ಶಶಿಕಾಂತೆಯವರ ಎರಡು ಗಜಲ್

ಶಶಿಕಾಂತೆಯವರ ಎರಡು ಗಜಲ್

ಗಜಲ್-ಒಂದು

ದೂರದಬೆಟ್ಟ ಕಣ್ಣಿಗೆ ನುಣ್ಣಗೆ ಆಸೆಪಟ್ಟರೆ ಹತ್ತಲು ಕಷ್ಟ ಪಡಬೇಕು
ಈಡೇರದಂತ ಕಾಣದ ಕಡಲನು ಕಾಣುವ ಹಂಬಲಕೆ ಕಡಿವಾಣ ಹಾಕಬೇಕು

ದೇಹದ ಬಣ್ಣದಿಂದ ಹೃದಯದ ತೂಕ ಹೇಗೆ ಗೊತ್ತಾಗುತ್ತದೆ
ಮನಜನಿಗೆ ರೂಪ ಮುಖ್ಯವಲ್ಲ ಮನದ ಸೌಂದರ್ಯ ನೋಡಬೇಕು

ಅಹಂಕಾರದ ಮಾತಿಂದ ಸಂಬಂಧದ ಮಹಲಲ್ಲಿ ಬಿರುಕು ಬಿಡುತ್ತದೆ
ಮಾತೆಂಬುದು ಕಡಲಾಳದ ಚಿಪ್ಪಿನೊಳಗೆ ಅಡಗಿರುವ ಮುತ್ತಾಗಬೇಕು

ಮೌನವಾಗಿ ಕೊರಗಿದರೆ ಜೀವದ ತಾಣ ದೇಹ ಒಳಗೊಳಗೇ ಸವೆಯುತ್ತದೆ
ಮೌನ ರೋಧನಕ್ಕೆ ಮನಸು ಗಟ್ಟಿ ಮಾಡಿ ಮಾತು ಕಲಿಸಬೇಕು

ಆ ಶಶಿ ನಡೆದು ಹೋದ ದಾರಿಯಲ್ಲಿ ಎಲ್ಲೆಡೆ ಬೆಳಕೇ ಕಾಣುತ್ತದೆ
ಅಂತೆಯೇ ನಾವು ನಡೆದು ಬಂದ ಹಾದಿ ಇತರರಿಗೆ ದಾರಿದೀಪ ಆಗಬೇಕು


ಗಜಲ್-ಎರಡು

ನಿನ್ನನ್ನಿನ್ನಿನ್ನೂ ಹೆಚ್ಚೆಚ್ಚಾಗಿ ಪ್ರೀತಿಸುತ್ತೇನೆ ನನಗೇ ಗೊತ್ತಿಲ್ಲದಂತೆ
ಕಣ್ಮರೆಯಾದ ನಿನಗಾಗಿ‌ ಕೊರಗುತ್ತೇನೆ ನನಗೇ ಗೊತ್ತಿಲ್ಲದಂತೆ

ಜನನ ಮರಣ ಯಾರ ಹಿಡಿತಕ್ಕೂ ಸಿಗದು ದೇವನೊಬ್ಬನ ಬಿಟ್ಟು
ನೋವು ನುಂಗೋದಕ್ಕಾಗಿ ಮರುಗುತ್ತೇನೆ ನನಗೇ ಗೊತ್ತಿಲ್ಲದಂತೆ

ಗೊತ್ತುಗುರಿ ಇಲ್ಲದ ಜೀವನದಿಂದ ನನ್ನ ಬಿಡುಗಡೆ ಯಾವಾಗ
ಜಂಜಾಟದಿಂದ ಮುಕ್ತಿಗಾಗಿ ಬೇಡುತ್ತೇನೆ ನನಗೇ ಗೊತ್ತಿಲ್ಲದಂತೆ

ನನ್ನ ಸುತ್ತಲೀಗ ‌ಪ್ರೀತಿಯ ಹಣತೆಗಳೇ ಉರಿಯುತಿವೆ
ಆರಿಹೋದ ದೀಪಕ್ಕಾಗಿ ಹುಡುಕುತ್ತೇನೆ ನನಗೇ ಗೊತ್ತಿಲ್ಲದಂತೆ

ಯಾರನ್ನೇಕೆ ದ್ವೇಷಿಸಬೇಕು,ಯಾರನ್ನೇಕೆ ದೂಷಿಸಬೇಕು ಈ ವಿಧಿಯಾಟಕೆ
ನನಗಿಲ್ಲದ ಭಾಗ್ಯಕ್ಕಾಗಿ ತಡಕಾಡುತ್ತೇನೆ ನನಗೇ ಗೊತ್ತಿಲ್ಲದಂತೆ

ಶಶಿಯ ಮುಗುಳ್ನಗುವಂತಹ ನಿನ್ನ ಮುಗ್ಧ ನಗುವ ನೋಡುವಾಸೆ
ನೀನಿಲ್ಲವೆಂದು ನೆನಪಾಗಿ ನಡುಗುತ್ತೇನೆ ನನಗೇ ಗೊತ್ತಿಲ್ಲದಂತೆ

********************

3 thoughts on “ಶಶಿಕಾಂತೆಯವರ ಎರಡು ಗಜಲ್

  1. ಶಶಿಕಾಂತೆ ಯವರೆ ಎರಡೂ ಗಜಲ್ ಗಳು ಭಾವಪೂರ್ಣವಾಗಿವೆ ಅಭಿನಂದನೆಗಳು

    1. ಹೃತ್ಪೂರ್ವಕ ಧನ್ಯವಾದಗಳು ನನ್ನ ಗಜಲ್ ಮೆಚ್ಚಿದ ತಮಗೆ

Leave a Reply

Back To Top