ಅಂಕಣ ಬರಹ
ತೊರೆಯ ಹರಿವು
‘ ತಲ್ಲಣಿಸದಿರು, ತಾಳು ಮನವೇ…
ತಲ್ಲಣಿಸದಿರು ಕಂಡ್ಯಾ ತಾಳು ಮನವೇ..’ ಎಂದು ಪ್ರಾರಂಭವಾಗುವ ಕೀರ್ತನೆ, ಕನಕದಾಸರಿಂದ ರಚನೆ ಆಗಿರುವ ಜನಪ್ರಿಯವಾದ ಸಾಹಿತ್ಯ. ಇದರೊಳಗಿನ ಭಾವವು ಮನಸ್ಸಿನ ತಳಮಳ ವಿನಾಕಾರಣ ಆಗಿದ್ದು; ತಾಳ್ಮೆಯಿಂದಿದ್ದರೆ ಕಾಲಕ್ರಮೇಣ ಎಲ್ಲವೂ ಸರಿಯಾಗುವುದು ಎನ್ನುವುದನ್ನು ಹಲವು ರೂಪಕಗಳ ಮೂಲಕ ಹೇಳುತ್ತದೆ.
‘ಹುಟ್ಸಿದ ದೇವ್ರು ಹುಲ್ಲು ಮೇಯ್ಸೋದಿಲ್ವೇ?’ ಎನ್ನುವ ಜನಪದರ ಒಂದು ಸಾಲಿನ ಮಾತೂ ಸಹ ‘ತಾಳು ಮನವೇ…’ ಎನ್ನುತ್ತದೆ. ‘ತಾಳಿದವನು ಬಾಳಿಯಾನು’ ಎನ್ನುವುದೂ ಸಹ ಹಿರಿಯರ ಅನುಭವಾಮೃತವೇ. ಆದರೆ, ತಾಳ್ಮೆ ಅಷ್ಟು ಸುಲಭಕ್ಕೆ ಸಿದ್ಧಿಯಾಗುವ ವಿಚಾರವೇ?
ಮನಸ್ಸಿಗೆ ತಾಳುವ ಗುಣ ಇದೆಯೋ ಅಥವಾ ತಳಮಳಿಸುವ ಗುಣ ಇದೆಯೋ? ತಾಳುವಿಕೆಯ ಗುಣವನ್ನು ಹೇಗೆ ಪಡೆಯುವುದು?
ಕೆಂಪಗೆ ಕಾಯಿಸಿದ ಕಬ್ಬಿಣವನ್ನು ಬಲವಾಗಿ ಪೆಟ್ಟು ನೀಡುತ್ತಾ ಬೇಕಾದ ಆಕಾರಕ್ಕೆ ತಿರುಗಿಸುವಾಗ ಆ ಕಾದ ಕಬ್ಬಿಣವು ಒಡೆದು ಚೂರಾಗದೆ ನಿಧಾನವಾಗಿ ಕಮ್ಮಾರನಿಗೆ ಬೇಕಾದ ಆಕಾರ ಪಡೆಯುವುದಲ್ಲಾ ಅದನ್ನು ತಾಳ್ಮೆಯ ಗರಿಷ್ಠ ಬಿಂದು ಎನ್ನಬಹುದೇ! ಅಥವಾ ಸಾಮಾನ್ಯವಾಗಿದ್ದ ಕಲ್ಲೊಂದು ಸಹಸ್ರ ಉಳಿ ಪೆಟ್ಟುಗಳನ್ನು ತಿಂದು ಅಂತಿಮವಾಗಿ ಗುಡಿಯೊಳಗಿನ ಮೂರ್ತಿಯಾಗಿ ಜನಮಾನಸದ ದೈವವಾಗಿ ಆರಾಧಿಸಲ್ಪಡುವುದನ್ನು ತಾಳ್ಮೆಯ ಪ್ರತಿಫಲವೆನ್ನಬಹುದೇ?
‘ತಕ್ಷಣ, ತಕ್ಷಣ.. ಇನ್ ಸ್ಟ್ಯಾಂಟ್ ಎನ್ನುವ ಆಧುನಿಕ ಜನರು ದಿಢೀರ್ ದಿಢೀರ್ ಎನ್ನುವ ಮನೋಭಾವದವರು. ಕುಳಿತು ತಿನ್ನುವ ವ್ಯವಧಾನವೂ ಇಲ್ಲದ ಇವರು, ಗಡಿಯಾರದಲ್ಲಿನ ಸೆಂಕೆಂಡಿನ ಮುಳ್ಳಿನಂತಹವರು. ಟಿಕ್ ಟಿಕ್ ಟಿಕ್ ಎಂದು ಚಲಿಸುತ್ತಲೇ ಇರುತ್ತಾರೆ. ಅಸಲಿಗೆ ಇಷ್ಟು ಧಾವಂತದ ಅಗತ್ಯವಿದೆಯೇ?! ಧಾವಂತದ ಬದುಕಿನ ಅವಾಂತರಗಳ ಬಗ್ಗೆ ಭರಪೂರ ಸಂಶೋಝನೆಗಳೂ ವಿಶ್ಲೇಷಣೆಗಳೂ ನಡೆಯುತ್ತಿಲ್ಲವೇ…!? ಜೀವ ಚೈತನ್ಯವೊಂದನ್ನು ಹಡೆಯಲು ತಾಯಿಗೆ ಒಂಬತ್ತು ತಿಂಗಳುಗಳ ಅಗತ್ಯವಿದೆ. ತೀರಾ ಬೇಗ ಹುಟ್ಟಿದವರನ್ನು ತಮಾಶೆ ಮಾಡಲು ‘ಆರು ತಿಂಗಳಿಗೆ ಹುಟ್ಟಿದ್ದಾ?’ ‘ಎಲ್ಲೋ ಏಳು ತಿಂಗಳಿಗೆ ಹುಟ್ಟಿರಬೇಕು’ ಎಂದು ಛೇಡಿಸುವುದೂ ಉಂಟಲ್ಲ.
ಶ್ರೀ ಕುವೆಂಪು ಅವರು ‘ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ’ ಎಂದು ಮಲೆನಾಡಿನ ಬದುಕನ್ನು ಚಿತ್ರಿಸುತ್ತಾ ಪ್ರಕೃತಿಯೊಂದಿಗಿನ ಮನುಷ್ಯ ವ್ಯಾಪಾರದ ಬಗೆಗಳನ್ನು ಬೃಹತ್ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಬೀಜವೊಂದು ಸರಿಯಾದ ಭೂಮಿಗೆ ಬಿದ್ದು ಮೊಳಕೆಯೊಡೆದು, ಚಿಗುರಿ ಎಲೆ ಮೊಗ್ಗು ಹೂ ಕಾಯಿ ಆಗಿ, ಕಾಯಿ ಮಾಗಿ ಹಣ್ಣಾಗಿ- ಫಲ ಸಿಗುವವರೆಗೂ ಕಾಯಬೇಕಾದುದು ನಿಸರ್ಗದ ನಿಯಮ. ಅದನ್ನು ಮೀರಿದರೆ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ..’ ಎನ್ನುವಂತಾಗುತ್ತದೆ.
‘ಸುಲಗ್ನಾ ಸಾವಧಾನ; ಸುಮುಹೂರ್ತೇ ಸಾವಧಾನ..’ ಯಾವ ಕಾರ್ಯಕ್ಕೂ ಮೊದಲು ಸ್ವಲ್ಪ ಪೂರ್ವ ತಯಾರಿಯು ಒಳ್ಳೆಯದು. ಯೋಜನೆ ರೂಪಿಸುವಾಗ, ಜಾರಿಗೆ ತರುವಾಗ ಸರಿಯಾಗಿ ಯೋಚಿಸಿ ಸಿದ್ಧಗೊಂಡರೆ ನೂರು ಪ್ರತಿಶತ ಫಲಿತಾಂಶ ದೊರಕುವುದು. ಯಶಸ್ವಿಗಳಾದ ವಿದ್ಯಾರ್ಥಿಗಳನ್ನೇ ಕೇಳಿರಿ, ಅವರು ತಮ್ಮ ತಯಾರಿ ಹೇಗಿತ್ತೆನ್ನುವುದನ್ನು ವಿವರಿಸುವಾಗ ತಾಳ್ಮೆಯಿಂದ ತಯಾರಾದುದನ್ನು ತಪ್ಪದೇ ಹೇಳುತ್ತಾರೆ. ವರ್ಷಪೂರ್ತಿ ಓದಿ ಒಂದೆರಡು ಗಂಟೆಗಳಲ್ಲಿ ಭಟ್ಟಿ ಇಳಿಸುವ ವಿದ್ಯಾರ್ಥಿಗಳು ತಾಳ್ಮೆಯಿಂದ ಫಲಿತಾಂಶಕ್ಕೆ ಕಾಯಬೇಕು. ಇಡೀ ವಿದ್ಯಾರ್ಥಿ ಜೀವನವನ್ನೇ ತಪಸ್ವಿ ಬದುಕಿನಂತೆ ಏಕಾಗ್ರಚಿತ್ತದಲ್ಲಿ ಮುಡುಪಿಡಬೇಕು. ಚಿತ್ತ ಚಾಂಚಲ್ಯಕ್ಕೆ ಒಳಗಾಗದಿದ್ದರೇನೇ ಮಹತ್ತನ್ನು ಸಾಧಿಸಲು ಸಾಧ್ಯವಾಗುವುದು. ಹಲವು ಪ್ರಯತ್ನಗಳು ವಿಫಲವಾದರೂ ತಾಳ್ಮೆಗೆಡದೆ ಮುಂದುವರೆದಾಗ ಒಂದಲ್ಲಾ ಒಂದು ಯಶಸ್ಸಾಗಿರುವ ಉದಾಹರಣೆಗಳು ಸಾವಿರಾರು ದೊರಕುತ್ತವೆ.
‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಬರೀ ಗಾದೆ ಮಾತಲ್ಲ. ಜೀವನದ ಪರಮ ಸತ್ಯವೇ ಇದರೊಳಗೆ ಅಡಗಿದೆ. ಕುಡಿಕೆ-ಮಡಿಕೆ ತಯಾರಾಗಬೇಕೆಂದರೆ, ಸರಿಯಾದ ಜೇಡಿಮಣ್ಣು ತಂದು, ಹದವಾಗಿ ಮಿದು ಮಾಡಿ, ಮಣ್ಣೊಳಗಿನ ಕಸಕಡ್ಡಿಕಲ್ಲು ಇತ್ಯಾದಿಗಳನ್ನು ತೆಗೆದು ಹಾಕಿ, ಮಣ್ಣಿಗೆ ಬೆಣ್ಣೆ ಗುಣ ನೀಡಿ, ಬೇಕಾದ ಆಕಾರಕ್ಕೆ ತಂದು ಹಲವಾರು ವರ್ಷಗಳು ಉಪಯೋಗಕ್ಕೆ ಬರುವಂತೆ ಮಾಡುವುದು ಅಸಾಮಾನ್ಯ ಕಾರ್ಯ. ಕುಂಬಾರನ ತಾಳ್ಮೆ ಈ ಇಡೀ ಪ್ರಕ್ರಿಯೆಯಲ್ಲಿ ಅದೆಷ್ಟು ಬಾರಿ ಪರೀಕ್ಷೆಗೆ ಒಳಗಾಗುವುದೋ!
ಗರಿಗರಿಯಾದ ದೋಸೆ ತಿನ್ನಲು ಕಾವಲಿ ಚೆನ್ನಾಗಿ ಕಾದಿರಬೇಕು. ಅದಕ್ಕೂ ಮುನ್ನ ಅಕ್ಕಿ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು ಆರೆಂಟು ಗಂಟೆ ನೆನೆಸಿಟ್ಟು, ರುಬ್ಬಿ, ಪುನಃ ಆರೇಳು ಗಂಟೆ ಮುಚ್ಚಿಟ್ಟು ಹುದುಗು ಬರಿಸಿದರೇನೇ ಹದವಾದ ಸಂಪಣ ತಯಾರಾಗಿ, ಕಾದ ಕಾವಲಿಯ ಮೇಲೆ ಅದ್ಭುತವಾದ ರುಚಿಯಾಗಿ ಅರಳಿಕೊಳ್ಳುವ ದೋಸೆಯಾಗುವುದು. ಎಣ್ಣೆ ಕಾದರೇನೇ ಸಾಸಿವೆ ಸಿಡಿದು ಒಗ್ಗರಣೆ ತಯಾರಾಗುವುದು…
ಕಾಯುವುದು ‘ಕಾಯಕ ಯೋಗಿ’ ರೈತರಿಗೆ ಅನಿವಾರ್ಯ. ಮಳೆಗಾಗಿ, ಭೂಮಿಯ ಹದಕ್ಕಾಗಿ, ಬಿತ್ತನೆ ಬೀಜಕ್ಕಾಗಿ, ಬೀಜ ಫಲವಾಗಿ ತೆನೆಯಾಗಿ ತೊನೆದಾಡಿ ಕೈಗೆ ಬಂದು ಜೊಳ್ಳು ತೂರಿ ಗಟ್ಟಿ ಕಾಳು ಕೈಗೆ ಗಿಟ್ಟುವವರೆಗೂ ತಾಳ್ಮೆಯೊಂದೇ ಅವರ ಪರಮ ಮಿತ್ರ.. ಈ ನಡುವಲ್ಲಿ ಮಳೆಯೋ, ಕ್ಷಾಮವೋ ಬಂದರೆ..? ಆಳುಗಳು ಕೈ ಕೊಟ್ಟರೆ..? ಬೆಳೆ ನಾಶವಾದರೆ..? ಬೆಲೆ ಕುಸಿದರೆ..? ಮಾರುಕಟ್ಟೆ ಮುಚ್ಚಿದ್ದರೆ..? ಅವಸರಪಟ್ಟು ಅನಾಹುತ ಮಾಡಿಕೊಳ್ಳುವ ಅನ್ನದಾತರಿಗೆ ಈ ಸಂದರ್ಭದಲ್ಲಿ ಸಂಯಮವಹಿಸಿರೆಂದು ಹೇಳುವ ಧೈರ್ಯ ಮಾಡುವವರು ಯಾರು? ತಾಳ್ಮೆ ಕೈ ಹಿಡಿಯುವುದು ಎಂದು ಆ ನಿರಂತರ ಸಂಯಮಿ ಮೂರ್ತಿಗೆ ಹೇಳುವ ಹೊಣೆಗಾರಿಕೆ ಹೊರುವವರಾರು?
ಜಗತ್ತಿನಲ್ಲಿ ಪರಮಾದ್ಭುತ ಎಂದು ಗುರುತಿಸ ಪಡುವ ಶ್ರೇಷ್ಠ ಕಲಾಕೃತಿಗಳು ಒಂದೇ ಇರುಳಿಗೆ ಅಥವಾ ಒಂದೇ ಹಗಲಿಗೆ ತಯಾರಾದುವಲ್ಲ. ಕೆತ್ತಲಾಗದ ಕಗ್ಗಲ್ಲನ್ನು ಕೆತ್ತಲು, ಹರಿವ ಹೊಳೆಗೆ ಅಡ್ಡಲಾಗಿ ಅಣೆಕಟ್ಟೆಯನ್ನು ಕಟ್ಟಲು ಆಗದು ಆಗದು ಎಂದು ಕೈ ಚೆಲ್ಲಿದ್ದರೆ…?! ಅಂತಹವುಗಳ ನಿರ್ಮಾಣದ ಸಾಧನೆಯ ಹಾದಿಯಲ್ಲಿ ಎದುರಾದ ತೊಡರುಗಳು ಎಷ್ಟಿದ್ದವೋ… ಎಂತಿದ್ದವೋ… ಆದರೂ ತಾಳ್ಮೆಯೊಂದು ಆ ಎಲ್ಲಾ ಯಶಸ್ಸಿಗೆ ಮಾರ್ಗದರ್ಶನ ಮಾಡಿರುತ್ತದೆ ಎನ್ನುವುದನ್ನು ನಿಸ್ಸಂಶಯವಾಗಿ ಒಪ್ಪಬಹುದು. ಅದರ ಪರಿಣಾಮವಾಗಿ ಹಲವು ಅನನ್ಯ ಪರಾಕ್ರಮಗಳನ್ನು ನಾನಾ ರೂಪಗಳಲ್ಲಿ ಮುಂದಿನವರು ಕಾಣಬಹುದು.
ಜಗಳ, ಹೋರಾಟಗಳು ನಡೆಯುವಾಗಲೂ ಎರಡು ಪಡೆಗಳ ನಡುವಲ್ಲಿ ಒಂದು ಗುಂಪು ತುಸು ತಾಳ್ಮೆವಹಿಸಿದ್ದರೆ ಇಷ್ಟೆಲ್ಲಾ ಅನಾಹುತ ಆಗುತ್ತಿರಲಿಲ್ಲ ಎನ್ನುವ ತಜ್ಞರೂ ಇದ್ದಾರೆ. ಹಲವು ವಿಚ್ಛೇದನಗಳಲ್ಲಿ ಸಂಯಮದ ಕೊರತೆಯೇ ಮುಖ್ಯ ಕಾರಣ ಎಂದು ವಿಶ್ಲೇಷಿಸಿದ್ದಾರೆ. ‘ಮಾತು ಆಡಿದರೆ ಹೋಯ್ತು; ಮುತ್ತು ಒಡೆದರೆ ಹೋಯ್ತು’ ಎನ್ನುವುದು ತಾಳ್ಮೆ ಮತ್ತೊಂದು ಮಜಲನ್ನು ತೋರುತ್ತದೆ.
‘ಬಾನಿಗೊಂದು ಎಲ್ಲೆ ಎಲ್ಲಿದೆ…? ನಿನ್ನಾಸೆಗೆಲ್ಲಿ ಕೊನೆ ಇದೇ…! ಏಕೆ ಕನಸು ಕಾಣುವೇ… ನಿಧಾನಿಸು ನಿಧಾನಿಸು…’ ಎಂಬ ಹಾಡಿನಲ್ಲಾಗಲೀ ‘ಅವಸರವೇ ಅಪಘಾತಕ್ಕೆ ಕಾರಣ’ ಎಂಬ ನುಡಿಯಲ್ಲಾಗಲೀ ನಿಚ್ಚಳವಾಗಿ ಪ್ರಕಟ ಆಗುತ್ತಿರುವುದು ತಾಳ್ಮೆಯು ಅತಿ ಮಹತ್ವದ್ದೆಂದು. ಹಾಗೆಂದು ‘ತಾಳ್ಮೆಗೂ ಒಂದು ಮಿತಿ’ ಇರಬೇಕಲ್ಲವೇ? ಇಲ್ಲದಿದ್ದರೆ, ‘ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ’ ಎನ್ನುವಂತಾಗುತ್ತದೆ. ‘ಮಾಡಿದ ಕೆಲಸವೆಲ್ಲಾ ಹೊಳೆಯಲ್ಲಿ ಹುಣಸೆ ಹಣ್ಣು ತೇಯುವ ಹಾಗೆ’ ವ್ಯರ್ಥ ಪೋಲಾಗುತ್ತದೆ.
Right Time Right Action ಎನ್ನುವ ಮಾತೂ ಸಹ, ಕಾದು ಸರಿಯಾದ ಸಮಯಕ್ಕೆ ಹೊಡೆಯಬೇಕು ಅಥವಾ ಹಿಡಿಯಬೇಕು ಎನ್ನುವುದನ್ನು ಬೆಂಬಲಿಸುತ್ತದೆ.
ಶಿಕಾರಿಗೆ ಹೋದವರನ್ನು ಕೇಳಬೇಕು ತಾಳ್ಮೆಯ ಬಗ್ಗೆ.. ದೊಡ್ಡ ಪ್ರಾಣಿಗಳ ಬೇಟೆ ಬಿಡಿ, ಕಾಟ ಕೊಡುವ ಪುಟ್ಟ ಸೊಳ್ಳೆಯನ್ನು ಹೊಡೆಯಲೂ ತಾಳ್ಮೆ ಬೇಕೇಬೇಕು. ಮನುಷ್ಯರಿಗಿಂತಲೂ ಪ್ರಕೃತಿಗೆ ಹತ್ತಿರವಾಗಿರುವ ಜೀವ-ಸಸ್ಯ ಸಂಕುಲಗಳಿಗೆ ತಾಳ್ಮೆಯ ಪಾಠ ಕರಗತವಾಗಿರುತ್ತವೆ. ನೀರಿಲ್ಲದೇ ವರ್ಷಗಟ್ಟಲೆ ಬದುಕುವ ಜೀವಿಗಳು.. ಮಳೆ ಹೋಯ್ದ ತಕ್ಷಣ ಚೈತನ್ಯಭರಿತವಾಗುವುದು; ಆಹಾರವಿಲ್ಲದೆ ಸತ್ತಂತೆ ಬಿದ್ದ ಜೀವಗಳು.. ತನ್ನ ಆಹಾರ ಕಂಡೊಡನೇ ಅದನ್ನು ದಕ್ಕಿಸಿಕೊಳ್ಳಲು ದಿಢೀರ್ ಶಕ್ತಿ ಸಂಚಯಿಸಿಕೊಳ್ಳುವುದು; ಬಾಡಿ ಹೋದ ಸಸಿ, ಬಳ್ಳಿಗಳು ಹಠಾತ್ ಚಿಗುರಿ ಚೈತನ್ಯಭರಿತವಾಗುವುದು ಸಹ
ಸಂಯಮದ ಕಾರಣದಿಂದಲೇ…
‘ಕೋಪದಲ್ಲಿ ಕೋಯ್ದ ಮೂಗು ಮರಳಿ ಬಾರದು’; ‘ಕೋಪ ಗಾಳಿಯಂತೆ ಇದ್ದರೆ ತಾಳ್ಮೆ ಬೆಟ್ಟದಂತೆ ಇರಬೇಕು’ ಎಂಬಂತಹವು ಹಿರಿಯರು ಸುಮ್ಮನೆ ಆಟಕ್ಕೆಂದು ಕಟ್ಚಿದ ಮಾತುಗಳಲ್ಲ. ‘ಹೇಳಿದ್ದು, ಕೇಳಿದ್ದು ಸುಳ್ಳಾಗಬಹುದು ನಿಧಾನವಾಗಿ ಯೋಚಿಸಿ ನೋಡಿದಾಗ..’ ಎಂಬರ್ಥದ ಹಾಡಂತೂ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಸಂಯಮದ ಪಾಠ ಹೇಳಿಕೊಡುತ್ತದೆ.
‘ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ’ ಎಂದು ಒಬ್ಬರು ಪದೇ ಪದೇ ಹೇಳುತ್ತಿರುತ್ತಾರೆ ಎಂದರೆ, ಅವರಿಗೆ ಕಾಯುವುದು ಸಾಕಾಗಿರುತ್ತದೆ ಎಂದೇ ಸಹಜ ಅರ್ಥ. ತಾಳ್ಮೆಯು ಹೇಡಿಗಳ ರಕ್ಷಣಾ ಸಾಧನವಲ್ಲ. ಅದು ಧೈರ್ಯವಂತರಿಗೆ ಇರಲೇಬೇಕಾದ ಸುಶೀಲ ಗುಣ ಎನ್ನುವುದನ್ನು ಎಲ್ಲರೂ ಒಪ್ಪಬೇಕು. ಹಸಿದಾಗ ಮಾತ್ರ ಬೇಟೆಯಾಡುವ ಮೃಗಗಳೂ ಸಹ ತಕ್ಷಣಕ್ಕೆ ಬೇಟೆಯಾಡುವುದಿಲ್ಲ. ಹೊಂಚು ಹಾಕಿ, ಸಂಚು ಮಾಡುತ್ತವೆ. ಆ ಮೂಲಕ ತಮಗೆ ಬೇಕಾದ್ದನ್ನು ಸಿದ್ಧಿಸಿಕೊಳ್ಳುತ್ತವೆ.
ಎಷ್ಟೋ ಮನೆಗಳು ಮುರಿಯಲು, ಎಷ್ಟು ಸ್ನೇಹ ವಿಫಲವಾಗಲು ಸಂಯಮದ ಕೊರತೆಯೇ ಮೂಲ ಕಾರಣ ಆಗಿರುವಂತೆ, ಎಷ್ಟೋ ಮನೆಗಳು ಒಂದಾಗಲು, ಎಷ್ಟೋ ಸ್ನೇಹ- ಪ್ರೇಮಗಳು ಬೆಸೆಯಲೂ ಸಹ ತಾಳ್ಮೆಯೇ ಸಾಧನವಾಗಿದೆ.
ಗಂಟೆಗಟ್ಟಲೆ ರೋಗಿಯನ್ನು ಪರೀಕ್ಷಿಸಿದ ವೈದ್ಯರು ಆಪರೇಷನ್ ಥಿಯೇಟರ್ನಲ್ಲಿ ತಾಳ್ಮೆಗೆಡುವರೇ? ಹಲವು ಜಾಲಗಳನ್ನು ಬೀಸಿ ತನಿಖೆಯ ಬೆಂಬತ್ತಿದ ತನಿಖಾಧಿಕಾರಿ ಸಂಯಮ ಕಳೆದುಕೊಳ್ಳುವರೇ?
ಹಾಗಾದರೆ ಅವರ ಪ್ರಯತ್ನವೆಲ್ಲವೂ ಹಳ್ಳ ಹಿಡಿದು ರೋಗಿ ಜೀವಕ್ಕೆ ಆಪತ್ತಾಗುತ್ತದೆ, ದೊಡ್ಡ ಅಪರಾಧಿ ನುಣುಚಿಕೊಳ್ಳುತ್ತಾನೆ…! ಹಾಗಾಗಿ ಯಾವ ಕ್ಷೇತ್ರದವರಿಗೇ ಆಗಲಿ ತಾಳ್ಮೆ ಎನ್ನುವುದು ಮಹತ್ತಿನದು.
ಕಠಿಣ ವ್ರತಾಚಾರಣೆಗಳೂ ಸಂಯಮದ ಭಾಗವೇ ಎನ್ನುವವರುಂಟು. ಆದರೆ ಅವು ಅರ್ಥಪೂರ್ಣವಾಗಿರಬೇಕು. ವೈಚಾರಿಕ ನೆಲೆಯಲ್ಲಿರಬೇಕು. ಕುರುಡು ಪದ್ಧತಿಗಳನ್ನು ಆಚರಿಸುವುದಕ್ಕಿಂತ ಅಗತ್ಯವಾದ ಯೋಗ್ಯವಾದ ಸಂಯಮಾಚರಣೆಗೆ ಜೈ ಎನ್ನಬಹುದು. ‘ಸೆಲ್ಫ್ ಕಂಟ್ರೋಲ್’ ಎನ್ನುವುದು ‘ಸೆಲ್ಫ್ ಡಿಫೆನ್ಸ್’ ನ ಭಾಗವಾಗುವಾಗ ಹಾನಿಕಾರಕವಾಗಿರಬಾರದು. ಸಣ್ಣ ಮಕ್ಕಳು ಹಬ್ಬಗಳಲ್ಲಿ ಮಾಡುವ ವಿಶೇಷ ತಿನಿಸುಗಳ ಮೇಲೆ ಆಸೆಪಟ್ಟಾಗ ದೇವರಿಗೆ, ಎಡೆಗೆ ಎಂದು ಎತ್ತಿಟ್ಟ ಮೇಲೆ ಮಕ್ಕಳಿಗೆ ಕೊಡುವ ಹಿರಿಯರು ಸಂಯಮದ ಮೌಲ್ಯವನ್ನೇ ಬೇರೆ ರೀತಿ ಕಲಿಸಿರುತ್ತಾರೆ. ಪರರಿಗೆ ದಾನ ಮಾಡುವವರೆಗೆ, ಪೂಜೆ ಮಾಡುವವರೆಗೆ, ನೈವೇದ್ಯ-ಮಂಗಳಾರತಿ ಆಗುವವರೆಗೆ, ಒಂದು ಸ್ಥಳಕ್ಕೆ ಮುಟ್ಟುವವರೆಗೆ, ಮತ್ತೊಬ್ಬರು ಬರುವವರೆಗೆ, ಸಮಯ ಆಗುವವರೆಗೆ… ಕಾಯುವಾಗ ಅನುಸರಿಸುವ ವಿವಿಧ ಮಾರ್ಗಗಳನ್ನು ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಆದರೆ, ಅವೆಲ್ಲವೂ ತಾಳ್ಮೆಯನ್ನು ಕಲಿಸುವ ಪರ್ಯಾಯಗಳೇ ಆಗಿರುತ್ತವೆ ಎನ್ನುವುದನ್ನು ಮರೆಯಬಾರದು.
ಒಬ್ಬ ವೃದ್ಧರು ಹಣ್ಣಿನ ಸಸಿ ನೆಡುವಾಗ, ‘ಇದು ಮರವಾಗಿ ಫಲ ಬಿಡುವಾಗ ತಿನ್ನಲು ನೀವೇ ಇರುವುದಿಲ್ಲವಲ್ಲ ಮತ್ತೇಕೆ ಶ್ರಮ?!’ ಎಂದು ಕೇಳಿದವರಿಗೆ, ‘ನಾನು ಫಲ ತಿಂದ ಮರಗಳನ್ನೂ ಸಹ ಯಾರೋ ಹಿರಿಯರು ನೆಟ್ಟಿದ್ದು’ ಎಂದು ಉತ್ತರಿಸಿದ ಆ ಹಿರಿಯರ ಸಂಯಮದ ತಿಳುವಳಿಕೆ ನಮ್ಮದಾಗಬೇಕು. ಶ್ರದ್ಧೆ ಸಂಯಮವು ಬಾಳಿನ ಸಮತೋಲನಕ್ಕೆ ಮಾರ್ಗವಾಗಬೇಕು… ತಾಳ್ಮೆ ಸಕಾರಾತ್ಮಕ ಬೆಳಕಾಗಿ ದಾರಿ ತೋರಬೇಕು.
**************************
ವಸುಂಧರಾ ಕದಲೂರು.
–
೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ