ಜೀವ ಪ್ರಕೃತಿ-ಜೀವನ

ಲೇಖನ

ಜೀವ ಪ್ರಕೃತಿ-ಜೀವನ

ಶಾಲಿನಿ ಕೆಮ್ಮಣ್ಣು

Moss, Forest, Vegetation, Plants, Flora

ದಶಕಗಳ ಹಿಂದಿನ ನಮ್ಮಬಾಲ್ಯದ ದಿನಗಳನ್ನು ಹಾಗೂ ನಮ್ಮ ಹಿರಿಯರ ಜೀವನ ಕ್ರಮವನ್ನು ವಿಶ್ಲೇಷಿಸಿದರೆ ನಿಜಕ್ಕೂಅಚ್ಚರಿಯ ಆಭಾಸವಾಗುತ್ತದೆ. ಮನುಷ್ಯನ ಜೈವಿಕ ಕ್ರಿಯೆಗಳು, ಊಟ ವಿಶ್ರಾಂತಿ ನಿದ್ದೆ ಕೆಲಸ ಎಲ್ಲವೂ ಸರಿಯಾದ ಸಮಯಕ್ಕೆ ಸಮಪ್ರಮಾಣದಲ್ಲಿ ನಡೆಯುತ್ತಿತ್ತು. ದೈನಂದಿನ ದೈಹಿಕ ಬೌದ್ಧಿಕ ಹಾಗೂ  ಆಧ್ಯಾತ್ಮಿಕ ಕ್ರಿಯೆಗಳು ಪ್ರಾಕೃತಿಕವಾಗಿಯೆ ನಡೆಯಬೇಕೆಂದು ನಮ್ಮಹಿರಿಯರು ಚೆನ್ನಾಗಿ ಮನಗಂಡಿದ್ದರು. ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಎದ್ದು ದಿನ ಆರಂಭ ಮಾಡುವುದರಿಂದ ಹಿಡಿದು ಸಂಜೆ ಕವಿಯುತಿದ್ದಂತೆ ಊಟ ಮುಗಿಸುವುದು, ಕಾಲ ಕಾಲಕ್ಕೆ ಹಬ್ಬ ಹರಿದಿನಗಳ ಆಚರಣೆ ಎಷ್ಟು ನಿಯಮಬದ್ಧವಾಗಿ ನಡೆಯುತಿತ್ತು. ಕಾಲಮಾನವನ್ನು ಅಂದಾಜು ಮಾಡುವುದೂ ಕೂಡ ಸೂರ್ಯ ಚಂದ್ರರ ಉಗಮ ಅಸ್ಥಗಳನ್ನು ಅನುಸರಿಸಿಯೇ ಆಗುತ್ತಿತ್ತು. ನಮ್ಮ  ದೈಹಿಕ ಕ್ರಿಯೆಗಳು ಭೂಮಂಡಲದ ಕಾರ್ಯ ಚಕ್ರಕ್ಕೆ ಅನುಗುಣವಾಗಿಯೇ ನಡೆದರೆ ನಮ್ಮ ಆರೋಗ್ಯ ಜೀವನ ಸುಖಕರವಾಗಿ ಇರುತ್ತದೆ.

ಕಾಲ ಸರಿಯುತ್ತಿದ್ದಂತೆ ಪ್ರಕೃತಿಗೆ ತದ್ವಿರುದ್ಧವಾಗಿ ನಡೆಯುವುದನ್ನು ನಮಗರಿವಿಲ್ಲದಂತೆ ನಾವು ಕಲಿತುಕೊಂಡಿದ್ದೇವೆ.ಆಗಲೂ ದಿನಕ್ಕೆ ಇದ್ದದ್ದು 24 ಗಂಟೆ. ಆದರೆ ಆಗ ಈಗಿನಂತೆ ಗಡಿಬಿಡಿಯ ಅನುಭವ ಆದದ್ದು ಬಹಳ ಕಡಿಮೆ. ಜನರು ತಾಳ್ಮೆ ಸಂಯಮದಿಂದ ಎಲ್ಲರ ಜೊತೆ ವ್ಯವಹರಿಸುವ ವ್ಯವಧಾನ ಹೊಂದಿದ್ದರು. ಯಂತ್ರಗಳೇ ಇಲ್ಲದೆ ಎಲ್ಲಕೆಲಸವನ್ನೂ  ಮನುಷ್ಯನೇ ಮಾಡಬೇಕಾದ ಪರಿಸ್ಥಿತಿಯಲ್ಲಿ ನಮಗೆ ಸಮಯದ ಅಭಾವ ಅಷ್ಟೊಂದು ಕಾಡಲೇ ಇಲ್ಲ. ಈಗ ನಾವು ಎಷ್ಟರ ಮಟ್ಟಿಗೆ ಬದಲಾಗಿದ್ದೇವೆ ಎಂದರೆ ಮೊದಲಿನಂತೆ ನಮ್ಮ ಆಹಾರ ಪದ್ಧತಿ ಇಲ್ಲ. ಊಟ, ನಿದ್ದೆ, ಸಂಚಾರ, ವಿಶ್ರಾಂತಿ ಗಳಿಗೆ ಅದರದೇ ಆದ ಸಮಯವಿಲ್ಲ. ಎಲ್ಲವೂ ಅನುಕೂಲ ಶಾಸ್ತ್ರದಂತೆ ನಡೆಯುತ್ತಿದೆ. ಇದರಿಂದಾಗಿ ದೈಹಿಕ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ನಾವು ಬಾಲ್ಯದಲ್ಲಿ ಬದುಕಿದ ರೀತಿ ನೆನಪಿಸಿಕೊಂಡರೆ ಈಗಲೂ ಆಗಿನ ಜನ, ಅವರ ಜೊತೆಗಿನ ಅನುಭವಗಳು, ಆಡಿದ ಎಷ್ಟೋ ಆಟಗಳು, ಮಾಡುತಿದ್ದ ಚೇಷ್ಟೆಗಳು ಎಲ್ಲವೂ ಕಣ್ಣ ಮುಂದೆ ಬಂದರೆ ಈಗಿನ ಬಾಳು ಬರೇ ಬೋರು ಹೊಡೆಸುತ್ತದೆ. ಎಷ್ಟೇ ಕಷ್ಠಗಳಿದ್ದರೂ ಏನಾದರೊಂದು ಮಾಡಬೇಕೆಂದರೆ ನಾವು ಅದನ್ನು ತುಂಬಾ ಕುಷಿಯಿಂದ ಮಾಡುತಿದ್ದೇವಲ್ಲ?ಕೆಲವೊಮ್ಮೆ ನಮ್ಮ ಕುತೂಹಲದಿಂದ ಮಾಡಿದ ಕೆಲಸದಿಂದ ಮನೆಯಲ್ಲಿ ರಂಪಾಟವೆ ಆಗುತ್ತಿತ್ತು. ಎಷ್ಟು ಸಲ ಬಿದ್ದರೂ ಏಳುವ ಆತ್ಮವಿಶ್ವಾಸ ನಮ್ಮಲ್ಲಿತ್ತು. ಎಷ್ಟು ಸಲ ಸೋತರೂ ಬಿಡದ ಛಲ ನಮ್ಮಿಂದ ಏನೆಲ್ಲಾ ಶೋಧನೆಗಳನ್ನು ಮಾ ಡಿಸುತ್ತಿತ್ತು, ಸವಾಲುಗಳನ್ನು ಎದುರಿಸಲು ಸಹಾಯವಾಗುತ್ತಿತ್ತು. ಬರಬರುತ್ತಾ ಪಾಶ್ಚಾತ್ಯ ಸಂಸ್ಕೃತಿಯ ಫಾಸ್ಟ್ ಫಾರ್ವರ್ಡ್ ಯುಗಕ್ಕೆ ಮರುಳಾಗಿ ನಮ್ಮನ್ನು, ನಮ್ಮ ಜೀವನವನ್ನು ಇತರರಿಗೆ ಹೋಲಿಸಿಕೊಳ್ಳುವುದು. ಇತರರ ಬಗ್ಗೆ, ಅವರ ಜೀವನದ ಬಗ್ಗೆ ತುಂಬಾ ಒಲವು, ಆಸಕ್ತಿ, ಉತ್ಸಾಹ ಬೆಳೆಸಿಕೊಂಡು ಅದೇ ಶ್ರೇಷ್ಠ ಎಂದುಕೊಂಡು ನಮ್ಮ ಬದುಕನ್ನು ಹೀನಾಯ ಮಾಡಿಕೊಳ್ಳುತ್ತಿದ್ದೇವೆ. ಯಂತ್ರ ಯುಗದಲ್ಲಿ ನಾವು ಯಂತ್ರಗಳ ಹಾಗೇ ವರ್ತಿಸಲು ಕಲಿತಿದ್ದೇವೆ. ಇದಕ್ಕೆ ಒಂದು ಉದಾಹರಣೆ ಕೊಡಬೇಕಾದರೆ ಯುರೋಪಿನಂತಹ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಉಷ್ಣಾಂಶ ಹಾಗೂ ಹವಾಮಾನಕ್ಕೆ ತಕ್ಕಂತೆ ಸೂಟು-ಬೂಟು ಧರಿಸುವುದು ಅಲ್ಲಿನ ಸಭ್ಯತೆ ಮತ್ತು ಸಂಸ್ಕೃತಿ. ಇದನ್ನು ಮಾದರಿಯಾಗಿ ಬಳಸಿಕೊಂಡು ನಮ್ಮ ದೇಶದ ಅತಿ ಉಷ್ಣಾಂಶದ ಪ್ರದೇಶಗಳಲ್ಲೂ ಎಲ್ಲಾ ಸಮಯದಲ್ಲಿ ಜನರು ಸಮಯೋಚಿತವಾಗಿ ನಮ್ಮ ಹವಾಮಾನಕ್ಕೆ ಹೋಲುವ, ನಮ್ಮ ಸಂಪನ್ಮೂಲಗಳನ್ನು ಅನುಸರಿಸಿಕೊಂಡು ಅದಕ್ಕೆ ಪೂರಕವಾದ ಭಾರತೀಯ ಉಡುಪುಗಳನ್ನು ಧರಿಸುವುದು ಬಿಟ್ಟು ಸೂಟು ಜಾಕೆಟ್ಟು ಬೂಟುಗಳನ್ನು ಧರಿಸಿ ವಿದೇಶಿಯರಂತೆ ವರ್ತಿಸುವುದು ನಿಜಕ್ಕೂ ಅಸಭ್ಯತೆಯೇ ಸರಿ. ನಮ್ಮ ಅಂತರಂಗವನ್ನು ವಿಶ್ಲೇಷಣೆ ಮಾಡಲು ನಮ್ಮವರೊಂದಿಗೆ ಮಾತನಾಡಲು ನಮ್ಮವರೊಡನೆ ಬೆರೆತು ಸಮಯ ಕಳೆಯಲು, ನಮ್ಮ ಜೀವನದ ಬಗ್ಗೆ ಚಿಂತಿಸಲು ಸಮಯವಿಲ್ಲದಷ್ಟು ಆಧುನಿಕ ಜೀವನಕ್ಕೆ ಎಷ್ಟೊಂದು ಒಗ್ಗಿಕೊಂಡಿದ್ದೇವೆ?

 ಪ್ರಕೃತಿಯಲ್ಲಿ ಅತಿ ಕನಿಷ್ಠ ಜೀವಿ ಎಂದೆನಿಸಿಕೊಳ್ಳುವ ಅಮೀಬಾಕ್ಕೂ ಸೃಷ್ಟಿಯ ಸಾಂಗತ್ಯವಿದೆ. ಇರುವೆಗಳಂತ ಸರಳ ಜೀವಿಗಳ ಬದುಕಲ್ಲೂ  ಸಂಕೀರ್ಣವಾದ ವ್ಯವಸ್ಥೆ ಇದೆ. ಅವುಗಳೂ ಅಸ್ತಿತ್ವಕ್ಕಾಗಿ ಪ್ರಕೃತಿಯ ಜೊತೆ ಜೀವನಪರ್ಯಂತ ಸ್ಪಂದಿಸುತ್ತಾ ನಿರಂತರ ವಾಗಿ ಕ್ರಮಬದ್ಧವಾದ ಜೀವನವನ್ನು  ಸುಸೂತ್ರವಾಗಿ ನಿಭಾಯಿಸುತ್ತವೆ. ಸೂಕ್ಷ್ಮಜೀವಿಗಳಿಂದ ಹಿಡಿದು ಮಾನವೇತರ ಎಲ್ಲ ಜೀವಿಗಳಿಗೂ ಪರಿಸರದೊಂದಿಗೆ ಹೊಂದಿಕೊಳ್ಳುವ ಜೀವನಶೈಲಿ ಇದೆ. ಅದನ್ನೆಲ್ಲ ಹತ್ತಿರದಲ್ಲಿ ನೋಡಿ ತಿಳಿದುಕೊಂಡರೆ ನಮ್ಮ ಈ ಬಡ ಜೀವನ ಎಷ್ಟು ಶೋಚನೀಯ ಎಂದೆನಿಸುತ್ತದೆ.

ನಮ್ಮ ಮೆದುಳು ಹೆಚ್ಚು ಸಂಕೀರ್ಣವಾದದ್ದು.  ಪ್ರಕೃತಿಯಿಂದ ನಮಗೆ ನೀಡಲ್ಪಟ್ಟ ವಿಶೇಷ ಕೊಡುಗೆಗಳಾದ ಬುದ್ಧಿ, ಯೋಚನೆ ಹಾಗೂ ವಾಚನಾ ಶಕ್ತಿಯನ್ನು ಪಡೆದಿರುವ ನಾವು ಉಳಿದ ಪ್ರಾಣಿಗಳಿಗಿಂತ ಭಿನ್ನ. ನಮ್ಮ ಹಿರಿಯರು ಅದನ್ನು ಚೆನ್ನಾಗಿ ಕಂಡುಕೊಂಡಿದ್ದರು .ನಾವು ಪ್ರಕೃತಿಯಿಂದ ದೂರ ಸಾಗುತ್ತಿದ್ದೇವೆ.

ಒಂದು ಮನುಷ್ಯನನ್ನು ಸೂರ್ಯನ ಬೆಳಕು ಹಾಗೂ ನೈಸರ್ಗಿಕ ಗಾಳಿಯೇ ಸಂಚರಿಸದ ಒಂದು ಕೋಣೆ ಅಥವಾ ಕಟ್ಟಡದಲ್ಲಿ ಉಳಿಯಲು ಬಿಟ್ಟು ಕೆಲವೇ ದಿನಗಳಲ್ಲಿ ಕೇಳಿದರೆ ಅವನಿಗೆ ಸಮಯ, ಸ್ಥಾನ ಹಾಗೂ ತನ್ನ ಪರಿಸರದ ಪರಿಚಯವೇ ಇರಲಾರದು. 24 ಗಂಟೆಗಳು ವಿದ್ಯುದ್ದೀಪ ಉರಿಯುತ್ತಲೆ ಇದ್ದು ಎಲ್ಲಾ ಐಷಾರಾಮಿ ಸವಲತ್ತುಗಳಿದ್ದರೂ ಅವನ ಜೀವನ ಕತ್ತಲೆಯಾಗಿ ಉಳಿಯುತ್ತದೆ. ಸಂಶೋಧನೆಗಳ ಪ್ರಕಾರ ನಿಸರ್ಗದ ಒಡನಾಟದಿಂದ ದೂರವಿದ್ದರೆ ಮನುಷ್ಯನ  ಕಾಲ, ಸ್ಥಾನ ಹಾಗೂ ಮಾನ ಎಲ್ಲವೂ ಶೂನ್ಯ.

ಮನುಷ್ಯ ತನಗಿಂತ ಶ್ರೇಷ್ಠ ಪ್ರಕೃತಿಯಲ್ಲಿ ಬೇರೆ ಯಾವುದೂ ಇಲ್ಲ ಎನ್ನುವಂತೆ ಸರ್ವಾಧಿಕಾರಿಯಾಗಿ ವರ್ತಿಸುತ್ತಾ ಇತರ ಪ್ರಾಣಿ-ಪಕ್ಷಿ ,ಸಸ್ಯ ಸಂಕುಲಗಳನ್ನು ಕಡೆಗಣಿಸುತ್ತಲೇ ಬಂದಿದ್ದಾನೆ. ಅವಶ್ಯಕತೆಗಳಿಗೆ. ಅನುಕೂಲಗಳಿಗಾಗಿ ಪರಿಸರವನ್ನು ತನಗೆ ಬೇಕಾದಂತೆ ಬಳಸಿದಲ್ಲದೆ ದುರಾಸೆಯಿಂದ ಅದನ್ನು ನಾಶ ಮಾಡಿ ಪ್ರಕೃತಿಯ ಅಸಮತೋಲನಕ್ಕೆ ಕಾರಣನಾಗಿದ್ದಾನೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಎಲ್ಲಿವರೆಗೆ ಹಾಳುಮಾಡಬಹುದು? ತನ್ನ ಜೀವನಕ್ಕೆ ತಾನೇ ಕುಂದು ತಂದುಕೊಳ್ಳುವುದೆಂದು ಮರೆತು ಬದುಕಿದ್ದಾನೆ.

ನಾವೆಷ್ಟು ಅವಿವೇಕಿಗಳಾಗಿದ್ದೇವೆ ಎಂದರೆ ಅದಕ್ಕೊಂದು ಬೌದ್ಧ ಕಥೆಯನ್ನು ಹೇಳುತ್ತೇನೆ. ಒಮ್ಮೆ ಒಬ್ಬಾತ ನಡೆಯುತ್ತಾ ಹೋಗುತ್ತಿದ್ದಾಗ ಅವನ ನೆರಳು ಹಾಗೂ ಹೆಜ್ಜೆ ಸಪ್ಪಳ ಅವನಿಗೆ ಭಯ ಹುಟ್ಟಿಸುತ್ತದೆ. ಅವನು ವೇಗವನ್ನು ಹೆಚ್ಚಿಸಿದ.ವೇಗ ಹೆಚ್ಚಾದಂತೆ ಹೆಜ್ಜೆಯ ಸಪ್ಪಳ ಜೋರಾಯಿತು. ಹೆದರಿ ಓಡಿ ಓಡಿ ಸುಸ್ತಾಗಿ ಕುಸಿದುಬಿದ್ದ. ಸುಮ್ಮನೆ ಭಯಪಡದೆ ಒಂದು ಮರದ ನೆರಳಲ್ಲಿ ಕುಳಿತಿದ್ದರೆ ಯಾವ ಕಷ್ಟವೂ ಇರಲಿಲ್ಲ.

ನಾವು ಜನ ಸಂಕುಲ ಇತರ ಪ್ರಾಣಿ-ಪಕ್ಷಿ ನಿಸರ್ಗದ ಎಲ್ಲ ಜೀವಿಗಳ ಜೊತೆಗೂ ಸ್ಪಂದಿಸುತ್ತಾ, ಅವುಗಳನ್ನು ಮನಸ್ಸಾರೆ ಪ್ರೀತಿಸುವ, ನೆರವಿಗೆ ಮಿಡಿಯುವ ಹೃದಯದಿಂದ ಪರಸ್ಪರ ಭಾವನೆಗಳ

ವಿನಿಯೋಗವಾದರೆ ನಮ್ಮ ಮತ್ತು ಪರಿಸರದ ಸಂಬಂಧ ಹಸನಾಗಿ, ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯ. ಪರಿಸರಕ್ಕೆ ಧಕ್ಕೆಯಾದರೆ ನಾವು ನಮ್ಮದೇ ಜೀವನ ವನ್ನು ಕಡೆಗಣಿಸಿದ ಹಾಗೆ. ಏಕೆಂದರೆ ಮಾನವ ಸಾಮೂಹಿಕ ಜೀವಿ.ಪ್ರಕೃತಿಯ ಒಂದು ಅಂಗ. ನಮ್ಮಿಂದ ಪ್ರಕೃತಿಯಲ್ಲ. ಪ್ರಕೃತಿಯಿಂದ ನಾವು ಎಂಬ ಅವಿನಾಭಾವ ಸಂಬಂಧವನ್ನು ಅರ್ಥಮಾಡಿ ಕೊಂಡು ನಡೆದರೆ ನಮ್ಮ ಬದುಕು ನಮ್ಮ ಸಂಬಂಧಗಳ ದಿಕ್ಕುಬದಲಾಗಬಹುದು. ನಾಗಾಲೋಟದ ಬದುಕಿನಲ್ಲಿ ಹುಟ್ಟಿನಿಂದ ಸಾವಿನ ಮಧ್ಯೆ ನಾನು ಎಲ್ಲಿಂದ ಎಲ್ಲಿಗೆ ಹೋಗಿದ್ದೇನೆ,ಏನು ಮಾಡಿದೆ ಎಂಬುದನ್ನು ಹಿಂದಕ್ಕೆ ನೋಡಿ, ಕೂಲಂಕುಶವಾಗಿ ಚಿಂತಿಸಿದರೆ ಇನ್ನು ಎಷ್ಟು ಚೆನ್ನಾಗಿ ಬದುಕಬಹುದಿತ್ತು,ಉತ್ತಮ ಜೀವಿಯಾಗಿ ಸಮಾಜಕ್ಕೆ ಮಾದರಿಯಾಗಬಹುದಿತ್ತು ಎಂಬ ಗಂಭೀರ ವಿಷಯ ಹೆಚ್ಚಿನವರ ಮನಸ್ಸಿಗೆ ಅರಿವಾಗದೆ  ಇರದು.

*****************************************

Leave a Reply

Back To Top