ಜೂನಿಯರ್ಸ್

ಕಥೆ

ಜೂನಿಯರ್ಸ್

ನಾಗರತ್ನ ಎಂ ಜಿ

ಭಾಗ- ಒಂದು

(30 ವರ್ಷಗಳ ಹಿಂದೆ)

 ನಿಮಿಷಕ್ಕೊಮ್ಮೆ ಕೈ ಗಡಿಯಾರ  ನಿಧಾನ ಗತಿಯಲ್ಲಿ ಚಲಿಸುತ್ತಿತ್ತು. ಪ್ರತಿಯೊಂದು ನಿಲ್ದಾಣದಲ್ಲೂ ಹತ್ತಿಪ್ಪತ್ತು ಪ್ರಯಾಣಿಕರನ್ನು ತುಂಬಿಕೊಂಡು ಕುಂಟುತ್ತಾ ಅಂತೂ ಇಂತೂ ನಾನು ಇಳಿಯುವ ಸ್ಥಳ ಬಂದಾಗ ೧೦ ಘಂಟೆ ೫ ನಿಮಿಷ. ಕಚೇರಿ ತಲುಪುವಷ್ಟರಲ್ಲಿ ೧೦.೧೦. ಎರಡು ತಿಂಗಳ ಹಿಂದೆ ತಾನೇ ಬೆಂಗಳೂರಿನಿಂದ ಮೈಸೂರಿನ ಅಂಚೆ ಕಚೇರಿಗೆ ವರ್ಗವಾಗಿದ್ದ ನಾನು ಅಳುಕುತ್ತಲೇ ಆಫೀಸಿನೆಡೆಗೆ ನಡೆದಿದ್ದೆ. ಗೇಟಿನಲ್ಲೇ ಇಬ್ಬರು ಸಹೋದ್ಯೋಗಿಗಳು ಕೂಡಿಕೊಂಡಾಗ ಸ್ವಲ್ಪ ಧೈರ್ಯ ಬಂತು. ಒಳಗೆ ಹೆಜ್ಜೆ ಇಡುತ್ತಿದ್ದಂತೆಯೇ ಓಹೋ ಏನು ಲೇಟ್ ಇವತ್ತು..ಮೊದಲ ಪ್ರತಿಕ್ರಿಯೆ ಬಾಗಿಲಿನಿಂದ ಸ್ವಲ್ಪವೇ ಮುಂದೆ ಕುಳಿತುಕೊಳ್ಳುವವರಿಂದ. “ಏನ್ ಮೇಡಂ ಬಸ್ ಲೇಟಾ” ಮತ್ತೊಬ್ಬರಿಗೆ ತಾವೇ ಕಾರಣ ಹುಡುಕುವ ಸಹಾನುಭೂತಿ. “ಅಯ್ಯೋ ಪಾಪ ಇನ್ನೊಂದ್ಹತ್ತು ನಿಮಿಷ ಬೇಗ ಹೊರಡಬಹುದಿತ್ತು” ಮರುಕದ ಧ್ವನಿ. ಎಲ್ಲರ ಮಾತಿಗೆ ಕಿವುಡಾಗಿ ಎಲ್ಲರ ಕಣ್ಣು ತಪ್ಪಿಸಿ ನನ್ನ ಸ್ಥಳದಲ್ಲಿ ಕೈ ಚೀಲ ಇಟ್ಟು ಹಾಜರಿ ಹಾಕಲು ಮೇಲಧಿಕಾರಿಯ ಮೇಜಿನ ಬಳಿ ಬಂದಾಗ ಕನ್ನಡಕದ ಹಿಂದಿನಿಂದ ಆಪಾದಮಸ್ತಕ ಅಳೆಯುತ್ತ ” ಮಾಡಮ್ ಪ್ಲೀಸ್ ಕಮ್ ಆನ್ ಟೈಂ. ಐ ಹ್ಯಾವ್ ಟು ಆನ್ಸರ್ ಎವರಿ ಒನ್. ಎಲ್ರೂ ಬಂದು ನನ್ನ ಕೇಳ್ತಾರೆ .ತಣ್ಣಗಿನ ದನಿ ಕೇಳಿ ಸಾರಿ ಸರ್ ಬಸ್ ಲೇಟ್ ಆಯ್ತು ಅಂದೆ. ಸ್ವರವೇ ಉಡುಗಿ ಹೋಗಿತ್ತು.

ಕಾರಣಕ್ಕೇನು ಎಲ್ರೂ ಕೊಡ್ತಾರೆ ಬಸ್ ಲೇಟ್ ಆಗದ್ ಹಾಗೆ ನೋಡ್ಕೋಬೇಕು

ಏನೊಂದು ಮಾತನಾಡದೆ ಸೀಟಿಗೆ ಹೋಗಿ ಅಂದಿನ ಕೆಲಸದಲ್ಲಿ ಮಗ್ನಳಾದೆ. ತಕ್ಷಣ ಹೊಳೆದದ್ದು ನನ್ನೊಂದಿಗೆ ಲೇಟ್ ಆಗಿ ಬಂದ ಹಿರಿಯ ಸಹೋದ್ಯೋಗಿಗಳಿಬ್ಬರನ್ನು ಯಾರು ಏನು ಪ್ರಶ್ನಿಸಲಿಲ್ಲವಲ್ಲ ಎಂದು. ತಕ್ಷಣ ಅವರ ಕುರ್ಚಿಯ ಬಳಿ ಕಣ್ಣು ಹಾಯಿಸಿದೆ. ಸಂಬಂಧ ಪಟ್ಟ ಮೇಲಧಿಕಾರಿ ಆಗ ತಾನೇ ಹೊರಗಡೆಯಿಂದ ಬಂದು ಆಸೀನರಾದಾಗ ನನ್ನಂತೆಯೇ ತಡವಾಗಿ ಬಂದವರು ಎದ್ದು ಅವರ ಬಳಿ ಹೋಗಿ “ಸಾರಿ ಸರ್ ಇವತ್ತು ಲೇಟ್ ಆಯ್ತು ಹಬ್ಬ ಅಲ್ವೇ ಪೂಜೆ ಮಾಡಿ ಬರೋದು ತಡವಾಯ್ತು” ಎಂದಾಗಓಹೋ ಪರ್ವಾಗಿಲ್ಲ ಬಿಡಿ ಮನೆ ಸಂಸಾರ ಮಕ್ಳು ಅಂದ್ಮೇಲೆ ಇದೆಲ್ಲ ಇರುತ್ತೆ. ಒಂದ್ಕಡೆ ಕೆಲ್ಸ ಮಾಡೋವ್ರು ನಾವು ಅಷ್ಟು ಸಹಕಾರ ಕೊಡದಿದ್ರೆ ಹೇಗೆ ಇನ್ನು ಒಂದರ್ಧ ಘಂಟೆ ಬಿಟ್ಟು ಬರಬೇಕಿತ್ತು ಹೇಗೋ ಅಡ್ಜಸ್ಟ್ ಮಾಡ್ತಿದ್ದೆ” ಧಾರಾಳವಾಗಿ ಬದಲು ಹೇಳಿದರು. ಕೇಳುತ್ತಿದ್ದ ನಾನು ಅಚ್ಚರಿಯಿಂದ ಕೆಲಸ ಮರೆತು ಅವರತ್ತಲೇ ನೋಡುತ್ತಿದ್ದೆ. ಹಾಗಾದರೆ ನಾನು ತಡವಾಗಿ ಬಂದರೆ ಮಾತ್ರ ತಪ್ಪೇ? ಅದೂ ನಗರದ ಸಾರಿಗೆಯನ್ನೇ ಅವಲಂಬಿಸಿರುವ ಮಧ್ಯಮ ವರ್ಗದ ಸರ್ಕಾರಿ ನೌಕರಳಾದ ನಾನು ತಡವಾಗಿ ಬಂದಶರ್ಕಾರಿ ಬಸ್ನಲ್ಲಿ ಬಂದದ್ದು ತಪ್ಪೇ? ಈ ಘಟನೆ ಮನಸ್ಸಿನಿಂದ ಮರೆಯಾಗುವ ಮುನ್ನವೇ ಮತ್ತೊಂದು ಕಹಿ ಘಟನೆ ನಡೆಯಿತು.

ಮದ್ಯಾಹ್ನ ಊಟ ಮುಗಿಸಿ ಅದೇ ತಾನೇ ಬಂದು ಅರ್ಧವಾಗಿದ್ದ ಕೆಲಸ ಕೈಗೆತ್ತಿಕೊಳ್ಳುವಾಗ “ಮೇಡಂ ನೋಡ್ರಿ ನಿಮಗೆ ಫೋನ್” ಎಂದು ಏನೋ ಗೊಣಗುತ್ತ ಕರೆದರು ಮೇಲಧಿಕಾರಿ. ಬೆಂಗಳೂರಿನಿಂದ ಅಮ್ಮನಿಗೆ ಸೌಖ್ಯವಿಲ್ಲ ಹೊರಟು ಬಾ ಎಂದು ಅಕ್ಕನ ಸಂದೇಶ . ಅನಿರೀಕ್ಷಿತ ಆಘಾತದಿಂದ ಚೇತರಿಸಿಕೊಂಡು ರಜಾ ಅರ್ಜಿ ಗೀಚಿ ಸಂಬಂಧ ಪಟ್ಟ ಗುಮಾಸ್ತರ ಬಳಿ ಹೋಗಿ “ಸರ್ ನಮ್ಮ ತಾಯಿಗೆ ಹುಷಾರಿಲ್ಲ ಎರಡು ದಿ ರಜ ಬೇಕು” ನಡುಗುವ ಸ್ವರದಲ್ಲಿ ಹೇಳಿದೆ.

ಅಯ್ಯೋ ಹೋಗ್ರಿ ನಿಮ್ ಗೋಳು ಯಾವಾಗ್ಲೂ ಇದ್ದದ್ದೇ ಏನೋ ಒಂದು ಕಳ್ಳ ನೆವ ಹೇಳ್ಕೊಂಡು ಬರ್ತೀರ…ಗುಮಾಸ್ತರ ಅಸಡ್ಡೆಯ ನುಡಿ

ಇಲ್ಲ ಸರ್ ನಂಗೆ ರಜಾ ಬೇಕೇ ಬೇಕು ಊರಿಗೆ ಹೋಗ್ಬೇಕು” ಪಟ್ಟು ಹಿಡಿದೆ

ರಜಾ ಕೊಡಕ್ಕೆ ಆಗಲ್ಲ ರೀ ಇಲ್ಲಿ ಯಾರೂ ಜನಾನೆ ಇಲ್ಲ” ಧೋರಣೆಯಲ್ಲಿ ಹೇಳಿದರು.

ತಾಯಿಯ ಅನಾರೋಗ್ಯದ ಆತಂಕ, ಅನುಭವೀ ಗುಮಾಸ್ತರ ಅಮಾನುಷ ವರ್ತನೆಯಿ೦ದ ರೋಷಗೊಂಡ ನಾನು ಬದಲು ಮಾತನಾಡದೆ ಅರ್ಜಿಯನ್ನು ಅವರ ಮುಂದಿಟ್ಟು ನಿರ್ಗಮಿಸಬೇಕೆನ್ನುವಾಗ ಇಲಾಖೆಯಲ್ಲಿ ೧೫ ವರ್ಷ ಹಳಬರಾದ ಮಹಿಳೆಯೊಬ್ಬರು ರಜಾ ಅರ್ಜಿಯೊಂದಿಗೆ ಹಾಜರಾದರು. ಅವರನ್ನು ಕಂಡ ಕೂಡಲೇ ನಾಟಕೀಯ ವಾಗಿ ನಗುತ್ತ “ಏನ್ ಮೇಡಂ ಏನಾಗಬೇಕಿತ್ತು’ ಎಂದು ವಿನೀತನಾಗಿ ಕೇಳಿದ ಅವರನ್ನು ನೋಡಿ ಈಗ ತಾನೇ ಮಾನವೀಯತೆ ಇಲ್ಲದ ಗುರುಗುಟ್ಟಿದ ಮನುಷ್ಯ ಈತನೇನ ಅನ್ನಿಸಿತು.

ಏನಿಲ್ಲ ರೀ ಒಂದ್ ನಾಲ್ಕು ದಿನ ಲೀವ್ ಬೇಕಿತ್ತು

ಅದಕ್ಕೇನು ತೊಗೊಳಿ ಏನಾದ್ರು ಅರ್ಜೆಂಟಾ?

ಅರ್ಜೆಂಟ್ ಎಲ್ಲ ಏನಿಲ್ಲ ಸ್ವಲ್ಪ ಪರ್ಸನಲ್ ಕೆಲ್ಸ ಮನೇಲಿ. ಓಹೋ ತೊಗೊಳಿ ಮೇಡಂ ನಿಮ್ ರಜ ನಿಮಗಲ್ದೆ ಇನ್ಯಾರಿಗೆ ಕೊಡೋದು. ಪೋಸ್ಟ್ ಮಾಸ್ಟರ್ ಹತ್ರ ಕಳ್ಸಿ ಸಾಂಕ್ಷನ್ ಮಾಡಿಸ್ತೀನಿ. ಹಿಹಿಹಿ…

ಇನ್ನು ಮುಂದೆ ಅವರ ಸಂಭಾಷಣೆ ಕೇಳುವ ಮನಸ್ಸಾಗದೆ ಅಲ್ಲಿಂದ ಹೊರ ಬಂದೆ

“ಮನೆ ಅಂದ್ಮೇಲೆ ಎಲ್ರಿಗೂ ಕೆಲ್ಸ ಇರುತ್ತೆ”

ನಿಮ್ ರಜ ನಿಮಗಲ್ದೆ ಇನ್ಯಾರಿಗೆ”

ಇಂಥ ವಾಸ್ತವ ಸತ್ಯ ನಮಗೆ ಅಂದರೆ ಹೊಸಬರಿಗೆ ಅನ್ವಯಿಸುವುದಿಲ್ಲವೇ.

ಜೋರಾಗಿ ನಕ್ಕರೆ ತಪ್ಪು, ಒಟ್ಟಿಗೆ ಊಟ ಮಾಡಿದರೆ ತಪ್ಪು, ಹೊರಗಡೆ ಕಾಫಿಗೆ ಹೋದರೆ ತಪ್ಪು, ಪುರುಷ ಸಹೋದ್ಯೋಗಿಯೊಂದಿಗೆ ಸಲಿಗೆಯಿಂದ ಮಾತಾಡಿದರೆ ತಪ್ಪು…

ಸರ್ಕಾರಿ ಕಚೇರಿಗಳಲ್ಲಿ ಸಾಕಷ್ಟು ಸಂರ್ಭಗಳಲ್ಲಿ ನಡೆಯುವ ಈ ಭೇದ ಭಾವಕ್ಕೆ ಮಲತಾಯಿ ಧೋರಣೆಗೆ ಕಾರಣ ನನಗೆ ಈಗೀಗ ಸ್ಪಷ್ಟವಾಗುತ್ತಿದೆ. ನಾನು ಆಗ ತಾನೇ ಕೆಲಸಕ್ಕೆ ಸೇರಿದವಳು , ಅನನುಭವಿ. ಅವರ ಮಾತಿನಲ್ಲಿ ಹೇಳುವುದಾದರೆ “ಜ್ಯೂನಿಯರ್ಸ್”. ಹೊಸದಾಗಿ ಇಲಾಖೆಗೆ ಸೇರಿದ ಯುವ ಜನತೆಗೆ ಏನೂ ತುರ್ತು ಕೆಲಸ ಇರುವುದಿಲ್ಲ, ರಜದ ಅವಶ್ಯಕತೆ ಇರುವುದಿಲ್ಲ, ಯಾವುದೇ ಅನ್ಯಾಯ ಖಂಡಿಸುವ ಅಧಿಕಾರವಿಲ್ಲ.

ಅಯ್ಯೋ ಇವಳೇನು ಇನ್ನು ಜೂನಿಯರ್ ಅವಳಿಗೇನು ಗೊತ್ತು ಎಂಬ ಧೋರಣೆ. ಇದ್ದ ಬದ್ದ ಹಕ್ಕುಗಳು ಕಛೇರಿಯಲ್ಲಿನ ಸವಲತ್ತುಗಳು ಎಲ್ಲ ತಮಗೆ ಬೇಕೆನ್ನುವ ಅನುಭವೀ ” ಸೀನಿಯರ್ಸ್”

ಈ ರೀತಿಯ ತಿರಸ್ಕಾರದ ಅನವಶ್ಯಕವಾಗಿ ಮನ ಚುಚ್ಚುವ ಚಿಕ್ಕ ಚಿಕ್ಕ ತಪ್ಪುಗಳನ್ನೇ ಬೆಟ್ಟದಷ್ಟು ಮಾಡುವ ಇಲಾಖೆಯ ಪಳಗಿದ ಜನರ ಮನ ಬದಲಾಯಿಸುವುದೆಂತು? ಇಲಾಖೆಯಲ್ಲಿ ಆಗ ತಾನೇ ಕಣ್ಣು ಬಿಡುತ್ತಿರುವ ನಮ್ಮಂಥ ಯುವ ಪೀಳಿಗೆಗೆ ಮಾರ್ಗರ್ಶಕರಾಗದೆ ಕೆಲಸ ಕಲಿಯಬೇಕೆಂದು ಬರುವ ಹುಮ್ಮಸ್ಸನ್ನು ಉದಾಸೀನದಿಂದ ದೂರ ಮಾಡಿ, ಇವರೇನು ಕಲಿಯುತ್ತಾರೆ ಎಂದು ಅಸಡ್ಡೆಯಿಂದ ನೋಡುವುದು ಬಿಟ್ಟು “ಜ್ಯೂನಿಯರ್ಸ್” ಆದರೂ ಅವರೂ ನಮ್ಮಂತೆ ಮನುಷ್ಯರು ನಾವೂ ಒಮ್ಮೆ ಅವರಂತೆ ಬಂದವರು ಎಂದು ಸೌಹರ್ದತೆ ಯಿಂದ ವರ್ತಿಸಿ ಅವರ ಬಗ್ಗೆ ನಮಗೆ ಗೌರವ ಉಂಟಾಗುವಂತೆ ಈ ಸೀನಿಯರ್ಸ್ ಬದಲಾಗಲಾರರೆ?

ಪಾರ್ಥೇನಿಯಂ ನಂತೆ ಹಬ್ಬಿರುವ ಈ ಕುತ್ಸಿತ ಬುದ್ಧಿಯ ಅನುಭವಿಗಳ ಮಧ್ಯೆಯೂ ತಾವರೆ ಎಲೆಯ ಮೇಲಿನ ನೀರಿನಂತೆ ಯಾರ ತಂಟೆಗೂ ಹೋಗದೆ ಚಿಕ್ಕವರೊಂದಿಗೂ ಸ್ನೇಹ ಸಲಿಗೆಯಿಂದ ಬೆರೆಯುವ ಹಿರಿಯರು ಅಲ್ಲಲ್ಲಿ ಇರುತ್ತಾರೆ ಅನ್ನುವುದು ಸಮಾಧಾನದ ಸಂಗತಿ.

ಚಿಕ್ಕವರಾದರೇನು ಒಂದೇ ಕಡೆ ಒಂದೇ ಉದ್ದೇಶಕ್ಕಾಗಿ ದುಡಿಯುವ ನಾವು ಸಮಾನರು ಎಂಬ ಉದಾತ್ತ ಮನೋಭಾವ ಬರುವುದೆಂದು..ಬಹುಷಃ ಇಂದು ಜ್ಯೂನಿಯರ್ಸ್ ಆಗಿರುವ ನಾವು ಮುಂದೆ ಸೀನಞರ್ಸ್ ಆದಾಗಲೇ…

(ಭಾಗ)

ಮುಂದೆ ಇಲಾಖೆಯಲ್ಲಿ ನಾನು ಪಳಗಿದಂತೆಲ್ಲ ಕಛೇರಿಯ ವಾತಾವರಣ, ನನ್ನ ಬಗೆಗಿನ ಸಹೋದ್ಯೋಗಿಗಳ ಧೋರಣೆ, ಮನೋಭಾವನೆ ನನಗೇ ಅಚ್ಚರಿ ಹುಟ್ಟಿಸುವಂತೆ ಬದಲಾಗಿದ್ದವು.

ನಾನೀಗ ಇಪ್ಪತ್ತು ವರ್ಷಗಳ ಸರ್ವೀಸ್ ಮುಗಿಸಿದ ಸೀನಿಯರ್. ಕಛೇರಿಯ ಒಂದು ವಿಭಾಗದ ಮುಖ್ಯಸ್ಥೆ. ಇಪ್ಪತ್ತು ವರ್ಷಗಳ ಅನುಭವ ನನಗೆ ಬಹಳಷ್ಟು ಪಾಠ ಕಲಿಸಿತ್ತು. ಸೂಕ್ಷ್ಮ ಸ್ವಭಾವದ ಯುವತಿಯಾಗಿದ್ದ ನಾನು ಈಗ ಯಾರು ಏನು ಹೇಳಿದರೂ ಮರುಕ್ಷಣ ಮರೆತು ಬಿಡುವ ಒರಟು ಚರ್ಮದ ಮಹಿಳೆಯಾಗಿದ್ದೆ. ಕಛೇರಿಯ ಎಷ್ಟೋ ವಿದ್ಯಮಾನಗಳು ನನಗೆ ಸರಿ ಕಾಣದಿದ್ದರೂ ಅವುಗಳನ್ನು ಸರಿ ಮಾಡುವುದಾಗಲಿ, ಪ್ರತಿಭಟಿಸುವ ಗೋಜಿಗಾಗಲಿ ಹೋಗದೆ ನಿರ್ಲಕ್ಷ್ಯದ ಮನೋಭಾವ ತಳೆದಿದ್ದೆ. ಕಛೇರಿಯ ವಿಷಯವಲ್ಲದೆ ನನಗೆ ಯೋಚನೆ ಮಾಡಲು ಗಂಡ ಮಕ್ಕಳು ಸಂಸಾರ ಎಂದು ನೂರೆಂಟು ವಿಷಯಗಳಿದ್ದವು. ಯಾವುದನ್ನೂ ಪ್ರತಿಭಟಿಸುವ, ಸರಿ ಮಾಡುವ ಆಸಕ್ತಿ ಹುಮ್ಮಸ್ಸು ಎಲ್ಲವೂ ಕಾಲದೊಂದಿಗೆ ಕಳೆದು ಹೋಗಿತ್ತು.

ಸರಳ ಒಂದು ತಿಂಗಳ ಹಿಂದೆ ತಾನೇ ಕೆಲಸಕ್ಕೆ ಸೇರಿದ ಅವಿವಾಹಿತ ಯುವತಿ. ನನ್ನ ವಿಭಾಗದಲ್ಲಿ ನನ್ನ ಕೈ ಕೆಳಗೆ ಕೆಲಸ ಮಾಡುವ ಗುಮಾಸ್ಥೆ. ಆ ದಿನ ಅವಳು ಕಛೇರಿಗೆ ಬಂದಾಗ ತಡವಾಗಿತ್ತು. ಯಾಕಮ್ಮ ಸರಳ ಲೇಟ್? ಸೈನ್ ಮಾಡಲು ಬಂದವಳನ್ನು ಪ್ರಶ್ನಿಸಿದ್ದೆ.

ಬಸ್ ಲೇಟ್ ಆಯ್ತು ಮೇಡಂ ಮೆಲ್ಲನೆ ಬಂತು ಉತ್ತರ.

ಸ್ವಲ್ಪ ಬೇಗ ಮನೆ ಬಿಟ್ಟು ಬರಬೇಕು ಲೇಟ್ ಆದ್ರೆ ಎಲ್ರೂ ನನ್ನ ಕೇಳ್ತಾರೆ ಗೊತ್ತಾಯ್ತ?

“ಸಾರಿ ಮೇಡಂ” ಪೆಚ್ಚು ಮುಖ ಹಾಕಿ ಸೀಟಿಗೆ ಹೋದಳು ಸರಳ. ನನಗರಿವಿಲ್ಲದೆ ಗಡುಸಾಗಿ ನನ್ನ ಬಾಯಿಂದ ಹೊರ ಬಿದ್ದ ಮಾತುಗಳು ಅವು. ನನಗೂ ಒಮ್ಮೆ ಇದೆe ಅನುಭವವಾಗಿತ್ತಲ್ಲವೇ ..ಕ್ಷೀಣವಾದ ನೆನಪೊಂದು ಚಿತ್ತ ಭಿತ್ತಿಯಲ್ಲಿ ಸುಳಿಯಿತು. ಮನಕ್ಕೆ ಪಿಚ್ಛೆನಿಸಿದರೂ ಪಕ್ಕದಲ್ಲಿದ್ದ ಸಹೋದ್ಯೋಗಿಯೊಬ್ಬರ ಪ್ರಶಂಸೆಯ ನೋಟ ಕಂಡು ಆ ಘಟನೆಯನ್ನು ಅಲ್ಲೇ ಮರೆತೆ.

ಒಮ್ಮೆ ಅನಿರೀಕ್ಷಿತವಾಗಿ ಕೆಲಸದ ಒತ್ತಡ ಹೆಚ್ಚಾದಾಗ ನನ್ನ ವಿಭಾಗದ ನಾಲ್ವರನ್ನು ಕರೆದು ಓ ಟಿ ಮಾಡಬೇಕೆಂದು ಹೇಳಿದಾಗ ಹತ್ತು ಹದಿನೈದು ವರ್ಷ ಸರ್ವಿಸಾಗಿದ್ದ ಇಬ್ಬರು ಏನೋ ನೆಪ ಹೇಳಿ ಜಾರಿಕೊಂಡಾಗ ಏನೂ ಹೇಳಲಾಗದ ನಾನು ಸರಳ ಮತ್ತು ಅವಳಂತೆಯೇ ಹೊಸಬನಾದ ಅಶೋಕ ಸಹ ಓ ಟಿ ಮಾಡಲು ಹಿಂಜರಿದಾಗ “ಯಾರೂ ಆಗಲ್ಲ ಅಂದ್ರೆ ಎಲ್ಲ ಕೆಲ್ಸ ಒಬ್ಬಳೇ ಮಾಡಕ್ಕೆ ನಾನೇನು ಮನುಷ್ಯಳಾ ಅಥವಾ ದೆವ್ವನಾ ..ಏನೂ ಕಾರಣ ಕೊಡಬೇಡಿ ಯು ವಿಲ್ ಬಿ ಬ್ರಾಟ್ ಅಂಡರ್ ಓ ಟಿ” ಎಂದು ಜೋರು ಮಾಡಿ ಅವರಿಬ್ಬರನ್ನೂ ರಾತ್ರಿ ಎಂಟರವರೆಗೂ ಕೂರಿಸಿ ದುಡಿಸಿದ್ದೆ.

ಈ ತಾರತಮ್ಯ ಇರಬಾರದು ಜ್ಯೂನಿಯರ್ಸ್ ಎಂದು ಅವರ ಮೇಲೆ ದರ್ಜನ್ಯ ಮಾಡಬಾರದು ಎಂದು ಸೇರಿದ ಹೊಸತರಲ್ಲಿ ದಂಗೆ ಏಳುತ್ತಿದ್ದ ನಾನು ಇಂದು ಮಾಡುತ್ತಿರುವುದಾದರು ಏನು..ನನ್ನ ಧೋರಣೆಯೂ ಇತರ ಸೀನಿಯರ್ಸ್ ಅಂತೆಯೇ ಬದಲಾಗುತ್ತಿದೆಯೇ ಎಂದು ಸ್ವಲ್ಪ ಸ್ವಲ್ಪವಾಗಿ ವಾಸ್ತವಿಕತೆಯತ್ತ ಹೊರಳುತ್ತಿದ್ದ ಮನವನ್ನು ” ನಾನೇನು ಮಾಡಲಿ ಅಂತಹ ಕಡೆ ಕೆಲಸ ಮಾಡುವಾಗ ಎಲ್ಲರಂತೆ ನಾವೂ ಇರಬೇಕು, ಏನೋ ಆದರ್ಶ ಸಾಧಿಸಲು ಹೊರಟರೆ ನಮ್ಮ ಬುಡಕ್ಕೆ ಪೆಟ್ಟು ಬೀಳುತ್ತದೆ..ಸರಳ ಅಶೋಕರನ್ನು ದಬಾಯಿಸದೇ ಅಷ್ಟೊಂದು ಸರ್ವೀಸ್ ಆಗಿರೋ ಅವರಿಬ್ಬರನ್ನ ಬೈಯಕ್ಕಾಗುತ್ತ” ಎಂದು ಅಸಹಾಯಕತೆಯ ನೆಪ ಒಡ್ಡಿ ನನ್ನ ಕೃತ್ಯವನ್ನ ಸಮರ್ಥಿಸಿಕೊಂಡೆ.

ಆ ದಿನ ದಿನಕ್ಕಿಂತ ಬೇಗ ಬಂದ ಸರಳ “ಮೇಡಂ ನಮ್ ತಂದೆಗೆ ಹರ್ಟ್ ಅಟ್ಯಾಕ್ ಆಗಿದೆ ಆಸ್ಪತ್ರೆಗೆ ಸೇರಿಸಿದ್ದಾರೆ ನನ್ ತಮ್ಮ ತುಂಬಾ ಚಿಕ್ಕವನು ನಂಗೆ ನಾಲ್ಕು ದಿನ ರಜಾ ಬೇಕು” ಎಂದು ಒಂದೇ ಉಸಿರಿಗೆ ಹೇಳಿದಾಗ ಸಂಬಂಧ ಪಟ್ಟ ಗುಮಾಸ್ತರ ಬಳಿ ಅವಳನ್ನು ಕಳಿಸಿದೆ.

ತಕ್ಷಣ ನನಗೂ ನೆನಪಾಯಿತು. ಅರೇ ನಾಳೆ ನಾನು, ಇವರು, ಮಕ್ಕಳ ಜೊತೆ ಊಟಿಗೆ ಹೋಗ್ಬೇಕು ಅನ್ಕೊಂಡಿದ್ವಲ್ಲ ರಜಾ ಬರೀಬೇಕು ಎಂದುಕೊಳ್ಳುತ್ತ ರ್ಜಿ ಬರೆದು ಕೊಡೋಣವೆಂದು ಒಳಗೆ ಹೋದಾಗ

“ಏನ್ರಿ ಕೆಲಸಕ್ಕೆ ಸೇರಿ ನಾಲ್ಕು ದಿನ ಆಗಿಲ್ಲ ಆಗ್ಲೇ ರಜಾ ಅಂತೀರಾ…” ಮುಂತಾಗಿ ದಬಾಯಿಸುತ್ತಿದ್ದ ಗುಮಾಸ್ತರ ದನಿಯೂ “ರಜಾ ಬೇಕೇ ಬೇಕು..ಎಂದು ಗೋಗರೆಯುತ್ತಿದ್ದ ಸರಳಳ ಕ್ಷೀಣ ಧ್ವನಿಯೂ ಕೇಳಿಸಿತು. ನನ್ನನ್ನು ನೋಡಿದ ಕೂಡಲೇ ಅವರು “ಏನ್ ಮೇಡಂ ರಜಾ ಬೇಕಿತ್ತಾ ಕೊಡಿ ಕೊಡಿ ಪಾಪ ವರ್ಷಾನುಗಟ್ಟಲೆಯಿಂದ ದುಡೀತಾ ಇದ್ದೀರಾ ನಿಮಗೆ ಇಲ್ಲ ಅನ್ನೋಕ್ಕಾಗುತ್ತ?” ಎನ್ನುತ್ತಾ ನಾನು ಏನೂ ಹೇಳುವ ಮೊದಲೇ ನನ್ನಿಂದ ಅರ್ಜಿ ತೆಗೆದುಕೊಂಡರು. ಅಪ್ರಯತ್ನವಾಗಿ ಸರಳನೆಡೆಗೆ ನೋಟ ನೆಟ್ಟಾಗ ಅವಳ ಕಣ್ಣಲ್ಲಿದ್ದ ಭಾವ ಕಂಡು ಇಪ್ಪತ್ತು ರ್ಷಗಳ ಹಿಂದಿನ ನಾನಾಗಿದ್ದೆ. ಅವಳ ಕೆಲಸ ನಾನು ಮಾಡಿಕೊಳ್ತೀನಿ ಅವಳಿಗೆ ರಜಾ ಕೊಡಿ ಎನ್ನಲೇ..ಊಟಿಗೆ ಮತ್ತೊಮ್ಮೆ ಹೋದರಾಯಿತು ಎಂಬ ಯೋಚನೆ ಒಂದು ಕ್ಷಣ ಸುಳಿಯಿತಾದರೂ “ಹು ಅವಳಿಗೋಸ್ಕರ ನಾನ್ಯಾಕೆ ರಜಾ ಕ್ಯಾನ್ಸಲ್ ಮಾಡ್ಲಿ ಕೆಲಸಕ್ಕೆ ಸೇರಿದ ಹೊಸತರಲ್ಲಿ ಇಂತಹ ಬೇಕಾದಷ್ಟು ತೊಂದರೆಗಳನ್ನು ನಾವು ಅನುಭವಿಸಲಿಲ್ಲವೇ ..ಇನ್ನು ಈಗೀಗ ಸ್ವಲ್ಪ ಆರಾಮಾಗಿರೋ ದಿನಗಳಲ್ಲಿ ಇಲ್ಲದ ಕಷ್ಟ ಯಾಕೆ ತಲೆ ಮೇಲೆ ಎಳೆದುಕೊಳ್ಳುವುದು..ಇವರಿಗೂ ತಿಳಿಯಲಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಕಷ್ಟ…ಎಂದುಕೊಳ್ಳುತ್ತ ಮಾರನೆಯ ದಿನ ಗಂಡ ಮಕ್ಕಳೊಂದಿಗೆ ಕಳೆಯುವ ಮಧುರ ಕ್ಷಣಗಳ ಕನಸು ಕಾಣುತ್ತಾ ಸರಳಳನ್ನು ಅವಳಿದ್ದ ಸ್ಥಿತಿಯಲ್ಲೇ ಬಿಟ್ಟು ಏನೂ ಹೇಳದೆ ನನ್ನ ಸ್ಥಳಕ್ಕೆ ಹಿಂದಿರುಗಿದೆ.

******************************

One thought on “ಜೂನಿಯರ್ಸ್

Leave a Reply

Back To Top