ಸೋಮಾರಿತನದ ಸುಖ

ಹಾಸ್ಯ ಲೇಖನ

ಸೋಮಾರಿತನದ ಸುಖ

ಸಮತಾ ಆರ್.

15,905 Lazy Vector Images - Free & Royalty-free Lazy Vectors |  Depositphotos®

“ನೋಡೇ, ನೀನು ಇನ್ನೂ ಸ್ನಾನಕ್ಕೆ ಹೋಗಲಿಲ್ಲ ಅಂದ್ರೆ ನಾನೇ ನಿನ್ನ ಕೈ ಹಿಡಿದು ಎಳೆದುಕೊಂಡು ಹೋಗಿ ಬಚ್ಚಲು ಮನೆಗೆ ಬಿಡುತ್ತೇನಷ್ಟೇ,”ಎಂದು ನನ್ನ ಗಂಡ ಒಂದು ಕರೋನ ಲಾಕ್ ಡೌನ್ ನ ಕಡ್ಡಾಯ ರಜೆಯ ದಿನ, ಸಂಜೆ ವಾಕ್ ಹೋಗುವ ಮುನ್ನ ಘರ್ಜಿಸಿ ತೆರಳಿದರು. ಇನ್ನು ವಾಕ್ ಮುಗಿಸಿ ಬರುವಷ್ಟರಲ್ಲಿ ಸ್ನಾನ ಮಾಡಿರದಿದ್ದರೆ ಇನ್ನೊಂದು ರೌಂಡ್ ಬೈಗುಳ ಗ್ಯಾರಂಟೀ ಅನ್ನಿಸಿತು.”ಥತ್, ಏನು ವಿಚಿತ್ರವೋ ಈ ಹಾಳು ನಾಗರಿಕತೆ”ಎಂದು ಗೊಣಗುತ್ತಾ,ಮಂಚದ ಮೇಲೆ ಕೈ ಕಾಲು ಹೇಗೆ ಬೇಕೋ ಹಾಗೆ ಬಿಸಾಕಿಕೊಂಡು ಹೊರಳುತ್ತಿದ್ದವಳು,ಕಷ್ಟಪಟ್ಟು ಮೇಲೆದ್ದು,ಟವಲ್ ,ಬಟ್ಟೆ ತೊಗೊಂಡು ಬಚ್ಚಲು ಮನೆ ಹುಡುಕಿ ಹೊರಟೆ.ಎರಡೇ ನಿಮಿಷದಲ್ಲಿ ಸ್ನಾನ ಮುಗಿಸಿ ಬಂದು ಮತ್ತೆ ಅದೇ ರೀತಿ ಹಾಸಿಗೆ ಮೇಲೆ ಉರುಳಿದ್ದಾಯಿತು.
ಅಲ್ಲ ಕಣ್ರೀ ಅಪರೂಪಕ್ಕೆ ಸಿಗೋ ರಜ ದಿನಗಳಲ್ಲೂ ಕಷ್ಟ ಪಟ್ಟು ಎಲ್ಲಾ ದಿನನಿತ್ಯದ ಕೆಲಸ ಮುಗಿಸಿ,ಸಮಯ ವ್ಯರ್ಥ ಮಾಡದಂತೆ ಯಾವುದಾದರೂ ಕೆಲಸ,ಇಲ್ಲ ಹವ್ಯಾಸದಲ್ಲಿ ತೊಡಗಿಸಿಕೊಂಡಿರಬೇಕು ಅಂದ್ರೆ ಸಾಧ್ಯನಾ?ಹೇಳಿ.

ದಿನವಿಡೀ ಕೆಲಸ ಮಾಡುವ ಸ್ಮಾರ್ಟ್ ಫೋನ್ ಕೂಡ ಚಾರ್ಜ್ ಮಾಡುವಾಗ ಸುಮ್ಮನೆ ಬಿದ್ದು ಕೊಂಡಿರೋದಿಲ್ಲವೆ? ಆಗಲೂ ಕೆಲಸ ಮಾಡಿದರೆ ಅದಕ್ಕೆ ಶಕ್ತಿ ಮತ್ತೆ ತುಂಬಿಕೊಳ್ಳಲು ಸಾಧ್ಯವೇ ಹೇಳಿ?
ಕೆಲಸದ ದಿನಗಳಲ್ಲಿ ಚೆನ್ನಾಗಿ ಕೆಲಸ ಮಾಡಿ ಬಿಡುವಾದಾಗ ಏನೂ ಮಾಡದೆ ಆರಾಮಾಗಿ ಇದ್ದು ಮತ್ತೆ ಹುರುಪು ತುಂಬಿಕೊಳ್ಳುವುದು ನನ್ನ ಪಾಲಿಸಿ.ಜೀವನವಿಡೀ ಕೆಲಸವೇ ಅಂತ ಆದ್ರೆ ನಾವು ಬದುಕುವುದು ಯಾವಾಗ?

ರಜೆ ಅಂದ್ರೆ ನನ್ನ ಪಾಲಿಗೆ ಕೆಲಸಕ್ಕೆ ಹೋಗುವಾಗ ಮನೆಯಲ್ಲಿ ಮಾಡುವ ನಿತ್ಯದ ಕೆಲಸಗಳಿಗೂ ರಜೆಯೇ.ಹೊತ್ತು ಸುಮ್ಮನೆ ಜಾರಿ ಹೋಗುವುದನ್ನು ಅನುಭವಿಸುವುದೇ ಒಂದು ಹಿತ. ಬೆಳಿಗ್ಗೆಯೇ ದಿನನಿತ್ಯದ ಕೆಲಸ ,ಅಡಿಗೆ ಎಲ್ಲಾ ಮಾಡಿ ಮುಗಿಸಿ,ಒಂದು ಸ್ಟ್ರಾಂಗ್ ಟೀ ಮಾಡಿಕೊಂಡು ಗುಟುಕು, ಗುಟುಕಾಗಿ ಕುಡಿಯುತ್ತಾ,ನನ್ನರೂಮ್ ನ ಕಿಟಕಿ ಪಕ್ಕ ಕುಳಿತು ಗಂಟೆಗಟ್ಟಲೆ ಹೊರಗೆ ನೋಡುತ್ತಾ ಕುಳಿತರೆ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಸ್ನಾನ ಗೀನ ಎಲ್ಲಾ ಮಾಡಿದ್ರಾಯ್ತು ಬಿಡಿ.ಅಯ್ಯೋ ಮನೇಲೇ ಇರುವಾಗ ಕ್ಲೀನಾಗೇ ಇರ್ತಿವಪ್ಪ.ಮೈ ಕೈ ಕೊಳೆಯಾಗೋಕೆ ಹೊರಗೆ ಹೋಗಿ ಕೆಲ್ಸ ಏನೂ ಮಾಡಿ ಬಂದಿರೋದಿಲ್ಲವಲ್ಲ.ಸ್ನಾನ ತಡವಾದರೆ ಲೋಕ ಏನೂ ಮುಳುಗಿ ಹೋಗೋದಿಲ್ಲ . ರಜೆಯಲ್ಲಿ ಸ್ನಾನಕ್ಕೇನು ಅವಸರ?
ಎರಡು ದಿನಕ್ಕೊಮ್ಮೆ ಮಾಡಿದರೂ ನಡೀತದೆ.ಬೇಕಾದರೆ ನೋಡಿ ಕಾಗೆ ಮಾತ್ರ ನೀರಲ್ಲಿ ಮುಳುಮುಳುಗಿ ಏಳೋದು,ಕೋಗಿಲೆ ಸ್ನಾನ ಮಾಡುವುದನ್ನು ಯಾರಾದರೂ ಕಂಡಿದ್ದೀರಾ! ಹಾಗಿದ್ದರೂ ಕಾಗೆ ಮತ್ತು ಕೋಗಿಲೆಯಲ್ಲಿ ಯಾರು ಹೆಚ್ಚು ಜನಪ್ರಿಯ? ನೀವೇ ಯೋಚನೆ ಮಾಡಿ.

ದಿನಕ್ಕೆರಡು ಬಾರಿ ಹಲ್ಲುಜ್ಜುವುದಕ್ಕೂ ನನ್ನ ವಿರೋಧವಿದೆ. ದಿನಾ ಬೆಳಿಗ್ಗೆ ಚೆನ್ನಾಗಿ ಹಲ್ಲುಜ್ಜಿ ಬಾಯಿ ತೊಳೆದುಕೊಂಡು,ನಂತರ ದಿನವಿಡೀ ಏನಾದರೂ ತಿಂದ ಬಳಿಕ ಬಾಯಿ ಮುಕ್ಕಳಿಸಿಕೊಂಡರೆ ಸಾಕಪ್ಪ.ರಾತ್ರೆ ಮಲಗುವ ಮುಂಚೆಯೂ ಹಲ್ಲುಜ್ಜಿಕೊಂಡು,ಬಾಯೆಲ್ಲ ತಣ್ಣ ತಣ್ಣಗಾಗಿ  ಬಾಯಿಂದ ಟೂತ್ ಪೇಸ್ಟ್ ವಾಸನೆ ಬರ್ತಾ ಇದ್ರೆ ನನಗೆ ನಿದ್ದೆ ಬರೋಲ್ಲ.ಹಾಗಂತ ಹೇಳಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜದಿದ್ದರೂ ನನ್ನ ದಂತಪಂಕ್ತಿ ಏನೂ ಹೊಳಪು ಕಳೆದುಕೊಂಡಿಲ್ಲ.ನಾನು ಇದುವರೆಗೂ ದಂತವೈದ್ಯರ ಆಸ್ಪತ್ರೆ ಹೇಗಿರುತ್ತದೆ ಅಂತನೂ ನೋಡಿಲ್ಲ.ದಿನಕ್ಕೆ ಎರಡು ಬಾರಿ ಹಲ್ಲುಜ್ಜಿಸುವುದು ಟೂತ್ ಪೇಸ್ಟ್ ಕಂಪನಿಯವರ ಮಾರುಕಟ್ಟೆ ತಂತ್ರ ಅನ್ನೋದು ನನ್ನ ಗುಮಾನಿ.ಕಾಡಿನ ರಾಜ ಸಿಂಹನನ್ನೇ ನೋಡಿ ,ಅಷ್ಟೊಂದು ಮಾಂಸ ಮಡ್ಡಿ ತಿಂದರೂ
ಅದೇನು ಹಲ್ಲುಜ್ಜುತ್ತದಾ? ಸಿಂಹರಾಜನೇ ಸುಮ್ಮನಿರುವಾಗ ಹುಲುಮಾನವಳಾದ ನಾನು , ಎರಡನೆ ಕಂತಿನ ಹಲ್ಲುಜ್ಜದೇ ಹೋದರೆ ಏನೂ ಸೂರೆ ಹೋಗದು.

ರಜೆ ಸಿಗೋದೇ ತಡ ಕೆಲವರಿಗೆ ಮನೆಯೆಲ್ಲಾ ಉಜ್ಜಿ ಉಜ್ಜಿ, ತೊಳೆದೂ ತೊಳೆದು  ಕನ್ನಡಿಯಂತೆ ಫಳ ಫಳ ಅಂತ ಹೊಳೆಯುವಂತೆ ಮಾಡೋದೇ ಒಂದು ಸಡಗರ.ಅವರ ಬಚ್ಚಲು ಮನೆಗಳಿಗೆ ಹೋಗಿ ನೋಡಿ ತರಹಾವರಿ ಫಿನಾಲ್ ಗಳು,ಬ್ಲೀಚಿಂಗ್ ಪುಡಿಗಳು,ಟಾಯ್ಲೆಟ್ ಕ್ಲೀನರ್ ಗಳಿಂದ ತುಂಬಿ ಹೋಗಿರುತ್ತವೆ.ಅಷ್ಟೊಂದು ವಿಷಕಾರಿ ಪದಾರ್ಥಗಳ ಬಳಸಿ ತಮ್ಮ ಮನೆ ಕ್ಲೀನ್ ಮಾಡಿಕೊಳ್ತಾರೆ, ಆದ್ರೆ ಆ ತ್ಯಾಜ್ಯ ನೀರು ಎಲ್ಲಿಗೆ ಹೋಗಿ ಸೇರುವುದು ಯೋಚಿಸುತ್ತಾರಾ? ದಿನಾ ಚೆನ್ನಾಗಿ ನೀರು ಹಾಕಿ ಪೊರಕೆಯಲ್ಲಿ ,ಬ್ರಷ್ ಗಳಲ್ಲಿ ಉಜ್ಜಿದರೆ ಸಾಕು.ಅಷ್ಟೊಂದು ರಾಸಾಯನಿಕ ಯಾಕೆ ಬಳಸೋದು? ಟಿವಿ ಹಾಕಿದ್ರೆ ಸಾಕು ಈ ಫಿನಾಲ್ ಗಿನಾಲ್ ಮಾರೋರು
ತೋರಿಸೋ ಜಾಹೀರಾತುಗಳ ನೋಡಿದ್ರೆ ಸಾಕು,ಇಡೀ ಪ್ರಪಂಚವೇ ಕೀಟಾಣುಗಳಿಂದ ತುಂಬಿ ಹೋಗಿ ಅವರ ಉತ್ಪನ್ನ ಬಳಸದೇ ಹೋದರೆ ಜನರೆಲ್ಲ ಹುಳ ಬಿದ್ದು ಸಾಯೋದೆ ಅನ್ನಿಸಿ ಬಿಡುತ್ತದೆ.ಅನಿವಾರ್ಯವಾಗಿ
ಬಳಸಲೇ ಬೇಕಾದ ಸೋಪು,ಡಿಟರ್ಜೆಂಟ್ ,ಶಾಂಪೂಗಳ ಮಾಲಿನ್ಯ ಸಾಲದೇ! ಇನ್ನು ಈ ವಿಷಗಳು ಕೂಡ ಜಲಮೂಲ ಸೇರಬೇಕೆ?

ನಮ್ಮ ಅಜ್ಜಿ ತಾತಂದಿರ ಕಾಲದಲ್ಲಿ ಈ ಕೀಟಾಣುಗಳೆಲ್ಲ ಎಲ್ಲಿದ್ದೊ? ಅವರೆಲ್ಲ ಎಪ್ಪತ್ತೆಂಬತ್ತು ವರ್ಷ ಗಟ್ಟಿ ಮುಟ್ಟಾಗಿ ಬದುಕಲೇ ಇಲ್ಲವೇ.ನಾವೆಲ್ಲ ಚಿಕ್ಕವರಿದ್ದಾಗ ಸ್ನಾನದಲ್ಲಿ,ತಲೆಗೆ ಸೀಗೆ ಪುಡಿ ಚಿಜ್ಜಲು ಪುಡಿ , ಮೈಗೆ ಮೈಸೂರು ಸ್ಯಾಂಡಲ್,ಲೈಫ್ ಬಾಯ್,ಇಲ್ಲವೇ ಲಕ್ಸ್ ಸೋಪು.ಬಟ್ಟೆ ಒಗೆಯಲು ಮೈಸೂರು ಬಾರು ಸೋಪ್ ಅಷ್ಟೇ ನಮ್ಮ ಮನೆಗಳಲ್ಲಿ ಬಳಸುತ್ತಿದ್ದ ರಾಸಾಯನಿಕ ವಸ್ತುಗಳು. ಮನೆ ಮುಂದೆ ಕಸವಿರದಂತೆ ಗುಡಿಸಿ,ಧೂಳು ಏಳದಂತೆ ನೀರು ಹಾಕಿ ,ಸಗಣಿ ಹಾಕಿ ಸಾರಿಸೋರು,ಬಚ್ಚಲು ಮನೆಯನ್ನು ಸುಣ್ಣದ ಪುಡಿ, ಇಟ್ಟಿಗೆ ಪುಡಿ ಹಾಕಿ ಚೆನ್ನಾಗಿ ತೆಂಗಿನಕಡ್ಡಿ ಹಿಡಿಗಲಿನಲ್ಲಿ ಉಜ್ಜಿ ಶುಚಿ ಮಾಡೋರು.ಪಾತ್ರೆ ಉಜ್ಜಿ ತೊಳೆಯಲು ನೀರೊಲೆ ಬೂದಿ ಮತ್ತು ಕಂಚು,ತಾಮ್ರ ಹಿತ್ತಾಳೆ ಪಾತ್ರೆ ತೊಳೆಯಲು ಉಪ್ಪು, ಹುಣಿಸೆ ಹಣ್ಣು ಬಳಸಿ ತೆಂಗಿನ ನಾರಿನ ಜುಂಗಿನಲ್ಲಿ ಉಜ್ಜಿ ತೊಳೆಯೋರು.ಮೈ ಕೈ ಉಜ್ಜಿಕೊಳ್ಳಲು ಕೂಡ ತೆಂಗಿನ ಇಲ್ಲವೇ ಹೀರೆಕಾಯಿ ನಾರೇ.ಅಂತಹ ಪರಿಸರ ಸ್ನೇಹಿ ರೂಢಿಗಳು ಈಗ ಯಾರು ಮಾಡ್ತಾರೆ?ಬರುತ್ತ ಬರುತ್ತಾ ಪಾತ್ರೆ ,ಬಟ್ಟೆ, ನೆಲ ,ಟಾಯ್ಲೆಟ್ ,ತೊಳೆಯುವ ಪೌಡರ್ಗಳು, ಸೋಪು ಡಿಟರ್ಜೆಂಟ್, ಫಿನಾಲ್ ಗಳ  ಫಳಗುಟ್ಟಿಸುವ ಗುಣ ಹೆಚ್ಚಿಸಲು ಅವುಗಳ ವೈವಿಧ್ಯ, ಪ್ರಬಲತೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಬಟ್ಟೆ ಒಗೆದರೆ ಮಾತ್ರ ಸಾಲದಂತೆ, ಅವುಗಳ ಘಮ ಹೆಚ್ಚಿಸುವ ಫ್ಯಾಬ್ರಿಕ್ ಕಂಡೀಷನರ್ ಗಳ ಹಾವಳಿ ಬೇರೆ ಇದೆ.ಪರಿಣಾಮ ಮಾತ್ರ ನಮ್ಮ ಜಲಮೂಲಗಳು ಅನುಭವಿಸಬೇಕು.

ಆಗೆಲ್ಲ ಮನೆಗಳಲ್ಲಿ ಒಂದೇ ಒಂದು ಹಂಡೆ ಒಲೆಯ,ನೀರಿನ ತೊಟ್ಟಿಯ ಬಚ್ಚಲು ಮನೆ ಇರ್ತಾ ಇದ್ದದ್ದು.ಮನೆಯಿಂದ ಹೊರಗೆ ಒಂದು ಶೌಚಾಲಯ.ಈಗ ಬಚ್ಚಲು,ಶೌಚಗಳೆಲ್ಲ ಮಲಗುವ ಕೋಣೆಯ ಒಳಗೇ ಸೇರಿಕೊಂಡು ಬಿಟ್ಟಿವೆ.ಮನೆಯಲ್ಲಿ ಎಷ್ಟು ರೂಂಗಳಿವೆಯೋ ಅಷ್ಟು ಅಟ್ಯಚ್ಡ್ ಬಾತ್ ರೂಮ್ ಗಳು. ಅಷ್ಟೂ ತೊಳೆಯಲು ಮತ್ತಷ್ಟು ವಿಷಗಳು.

ನನಗಂತೂ ಬಾಲ್ಯದಲ್ಲಿ ಯಾರದೇ ಮನೆಗೆ ಹೋದರೂ,ಪ್ರತಿಯೊಂದು ಮನೆಗೂ ತನ್ನದೇ ಆದ ವಿಶಿಷ್ಟ ಪರಿಮಳವಿದ್ದಂತೆ ಭಾಸವಾಗುತ್ತಿತ್ತು.ಅವರ ಮನೆ ಸೌದೆ ಒಲೆಯ ಹೊಗೆಯ ಕಂಟು,ಅವರ ಆಹಾರ ಪದ್ಧತಿಗಳಿಗೆ ಅನುಗುಣವಾಗಿ ಬಳಸುವ ಮಸಾಲೆ ಸಾಮಗ್ರಿಗಳ ಘಾಟು,ದೇವರ ಮನೆಯ ಹೂ,ಗಂಧ,ಅಗರಬತ್ತಿಗಳ ಸುವಾಸನೆ,ಮನೆಯ ಜನರ ಮೈಯ ಗಂಧ,ಸಾಕಿರುವ ಪ್ರಾಣಿಗಳ ಮೈಯ ಸಿಂಡು,ನಿಲ್ಲಿಸಿರುವ ವಾಹನಗಳ ಪೆಟ್ರೋಲ್,ಡೀಸೆಲ್,ಆಯಿಲ್ಗಳ ವಾಸನೆ ಎಲ್ಲಾ ಮಿಶ್ರ ಗೊಂಡು ಪ್ರತೀ ಮನೆಗೂ ತನ್ನದೇ ಆದ ಗುರುತಿನ ಗಮಲಿದ್ದಂತೆ ಅನ್ನಿಸೋದು.ಈಗೀಗ ಎಷ್ಟೊಂದು ಮನೆಗಳಲ್ಲಿ ಅಡುಗೆ ಮನೆ ಘಾಟನ್ನು ವಿದ್ಯುತ್ ಚಿಮಣಿಗಳು ಎಳೆದು ಆಚೆ ತಳ್ಳಿ ಬಿಡುತ್ತವೆ.ಮನೆ ವರೆಸಲು  ಹೆಚ್ಚು ಕಮ್ಮಿ ಎಲ್ಲರೂ ಫೀನಾಲ್ ಬಳಸೋದರಿಂದ ಯಾರ ಮನೆಗೆ ಹೋದರು ಒಂದು ವಿಧದ ತೆಳುವಾದ ರಾಸಾಯನಿಕ ವಾಸನೆ ಬರುತ್ತದೆ ಅಷ್ಟೆ.

ಮನೆಯ ವಿಷಯ ಇದಾದ್ರೆ,ಮನುಷ್ಯನ ದೇಹದ ಶುಚಿತ್ವ ಇನ್ನೊಂದು ಬಗೆಯದು.ನಿಜ, ಸೋಪಿನ ಬಳಕೆ ಆರೋಗ್ಯದ ವಿಷಯದಲ್ಲಿ ಅತ್ಯಂತ ಪರಿಣಾಮ ಕಾರಿಯಾಗಿ,ಹಲವು ರೋಗ ನಿಯಂತ್ರಣಕ್ಕೆ ಸಹಾಯ ಮಾಡಿದೆ.ಆದರೆ ಅತಿಯಾದರೆ  ಅಮೃತವೂ ವಿಷವ ಲ್ಲವೇ. ಸೋಪ್ ಬಳಸಿ ದೇಹ ಶುಚಿಯಾಗಿಟ್ಟುಕೊಂಡರೆ ಸಾಲದೇ?.ಎಷ್ಟೊಂದು ಡಿಯೋಡರಂಟ್ ಗಳು,ಪರ್ಫ್ಯೂಮ್ ಗಳು, ಜೆಲ್ ಗಳು,ಫೇಸ್ ಕ್ರೀಂ,ಬಾಡಿ ಲೋಶನ್, ತಲೆಯ ಡೈ,ಶಾಂಪೂಗಳು,ಲಿಪ್ಸ್ಟಿಕ್ ,ನೈಲ್ ಪಾಲಿಶ್, ಆ ಪಾಲಿಷ್ ತೆಗೆಯೋ ರಿಮೂವರ್ ಹೀಗೆ ದೇಹದ ತಲೆಯಿಂದ ಉಂಗುಷ್ಟದವರೆಗೆ  ರಾಸಾಯನಿಕಗಳೇ. ಯಾವುದಾದರೂ ಔಷಧಿ ಅಂಗಡಿಗೆ ಹೋಗಿ ನೋಡಿದರೆ ಔಷಧಿಗಳಿಗಿಂತ ಈ ಬ್ಯೂಟಿ ಪ್ರಾಡಕ್ಟ್ ಗಳೇ ಹೆಚ್ಚಾಗಿ ತುಂಬಿ ತುಳುಕುತ್ತಾ ಇರ್ತವೆ.ಇವುಗಳನ್ನೆಲ್ಲ,ಪೂಸಿಕೊಳ್ಳಲು, ಲೇಪಿಸಿಕೊಳ್ಳಲು,ಹಚ್ಚಿಕೊಳ್ಳಲು ತಗುಲೋ ಸಮಯದಲ್ಲಿ ಎರಡು ಊರು ಸುತ್ತಿ ಬರಬಹುದು.

ಸೀಗೆಪುಡಿ ಬಳಸಿ ತಲೆ ತೊಳೆದುಕೊಂಡರೆ ಕನಿಷ್ಟ ಶಾಂಪೂ ಬಳಕೆಯಾದ್ರು ಕಡಿಮೆ ಮಾಡಬಹುದು.ಆದ್ರೆ ಸೀಗೆ ಘಾಟು ಸಹಿಸಿಕೊಂಡು,ತಲೆ ಉಜ್ಜಿ ,ಸೀಗೆ ಹೋಗುವಂತೆ ಚೆನ್ನಾಗಿ ನೀರು ಹಾಕಿ ತೊಳೆಯಲು ಸ್ವಲ್ಪ ಹೆಚ್ಚಿನ ಸಮಯ ಬೇಕಾಗುವುದರಿಂದ,ಎರಡು ನಿಮಿಷದಲ್ಲಿ ಕೆಲಸ ಮುಗಿಸುವ ಶಾಂಪೂ ಎಲ್ಲರಿಗೂ ಬೇಕು.

ನಾನಂತೂ ಮನೆಯಲ್ಲಿ ಯಾವುದೇ ತರಹದ ಫಿನಾಲ್,ಟಾಯ್ಲೆಟ್ ಕ್ಲೀನರ್ ಗಳ ಬಳಸೋದಿಲ್ಲ.ಪ್ರತಿನಿತ್ಯ ಚೆನ್ನಾಗಿ ನೀರು ಹಾಕಿ ಬ್ರಷ್ ನಿಂದ ಉಜ್ಜಿ ತೊಳೆದರೆ ಸಾಕು.ವಾರಕ್ಕೊಮ್ಮೆ ಬ್ಲೀಚಿಂಗ್ ಪೌಡರ್ ಹಾಕಿ ತೊಳೆದರಾಯಿತು.ಮನೆ ವರೆಸಲು ಬರಿ ನೀರು ಮಾತ್ರ.ಅದಕ್ಕೆ ಬೇರೇನೂ ಹಾಕುವುದಿಲ್ಲ.ಮನೆ ಧೂಳೂ,ಕಸ ಇಲ್ಲದೇ ಶುಚಿಯಾಗಿದ್ದರೆ ಸಾಕು.ಮೂರೋತ್ತು ಗುಡಿಸಿ, ವರೆಸಿ,ಉಜ್ಜಿ ತೊಳೆದು ಸಮಯ ವ್ಯರ್ಥ ಮಾಡೋಕೆ ನನಗಂತೂ ಇಷ್ಟವಿಲ್ಲ.

ರಜೆ ಅಂದ್ರೆ ಮಾಡಲು ಇನ್ನೂ ಎಷ್ಟೊಂದು ಸುಖದಾಯಕ ಸಂಗತಿಗಳಿಲ್ಲವೇ? ಒಂದು ಪುಸ್ತಕ ಹಿಡಿದುಕೊಂಡು  ಹಾಸಿಗೆ ಮೇಲೆ ಬಿದ್ದುಕೊಂಡು ಓದುವುದು,ಆಪ್ತ ಸ್ನೇಹಿತರೊಂದಿಗೆ ಗಂಟೆಗಟ್ಟಲೆ ಹರಟುವುದು,ಸಂಜೆ ಒಂದು ದೀರ್ಘ ವಾಕ್ ಹೋಗುವುದು ಎಷ್ಟೊಂದು ಮುದ ನೀಡುತ್ತವೆ.ಇದೆಲ್ಲ ಏನೂ ಇಲ್ಲದಿದ್ದರೆ ಗಂಟೆಗಟ್ಟಲೆ ಹೆಬ್ಬಾವಿನಂತೆ ಸೋಫಾ ಮೇಲೆ ಬಿದ್ದುಕೊಂಡು ಟಿವಿ ನೋಡೋದು, ಪೇಪರೋದೋದು , ಇಲ್ಲವೇ ಫೋನ್ ಹಿಡಿದು,ಫೇಸ್ ಬುಕ್ ಕಿಟಕಿಯಲ್ಲಿ ಅವರಿವರ ಜೀವನದಲ್ಲಿ ಇಣುಕಿ ನೋಡೋದು. ಶಾಪಿಂಗ್ ಗೆ ಜೊತೆ ಸಿಕ್ಕರೆ ಯಾವುದಾದರೂ ಸಮೀಪದಲ್ಲಿನ ಬಟ್ಟೆ ಅಂಗಡಿಗೆ ಹೋಗಿ ದಿನವಿಡಿ ಸೀರೆ ಬಟ್ಟೆ ನೋಡಿಕೊಂಡು,ಚೌಕಾಸಿ ವ್ಯಾಪಾರ ಮಾಡೋದು.
ಹತ್ತಿರದಲ್ಲಿ ಪಾರ್ಕ್ ಇದ್ದರೆ ಸಂಜೆ ಮಕ್ಕಳೊಟ್ಟಿಗೆ ಹೋಗಿ,ಮಕ್ಕಳ ಆಡಲು ಬಿಟ್ಟು,ಅಲ್ಲೇ ಯಾವುದಾದರೂ ಮರದ ಕೆಳಗೆ ಕೂತೂ,ಮರದ ಎಲೆ,ಹೂಗಳ ಎಣಿಸುತ್ತಾ,ಮರದ ಮೇಲೆ ಕೆಳಗಿರುವ.ಜೀವ ಜಂತುಗಳ ಹುಡುಕುತ್ತಾ,ಒಂದು ಹುಲ್ಲೆಸಳ ಕಿತ್ತು ಕಬ್ಬಿನ ಹಾಗೆ ಅದನ್ನು ಜಗಿಯುತ್ತಾ,ಸುಮ್ಮನೆ ಕೈಕಾಲು ಬಿಸಾಕಿಕೊಂಡು ಕೂತು ಕಾಲ ಕಳೆಯೋದು ಅದೆಷ್ಟು ಹಿತ.

ಕೈತೋಟ ಮಾಡುವ ಹವ್ಯಾಸ ಇದ್ದರೆ ಸಾಕು,ಹೊತ್ತು ಕಳೆಯೋದು ಗೊತ್ತಾಗೋದೇ ಇಲ್ಲ.ನನಗಂತೂ ಮನೆ ಸುತ್ತ ಗಿಡ ನೆಡಲು ಜಾಗವಿಲ್ಲ.ಹಾಗಾಗಿ ಬಾಲ್ಕನಿಯಲ್ಲೆ ಒಂದಷ್ಟು ಕುಂಡಗಳಲ್ಲಿ ಹತ್ತಾರು ಹೂ ಗಿಡಗಳ ಬೆಳೆಸಿ ಕೊಂಡಿದ್ದೇನೆ.ಹೂ ಗಿಡಗಳಿಗೆ ನೀರು ಹಾಕುತ್ತಾ,ಕಸ ತರಗೆಲೆ ತೆಗೆದು ಹಾಕುತ್ತಾ,ಅರಳಿದ ಹೂಗಳ ಮುಟ್ಟಿ,ಮೂಸಿ ನೋಡುತ್ತಾ ಇದ್ದರೆ ಹೊತ್ತು ತಾನೇ ತಾನಾಗಿ ಜಾರಿ ಹೋಗುತ್ತೆ. ಈ ಬಾರಿಯಂತೂ ನಮ್ಮ ಮನೆ ಬ್ರಹ್ಮಕಮಲದ ಗಿಡ ಎಷ್ಟೊಂದು ಹೂ ಒಂದೇ ದಿನ ಅರಳಿಸಿತ್ತು ಅಂದ್ರೆ,ಸಂಜೆ ಮೊಗ್ಗುಗಳು ಬಿರಿಯುವಾಗ ಗಿಡದ ಪಕ್ಕ ಕುಳಿತವಳಿಗೆ,ರಾತ್ರೆ ಹೂಗಳು ಪೂರ್ತಿ ಬಿರಿದು ಪರಿಮಳ ಚೆಲ್ಲಿ ನಗುವವರೆಗೂ ಎದ್ದು ಬರಲು ಮನಸ್ಸಾಗಲಿಲ್ಲ.

ನನಗಂತೂ ವಾರಕ್ಕೊಂದು ದಿನವಾದರೂ ಹೀಗೆ ಹಗುರಾಗಿ ,ಮೈ ಮನಕ್ಕೆ ಉಲ್ಲಾಸ,ಉತ್ಸಾಹ ತುಂಬಿಕೊಳ್ಳದೇ ಹೋದರೆ ಉಳಿದ ಆರುದಿನ ಕತ್ತೆ ತರಹ ಕೆಲಸ ಮಾಡಲು ಸಾಧ್ಯವಿಲ್ಲ.

ನನ್ನ ಗಂಡ ಮಾತ್ರ ನನಗೆ ತದ್ವಿರುದ್ಧ.ಅವರ ದಿನಚರಿ ಒಂದು ದಿನವಾದರೂ  ಏರುಪೇರಾದ್ದು ನಾನು ಕಳೆದ ಎರಡು ದಶಕಗಳಿಂದ ಒಮ್ಮೆಯೂ ಕಂಡಿಲ್ಲ.ಪ್ರತಿದಿನ ಸಮಯಕ್ಕೆ ಸರಿಯಾಗಿ,ಕರಾರುವಕ್ಕಾಗಿ ಅವರು ಮಾಡುವ ಎಲ್ಲಾ ಕೆಲಸಗಳನ್ನು ಚಾಚೂ ತಪ್ಪದೆ ಮಾಡುತ್ತಾರೆ.ಅವರಂತೂ ಎಷ್ಟು ಶಿಸ್ತಿನ ಸಿಪಾಯಿ ಎಂದರೆ,ನಾನು ಒಮ್ಮೊಮ್ಮೆ,”ನೀವು ಇಷ್ಟೊಂದು ಶಿಸ್ತಾದರೆ ಹೇಗೆ, ಹೀಗೆ ಇದ್ದರೆ ಬರುವ ಜನ್ಮದಲ್ಲಿ ಗಡಿಯಾರವಾಗಿ ಹುಟ್ಟು ಬಿಡುತ್ತೀರ ಹುಷಾರ್,”ಎಂದು ಹೆದರಿಸುತ್ತೇನೆ.ಅವರಿಗೆ ಹಾಗಂದರೆ ಸಿಟ್ಟೋ ಸಿಟ್ಟು.”ಶಿಸ್ತಿಲ್ಲದೆ ಹೋದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಹೇಳು.ಮನುಷ್ಯ ಅಂದ ಮೇಲೆ ಹೇಗೆ ಬೇಕೋ ಹಾಗೆ ಬದುಕಲು ಆಗೋಲ್ಲ,ನಮಗೂ ಪ್ರಾಣಿಗಳಿಗೂ ವ್ಯತ್ಯಾಸವಿಲ್ಲವಾ?ನಾಗರಿಕತೆ ಬೇಡವಾ,?”ಅನ್ನೋದು ಅವರ ವಾದ.

ನಾಗರಿಕತೆ ಹೆಸರಿನಲ್ಲಿ ಮನುಷ್ಯ ಮಾಡಿರುವ ಅವಾಂತರ ಸಾಲದೆ.ಜೀವನದಲ್ಲಿ ಮುಂದೆ ಬರೋದು ಅಂದ್ರೆ ಏನು? ಹೆಚ್ಚು ಹೆಚ್ಚು ಓದಿ ಬರೆದು,ವಿದ್ಯೆ ಕಲಿತು,ದೊಡ್ಡ ಕೆಲಸ ಸೇರಿ,ಹಗಲು ರಾತ್ರಿ ಬಿಡುವಿಲ್ಲದಂತೆ ದುಡಿದು ದುಡ್ಡು ಮಾಡಿ, ವಸ್ತುಗಳ ಕೊಂಡೂ ಕೊಂಡೂ ಗುಡ್ಡೆ ಹಾಕೋದೇ?ಈಗಿನ ಶಿಕ್ಷಣದಲ್ಲಿ ನೋಡಿ ಬರೀ ಮಕ್ಕಳ ಸಾಮರ್ಥ್ಯಗಳ ಹೇಗೆ ಹೆಚ್ಚಿಸೋದು ಅನ್ನೋದೇ ದೊಡ್ಡ ಮಹತ್ವ ಪಡೆದು ಕೊಂಡು ಬಿಟ್ಟಿದೆ. ಮಕ್ಕಳೇನು, ದೊಡ್ಡವರಿಗೂ ಕೂಡ ,ತಮ್ಮ ಏಕಾಗ್ರತೆ ,ಉತ್ಪಾದನಾ ಸಾಮರ್ಥ್ಯ, ಹೇಗೆ ಹೆಚ್ಚಿಸಿಕೊಳ್ಳೋದು,ಜೀವನದಲ್ಲಿ ದೊಡ್ಡ ದೊಡ್ಡ ಗುರಿಗಳನ್ನು ಹಾಕಿಕೊಂಡು ಅದನ್ನು ಸಾಧಿಸಲು ಏನೇನು ಕಸರತ್ತು ಮಾಡೋದು ಅಂತಾ ಮಸಲತ್ತು ಮಾಡೋದೇ ಆಗಿ ಹೋಗಿದೆ.ಮನುಷ್ಯರನ್ನು ಅಳೆಯುವ ಅಳತೆಗೋಲು ದುಡ್ಡೇ ಆಗಿಬಿಟ್ಟಿದೆ.ದಿನದಲ್ಲಿ ಸ್ವಲ್ಪ ಹೊತ್ತು  ಸುಧಾರಿಸಿ ಕುಳಿತುಕೊಂಡು ಒಂದು ಮರ ಇಲ್ಲವೇ ಹೂ ಗಿಡವನ್ನು ನೋಡಿ ಆಸ್ವಾದಿಸುವ ಮನಸ್ಸಾಗಲಿ ಪುರುಸೊತ್ತಾಗಲಿ ಯಾರಿಗಿದೆ.ಎಲ್ಲರೂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿರುವವರೇ.

*****************************

12 thoughts on “ಸೋಮಾರಿತನದ ಸುಖ

  1. ಸುಮತಾ ಕವಿತೆಯಲ್ಲಿ ವಾಸ್ತವವನ್ನ ತಿಳಿ ಹಾಸ್ಯದೊಂದಿಗೆ ಚಂದವಾಗಿ ಬರೆದಿದ್ದೀರಿ

  2. ಚೆನ್ನಾಗಿದೆ ಬರಹ. ಸೋಮಾರಿತನದ ಸುಖ, ಅದನ್ನು ಅನುಭವಿಸಿದವರಿಗೇ ಗೊತ್ತು. ದಿನಚರಿ ತಪ್ಪಿಸಲೆಂದೇ ರಜಾ ಬರೋದು, ಅದನ್ನ ಮಜಾ ಮಾಡಿಯೇ ಅನುಭವಿಸಬೆಕು.

  3. ಸಮತಾ ಚೆಂದ ಬರೆದಿದ್ದೀರಾ..ಒಟ್ಟಿನಲ್ಲಿ ವಿಷಯಕ್ಕೇನು ಕೊರತೆಯಿಲ್ಲ..

  4. ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
    ಸಮತಾ…

Leave a Reply

Back To Top