ದಿಟ್ಟ ಹೆಜ್ಜೆ

ಕಾವ್ಯಯಾನ

ದಿಟ್ಟ ಹೆಜ್ಜೆ

ಪುಷ್ಪಾ ಮಾಳ್ಕೊಪ್ಪ.

.

ಇನ್ನೇನು ಬೇಕಿಹುದು
ಜೀವನದಿ ಸಾಧನೆಗೆ
ಗುರಿಯತ್ತ ದಿಟ್ಟನಡೆ
ನಗುವು ಮೊಗದಲ್ಲಿ |
ಜೊತೆ ಜೊತೆಗೆ ಸಹಕರಿಪ
ನೇಹಿಗಳು ಪಕ್ಕದಲಿ
ಇರುತಿರಲು ಭಯವಿಹುದೆ
ಗೆಲುವ ಪಥದಲ್ಲಿ ||

ಎದೆಯ ಅಂಗಳದಲ್ಲಿ
ಚಿಗುರೊಂದು ಮೊಳೆದಿರಲು
ಚಾಮರವ ಬೀಸಿದವು
ಹಸಿರೆಲೆಗಳು |
ಹೊಸಗನಸ ಕಾಣುತಲಿ
ಅಡಿಯ ಮುಂದಿಡುತಿರಲು
ಸರಿದು ನಿಂದವು ಬೇಲಿ
ಹಾದಿ ಬದಿಯಲ್ಲಿ ||

ಚೈತ್ರದಲಿ ಚಿಗುರೊಡೆದ
ಎಳೆಗೆಂಪು ಕುಡಿಗಳನು
ಹರಸಿ ವರ್ಷದ ಧಾರೆ
ಬಾಡದಿರಲೆಂದು |
ಸುರಿಸುರಿದು ಧಗೆತಣಿಸಿ
ತಂಪನೀಯುತಲಿಹುದು
ಜೀವನದಿ ಸಾಧನೆಗೆ
ಏನು ಬೇಕಿನ್ನು ||

ಜಗವನ್ನೆ ಗೆಲುವೆವೆನ್ನುವ ಹುರುಪಿನಲಿ ಸಾಗಿ
ಲೋಕದೊಳ ಪರಿವೆಯೇ
ಇರದು ಮೈಮೇಲೆ |
ಬಾನ ಹಕ್ಕಿಗೆ ರೆಕ್ಕೆ
ಮೂಡಿಬಂದಂತಿಹುದು
ಮೇಘಾಳಿಗಳನೆಲ್ಲ
ಹೊತ್ತು ತರುವಂತೆ ||

ಹೆಜ್ಜೆ ಹೆಜ್ಜೆಯಲು ದೃಢ ಸಂಕಲ್ಪವಿರುತಿರಲು
ಸುಪ್ತಮನದಲು ಕಿಚ್ಚ
ಹಚ್ಚುವಂತಿಹುದು |
ತಾಮುಂದೆ ತಾ ಮುಂದೆ
ಎನುತ ಕೆಚ್ಚಲಿ ಸಾಗಿ
ದಾರಿಯೇ ಕಿರಿದಾಯ್ತು ಇವಕೆ ತಲೆಬಾಗಿ ||

**************************

2 thoughts on “ದಿಟ್ಟ ಹೆಜ್ಜೆ

Leave a Reply

Back To Top