ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—35

ಆತ್ಮಾನುಸಂಧಾನ

ಗೆಳೆತನದ ಸವಿ ಉಣಿಸುವ ಸನ್ಮಿತ್ರರು

ವಿಶ್ವವಿದ್ಯಾಲಯದ ಓದಿನ ಅವಧಿಯಲ್ಲಿ ನನಗೆ ಸುದೈವದಿಂದ ಉತ್ತಮ ಸ್ನೇಹಿತರು ದೊರೆತರು. ವಿಶೇಷವೆಂದರೆ ನನಗೆ ದೊರೆತ ನನ್ನ ನೆಚ್ಚಿನ ಗೆಳೆಯರೆಲ್ಲರೂ ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಸಮುದಾಯದವರೇ ಆಗಿದ್ದರು. ಹುಟ್ಟಿನಿಂದ ದಲಿತನಾಗಿ ಬಹಳಷ್ಟು ಸಂದರ್ಭಗಳಲ್ಲಿ ಜಾತೀಯತೆಯ ಕಾರಣದ ಕಹಿ ಅನುಭವಗಳನ್ನು ಅನುಭವಿಸಿದ ನಾನು ಯಾವಾಗಲೂ ಕೀಳರಿಮೆಯ ಹಿಂಜರಿಕೆ ಯಿಂದಲೇ ಇರುತ್ತಿದ್ದೆ. ಆದರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನನಗೆ ದೊರೆತ ನನ್ನ ಎಲ್ಲ ಬ್ರಾಹ್ಮಣ ಮಿತ್ರರೂ ತಮ್ಮ ನಡುವೆ ನನಗೆ ಮುಕ್ತವಾಗಿ ಬೆರೆಯಲು ಅವಕಾಶ ನೀಡಿದರು. ಅವರ ಒಡನಾಟದಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ‘ನಾನು ಇಂಥ ಜಾತಿಯವನು’ ಎಂಬುದನ್ನೇ ನಾನು ಮರೆತು ಬಿಡುತ್ತಿದ್ದೆ. ಅವರೆಲ್ಲರೂ ಕೆಂಪು ಮಿಶ್ರಿತ ಬಿಳಿಯ ತೊಗಲಿನ ಚಂದದ ಹುಡುಗರು! ನಾನೋ ಅವರೆಲ್ಲರಿಗೆ ‘ದೃಷ್ಟಿ ಬೊಟ್ಟಿನ’ ಹಾಗೆ  ಕರ‍್ರಗೆ ಕಂಗೊಳಿಸುತ್ತಿದ್ದೆ. ಹಾಗಿದ್ದರೂ ಆಗಿನ ಕಾಲದ ಸಾಮಾಜಿಕ ಸಂದರ್ಭದಲ್ಲಿ ನಿರೀಕ್ಷಿಸಲಾಗದ ಗೆಳೆತನದ ಪ್ರೀತಿ ತೋರಿದ ಅವರೆಲ್ಲರನ್ನು ನನಗೆ ಇಂದಿಗೂ ಮರೆಯಲಾಗುತ್ತಿಲ್ಲ.

ಶಿರ್ಶಿ ಕಡೆಯ ಜೆ.ಎಂ.ಹೆಗಡೆ, ಜಿ.ಎಂ.ಹೆಗಡೆ, ಮೋಹನ ಭಟ್, ಹೊನ್ನಾವರದ ಕಡೆಯ ಆರ್.ಆರ್.ಹೆಗಡೆ, ಕುಮಟೆಯ ಕೃಷ್ಣ ಮೂರ್ತಿ ಹೆಗಡೆ ಮತ್ತು ಎಸ್.ಎನ್.ಭಟ್ ಎಲ್ಲರೂ ನನ್ನ ಆತ್ಮೀಯ ಸ್ನೇಹಿತರಾಗಿದ್ದರು.

ಎಲ್ಲ ಗೆಳೆಯರೂ ತರಗತಿಯಲ್ಲಿ ಒಟ್ಟಾಗಿ ಇರುವುದಲ್ಲದೇ ಗ್ರಂಥಾಲಯ, ಮತ್ತಿತರ ಕಡೆಗಳಲ್ಲಿ ಒಂದೇ ಗುಂಪಿನಲ್ಲಿ ಇರುತ್ತಿದ್ದೆವು. ಕೆಲವರು ಹಾಸ್ಟೆಲ್ಲಿನಲ್ಲಿ, ಕೆಲವರು ಬೇರೆ ಬೇರೆ ಕಡೆ ಬಾಡಿಗೆ ರೂಮುಗಳಲ್ಲಿ ವಾಸಿಸುತ್ತಿದ್ದರೂ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ವಾರಕ್ಕೊಮ್ಮೆಯಾದರೂ ಸುಭಾಷ್ ರೋಡಿನ ತಿರುಗಾಟದಲ್ಲಿ ಜೊತೆಯಾಗಿಯೇ ಇರುತ್ತಿದ್ದೆವು.

ಜಿ.ಎಂ.ಹೆಗಡೆ ತನ್ನ ಕುಟುಂಬದ ಜೊತೆಗೆ ಇದ್ದುದರಿಂದ ಬಹುಶಃ ಬಿಡುವಿನ ತಿರುಗಾಟದಲ್ಲಿ ತಪ್ಪಿಸಿಕೊಳ್ಳುತ್ತಿದ್ದ. ಮತ್ತು ನಮ್ಮೆಲ್ಲರಿಗಿಂತ ಓದಿನಲ್ಲಿಯೇ ಹೆಚ್ಚು ತನ್ಮಯತೆ ತೋರುತ್ತಿದ್ದ. ಮೋಹನ್ ಭಟ್ ಯಾವಾಗಲೂ ಹಾಸ್ಯ-ಹರಟೆಗಳನ್ನು ಇಷ್ಟಪಡುವವನು. ತರಗತಿಯೇ ಇರಲಿ, ಹೊರಗೇ ಇರಲಿ ಏನಾದರೊಂದು ಸರಸಮಯ ಸನ್ನಿವೇಶವನ್ನು ಸೃಷ್ಟಿಸಿ ಎಲ್ಲರ ನಗುವಿಗೆ ಪ್ರೇರಣೆಯಾಗುತ್ತಿದ್ದ. ಆಕೃತಿಯಲ್ಲಿ ನಮ್ಮೆಲ್ಲರಿಗಿಂತ ಕುಳ್ಳಗಿನ ವ್ಯಕ್ತಿತ್ವವಾದರೂ ಮಾತು ಮತ್ತು ಮುಖದಲ್ಲಿ ತುಂಬಬಬಬ ಮೋಹಕವಾಗಿ ಕಾಣುತ್ತಿದ್ದ. ಆರ್.ಆರ್.ಹೆಗಡೆ ನಮ್ಮ ಗುಂಪಿನಲ್ಲಿ ಎಲ್ಲರ ಕಿರಿಯ ಸಹೋದರನಂತೆ ಇದ್ದ. ಆಕೃತಿಯಲ್ಲಿ ಕುಳ್ಳಗಿದ್ದನಲ್ಲದೆ ತುಂಬಾ ವೀಕಾಗಿಯೂ ಕಾಣಿಸುತ್ತಿದ್ದ. ಆದರೆ ತರಗತಿಗಳಲ್ಲಿ ವಿಷಯದ ಕುರಿತು ಚರ್ಚೆ ಇತ್ಯಾದಿ ನಡೆಯುವಾಗ ಆಸಕ್ತಿಯಿಂದ ಭಾಗವಹಿಸುತ್ತಿದ್ದ. ತರಗತಿಯ ಹೊರಗೂ ವಾದ-ಚರ್ಚೆಗಳಲ್ಲಿ ಅವನ ತೊಡಗಿಕೊಳ್ಳುವಿಕೆಯೇ ಆತ ನಮ್ಮೆಲ್ಲರಿಗೆ ಪ್ರೀತಿಯ ಹುಡುಗನೆನ್ನಿಸಲು ಕಾರಣವಾಗಿತ್ತು.

ಗೆಳೆಯರ ಗುಂಪಿನಲ್ಲಿ ವಿಶಿಷ್ಟವಾದ ವ್ಯಕ್ತಿತ್ವದ ಕೃಷ್ಣಮೂರ್ತಿ ಹೆಗಡೆ ಕುಮಟೆಯ ಎ.ವಿ. ಬಾಳಿಗಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು, ಕನ್ನಡ ವಿಷಯದಲ್ಲಿ ‘ಗೋಲ್ಡ್ ಮೆಡಲ್’ ಸಂಪಾದಿಸಿ ಬಿ.ಎ.ಪದವಿಧರನಾಗಿದ್ದ. ಬಹುಶಃ ಇದೇ ಕಾರಣದ ಸಣ್ಣ ಜಂಭವೊಂದು ಅವನ ಮಾತು ನಡತೆಗಳಲ್ಲಿ ಗೋಚರಿಸುತ್ತಿತ್ತು. ಯಾವುದೇ ವಿಷಯಕ್ಕೂ ವಾದ–ಚರ್ಚೆ ನಡೆದರೂ ಅಂತಿಮವಾಗಿ ಎಲ್ಲರೂ ತನ್ನ ಅಭಿಪ್ರಾಯವನ್ನೇ ಒಪ್ಪಿಕೊಳ್ಳಬೇಕೆಂಬ ಹಠಗಾರನಾಗಿದ್ದ.

ಆಗಿನ ಕಾಲದಲ್ಲಿಯೇ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದು ತನ್ನ ಪಾಲಿನ ಆಸ್ತಿಯ ಉಸ್ತುವಾರಿಯನ್ನು ಒಬ್ಬ ಅಣ್ಣನಿಗೆ ಒಪ್ಪಿಸಿ ಬಂದ ಕೃಷ್ಣ ಮೂರ್ತಿ ತಿಂಗಳು ತಿಂಗಳು ತನ್ನ ಆಸ್ತಿಯ ಸಂಪಾದನೆಯ ಭಾಗವೆಂದು ನಾಲ್ಕೈದು ಸಾವಿರ ರೂಪಾಯಿತರಿಸಿಕೊಳ್ಳುತ್ತಿದ್ದ. ಇದು ಅಂದಿನ ದಿನಮಾನಕ್ಕೆ ಬಹುದೊಡ್ಡ ಮೊತ್ತವೇ ಆದುದರಿಂದ ವಿದ್ಯಾರ್ಥಿ ದೆಸೆಯಲ್ಲಿ ಅವನು ಶ್ರೀಮಂತನೆನಿಸಿದ್ದ. ಈ ಆರ್ಥಿಕ ಸಬಲತೆಯ ಕಾರಣದಿಂದಲೂ ತನ್ನ ಅಭಿಪ್ರಾಯವನ್ನೇ ಎಲ್ಲರೂ ಅನುಮೋದಿಸಬೇಕೆಂದು ಆತ ಸಹಜವಾಗಿಯೇ ಬಯಸುತ್ತಿದ್ದ. ಯಾರಾದರೂ ತನ್ನ ಕುರಿತು ಅಗೌರವದ ಮಾತುಗಳನ್ನಾಡಿದರೆ ಜಗಳಕ್ಕೆ ನಿಲ್ಲುತ್ತಿದ್ದ. ತುಂಬ ಬೆಳ್ಳಗೆ ತನ್ನ ಗುಂಗುರು ಕೂದಲಿನ ವಿಶಿಷ್ಟ ಹೇರ್‌ಸ್ಟೈಲ್‌ನಿಂದ ಮುದ್ದಾಗಿ ಕಾಣುತ್ತಿದ್ದ ಕೃಷ್ಣಮೂರ್ತಿ ಜಗಳ ಕಾಯುತ್ತ ಕೋಪದಿಂದ ಮತ್ತಷ್ಟು ಕೆಂಪಗಾಗುವ ಅಂದವನ್ನು ನೋಡುವುದಕ್ಕಾಗಿಯೇ ನಮ್ಮ ಅನೇಕ ಗೆಳೆಯರು ಉದ್ದೇಶ ಪೂರ್ವಕವಾಗಿಯೇ ಆತನನ್ನು ಕೆಣಕಿ ಕಾಳಗಕ್ಕೆ ನಿಲ್ಲುತ್ತಿದ್ದರು. ಕೋಪದ ಅವನ ಅವತಾರವನ್ನು ಕಂಡ ಬಳಿಕವೇ ರಾಜಿ ಸಂಧಾನದಿಂದ ಒಂದಾಗಿ ಮತ್ತೆ ಸ್ನೇಹಿತರಾಗಿ ಮುಂದುವರಿಯುತ್ತಿದ್ದರು.

ಕೃಷ್ಣಮೂರ್ತಿ ಹೆಗಡೆ ಪ್ರತಿಷ್ಠಿತ “ಶಿಂತ್ರಿ ಬಿಲ್ಡಿಂಗ್” ನಲ್ಲಿ ಬಾಡಿಗೆ ರೂಮು ಮಾಡಿಕೊಂಡಿದ್ದ. ಇತರ ಬ್ರಾಹ್ಮಣ ಹುಡುಗರು ಸಪ್ತಾಪುರ ಇತ್ಯಾದಿ ಕಡೆಗಳಲ್ಲಿ ರೂಮು ಪಡೆದಿದ್ದರು. ಒಮ್ಮೆಯಂತೂ ಅವರಲ್ಲಿ ಯಾರೋ ತನ್ನ ಕುರಿತು ಸಲ್ಲದ ಮಾತನಾಡಿದರೆಂದು ಕೋಪಗೊಂಡ ಕೃಷ್ಣಮೂರ್ತಿ ಹೆಗಡೆ ರಾತ್ರಿ ವೇಳೆ ಅವರ ರೂಮಿಗೆ ಹೋಗಿ ರಂಪ ಮಾಡಿದ ಸಂಗತಿ ಮರುದಿನ ಕನ್ನಡ ವಿಭಾಗದಲ್ಲಿಯೇ ಚರ್ಚೆಯ ಸಂಗತಿಯಾಗಿತ್ತು!

ಬಹಳ ಮಜವಾದ ಸಂಗತಿಯೆಂದರೆ ಕೃಷ್ಣಮೂರ್ತಿ ಅಪ್ಪಟ ರೌಡಿಯಂತೆ ವೇಷತೊಟ್ಟು ಅಲ್ಲಿಗೆ ಹೋಗಿದ್ದನೆಂಬುದು.

ಹಳೆಯ ಹಿಂದಿ-ಕನ್ನಡ ಚಲನಚಿತ್ರಗಳಲ್ಲಿ ಬರುವ ರೌಡಿಗಳಂತೆ ದೊಡ್ಡ ದೊಡ್ಡ ಚೌಕಳಿ ವಿನ್ಯಾಸದ ಲೂಂಗಿ ತೊಟ್ಟು ಅದಕ್ಕೆ ಚರ್ಮದ ಬೆಲ್ಟು ಬಿಗಿದು ಮೇಲೊಂದು ಕಡುಗೆಂಪು ಬಣ್ಣದ ಟೀ ಶರ್ಟು ಧರಿಸಿ, ಕೈಯಲ್ಲಿ ಒಂದು ಚಾಕು ಹಿಡಿದುಕೊಂಡೇ ಆಕ್ರಮಣ ಮಾಡಿದ ಕೃಷ್ಣಮೂರ್ತಿಯನ್ನು ಗೆಳೆಯರೆಲ್ಲ ಸೇರಿ ಹಿಡಿದು ಶಾಂತಗೊಳಿಸಿದ ಸಂಗತಿಯನ್ನು ಮರುದಿನ ಸ್ನೇಹಿತರು ವಿವರಿಸುವಾಗ ವಿಭಾಗದ ವಿದ್ಯಾರ್ಥಿಗಳೆಲ್ಲ ನಕ್ಕು ನಕ್ಕು ದಣಿದಿದ್ದೆವು.

ಕನ್ನಡ ವಿಷಯದಲ್ಲಿ ಅದ್ಭುತ ಪ್ರೌಢಿಮೆ ಇದ್ದರೂ ಇಂಥ ವಿಕ್ಷಿಪ್ತ ವರ್ತನೆಯಿಂದ ಬಹುತೇಕ ಗೆಳೆಯರ ಗುಂಪಿಗೆ ಅರ್ಥವೇ ಆಗದಂತಿದ್ದ ಕೃಷ್ಣಮೂರ್ತಿ ಹೆಗಡೆ,  ನನಗೆ ಮಾತ್ರ ಇಡಿಯ ತರಗತಿಯಲ್ಲಿ ಅತ್ಯಂತ ಆಪ್ತನಾಗಿದ್ದ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿಯೇ ಬಿ.ಎ.ಪಾಸು ಮಾಡಿದ ಕೃಷ್ಣಮೂರ್ತಿ ದೀರ್ಘ ಉತ್ತರಗಳನ್ನು ಬರೆಯುವಾಗ ವಿಶಿಷ್ಟವಾದ ರೀತಿಯನ್ನು ಅನುಸರಿಸುತ್ತಿದ್ದ. ಆತ ಉತ್ತರಿಸುವ ರೀತಿಯನ್ನು ನನಗೂ ಕಲಿಸಿಕೊಟ್ಟ. ಇದು ನನಗೆ ತುಂಬಾ ಪ್ರಯೋಜನವೂ ಆಯಿತು.

ಹೀಗೆ ಹಲವು ಬಗೆಯಿಂದ ನನಗೆ ಕೃಷ್ಣಮೂರ್ತಿ ಹೆಗಡೆ ಸಹಕಾರಿಯಾದ ಆಪ್ತಮಿತ್ರನಾಗಿಯೇ ಲಭ್ಯವಾಗಿದ್ದ. ಎಂ.ಎ. ದ್ವೀತಿಯ ವರ್ಷದ ಓದಿನ ಸಂದರ್ಭದಲ್ಲಿ ಹಾಸ್ಟೆಲ್‌ನಲ್ಲಿಯೇ ನನ್ನ ಸಂಗಾತಿಯಾಗಿ ನೆಲೆಸುವ ಸದವಕಾಶ ದೊರೆಯಿತು. ಅವು ಅವಿಸ್ಮರಣೀಯವಾದ ಆಪ್ತ ದಿನಗಳು. ಮುಂದಿನ ಸಂಚಿಕೆಯಲ್ಲಿ ಆ ಕುರಿತು ಬರೆಯುವೆ.

‌‌‌.*********

2 thoughts on “

  1. ವಿಶ್ವವಿದ್ಯಾಲಯದ ಅನುಭವ ಬಹುಶಃ ಎಲ್ಲರದೂ ಒಂದೇ ತೆರನಾಗಿ ಇದ್ದಂತಿದೆ.

  2. ಸರ,
    ವಿಶ್ವವಿದ್ಯಾಲಯದ ತುಂಬಾ ಚೆನ್ನಾಗಿದೆ, ಮುಂದಿನ ಸಂಚಿಕೆಯ ನಿರೀಕ್ಷೆಯಲ್ಲಿ

Leave a Reply

Back To Top