀವ ತುಂಬುವ ಸಾಹಸ ಮೆಚ್ಚುವಂತಹದು. ತುಂಬಾ ಚೆನ್ನಾಗಿ ಬರೆಡ್ಡಿದ್ದೀರಾ.

  1. ಅಯ್ಯೋ.
    . ತಲೆ ಬರಹ ನೋಡಿ …ನಾನು ಎಲ್ಲೋ ಸ್ಕೂಲ್ನಲ್ಲಿ ಇರುವ HM ಚಮಚ ಗಳ ಕಥೆ ಅನ್ಕೊಂಡೆ….ANY HOW, ಚಮಚಾ ಬಗ್ಗೆನೂ positive ಆಗಿ ಚೆನ್ನಾಗಿ ಬರೆದಿದ್ದೀರಾ….ಉಷಾ.

  2. ಸಮತಾ madam sanna ಚಮಚದ ಬಗ್ಗೆ ದೊಡ್ಡ ಕಾವ್ಯವನ್ನೇ ಬರೆದಿದ್ದೀರಿ

  3. ಒಳ್ಳೆಯ ಬರಹ.ನಿಮ್ಮ ಎಲ್ಲಾ ಬರಹಗಳೂ ನನಗೆ ಇಷ್ಟ.ಹೀಗೇ ಬರೀತೀರಿ.

Leave a Reply

Back To Top