ಇಳಿ ಸಂಜೆ

ಕಥೆ

ಇಳಿ ಸಂಜೆ

ಚಂದ್ರಿಕಾ ನಾಗರಾಜ್

PHYSIQO ® Walking Stick For Men/Women/Old People(36 Inch)(Wooden) :  Amazon.in: Health & Personal Care

“ಯಾಕೋ ತಲೆ ಭಾರ ಆಗ್ತಿದೆ…”

“ಮಲ್ಕೋ ಹಣೆಗೆ ಅಮೃತಾಂಜನ್ ಹಚ್ತೀನಿ”

ಗಂಡನ ಕಾಳಜಿಗೆ ಸೊಗಸಾದ ನಿದ್ದೆ ಹತ್ತಿತ್ತು.

“ಅಯ್ಯೋ ಮಗ ಸೊಸೆ ಬಂದ್ರೇನ್ರೀ…ಎಬ್ಸೋಕ್ಕಾಗಿಲ್ವಾ” ಎಂದು ಗಡಿ ಬಿಡಿಯಿಂದ ಎದ್ದ ಪಾರ್ವತಮ್ಮ ಅಡುಗೆ ಕೋಣೆಗೆ ಕಾಲಿಟ್ಟಾಗ ಆಶ್ಚರ್ಯ ಕಾದಿತ್ತು. ರಾತ್ರಿ ಊಟಕ್ಕೆ ಎಲ್ಲವೂ ಸಿದ್ಧವಾಗಿತ್ತು. ಗಂಡನ ಕಾರ್ಯಕ್ಕೆ ತಲೆದೂಗಿದರು.

“ಸಾರಿಗೆ ಉಪ್ಪು ಹಾಕಿಲ್ವಾ?” ಮಗ ಸಿಡುಕಿದ. ರಾಯರು ನೊಂದದ್ದು ಗಮನಕ್ಕೆ ಬಂದಿದ್ದೇ ತಡ, “ಉಪ್ಪು ಕಮ್ಮಿ ಆಗಿರೋದಲ್ವಾಪ್ಪ ಹಾಕ್ಕೋಬೋದಲಾ” ಎಂದರು ಪಾರ್ವತಮ್ಮ.

“ಪಲ್ಯಕ್ಕೆ ಖಾರ ಜಾಸ್ತಿ ಆಗಿದೆ. ಬೇಡ ನಂಗೆ” ಎಂದು ಸೊಸೆ ತಟ್ಟೆಗೆ ಕೈತೊಳೆದು, “ಸಂಜು, ನಂಗೆ ತುಂಬಾ ವರ್ಕ್ ಇದೆ. ಯಾರೂ ಬಂದು ಡಿಸ್ಟರ್ಬ್ ಮಾಡ್ಬೇಡಿ ” ಎಂದು ಲ್ಯಾಪ್‌ಟಾಪ್ ಹಿಡಿದು ಮೆಟ್ಟಿಲೇರಿದಳು.

ಮಗ – ಸೊಸೆ ಹೋದ ಬಳಿಕ ಅಲ್ಲಿ ನೋವಿನ ಮೌನ ಅಡರಿಕೊಂಡಿತ್ತು. ರಾಯರು ಹಿಚುಕುತ್ತಿದ್ದ ಅನ್ನದ ತಟ್ಟೆಯ ಪಡೆದು ಪಾರ್ವತಮ್ಮ ರಾಯರಿಗೆ ತುತ್ತುಣಿಸಲಾರಂಭಿಸಿದರು.

*

ಸಂಜೆ ಹೊತ್ತು ಸಣ್ಣ ವಾಕಿಂಗ್ ಇಬ್ಬರಿಗೂ ಅಭ್ಯಾಸವಾಗಿತ್ತು. ಮಗ-ಸೊಸೆ ಇಬ್ಬರನ್ನು ಕೆಲಸದಾಳುಗಳಂತೆ ನೋಡುತ್ತಿದ್ದ ಪರಿಗೆ ಈ ನಡಿಗೆ ಸಾಂತ್ವ ನ ನೀಡುತ್ತಿತ್ತು.

ಕಲ್ಲ ಬೆಂಚಿನ ಮೇಲೆ ಕೂತು ಪಾರ್ಕ್ ನಲ್ಲಿ ಆಡುತ್ತಿದ್ದ ಮಕ್ಕಳತ್ತ ನೋಡುತ್ತಿದ್ದರು. ಆ ಮಕ್ಕಳು ತಮ್ಮ ಅಜ್ಜ – ಅಜ್ಜಿಯರೊಂದಿಗೆ ಅಲ್ಲಿಗೆ ಬರುತ್ತಿದ್ದರು. ಅವರೆಲ್ಲರ ಇಳಿ ವಯಸ್ಸಿಗೆ ಮೊಮ್ಮಕ್ಕಳು ಮುಲಾಮುಗಳಾದರೆ, ನನಗೆ ಪಾರ್ವತಿ-ಪಾರ್ವತಿಗೆ ನಾನು ಔಷಧಿ ಎಂದುಕೊಂಡು ತಣ್ಣಗೆ ನಕ್ಕರು ರಾಯರು.

*

ಪಾರ್ವತಮ್ಮ ಅಡುಗೆ ಕಾರ್ಯದಲ್ಲಿ ತೊಡಗಿದರೆ, ರಾಯರು ತರಕಾರಿ ಹೆಚ್ಚಿಕೊಡುತ್ತಿದ್ದರು. ಬಟ್ಟೆ ಒಗೆಯುತ್ತಿದ್ದರೆ, ಒಣಗಿಸಲು ಸಹಾಯ ಮಾಡುತ್ತಿದ್ದರು. ಪಾರ್ವತಮ್ಮರ ಕಾಲು ಗಂಟು ನೋವಿಗೆ ಎಣ್ಣೆ ಸವರುತ್ತಿದ್ದರು. ಸುಮ್ಮನಾದರೂ ದುಂಡು ಮಲ್ಲಿಗೆ ತಂದು ಪತ್ನಿಯ ತಲೆಗೆ ಮುಡಿಸಿ ಪಾರ್ವತಮ್ಮರ ನಾಚುವಿಕೆಯ ಚಂದ ನೋಡುತ್ತಿದ್ದರು.

ಎದೆಯೊಳಗೆ ಎಷ್ಟೊಂದು ದುಃಖ! ಪತ್ನಿ ಬಂದ ಮೇಲೆ ಬದಲಾದ ಮಗ…ಎರಡು ವಯಸ್ಸಾದ ಜೀವಗಳು ತಾನು ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದಾವೆ ಎಂಬುದರ ಅಳುಕೇ ಇಲ್ಲದ ಸೊಸೆ!

ಅವತ್ತು ಸಂಜೆ ಎಂದಿನಂತೆ ವಾಕಿಂಗ್ ಮುಗಿಸಿ ಬಂದವರಿಗೆ ಆಶ್ಚರ್ಯ ಕಾದಿತ್ತು. ಮಗ-ಸೊಸೆ ಬೇಗನೆ ಬಂದಿದ್ದರು. “ನಮ್ಮಿಬ್ಬರಿಗೂ ಫಾರಿನ್ ಕಂಪೆನಿಲಿ ಜಾಬ್ ಆಗಿದೆ. ನಾಳೇನೇ ಫ್ಲೈಟ್” ಎಂದರು.

ಪಾರ್ವತಮ್ಮ ಕಣ್ಣೀರಾದರು.

“ಪಾರು, ಖುಷಿ ಪಡೆ. ಅಲ್ಲೂ ಕೆಲಸಕ್ಕೆ ಜನ ಬೇಕೂಂತ ನಮ್ಮಿಬ್ರಲ್ಲಿ ಒಬ್ರನ್ನ ಕರ್ಕೊಂಡ್ ಹೋಗ್ತಿಲ್ವಲ್ಲೇ…” ಎಂದರು ರಾಯರು. ಪಾರ್ವತಮ್ಮರ ಕೆನ್ನೆಗಿಳಿಯುತ್ತಿದ್ದ ಕಣ್ಣೀರ ಒರೆಸಿದರು. ಇಳಿಸಂಜೆ ತಣ್ಣಗೆ ನಕ್ಕಿತು.

****************************

2 thoughts on “ಇಳಿ ಸಂಜೆ

Leave a Reply

Back To Top