ಸಂಬಂಧಗಳು_ ಒಲವು, ಪ್ರೀತಿ ಪರಿಶುದ್ಧತೆ

ಸಂಬಂಧಗಳು_

ಒಲವು, ಪ್ರೀತಿ ಪರಿಶುದ್ಧತೆ

ಶಾಲಿನಿ ಕೆಮ್ಮಣ್ಣು

Sunset Love - Abstract Oil Painting Original Modern Contemporary Art House  Wall Deco Painting by Emma Lambert

ಬದುಕಿನಲ್ಲಿ ಸಂಬಂಧಗಳಿಗೆ ತುಂಬಾ ಬೆಲೆ ಇದ್ದರೂ ಸಾಮಾನ್ಯವಾಗಿ ಎಲ್ಲಾ ರೀತಿಯ ಸಂಬಂಧಗಳು ಷರತ್ತುಗಳ ಮಿತಿಗೆ ಒಳಪಟ್ಟು ಇರುತ್ತದೆ.” ಕೊಡು_ ಕೊಳ್ಳು”ವ ಅಥವಾ ಚಾಣಾಕ್ಷತನದ ಲೆಕ್ಕಾಚಾರದ ಸಂಬಂಧಗಳು ಬರೇ ಮೇಲ್ನೋಟಕ್ಕೆ ಚೆನ್ನಾಗಿ ಕಾಣಬಹುದು. ಆದರೆ ಪರಿಶುದ್ಧ ಪ್ರೀತಿ, ವಿಶ್ವಾಸ, ನಂಬಿಕೆಗಳಿಗೆ ಬದ್ಧವಾಗಿಲ್ಲದೆ ಹೋದರೆ ಯಾವ ಸಂಬಂಧವೂ ನೆಮ್ಮದಿ ಕೊಡಲಾರದು. ಪರಿಶುದ್ಧ ಪ್ರೀತಿ ಗೆ ಕಡಿವಾಣ ಹಾಕಿಕೊಂಡರೆ ವಿಶ್ವಾಸ ನಂಬಿಕೆ ಬರೇ ಭ್ರಮೆ. ಇದಕ್ಕೆ ಸಾಕ್ಷಿಯಾಗಿ ಇಬ್ಬರು ಗೆಳೆಯರ ಸ್ವಚ್ಛ ಸ್ನೇಹದ ಕೆತೆಯನ್ನು ಹೇಳಬಯಸುತ್ತೇನೆ.

ಒಂದು ಹಳ್ಳಿಯಲ್ಲಿ ಇಬ್ಬರು ಒಳ್ಳೆಯ ಬಾಲ್ಯ ಸ್ನೇಹಿತರಿದ್ದರು. ಬೆಳೆದು ದೊಡ್ಡವರಾಗ ಅವರು  ಕೃಷಿಯಲ್ಲಿ ತಮ್ಮನ್ನು  ತೊಡಗಿಸಿ ಕೊಂಡರು. ಪರಸ್ಪರ  ಸ್ನೇಹಭಾವದಿಂದ ಸಹಕರಿಸುತ್ತ ಸುಖ ದುಃಖಗಳಲ್ಲಿ ಸಮಾನ ಮನಸ್ಕರಾಗಿ ಒಬ್ಬರಿಗೊಬ್ಬರು ಭಾವನೆಗಳನ್ನು  ಹಂಚಿಕೊಳ್ಳುತಿದ್ದರು. ಎಲ್ಲ ಸಮಯದಲ್ಲೂ  ಹೆಗಲಿಗೆ ಹೆಗಲು ಕೊಟ್ಟು ದುಡಿಯುತಿದ್ದರು. ತಮ್ಮ ಹೊಲ ಗದ್ದೆಗಳಲ್ಲಿ ಸರಿಸಮನಾಗಿ ದುಡಿದು ಬಂದ ಲಾಭವನ್ನು ಹಂಚಿಕೊಳ್ಳುತ್ತಿದ್ದರು. ಅವರಿಗೆ ಲಾಭ ನಷ್ಟಗಳ ಹಂಗು ಇರಲಿಲ್ಲ. ಇಬ್ಬರಿಗೂ ವಿವಾಹವಾಯಿತು. ಆಗಲೂ ಅವರ ಸ್ನೇಹಕ್ಕೆ ಯಾವುದೇ ಅಡ್ಡಿಯಾಗಲಿಲ್ಲ

 ದಿನ ಉರುಳುತಿದ್ದಂತೆ ಒಬ್ಬನ ಪತ್ನಿಯ ಆರೋಗ್ಯ ದಲ್ಲಿ ಸಮಸ್ಯೆ ಕಂಡುಬಂತು.  ನೋಡುತ್ತಿದ್ದಂತೆ ಅವಳು ಹಾಸಿಗೆ ಹಿಡಿದಳು. ಇನ್ನೊಬ್ಬನಿಗೆ ಮೂವರು ಮಕ್ಕಳಾದರು. ಅವರಿಬ್ಬರ ಕುಟುಂಬಗಳೂ ಅನ್ಯೋನ್ಯವಾಗಿ ಇದ್ದರು. ಎರಡೂ ಮನೆಯವರು ಅನಾರೋಗ್ಯ ಪೀಡಿತ ಮಹಿಳೆಯನ್ನು ಚೆನ್ನಾಗಿ ನೋಡಿಕೊಂಡರು. ಕೊನೆಗೂ ಒಂದು ದಿನ ಅವಳು ತನ್ನ ಕೊನೆಯುಸಿರೆಳೆದಳು. ಸಾಯುವ ಮುನ್ನ ಎಲ್ಲರನ್ನೂ ಕರೆದು ನೀವೆಲ್ಲರೂ ನಿಮ್ಮ ಬಾಂಧವ್ಯವನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗಬೇಕು ಎಂದು ತನ್ನ ಆಸೆಯನ್ನು ಅವರ ಮುಂದಿಟ್ಟಿದ್ದಳು. ಕಾಲ ಕ್ರಮೇಣ ಅವರು ವೃದ್ಧರಾದರೂ ಅವರ ಸ್ನೇಹ ಇನ್ನೂಗಟ್ಟಿಯಾಗುತಿತ್ತು. ಹೆಂಡತಿ ಸತ್ತ ಮೇಲೆ ಗಂಡ ತನ್ನ ಗೆಳೆಯನ ಹಾಗೂ ಅವನ ಕುಟುಂಬದ ಬಗ್ಗೆ ಯೋಚಿಸಲು ಹತ್ತಿದ. ತನಗೇನೋ ಮಕ್ಕಳಿಲ್ಲ. ನನ್ನ ಗೆಳೆಯನಿಗೆ ಕುಟುಂಬ ಮಕ್ಕಳು ಇದ್ದಾರೆ. ತುಂಬಾ ಖರ್ಚು ವೆಚ್ಚಗಳಿರುತ್ತವೆ

ಹಾಗಾಗಿ ದುಡಿದ ಹೆಚ್ಚಿನ ಪಾಲು ಅವನಿಗೆ ಸೇರಬೇಕಾದದ್ದು ನ್ಯಾಯ ಎಂದುಕೊಂಡು ದಿನಾ ರಾತ್ರಿ ತನ್ನ ಬೊಕ್ಕಸದಿಂದ ಸ್ವಲ್ಪ ಸಲ್ಪ ದವಸ ಧಾನ್ಯಗಳನ್ನು ಗೆಳೆಯನ ದಾಸ್ತಾನಿಗೆ ಸುರಿಯುತ್ತಿದ್ದ. ಮತ್ತೊಂದು ಕಡೆಯಿಂದ ಅವನ ಗೆಳೆಯನೂ ತನ್ನ ಆತ್ಮೀಯ ಸ್ನೇಹಿತನ ಬಗ್ಗೆ ಅನುಕಂಪದಿಂದ ಅವನಿಗೆ ಹೆಂಡತಿ ಮಕ್ಕಳಿಲ್ಲ ತನಗಾದರೂ ಹೆಂಡತಿ ಮಕ್ಕಳಿದ್ದಾರೆ. ಏಕರೀತಿಯಾಗಿ ದುಡಿದ ಮೇಲೆ ಅವನಿಗೆ ಯಾವುದೇ ಅನ್ಯಾಯ ಆಗಕೂಡದು ಅವನು ದುಡಿಯುವ ಶಕ್ತಿ ಕಳೆದು ಕೊಳ್ಳುವ ಮೊದಲು ಅವನ ಜೀವನಕ್ಕೆ ಬೇಕಾದ ಸಂಪತ್ತು ಶೇಕರಣೆ ಮಾಡಬೇಕು ಎಂದುಕೊಂಡು ಪ್ರತಿ ರಾತ್ರಿ ತನ್ನ  ಬೊಕ್ಕಸದ ಬಳಿ ಹೋಗಿ ಗುಟ್ಟಾಗಿ ಧಾನ್ಯಗಳನ್ನು ಚೀಲದಲ್ಲಿ ತುಂಬಿಕೊಂಡು ಸ್ನೇಹಿತನ ಉಗ್ರಾಣಕ್ಕೆ ಸೇರಿಸುತಿದ್ದ. ಒಂದು ರಾತ್ರಿ ಅಕಸ್ಮಾತ್ತಾಗಿ ಇಬ್ಬರೂ ಗೆಳೆಯರು ಧಾನ್ಯದ ಚೀಲವನ್ನು ಹೊತ್ತುಕೊಂಡು ನಡೆಯುತ್ತಿದ್ದಾಗ ರಸ್ತೆಯಲ್ಲಿ ಎದುರು ಬದುರಾದರು. ಇಬ್ಬರೂ ಆಶ್ಚರ್ಯಾಚಕಿತರಾಗಿ ಒಬ್ಬರಿಗೊಬ್ಬರು  ಪ್ರಶ್ನೆ ಮಾಡಿಕೊಂಡರು. ನೀನು ಏನು ಮಾಡುತ್ತಿರುವೆ ಎಂದು ಕೇಳಿಕೊಂಡರು. ವಿಷಯ ತಿಳಿಯುತ್ತಿದ್ದಂತೆಯೇ ಇಬ್ಬರೂ ಭಾವ ಪರವಶರಾಗಿ ಕುಸಿದರೂ ಮತ್ತೆ ಚೇತರಿಸಿಕೊಂಡು ಒಬ್ಬರನ್ನೊಬ್ಬರು ಪರಸ್ಪರ ಆಲಂಗಿಸಿ ಕೊಂಡು ದೂರಿಕೊಳ್ಳುತ್ತ ತಮ್ಮ ಪ್ರೀತಿಯನ್ನು ಹಂಚಿಕೊಂಡರು. ಒಲುಮೆಯ ಜೀವನದ ಸಾರ್ಥಕತೆಯನ್ನು ಕಂಡುಕೊಂಡರು. ಬೆಳಗಾಗುವ ಸಮಯಕ್ಕೆ ಅಲ್ಲಿ ಅವರ ಮಕ್ಕಳು ಊರ ಮಂದಿ ಎಲ್ಲ ಸೇರಿದರು. ಈ ಗೆಳೆಯರು ದೇವರನ್ನು ಜೋರಾಗಿ ಕೂಡಿಕೊಂಡರು. ಅವರ ಸ್ನೇಹದ ಪರಾಕಾಷ್ಠೆಯನ್ನು ಕಂಡ ಜನ ಮಂತ್ರ ಮುಗ್ಧರಾಗಿ ಅವರನ್ನು ಹರಸಿದರು. ಎಲ್ಲರ ಸಮ್ಮುಖದಲ್ಲಿ ಇಬ್ಬರು ಸಜ್ಜನ ಸ್ನೇಹಿತರು ಸುಖವಾಗಿ ಪ್ರಾಣ ಬಿಟ್ಟರು. ಇದನ್ನು ಕಂಡ ಮಕ್ಕಳು ಹಾಗೂ ಊರವರು ಈ ಗೆಳೆಯರು ಪ್ರಾಣ ತ್ಯಾಗ ಮಾಡಿ ಮಡಿದ ಸ್ಥಳದಲ್ಲಿ ಒಂದು ದೇಗುಲವನ್ನು ನಿರ್ಮಾಣ ಮಾಡಬೇಕೆಂದು ನಿರ್ಣಯಿಸಿದರು. ಹಾಗೆಯೇ ತಮ್ಮ ವಿಜ್ಞಾಪನೆ ಯನ್ನು ಊರ ಹಿರಿಯರ ಮುಂದಿಟ್ಟಾಗ ಅಲ್ಲಿಯೂ ಈ ನಿರ್ಧಾರಕ್ಕೆ ಸಂಪೂರ್ಣ ಸಮ್ಮತಿ ದೊರೆಯಿತು. ಗೆಳೆಯರ ಪರಿಶುದ್ಧ ನಿಸ್ವಾರ್ಥ ಸ್ನೇಹವನ್ನು ಅಮರ ಗೊಳಿಸುವ ಉದ್ದೇಶದಿಂದ ಅಲ್ಲಿ ಒಂದು ದೇವಾಲಯ ಕಟ್ಟಿ ಬಹಳ ವಿೃಂಭಣೆಯಿಂದ ಅದರಲ್ಲಿ ದೇವರ ಸ್ಥಾಪನೆಯನ್ನೂ ಮಾಡಲಾಯಿತು.

ಸ್ನೇಹಕ್ಕೆ ಆಡಂಬರ ಅಡ್ಡಿಯಾಗಬಾರದು. ಪ್ರೀತಿ ಷರತ್ತುಗಳಿಗೆ ಒಳಪಡಬಾರದು. ಸಂಬಂಧಗಳು ಲೆಕ್ಕಾಚಾರದ ಹಣಿಯ ಮೇಲೆ ನಿಲ್ಲಬಾರದು. ನಿಷ್ಕಲ್ಮಷ ನಿಸ್ವಾರ್ಥ ಗೆಳೆತನದಿಂದ ಜೀವನದ ಮಹತ್ವ ಎಷ್ಟು ಎತ್ತರಕ್ಕೆ ಏರುತ್ತದಲ್ಲವೇ??

***********

3 thoughts on “ಸಂಬಂಧಗಳು_ ಒಲವು, ಪ್ರೀತಿ ಪರಿಶುದ್ಧತೆ

  1. ನಿಜ ಸಂಬಂಧಗಳಲ್ಲಿ ಪರಿಶುದ್ಧ ಭಾವನೆಗಳಿರಬೇಕು.ಸರಳ ಸುಂದರ ಕಥೆ.

Leave a Reply

Back To Top