ಗಜಲ್
ಜಬೀವುಲ್ಲಾ ಎಮ್. ಅಸದ್
ಮಳೆಯಲ್ಲಿ ನೆನೆನೆನೆದು ತೊಯ್ದ ಗುಬ್ಬಚ್ಚಿಯಾಗಿದೆ ಮನ
ಬಳಿಬಂದು ಸಖಿ ಇನ್ನಾದರೂ ಮನ್ನಿಸಿ ಸೇರಬಾರದೆ ನನ್ನ
ತೊರೆದು ಹೋದೆ ಏಕೆ ನೀನು ಕಾರಣ ಕೇಳಬಹುದೇನು
ನೆನಪು ಕಾಡುತ್ತಿವೆ ಬಿಡದೆ ಇಂದಿಗೂ ಮರೆಸಲಾಗದೆ ನಿನ್ನ
ಕನಸುತ್ತಿವೆ ಕಣ್ಣುಗಳು ನೀ ಬರುವ ದಾರಿ ಕಾದು ಎದುರು
ಹಗಲು ಕರಗಿ ಇರುಳು ಜರುಗಿ ಕಾಲ ಕಳೆಯಲಾಗದೆ ಇನ್ನ
ನೋವ ಬಿಕ್ಕಳಿಕೆಗೆ ಪ್ರೀತಿಯ ಹೊರತು ಬೇರೆ ಮದ್ದಿಲ್ಲ ಕೇಳು
ವೇದನೆಯ ಈ ರಾಗಕೆ ಆಲಾಪವೊಂದು ಮೊದಲಾಗಿದೆ ರನ್ನ
ಜಖಂ ಆದ ಹೃದಯಕೆ ಸೂಜಿಯ ಚುಚ್ಚಿ ನಗುವುದೇಕೆ ಹೀಗೆ
ಬಿಟ್ಟುಬಿಡು ಕೋಪ ಯಾಕೆ ಈ ಪ್ರಲಾಪ ಹೇಳಬಾರದೆ ಚಿನ್ನ
ನೀ ಹಚ್ಚಿದ ಒಲವಿನ ದೀಪ ನೀನೇ ಅರಿಸಿದರೆ ಹೇಗೆ ಹೇಳು
ಕವಿದ ಕತ್ತಲು ಕಳೆದು ಜಗಕೆ ಬೆಳಕು ಹರಿಯಬಾರದೆ ಕನ್ನ
ಅಸದ್’ನ ಹೃದಯಗಡಲಲಿ ಪ್ರೇಮನಾವೆ ಮುಳುಗುವ ಮುನ್ನ
ಬದುಕಿನ ಒಳಿತಿಗೆ ಭರವಸೆಯ ಕಿರಣ ಮೂಡಿಬಾರದೆ ಖಿನ್ನ
**********************
Superb Sir